ಕೊಲೆ ಪ್ರಕರಣಗಳಲ್ಲಿ ಘಟನೆ ನಡೆದ ತಕ್ಷಣ ದೂರು ದಾಖಲಿಸಿಲ್ಲ ಎಂಬ ಕಾರಣಕ್ಕೆ ಅಪರಾಧಿಯನ್ನು ಆರೋಪ ಮುಕ್ತ ಮಾಡಲಾಗದು: ಹೈಕೋರ್ಟ್
ಅಪರಾಧ ನಡೆದ ದಿನಕ್ಕೂ ಮತ್ತು ದೂರು ದಾಖಲಾದ ದಿನಕ್ಕೆ ಅಂತರ ಇದೆ ಎಂಬುದು ಅಪರಾಧಿಯನ್ನು ಆರೋಪ ಮುಕ್ತ ಮಾಡಲು ಸಾಧ್ಯವಿಲ್ಲ ಎಂದು ಹೈಕೋರ್ಟ್ ಹೇಳಿದೆ.

Published : March 3, 2026 at 10:24 PM IST
ಬೆಂಗಳೂರು: ಕೊಲೆ ಪ್ರಕರಣಗಳಲ್ಲಿ ದೂರು ದಾಖಲಿಸುವಲ್ಲಿ ವಿಳಂಬವಾಗಿದೆ ಎಂಬ ಕಾರಣವು ಆರೋಪಿಯನ್ನು ಪ್ರಕರಣದಿಂದ ಖುಲಾಸೆಗೊಳಿಸಲು ಕಾರಣವಾಗುವುದಿಲ್ಲ ಎಂದು ಹೈಕೋರ್ಟ್ ಅಭಿಪ್ರಾಯಪಟ್ಟಿದೆ.
ತನ್ನ ಮಾವನ ಕೊಲೆ ಮಾಡಿದ ಆರೋಪದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶ ರದ್ದು ಕೋರಿ ಮಂಜಪ್ಪ ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಹೆಚ್.ಪಿ. ಸಂದೇಶ್ ಮತ್ತು ನ್ಯಾಯಮೂರ್ತಿ ವೆಂಕಟೇಶ್ ಟಿ. ನಾಯ್ಕ್ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.
ಅಲ್ಲದೆ, ಕುಟುಂಬ ಸದಸ್ಯರ ಮೊದಲ ಆಧ್ಯತೆಯೆಂದರೆ ಗಾಯಾಳುಗಳನ್ನು ಆಸ್ಪತ್ರೆಗೆ ಸಾಗಿಸುವುದಾಗಿದ್ದು, ಗಾಯಾಳುವಾಗಿದ್ದ ಮೃತರನ್ನು ಆಸ್ಪತ್ರೆಗೆ ದಾಖಲಿಸಿದ್ದಾರೆ. ಗಾಯಾಳು ಮೃತರಾದ ಬಳಿಕ ತಕ್ಷಣ ದೂರು ದಾಖಲಿಸಿದ್ದಾರೆ. ಈ ವಿಳಂಬದಿಂದ ಆರೋಪಿಯನ್ನು ಪ್ರಕರಣದಿಂದ ಖುಲಾಸೆ ಗೊಳಿಸುವುದಕ್ಕೆ ಕಾರಣವಾಗುವುದಿಲ್ಲ. ಅಲ್ಲದೆ, ಆರೋಪಿ ಮೃತರ ಕುಟುಂಬಸ್ಥರೇ ಆಗಿದ್ದಾರೆ. ಆದ್ದರಿಂದ ಸಾಮಾನ್ಯವಾಗಿ ಕುಟುಂಬ ಸದಸ್ಯರೊಂದಿಗಿನ ಗಲಾಟೆಗಳಿಂದ ತಕ್ಷಣ ಪೊಲೀಸ್ ಠಾಣೆಗೆ ಹೋಗುವ ಬದಲಾಗಿ, ಗಾಯಾಳುವನ್ನು ರಕ್ಷಣೆ ಮಾಡುವುದು ಮುಖ್ಯವಾಗಿರುತ್ತದೆ ಎಂದು ಪೀಠ ಹೇಳಿದೆ.
