ETV Bharat / state

ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ: ಕೆಪಿಎಸ್ಸಿ ಮಾಜಿ ಅಧ್ಯಕ್ಷಗೆ ಮಧ್ಯಂತರ ರಕ್ಷಣೆ ನೀಡಲು ನಿರಾಕರಿಸಿದ ಹೈಕೋರ್ಟ್

ಪಶು ವೈದ್ಯಾಧಿಕಾರಿಗಳ ನೇಮಕಾತಿ ಅಕ್ರಮ ಪ್ರಕರಣದಲ್ಲಿ ಕೆಪಿಎಸ್ಸಿ ಮಾಜಿ ಅಧ್ಯಕ್ಷ ಸಾಹುಕಾರ್‌ ಶಿವಶಂಕರಪ್ಪ ಅವರಿಗೆ ಮಧ್ಯಂತರ ರಕ್ಷಣೆ ಹೈಕೋರ್ಟ್ ನಿರಾಕರಿಸಿದೆ.

ಹೈಕೋರ್ಟ್
ಹೈಕೋರ್ಟ್ (ETV Bharat)
author img

By ETV Bharat Karnataka Team

Published : August 31, 2026 at 11:32 PM IST

2 Min Read
Choose ETV Bharat

ಬೆಂಗಳೂರು: ಪಶು ವೈದ್ಯಾಧಿಕಾರಿ ಹುದ್ದೆಗಳ ನೇಮಕಾತಿ ಅಕ್ರಮ ಪ್ರಕರಣದಲ್ಲಿ ವಿಚಾರಣೆಗೆ ಕರೆದು ಬಂಧನ ಮಾಡದಂತೆ ತನಿಖಾಧಿಕಾರಿಗಳಿಗೆ ನಿರ್ದೇಶನ ನೀಡಿ ಮಧ್ಯಂತರ ರಕ್ಷಣೆ ಕೊಡಬೇಕು ಎಂದು ಕೋರಿ ಕರ್ನಾಟಕ ಲೋಕಸೇವಾ ಆಯೋಗದ ಮಾಜಿ ಅಧ್ಯಕ್ಷ ಶಿವಶಂಕರಪ್ಪ ಸಾಹುಕಾರ್ ಅವರ ಕೋರಿಕೆಯನ್ನು ಹೈಕೋರ್ಟ್ ತಿರಸ್ಕರಿಸಿದೆ.

ಪ್ರಕರಣದಲ್ಲಿ ಬಂಧನ ಭೀತಿ ಎದುರಿಸುತ್ತಿರುವ ಶಿವಶಂಕರಪ್ಪ ಎಸ್. ಸಾಹುಕಾರ್ ಅವರು ನಿರೀಕ್ಷಣಾ ಜಾಮೀನು ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್. ವಿಶ್ವಜಿತ್ ಶೆಟ್ಟಿ ಅವರಿದ್ದ ಏಕ ಸದಸ್ಯ, ಅರ್ಜಿದಾರರ ಮನವಿಯನ್ನು ತಿರಸ್ಕರಿಸಿತು.

ವಿಚಾರಣೆಯ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರನ್ನು ಎರಡನೇ ಬಾರಿಗೆ ಅಮಾನತು ಮಾಡಲಾಗಿದೆ. ಹೀಗಾಗಿ ಅವರು ಮತ್ತೆ ಅಧಿಕಾರ ವಹಿಸಿಕೊಳ್ಳುವ ಪ್ರಶ್ನೆಯೇ ಬರುವುದಿಲ್ಲ. ವಿಚಾರಣೆಗೆ ಅರ್ಜಿದಾರರು ಸಹಕರಿಸಿದ್ದಾರೆ. ಆದರೆ, ಪ್ರಕರಣದಲ್ಲಿ ರಾಜಕೀಯ ಹಸ್ತಕ್ಷೇಪ ಹೆಚ್ಚಿದ್ದು, ಪ್ರತಿಭಟನೆಗಳು ನಡೆದಿವೆ. ಪ್ರಕರಣದಲ್ಲಿ ಅರ್ಜಿದಾರರ ಪಾತ್ರ ಇಲ್ಲ. ಅವರ ಸಂಬಂಧಿಯೊಬ್ಬರು ನೇಮಕಾತಿ ಪ್ರಕ್ರಿಯೆ ಪಾಲ್ಗೊಂಡಿದ್ದರು ಎಂಬ ಆರೋಪವಿದೆ. ಆದರೆ, ಅವರು ಅರ್ಜಿದಾರರ ಸಂಬಂಧಿ ಅಲ್ಲ ಎಂದು ಕೆಪಿಎಸ್ಸಿ ಕಾರ್ಯದರ್ಶಿ ಸ್ಪಷ್ಟನೆ ನೀಡಿದ್ದಾರೆ. ಹೀಗಿದ್ದಾಗ, ಅವರನ್ನು ಅನಗತ್ಯವಾಗಿ ಬಂಧಿಸುವ ಸಾಧ್ಯತೆಯಿದೆ. ಆದ್ದರಿಂದ ಮಧ್ಯಂತರ ರಕ್ಷಣೆ ನೀಡಬೇಕು ಎಂದು ನ್ಯಾಯಪೀಠಕ್ಕೆ ಕೋರಿದರು.

