ETV Bharat / state

ಪಾದಚಾರಿ ಮಾರ್ಗದಲ್ಲಿರುವ ಅಂಗಡಿ ತೆರವು ಕಾರ್ಯಾಚರಣೆಗೆ ತಡೆ ನೀಡಲು ಹೈಕೋರ್ಟ್ ನಕಾರ

ಸುರಕ್ಷಿತ ಪಾದಚಾರಿ ಮಾರ್ಗದಲ್ಲಿ ಪಾದಚಾರಿಗಳಿಗೆ ಯಾವುದೇ ತೊಂದರೆಯಿಲ್ಲದೆ ನಡೆದಾಡುವುದಕ್ಕೆ ಅವಕಾಶವಿರಬೇಕು. ಇದೇ ಕಾರಣಕ್ಕೆ ಈ ಅಭಿಯಾನ ಪ್ರಾರಂಭಿಸಲಾಗಿದ್ದು, ತಡೆ ನೀಡಲು ಸೂಕ್ತ ಕಾರಣ ಇಲ್ಲ ಎಂದು ಹೈಕೋರ್ಟ್ ಹೇಳಿದೆ.

BENGALURU  GBA CAMPAIGN  OPERATION FOOTPATH  FOOTPATH SHOPS REMOVE   HIGH COURT
ತೆರವು ಕಾರ್ಯಾಚರಣೆಯ ಸಂಗ್ರಹ ಚಿತ್ರ (ETV Bharat)
author img

By ETV Bharat Karnataka Team

Published : August 28, 2026 at 4:51 PM IST

1 Min Read
Choose ETV Bharat

ಬೆಂಗಳೂರು: ನಗರದಲ್ಲಿನ ರಸ್ತೆಗಳಲ್ಲಿ ಪಾದಚಾರಿಗಳಿಗೆ ಅಗತ್ಯ ಸ್ಥಳಾವಕಾಶ ಇರಬೇಕು ಎಂದು ಅಭಿಪ್ರಾಯಪಟ್ಟಿರುವ ಹೈಕೋರ್ಟ್, ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ಕೈಗೊಂಡಿರುವ ಸುರಕ್ಷಿತ ಪಾದಚಾರಿ ಮಾರ್ಗ ಅಭಿಯಾನಕ್ಕೆ ತಡೆಯಾಜ್ಞೆ ನೀಡಲು ನಿರಾಕರಿಸಿತು.

ನಗರ ತಜ್ಞರಾದ ಆರ್‌.ರಾಜಗೋಪಾಲನ್‌ ಎಂಬವರು ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಭಖ್ರು ಮತ್ತು ನ್ಯಾ.ಕೆ.ಎಸ್.ಹೇಮಲೇಖಾ ಅವರಿದ್ದ ನ್ಯಾಯಪೀಠ, ಜಿಬಿಎ ಅಭಿಯಾನಕ್ಕೆ ತಡೆ ನೀಡಲು ಸಕಾರಣಗಳಿಲ್ಲ ಎಂದು ತಿಳಿಸಿದೆ.

ಸುರಕ್ಷಿತ ಪಾದಚಾರಿ ಮಾರ್ಗದಲ್ಲಿ ಪಾದಚಾರಿಗಳಿಗೆ ಯಾವುದೇ ತೊಂದರೆಯಿಲ್ಲದೆ ನಡೆದಾಡುವುದಕ್ಕೆ ಅವಕಾಶವಿರಬೇಕು. ಇದೇ ಕಾರಣಕ್ಕೆ ಈ ಅಭಿಯಾನ ಪ್ರಾರಂಭಿಸಲಾಗಿದ್ದು, ತಡೆ ನೀಡಲು ಸೂಕ್ತ ಕಾರಣ ಇಲ್ಲ ಎಂದು ಹೇಳಿದೆ.

ವಿಚಾರಣೆ ವೇಳೆ ಅರ್ಜಿದಾರರು ಖುದ್ದಾಗಿ ವಾದ ಮಂಡಿಸಿ, ಈ ಅಭಿಯಾನವನ್ನು ಸೂಕ್ತವಾಗಿ ನಿರ್ವಹಣೆ ಮಾಡದೆ ಅಸ್ತವ್ಯಸ್ತವಾಗಿ ಜಾರಿಗೊಳಿಸಲಾಗುತ್ತಿದೆ. ಅಭಿಯಾನದ ವ್ಯಾಪ್ತಿಯ ಕುರಿತು ಸ್ಪಷ್ಟಪಡಿಸಿಲ್ಲ. ಪಾದಚಾರಿ ಮಾರ್ಗಗಳನ್ನು ತೆರವುಗೊಳಿಸುವ ವಿಧಾನ ಹಾಗೂ ತೆರವುಗೊಳಿಸಿದ ನಂತರದ ಮುಂದುವರಿದ ಕ್ರಮಗಳ ಬಗ್ಗೆಯೂ ಸಮಸ್ಯೆ ಎದುರಾಗುತ್ತಿದೆ. ಆದ್ದರಿಂದ ಅಭಿಯಾನಕ್ಕೆ ತಡೆ ನೀಡಬೇಕು ಎಂದು ಕೋರಿದರು.