ಘಟನೆಯ ಪ್ರತ್ಯಕ್ಷದರ್ಶಿಯಾಗಿದ್ದ ಮೃತರ ಪತ್ನಿ, ಘಟನೆ ಬಳಿಕ ತಕ್ಷಣ ತನ್ನ ಪತಿಯನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ಕೊಡಿಸಿದ್ದರು. ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಘಟನೆಯಿಂದ ಉಂಟಾದ ಕಿರುಚಾಟದ ಬಳಿಕ ಆರೋಪಿಯ ಪತ್ನಿ ಸ್ಥಳಕ್ಕೆ ಆಗಮಿಸಿದ್ದರು. ಈ ವೇಳೆ ಆರೋಪಿ ಘಟನಾ ಸ್ಥಳದಿಂದ ಹೋಗುವುದನ್ನು ಗಮನಿಸಿರುವುದಾಗಿ ನ್ಯಾಯಪೀಠ ತನ್ನ ಆದೇಶದಲ್ಲಿ ವಿವರಿಸಿದೆ.
ಘಟನೆ ಸಂಬಂಧ, ಆರೋಪಿ ತನ್ನ ಮೇಲೆ ಹಲ್ಲೆ ನಡೆಸಿದ್ದಾನೆಂದು ಸಾಯುವುದಕ್ಕೂ ಮುನ್ನ ಮೃತರು ತಿಳಿಸಿದ್ದರು. ಮೃತರ ಪತ್ನಿ ನೀಡಿರುವ ಸಾಕ್ಷ್ಯವು ಸ್ವಾಭಾವಿಕವಾಗಿದ್ದು, ಅದನ್ನು ಆಕೆಯ ಮಗಳು ದೃಢೀಕರಿಸಿದ್ದಾರೆ. ಎಲ್ಲ ಸಾಕ್ಷ್ಯಾಧಾರಗಳನ್ನು ಪರಿಗಣಿಸಿರುವ ವಿಚಾರಣಾ ನ್ಯಾಯಾಲಯ ಆರೋಪಿಗೆ ಶಿಕ್ಷೆ ವಿಧಿಸಿದೆ.
ಈ ಎಲ್ಲ ಅಂಶಗಳನ್ನು ಗಮನಿಸಿದರೆ ವಿಚಾರಣಾ ನ್ಯಾಯಾಲಯ ಆರೋಪಿಯ ಅರ್ಜಿಯನ್ನು ವಜಾಗೊಳಿಸಿರುವುದರಲ್ಲಿ ಯಾವುದೇ ದೋಷ ಕಂಡುಬರುತ್ತಿಲ್ಲ. ಆದ್ದರಿಂದ ವಿಚಾರಣಾ ನ್ಯಾಯಾಲಯದ ಆದೇಶವನ್ನು ರದ್ದುಗೊಳಿಸುವುದಕ್ಕೆ ಬಲವಾದ ಪುರಾವೆಗಳಿರಬೇಕಾಗಿದ್ದು, ಯಾವುದೇ ಆಧಾರಗಳಿಲ್ಲವಾಗಿದೆ. ಆದ್ದರಿಂದ ಅರ್ಜಿಯನ್ನು ವಜಾಗೊಳಿಸಲಾಗುತ್ತಿದೆ ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ: ಅರ್ಜಿದಾರ ಆರೋಪಿ ಮೃತ ವ್ಯಕ್ತಿಯ ಅಳಿಯನಾಗಿದ್ದು, ಮೃತರ ಮಗಳನ್ನು ಪ್ರೇಮ ವಿವಾಹವಾಗಿದ್ದರು. ಅಲ್ಲದೆ, ಪ್ರತಿದಿನ ಹಣಕ್ಕಾಗಿ ಬೇಡಿಕೆ ಇಡುತ್ತಾ ಮೃತ ವ್ಯಕ್ತಿಯೊಂದಿಗೆ ಜಗಳವಾಡುತ್ತಿದ್ದರು. 2017ರ ಆಗಸ್ಟ್ 6ರ ರಾತ್ರಿ 10 ಗಂಟೆಯ ಸುಮಾರಿನಲ್ಲಿ ಮೃತರ ಮತ್ತವರ ಕುಟುಂಬಸ್ಥರು ಮಲಗಿದ್ದ ಸಂದರ್ಭದಲ್ಲಿ ಮನೆಗೆ ಹೋಗಿ ಮರದ ದಿಮ್ಮಿಯಿಂದ ಆತನ ಮಾವ(ಮೃತ)ನ ಹೊಟ್ಟೆಯ ಮೇಲೆ ಹೊಡೆದಿದ್ದಾರೆ. ಪರಿಣಾಮ ಅವರು ತೀವ್ರವಾಗಿ ಗಾಯಗೊಂಡಿದ್ದರು.
