ETV Bharat / state

ಮಹಿಳೆಗೆ ನಂಬಿಸಿ ಹಣ ಪಡೆದು ವಂಚನೆ ಪ್ರಕರಣ: ಆರೋಪಿ ವಿರುದ್ಧದ ಎಫ್​ಐಆರ್​ ರದ್ದುಪಡಿಸಲು ನಿರಾಕರಿಸಿದ ಹೈಕೋರ್ಟ್​

ಡಿವೋರ್ಸ್​​ ಮ್ಯಾಟ್ರಿಮೋನಿಯಲ್​ ಮೂಲಕ ಸಂತ್ರಸ್ತ ಮಹಿಳೆಗೆ ಆರೋಪಿ ಪರಿಚಯವಾಗಿದ್ದ.

HIGH COURT REFUSES TO QUASH FIR AGAINST ACCUSED IN FRAUD CASE FOR TAKING MONEY FROM WOMAN.
ಹೈಕೋರ್ಟ್​ (ETV Bharat)
author img

By ETV Bharat Karnataka Team

Published : January 3, 2026 at 5:07 PM IST

2 Min Read
Choose ETV Bharat

ಬೆಂಗಳೂರು: ಡಿವೋರ್ಸ್​ ಮ್ಯಾಟ್ರಿಮೋನಿಯಲ್​​ ಮೂಲಕ ಪರಿಚಯವಾದ ವಿಚ್ಛೇದಿತ ಮಹಿಳೆಗೆ ಮದುವೆಯಾಗಿ ಹೊಸ ಜೀವನ ನೀಡುತ್ತೇನೆ ಎಂದು ಭರವಸೆ ನೀಡಿ, ನಂತರ ನಿವೇಶನ ನೋಂದಣಿ ನೆಪದಲ್ಲಿ 2.80 ಲಕ್ಷ ರೂ. ಪಡೆದು ವಂಚಿಸಿದ ವ್ಯಕ್ತಿಯೋರ್ವನ ವಿರುದ್ಧ ದಾಖಲಾಗಿರುವ ಎಫ್‌ಐಆರ್​​​ ರದ್ದುಪಡಿಸಲು ಹೈಕೋರ್ಟ್‌ ನಿರಾಕರಿಸಿದೆ.

ಪ್ರಕರಣ ಸಂಬಂಧ ಚಿಕ್ಕಬಳ್ಳಾಪುರ ಸಿಇಎನ್‌ ಪೊಲೀಸ್‌ ಠಾಣೆಯಲ್ಲಿ ತನ್ನ ವಿರುದ್ಧ ದಾಖಲಾಗಿರುವ ಎಫ್‌ಐಆರ್‌ ರದ್ದುಪಡಿಸುವಂತೆ ಕೋರಿ ಬೆಂಗಳೂರಿನ ಸೀತಾರಾಮಪಾಳ್ಯದ ನಿವಾಸಿ ಇ.ಸುರೇಶ್‌ (59) ಸಲ್ಲಿಸಿದ್ದ ಕ್ರಿಮಿನಲ್‌ ಅರ್ಜಿ ವಜಾಗೊಳಿಸಿ ನ್ಯಾಯಮೂರ್ತಿ ಮೊಹಮ್ಮದ್‌ ನವಾಜ್‌ ಅವರ ಪೀಠ ಆದೇಶಿಸಿದೆ.

ಪ್ರಕರಣ ತನಿಖೆ ಹಂತದಲ್ಲಿದೆ. ತಾನು ಹಣ ಕಳುಹಿಸಿದ್ದ ಸುರೇಶ್​ ಬ್ಯಾಂಕ್​ ಖಾತೆಗಳ ವಿವರಗಳನ್ನು ದೂರುದಾರೆ ನೀಡಿದ್ದಾರೆ. ಸುರೇಶ್‌ ಖಾತೆಗೆ ದೂರುದಾರೆ ಹಣ ವರ್ಗಾಯಿಸಿದ್ದಾರೆ. ಮದುವೆಯಾಗುವುದಾಗಿ ಹೊಸ ಜೀವನ ನೀಡುತ್ತೇನೆ ಎಂದು ದೂರುದಾರೆಗೆ ಭರವಸೆ ನೀಡಿ, ನಂತರ ಆಕೆಯಿಂದ ನಿವೇಶನ ನೋಂದಣಿ ನೆಪದಲ್ಲಿ ಹಣ ಪಡೆದ ಬಳಿಕ ಹಣ ಮರು ಪಾವತಿಗೆ ಕೇಳಿದರೆ ಅವಾಚ್ಯ ಶಬ್ದಗಳಿಂದ ಬೈದು, ಮದುವೆಯಾಗಲು ನಿರಾಕರಿಸಿದ್ದ ಆರೋಪ ಸುರೇಶ್‌ ಮೇಲಿದೆ.