ಇದಕ್ಕೆ ಪೀಠ, ಪಾದಚಾರಿ ಮಾರ್ಗಗಳನ್ನು ತೆರವುಗೊಳಿಸುವ ಮೂಲಕ ಪಾದಚಾರಿಗಳಿಗೆ ನಡೆಯಲು ಸೂಕ್ತ ಸ್ಥಳಾವಕಾಶ ಕಲ್ಪಿಸಬೇಕು ಎಂಬುದನ್ನು ಮಾತ್ರ ಈ ಆದೇಶ ಹೇಳಲಿದೆ ಎಂದು ತಿಳಿಸಿ ವಿಚಾರಣೆ ಮುಂದೂಡಿತು.

ಪ್ರಕರಣದ ಹಿನ್ನೆಲೆ: ರಾಜಧಾನಿ ಬೆಂಗಳೂರು ನಗರದಲ್ಲಿ 2026ರ ಜುಲೈ 1ರಿಂದ ಆರಂಭವಾಗಿರುವ ಸುರಕ್ಷತಾ ಪಾದಚಾರಿ ಮಾರ್ಗದ ಅಭಿಯಾನ ಮತ್ತು ಬೀದಿ ಬದಿ ವ್ಯಾಪಾರಿಗಳನ್ನು ತೆರವುಗೊಳಿಸುವ ಪ್ರಕ್ರಿಯೆಗೆ ತಕ್ಷಣ ತಡೆ ನೀಡಬೇಕು. ಬೀದಿ ಬದಿಯ ವ್ಯಾಪಾರಿಗಳ ಕಾಯಿದೆ ಮತ್ತು ಕರ್ನಾಟಕ ಬೀದಿ ಬದಿ ವ್ಯಾಪಾರಿಗಳು ಮತ್ತು ಯೋಜನೆಯಡಿ ಕ್ರಮಗಳನ್ನು ಕಟ್ಟುನಿಟ್ಟಾಗಿ ಜಾರಿ ಮಾಡಬೇಕು. ಟೌನ್‌ ವೆಂಡಿಂಗ್‌ ಸಮಿತಿಗಳನ್ನು ರಚನೆ ಮಾಡಬೇಕು. ನಗರದಲ್ಲಿ ಬೀದಿ ಬದಿ ವ್ಯಾಪಾರಿಗಳಿಗಾಗಿ ಮುಕ್ತ ವ್ಯಾಪಾರ ಕೇಂದ್ರಗಳನ್ನು ಕಾಲಮಿತಿಯಲ್ಲಿ ನಿರ್ಮಾಣ ಮಾಡಬೇಕು. ಬೀದಿ ಬದಿ ವ್ಯಾಪಾರಿಗಳಿಗಾಗಿ ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿ ಜಾರಿ ಮಾಡಬೇಕು ಎಂದು ಅರ್ಜಿದಾರರ ತಮ್ಮ ಅರ್ಜಿಯಲ್ಲಿ ಕೋರಿದ್ದರು.

ಜುಲೈ 1ರಿಂದ ಗ್ರೇಟರ್ ಬೆಂಗಳೂರು ಪ್ರಾಧಿಕಾರದ ವ್ಯಾಪ್ತಿಯ ಐದು ನಗರ ಪಾಲಿಕೆಗಳಲ್ಲಿ ಪಾದಚಾರಿ ಮಾರ್ಗಗಳ ಮೇಲಿನ ಒತ್ತುವರಿ ತೆರವು ಕಾರ್ಯಾಚರಣೆ ಆರಂಭವಾಗಿದ್ದು, ಇದಕ್ಕೆ ಬೀದಿ ಬದಿ ವ್ಯಾಪಾರಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಫುಟ್​​ಪಾತ್ ಅಂಗಡಿಗಳ ತೆರವು ವಿರೋಧಿಸಿ ವ್ಯಾಪಾರಿಗಳಿಂದ ಪ್ರತಿಭಟನೆ ಎಚ್ಚರಿಕೆ