ತಕ್ಷಣ ಕುಟುಂಬಸ್ಥರು ಗಾಯಾಳುವನ್ನು ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ, ಬಳಿಕ ಹೆಚ್ಚಿನ ಚಿಕಿತ್ಸೆಗಾಗಿ ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಿದ್ದರು. ಆದರೆ, ಘಟನೆ ನಡೆದ ಮೂರು ದಿನಗಳ ಬಳಿಕ ಚಿಕಿತ್ಸೆ ಫಲಕಾರಿಯಾಗದೆ ಮೃತಪಟ್ಟಿದ್ದರು. ಆರೋಪ ಸಂಬಂಧ ಪ್ರಕರಣ ದಾಖಲಿಸಿಕೊಂಡಿದ್ದ ಪೊಲೀಸರು ಆರೋಪಿಯ ವಿರುದ್ಧ ಸಾಕ್ಷ್ಯಾಧಾರಗಳೊಂದಿಗೆ ಆರೋಪ ಪಟ್ಟಿಯನ್ನು ಸಲ್ಲಿಸಿದ್ದರು. ಸಾಕ್ಷ್ಯಾಧಾರಗಳನ್ನು ಪರಿಗಣಿಸಿದ್ದ ವಿಚಾರಣಾ ನ್ಯಾಯಾಲಯ ಅರ್ಜಿದಾರ ಆರೋಪಿಗೆ ಜೀವಾವಧಿ ಶಿಕ್ಷೆ ಮತ್ತು 25 ಸಾವಿರ ರೂ.ಗಳ ದಂಡ ವಿಧಿಸಿ ಆದೇಶಿಸಿತ್ತು. ಈ ಆದೇಶ ಮತ್ತು ತನ್ನನ್ನು ಆರೋಪ ಮುಕ್ತರನ್ನಾಗಿಸುವಂತೆ ಕೋರಿ ಹೈಕೋರ್ಟ್ ಮೆಟ್ಟಿಲೇರಿದ್ದರು.
