ETV Bharat / state

ಎಂಡಿಎಂಎ ಮಾದಕ ವಸ್ತುಗಳ ಮಾರಾಟ: ನೈಜೀರಿಯಾ ಪ್ರಜೆಯ ಜಾಮೀನು ಅರ್ಜಿ ತಿರಸ್ಕರಿಸಿದ ಹೈಕೋರ್ಟ್

ಎಂಡಿಎಂಎ ಮಾದಕ ವಸ್ತುಗಳ ಮಾರಾಟ ಪ್ರಕರಣದಲ್ಲಿ ನೈಜೀರಿಯಾ ಪ್ರಜೆಯ ಜಾಮೀನು ಅರ್ಜಿಯನ್ನು ಹೈಕೋರ್ಟ್ ತಿರಸ್ಕರಿಸಿದೆ.

high-court-rejects-bail-application-of-nigerian-national-for-selling-mdma-drugs
ಹೈಕೋರ್ಟ್ (ETV Bharat)
author img

By ETV Bharat Karnataka Team

Published : May 27, 2026 at 1:43 PM IST

2 Min Read
Choose ETV Bharat

ಬೆಂಗಳೂರು: ವಾಣಿಜ್ಯ ಪ್ರಮಾಣದ ಮಾದಕ ವಸ್ತುಗಳೊಂದಿಗೆ ಸಿಕ್ಕಿಬಿದ್ದ ಆರೋಪಿಗಳಿಗೆ ಜಾಮೀನು ನೀಡುವುದು ಅಪವಾದವಾಗಲಿದೆ ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಎಂಡಿಎಂಎ ಮಾದಕ ವಸ್ತು ಸಾಗಣೆ ಪ್ರಕರಣದಲ್ಲಿ ಬಂಧಿತರಾಗಿದ್ದ ನೈಜೀರಿಯಾ ಪ್ರಜೆಯ ಜಾಮೀನು ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ನೈಜೀರಿಯಾದ ಪ್ರಜೆಯಾಗಿರುವ ಕ್ರಿಶ್ಚಿಯನ್‌ ಸೋಪೊರುಚುಕ್ವು ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ವಿ. ಶ್ರೀಶಾನಂದ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಪ್ರಕರಣ ಸಂಬಂಧ ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ಆರೋಪಿಯು ಅಕ್ರಮವಾಗಿ ಭಾರತದಲ್ಲಿ ಉಳಿದಿದ್ದದ್ದು, 1 ಕೆಜಿ ಎಂಡಿಎಂಎ ಸಹಿತ ಸಿಕ್ಕಿಬಿದ್ದಿದ್ದಾನೆ. ದಾಳಿ ನಡೆಸಿದ ಪೊಲೀಸ್ ತಂಡದ ಮುಖ್ಯಸ್ಥರು ಆರೋಪಿಯಿಂದ ಮಾದಕ ವಸ್ತುಗಳ ಜೊತೆಗೆ ಮಿನಿ ಎಲೆಕ್ಟ್ರಾನಿಕ್ ತೂಕ ಯಂತ್ರ, ಮೊಬೈಲ್ ಫೋನ್ ಹಾಗೂ ದ್ವಿಚಕ್ರ ವಾಹನ ವಶಪಡಿಸಿಕೊಂಡಿದ್ದಾರೆ. ನಂತರ ಆರೋಪಿಯನ್ನು ಹಾಗೂ ವಶಪಡಿಸಿಕೊಂಡ ವಸ್ತುಗಳನ್ನು ಠಾಣಾಧಿಕಾರಿಗಳ ವಶಕ್ಕೆ ಒಪ್ಪಿಸಲಾಗಿದೆ. ವಾಸ್ತವವಾಗಿ ಬಂಧನವು ಪೊಲೀಸ್ ಠಾಣೆಯಲ್ಲೇ ನಡೆದಿರುವುದರಿಂದ ದಾಳಿ ತಂಡದ ಮುಖ್ಯಸ್ಥರು ಹೆಚ್ಚುವರಿ ವಿಧಿವಿಧಾನಗಳನ್ನು ಪಾಲಿಸುವ ಅಗತ್ಯ ಇರಲಿಲ್ಲ ಎಂದು ಹೇಳಿದೆ.

ಅಲ್ಲದೆ, 1 ಕೆಜಿ ಎಂಡಿಎಂಎ ಸಂಗ್ರಹಿಸುವುದು ಸುಲಭದ ವಿಷಯವಲ್ಲ. ಪೊಲೀಸರು ಸುಳ್ಳು ಪ್ರಕರಣ ದಾಖಲಿಸಿದ್ದಾರೆ ಎನ್ನುವ ವಾದ ನಂಬಲರ್ಹವಲ್ಲ. ಅಲ್ಲದೆ, ಆರೋಪಿಗೂ ದಾಳಿ ನಡೆಸಿದ ಅಧಿಕಾರಿಗೂ ಪೂರ್ವ ವೈಮನಸ್ಸು ಇತ್ತು ಎಂಬುದಕ್ಕೂ ಯಾವುದೇ ಪುರಾವೆಗಳಿಲ್ಲ ಎಂದು ಪೀಠ ತಿಳಿಸಿದೆ.