ತನಿಖೆ ನಡೆಯುತ್ತಿರುವ ಈ ಹಂತದಲ್ಲಿ ತನ್ನ ಮೇಲಿನ ಆರೋಪಗಳು ಸುಳ್ಳು ಎಂಬ ಸುರೇಶ್‌ ವಾದ ಒಪ್ಪಿ ಎಫ್‌ಐಆರ್‌ ರದ್ದುಪಡಿಸಲಾಗದು ಎಂದು ಪೀಠ ಆದೇಶದಲ್ಲಿ ತಿಳಿಸಿದೆ.

ಅಲ್ಲದೆ, ಪ್ರಕರಣದ ಪಕ್ಷಕಾರರು ವಿವಾದವನ್ನು ರಾಜೀ ಸಂಧಾನದ ಮೂಲಕ ಇತ್ಯರ್ಥಪಡಿಸಿಕೊಳ್ಳಲು ಬಯಸಿದರೆ ಆ ಕುರಿತು ಅರ್ಜಿ ಸಲ್ಲಿಸಬಹುದು ಎಂದು ತಿಳಿಸಿದೆ. ದೂರುದಾರೆಯ ಪರ ವಕೀಲೆ ಎಚ್. ಅನುಷಾ ದೇವಿ ವಾದ ಮಂಡಿಸಿದ್ದರು.

ಡಿವೋರ್ಸ್​ ವೆಬ್‌ಸೈಟ್‌ ಮೂಲಕ 2024ರ ಅ.10ರಂದು ದೂರುದಾರೆ ಮತ್ತು ಸುರೇಶ್‌ ಪರಿಚಿತರಾದ ನಂತರ ಘಟನೆ ನಡೆಸಿದೆ. ದೂರುದಾರೆಯ ದೂರು ಆಧರಿಸಿ ಚಿಕ್ಕಬಳ್ಳಾಪುರ ಸಿಇಎನ್‌ ಠಾಣಾ ಪೊಲೀಸರು ದಾಖಲಿಸಿದ್ದ ಎಫ್‌ಐಆರ್‌ ರದ್ದು ಕೋರಿ ಸುರೇಶ್‌ ಹೈಕೋರ್ಟ್‌ ಮೆಟ್ಟಿಲೇರಿದ್ದರು.

ಇನ್ನು ಪೊಲೀಸರ ಸೋಗಿನಲ್ಲಿ ಕರೆ ಮಾಡಿ, ಡಿಜಿಟಲ್ ಅರೆಸ್ಟ್ ಹೆಸರಲ್ಲಿ ನಿವೃತ್ತ ಶಿಕ್ಷಕರೊಬ್ಬರಿಗೆ 1.61 ಕೋಟಿ ರೂಪಾಯಿ ವಂಚಿಸಿದ ಘಟನೆ ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡಿನಲ್ಲಿ ನಡೆದಿತ್ತು. ಮುಂಡಗೋಡಿನ ಟಿಬೆಟಿಯನ್ ಕಾಲೋನಿಯ ನಿವಾಸಿ, 72 ವರ್ಷದ ಪಾಲ್ಡೆನ್ (ನಿವೃತ್ತ ಶಿಕ್ಷಕ) ವಂಚಕರ ಬಲೆಗೆ ಬಿದ್ದು 1.61 ಕೋಟಿ ರೂಪಾಯಿ ಕಳೆದುಕೊಂಡಿದ್ದರು. ಈ ಬಗ್ಗೆ ಕಾರವಾರದ ಸೈಬರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಾಗಿದ್ದು, ತನಿಖೆ ನಡೆಯುತ್ತಿದೆ.

ಇದನ್ನೂ ಓದಿ: ಕಾರವಾರ: ಪೊಲೀಸರ ಸೋಗಿನಲ್ಲಿ ಕರೆ ಮಾಡಿ ಡಿಜಿಟಲ್ ಅರೆಸ್ಟ್; 1.61 ಕೋಟಿ ರೂ. ಕಳೆದುಕೊಂಡ ನಿವೃತ್ತ ಶಿಕ್ಷಕ!