ಪ್ರಕರಣದಲ್ಲಿ ಅಮೈಕಾಸ್ ಕ್ಯೂರಿ(ಕೋರ್ಟ್ಗೆ ಸಹಾಯಕ ವಕೀಲರು) ವಾದ ಮಂಡಿಸಿ, 2017ರ ಆಗಸ್ಟ್ 6ರಂದು ಘಟನೆ ನಡೆದಿದೆ. ಆದರೆ, ಮೃತನ ಮರಣದ ಬಳಿಕ ಅಂದರೆ ಆಗಸ್ಟ್ 10ರಂದು ದೂರು ದಾಖಲಿಸಲಾಗಿದೆ. ಈ ವಿಳಂಬಕ್ಕೆ ಸರಿಯಾದ ಕಾರಣ ನೀಡಿಲ್ಲ, ಮೆಗ್ಗಾನ್ ಮತ್ತು ವೆನ್ಲಾಕ್ ಆಸ್ಪತ್ರೆಯಲ್ಲಿ ಯಾವುದೇ ಎಂಎಲ್ ಸಿ ಯನ್ನು ನೋಂದಾಯಿಸಿಲ್ಲ. ಈ ಎಲ್ಲ ಅಂಶಗಳನ್ನು ವಿಚಾರಣಾ ನ್ಯಾಯಾಲಯ ಪರಿಗಣಿಸಿಲ್ಲ. ಈ ಎಲ್ಲ ಲೋಪಗಳಿದ್ದರೂ ಅರ್ಜಿದಾರರನ್ನು ಶಿಕ್ಷೆಗೆ ಗುರಿಪಡಿಸಿದ್ದಾರೆ. ಆದ್ದರಿಂದ ಅರ್ಜಿದಾರರನ್ನು ಪ್ರಕರಣದಿಂದ ದೋಷ ಮುಕ್ತಗೊಳಿಸಿ, ಪ್ರಕರಣದಿಂದ ಖುಲಾಸೆಗೊಳಿಸಬೇಕು ಎಂದು ಕೋರಿದರು.
ಮೇಲ್ಮನವಿದಾರರ ಪರ ವಕೀಲರು, ಅರ್ಜಿದಾರರ ವಿರುದ್ಧದ ಆರೋಪಕ್ಕೆ ಸಂಬಂಧಿಸಿದಂತೆ ಯಾವುದೇ ಸಾಕ್ಷ್ಯಾಧಾರಗಳನ್ನು ಒದಗಿಸಲಾಗಿಲ್ಲ. ಹೀಗಾಗಿ ಅರ್ಜಿದಾರರನ್ನು ಆರೋಪ ಮುಕ್ತಗೊಳಿಸಬೇಕು ಎಂದು ಕೋರಿದರು.
ಸರ್ಕಾರದ ಪರ ವಕೀಲರು, ಪ್ರಕರಣದಲ್ಲಿ ಸಂತ್ರಸ್ತರಾಗಿರುವ ಮೃತರ ಸಂಬಂಧಿಕರು ಘಟನೆ ನಡೆದ ಬಳಿಕ ಮೊದಲು ಪೊಲೀಸ್ ಠಾಣೆಗೆ ಹೋಗುವುದಕ್ಕೂ ಮುನ್ನ ಗಾಯಾಳುಗಳನ್ನು ಉಳಿಸುವ ಸಲುವಾಗಿ ಆಸ್ಪತ್ರೆಗೆ ಕರೆದುಕೊಂಡು ಹೋಗಿದ್ದರು. ಆದ್ದರಿಂದ ಪ್ರಕರಣದಲ್ಲಿ ದೂರು ದಾಖಲಿಸುವಲ್ಲಿ ವಿಳಂಬ ಮಾಡಿರುವ ಪ್ರಶ್ನೆ ಎದುರಾಗುವುದಿಲ್ಲ. ಅರ್ಜಿ ವಜಾಗೊಳಿಸಬೇಕು ಎಂದು ಕೋರಿದರು. ವಾದ ಮತ್ತು ಸಾಕ್ಷ್ಯಾಧಾರಗಳನ್ನು ಪರಿಗಣಿಸಿರುವ ನ್ಯಾಯಪೀಠ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಇದನ್ನೂ ಓದಿ: ಜೈನ್ ಶಾಲೆಗೆ 12 ಕೋಟಿ ರೂ.ಗಳ ಪ್ರೋ- ರೇಟಾ ಬಿಲ್ ಪಾವತಿಸಲು ಜಲಮಂಡಳಿ ನೀಡಿದ್ದ ಡಿಮ್ಯಾಂಡ್ ನೋಟಿಸ್ ಎತ್ತಿಹಿಡಿದ ಹೈಕೋರ್ಟ್

