ವರದಕ್ಷಿಣೆ ಕಿರುಕುಳ ಆರೋಪದಲ್ಲಿ ನೆರೆಹೊರೆಯವರ ಮೇಲೆ ಕೇಸು ಹಾಕಲು ಅವಕಾಶವಿಲ್ಲ: ಹೈಕೋರ್ಟ್
ವರದಕ್ಷಿಣೆ ಕಿರುಕುಳ ನೀಡಲು ಪತಿ ಮತ್ತವರ ಮನೆಯವರಿಗೆ ನೆರೆಹೊರೆಯವರು ಪ್ರಚೋದನೆ ನೀಡಿದ್ದಾರೆ ಎಂದು ಪ್ರಕರಣ ದಾಖಲಾಗಿತ್ತು. ಇದರ ವಿರುದ್ಧ ನೆರೆಹೊರೆಯವರು ಕೋರ್ಟ್ ಮೆಟ್ಟೆಲೇರಿದ್ದರು.

Published : January 8, 2026 at 6:07 PM IST
ಬೆಂಗಳೂರು: ಪತಿ, ಪತ್ನಿ ಸೇರಿದಂತೆ ಇತರೆ ಕುಟುಂಬಸ್ಥರ ನಡುವಿನ ಕೌಟುಂಬಿಕ ಕಲಹದಲ್ಲಿ ಐಪಿಸಿ ಸೆಕ್ಷನ್ 498A (ಪತಿ ಮತ್ತವರ ಕುಟುಂಬಸ್ಥರಿಂದ ಕೌಟುಂಬಿಕ ದೌರ್ಜನ್ಯ ಮತ್ತು ವರದಕ್ಷಿಣೆ ಕಿರುಕುಳ) ಅಡಿಯಲ್ಲಿ ನೆರೆಹೊರೆಯವರ ವಿರುದ್ಧ ಪ್ರಕರಣ ದಾಖಲಿಸುವುದಕ್ಕೆ ಅವಕಾಶವಿಲ್ಲ ಎಂದು ಹೈಕೋರ್ಟ್ ತಿಳಿಸಿದೆ.
ವರದಕ್ಷಿಣೆ ಕಿರುಕುಳ ನೀಡಲು ಪತಿ ಮತ್ತವರ ಮನೆಯವರಿಗೆ ನೆರೆಹೊರೆಯವರು ಪ್ರಚೋದನೆ ನೀಡಿದ್ದಾರೆ ಎಂದು ತಮ್ಮ ವಿರುದ್ಧ ದಾಖಲಾಗಿರುವ ಪ್ರಕರಣದ ರದ್ದು ಕೋರಿ ನೆರೆಹೊರೆಯವರಾದ ಮಹಾಲಕ್ಷ್ಮಿ ಪುರದ ಭೋವಿಪಾಳ್ಯದ ನಿವಾಸಿ ಆಶಾ ಎಂಬವರು ಅರ್ಜಿ ಸಲ್ಲಿಸಿದ್ದರು.
ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ನ್ಯಾಯಪೀಠ, ಐಪಿಸಿ ಸೆಕ್ಷನ್ 498A ಅಡಿಯಲ್ಲಿ ಪತಿ, ಪತ್ನಿ ಸೇರಿದಂತೆ ಕುಟುಂಬಸ್ಥರ ನಡುವಿನ ಪ್ರಕರಣವಾಗಿದ್ದು, ಇತರರನ್ನು ಸೆಳೆಯುವುದಕ್ಕೆ ಅವಕಾಶವಿಲ್ಲ ಎಂದು ತಿಳಿಸಿದೆ.
ಅಲ್ಲದೆ, ಪ್ರಕರಣ ಸಂಬಂಧ ಸಲ್ಲಿಕೆಯಾಗಿರುವ ಆರೋಪ ಪಟ್ಟಿಯಲ್ಲಿ ಅರ್ಜಿದಾರರ ವಿರುದ್ಧ ಯಾವುದೇ ಆರೋಪದ ಅಂಶ ಉಲ್ಲೇಖವಾಗಿಲ್ಲ. ಪತ್ನಿಯನ್ನು ಹಿಂಸಿಸುವಂತೆ ಪತಿಗೆ ಪ್ರಚೋದನೆ ನೀಡಿರುವುದಕ್ಕೆ ಸಂಬಂಧಿಸಿದಂತೆ ವಾದಿಸಲಾಗಿದೆ. ಆದರೆ, ಸೆಕ್ಷನ್ 498A ಅಡಿಯಲ್ಲಿ ಕುಟುಂಬದ ವ್ಯಾಖ್ಯಾನದಲ್ಲಿ ನೆರೆಹೊರೆಯವರನ್ನು ಸೇರ್ಪಡೆ ಮಾಡಲು ಅವಕಾಶವಿಲ್ಲ ಎಂದು ಹೇಳಿದೆ.