ಅರ್ಜಿದಾರರ ವಾದವನ್ನು ತಳ್ಳಿಹಾಕಿರುವ ನ್ಯಾಯಪೀಠ, ಬಂಧನದ ಕಾರಣಗಳನ್ನು ಸರಿಯಾಗಿ ತಿಳಿಸದಿರುವುದು ಕೆಲ ಪ್ರಕರಣಗಳಲ್ಲಿ ಜಾಮೀನು ನೀಡಲು ಆಧಾರವಾಗಬಹುದು. ಆದರೆ ವಾಣಿಜ್ಯ ಪ್ರಮಾಣದ ಡ್ರಗ್ಸ್ ಪ್ರಕರಣಗಳಲ್ಲಿ ಕೇವಲ ತಾಂತ್ರಿಕ ಲೋಪಗಳನ್ನು ಆಧಾರವನ್ನಾಗಿ ಮಾಡಿಕೊಂಡು ಜಾಮೀನು ನೀಡಲು ಸಾಧ್ಯವಿಲ್ಲ ಎಂದು ಸ್ಪಷ್ಟಪಡಿಸಿದೆ.

ಪ್ರಕರಣದ ಹಿನ್ನೆಲೆ: ಅರ್ಜಿದಾರ ಆರೋಪಿ ಕ್ರಿಸ್ಟಿಯನ್ ಬಟ್ಟೆ ವ್ಯಾಪಾರಕ್ಕಾಗಿ ಬ್ಯುಸಿನೆಸ್ ವೀಸಾದ ಮೇಲೆ ಭಾರತಕ್ಕೆ ಬಂದಿದ್ದ. ಬಳಿಕ ಗೋವಾ, ದೆಹಲಿ ಮತ್ತು ಮುಂಬೈ ನಗರಗಳಲ್ಲಿ ವಾಸವಾಗಿದ್ದ ವೇಳೆ ದಕ್ಷಿಣ ಆಫ್ರಿಕಾ ಮೂಲದ ಡ್ರಗ್ ಪೆಡ್ಲರ್​ಗಳ ಪರಿಚಯ ಮಾಡಿಕೊಂಡು ಕಡಿಮೆ ದರದಲ್ಲಿ ಎಂಡಿಎಂಎ ಖರೀದಿಸಿ, ಕಾಲೇಜು ವಿದ್ಯಾರ್ಥಿಗಳು ಹಾಗೂ ಐಟಿ/ಬಿಟಿ ಉದ್ಯೋಗಿಗಳಿಗೆ ಪ್ರತಿ ಗ್ರಾಂಗೆ 15 ಸಾವಿರದಿಂದ 20 ಸಾವಿರಕ್ಕೆ ಮಾರಾಟ ಮಾಡುತ್ತಿದ್ದ. ಪ್ರಕರಣ ಸಂಬಂಧ ಅರ್ಜಿದಾರ ಆರೋಪಿ ಕ್ರಿಸ್ಟಿಯನ್ ಅವರನ್ನು ಬೇಗೂರು ಪೊಲೀಸರು 1 ಕೆಜಿ ಎಂಡಿಎಂಎ ಕ್ರಿಸ್ಟಲ್​ಗಳೊಂದಿಗೆ 2025ರ ಎಪ್ರಿಲ್ 6ರಂದು ಬಂಧಿಸಿ ಎನ್​ಡಿಪಿಎಸ್ ಕಾಯ್ದೆಯ ವಿವಿಧ ಕಲಂಗಳಡಿ ಪ್ರಕರಣ ದಾಖಲಿಸಿದ್ದರು. ಆರೋಪಿಗೆ ವಿಚಾರಣಾ ನ್ಯಾಯಾಲಯ ಜಾಮೀನು ಅರ್ಜಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಹೈಕೋರ್ಟ್ ಮೆಟ್ಟಿಲೇರಿದ್ದನು.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರನ್ನು ಬಂಧಿಸುವುದಕ್ಕೂ ಮುನ್ನ ಬಂಧನಕ್ಕೆ ಸೂಕ್ತ ಕಾರಣಗಳನ್ನು ತಿಳಿಸಿಲ್ಲ. ಆದ್ದರಿಂದ ಅರ್ಜಿದಾರರ ಬಂಧನ ಕಾನೂನುಬಾಹಿರವಾಗಿದ್ದು, ಜಾಮೀನು ಮಂಜೂರು ಮಾಡಬೇಕು ಎಂದು ಕೋರಿದ್ದರು.

ಇದನ್ನೂ ಓದಿ: ನಕಲಿ ಅಂಕಪಟ್ಟಿ ಜಾಲ: ಪ್ರಮುಖ ಆರೋಪಿಗೆ ಜಾಮೀನು ನಿರಾಕರಿಸಿದ ಹೈಕೋರ್ಟ್