ಪತಿಯ ಕುಟುಂಬದ ನೆರೆಹೊರೆಯವರು ಪತಿಯ ಸಂಬಂಧಿಕರಲ್ಲ ಮತ್ತು ಐಪಿಸಿ ಸೆಕ್ಷನ್ 498A ಅಡಿಯಲ್ಲಿ ಅಪರಾಧಕ್ಕೆ ನೆರೆಹೊರೆಯವರನ್ನು ಸಿಲುಕಿಸುವುದಕ್ಕೆ ಅವಕಾಶವಿಲ್ಲ ಎಂಬುದಾಗಿ ರಮೇಶ್ ಕನ್ನೋಜಿಯಾ ಮತ್ತಿತರರ ವಿರುದ್ಧದ ಉತ್ತರಾಖಂಡ ರಾಜ್ಯ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ತಿಳಿಸಿದೆ. ಆದ್ದರಿಂದ ಅರ್ಜಿದಾರರ ವಿರುದ್ಧ ಮುಂದಿನ ವಿಚಾರಣೆಗೆ ಅನುಮತಿ ನೀಡುವುದು ಕಾನೂನು ಪ್ರಕ್ರಿಯೆಯ ದುರುಪಯೋಗವಾಗಲಿದ್ದು, ನ್ಯಾಯದ ಉಲ್ಲಂಘನೆಗೆ ಕಾರಣವಾಗಲಿದೆ ಎಂದು ಪೀಠ ಆದೇಶದಲ್ಲಿ ತಿಳಿಸಿದೆ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರ ಆಶಾ ವಿರುದ್ಧ ದೂರು ದಾಖಲಿಸುವ ಸಂದರ್ಭದಲ್ಲಿ ದೂರುದಾರರ ವೈವಾಹಿಕ ಸಂಬಂಧ ಹದಗೆಟ್ಟಂತಿದೆ. ಆದರೆ, ಅವರ ನೆರೆಹೊರೆಯವರಾಗಿರುವ ಕಾರಣ ಪ್ರಕರಣದಲ್ಲಿ ಸಿಲುಕಿಸಲಾಗಿದೆ. ಆದರೆ, ದೂರುದಾರರ ಕೌಟುಂಬಿಕ ವ್ಯವಹಾರಗಳಿಗೂ ತಮ್ಮ ಕಕ್ಷಿದಾರರಿಗೂ ಯಾವುದೇ ಸಂಬಂಧವಿಲ್ಲ ಎಂದು ಪೀಠಕ್ಕೆ ತಿಳಿಸಿದರು.
ಇದಕ್ಕೆ ಆಕ್ಷೇಪಿಸಿದ ದೂರುದಾರರರ ಪರ ವಕೀಲರು, ಪತಿಗೆ ಕುಮ್ಮಕ್ಕು ನೀಡಿದ್ದಾರೆಂದು ಅರ್ಜಿದಾರರ ವಿರುದ್ಧ ಪ್ರಕರಣ ದಾಖಲಿಸಿದ್ದು, ವಿಚಾರಣಾ ಪ್ರಕ್ರಿಯೆಯಲ್ಲಿ ಅವರು ಭಾಗಿಯಾಗಿ ದೋಷಮುಕ್ತರಾಗಿ ಹೊರಬರಬೇಕಾಗಿದ್ದು ಅರ್ಜಿಯನ್ನು ವಜಾಗೊಳಿಸಬೇಕು ಎಂದು ಪೀಠಕ್ಕೆ ತಿಳಿಸಿದರು.
ಪ್ರಕರಣದ ಹಿನ್ನೆಲೆ: ಮಹಿಳೆಯೋರ್ವರು ವರದಕ್ಷಿಣೆ ಕಿರುಕುಳ ಆರೋಪದಲ್ಲಿ ತನ್ನ ಪತಿ, ಅತ್ತೆ, ಮಾವ, ನಾದಿನಿ ಮತ್ತು ನೆರೆಹೊರೆಯವರಾಗಿರುವ ಅರ್ಜಿದಾರ ಅಶಾ ಎಂಬವರ ವಿರುದ್ಧ ವರದಕ್ಷಿಣೆ ಕಿರುಕುಳ ಆರೋಪದಲ್ಲಿ ಮಹಾಲಕ್ಷ್ಮೀ ಬಡಾವಣೆ ಪೊಲೀಸ್ ಠಾಣೆಗೆ ದೂರು ದಾಖಲಿಸಿದ್ದರು. ದೂರಿನ ಸಂಬಂಧ ತನಿಖೆ ನಡೆಸಿದ್ದ ಪೊಲೀಸರು, ಅರ್ಜಿದಾರರು ಸೇರಿದಂತೆ ಇತರರ ವಿರುದ್ಧ ಆರೋಪ ಪಟ್ಟಿಯನ್ನು ದಾಖಲಿಸಲಾಗಿತ್ತು. ಹೀಗಾಗಿ ತಮ್ಮ ವಿರುದ್ಧ ದಾಖಲಾಗಿರುವ ಎಫ್‌ಐಆರ್ ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದರು.