ಇದಕ್ಕೆ ಆಕ್ಷೇಪಿಸಿದ ಸರ್ಕಾರದ ಪರ ವಕೀಲರು, ಪ್ರಕರಣದ ತನಿಖೆ ಈಗಷ್ಟೇ ಆರಂಭವಾಗಿದೆ. ಇದೊಂದು ಗಂಭೀರ ಪ್ರಕರಣವಾಗಿದೆ. ಆರೋಪಿಯೊಬ್ಬರು ವಿದೇಶಕ್ಕೆ ಹಾರಲು ಸಜ್ಜಾಗಿದ್ದರು. ಅವರನ್ನು ದೆಹಲಿ ವಿಮಾನ ನಿಲ್ದಾಣದಿಂದ ಬಂಧಿಸಿ ಕರೆ ತರಲಾಗಿದೆ. ಅರ್ಜಿದಾರರ ವಿರುದ್ಧ ಇದೊಂದೆ ಅಲ್ಲ, ಇನ್ನೂ ಎರಡು ಪ್ರಕರಣಗಳು ಇದ್ದಾರೆ. ಅರ್ಜಿದಾರರ ವಿಚಾರಣೆ ನಡೆಸಲಾಗಿದೆ. ವಿಚಾರಣೆ ಈಗಷ್ಟೇ ಆರಂಭವಾಗಿರುವುದರಿಂದ ಯಾವುದೇ ರೀತಿಯ ಮಧ್ಯಂತರ ರಕ್ಷಣೆ ಸೂಕ್ತವಲ್ಲ ಎಂದು ಹೇಳಿದರು.

ವಾದ-ಪ್ರತಿವಾದ ಆಲಿಸಿದ ನ್ಯಾಯಪೀಠ, ಈಗಾಗಲೇ ಅರ್ಜಿದಾರರ ವಿಚಾರಣೆ ನಡೆಸಲಾಗಿದೆ. ಆಗ ಅವರನ್ನು ಬಂಧಿಸಿಲ್ಲ ಎಂದು ಹೇಳಿ, ವಿಚಾರಣೆಗೆ ಕರೆದು ಬಂಧನ ಮಾಡದಂತೆ ತನಿಖಾಧಿಕಾರಿಗಳಿಗೆ ನಿರ್ದೇಶನ ನೀಡಬೇಕು ಎಂಬ ಅರ್ಜಿದಾರರ ಪರ ವಕೀಲರ ಮಧ್ಯಂತರ ಮನವಿಯನ್ನು ಪರಿಗಣಿಸಲು ನಿರಾಕರಿಸಿ ವಿಚಾರಣೆಯನ್ನು ಮುಂದೂಡಿತು.

ಪ್ರಕರಣದ ಹಿನ್ನೆಲೆ: ತಮ್ಮ ಪುತ್ರಿಗೆ ಸರ್ಕಾರಿ ಹುದ್ದೆ ಕೊಡಿಸಲು ಸಹಕರಿಸುವ ಮೂಲಕ ಅಧಿಕಾರ ದುರುಪಯೋಗ ಹಾಗೂ ಸ್ವಜನಪಕ್ಷಪಾತಧಿವೆಸಗಿದ ಆರೋಪದಲ್ಲಿ ಕೆಪಿಎಸ್ಸಿ ಅಧ್ಯಕ್ಷರಾಗಿದ್ದ ಶಿವಶಂಕರಪ್ಪ ಸಾಹುಕಾರ್ ಅವರನ್ನು ರಾಜ್ಯ ಸಚಿವ ಸಂಪುಟ ನಿರ್ಧಾರವನ್ನು ಪರಿಗಣಿಸದೆ ರಾಜ್ಯಪಾಲರು ಅನಾಮತ್ತು ಮಾಡಿ ಆದೇಶಿಸಿದ್ದರು. ಇದನ್ನು ಪ್ರಶ್ನಿಸಿ ಸಾಹುಕಾರ್ ಹೈಕೋರ್ಟ್ ಮೆಟ್ಟಿಲೇರಿದ್ದರು.

ಅರ್ಜಿಯ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜು ಅವರಿದ್ದ ನ್ಯಾಯಪೀಠ, ಸಚಿವ ಸಂಪುಟದ ನಿರ್ಧಾರ ಮತ್ತು ಶಿಫಾರಸು ಮಾಡುವ ಮುನ್ನ ಅಮಾನತು ಮಾಡಿರುವ ಆದೇಶ ಸಂವಿಧಾನ ಬಾಹಿರವಾಗಿದೆ. ಆದ್ದರಿಂದ ರಾಜ್ಯಪಾಲರ ನಿರ್ಧಾರವನ್ನು ರದ್ದುಗೊಳಿಸುತ್ತಿರುವುದಾಗಿ ಆದೇಶಿಸಿ, ಕೆಪಿಎಸ್ಸಿ ಅಧ್ಯಕ್ಷರನ್ನಾಗಿ ಮರು ನೇಮಕ ಮಾಡಬೇಕು ಎಂದು ಸೂಚನೆ ನೀಡಿತ್ತು. ಅಲ್ಲದೆ, ಸಂವಿಧಾನಪ್ರಕಾರ ರಾಜ್ಯಪಾಲರು ನಿರ್ಧಾರ ಕೈಗೊಳ್ಳಲು ಸ್ವತಂತ್ರರಿದ್ದಾರೆ ಎಂದು ಹೇಳಿತ್ತು. ಇದಾದ ಬಳಿಕ ಸಚಿವ ಸಂಪುಟದ ಸಿಫಾರಸಿನ ಮೇರೆಗೆ ಮತ್ತೆ ಅಮಾನತು ಮಾಡಿತ್ತು.

ಈ ನಡುವೆ ಕೆಪಿಎಸ್ಸಿ ನೇಮಕಾತಿಯಲ್ಲಿ ನಡೆದಿದ್ದ ಪಶುವೈದ್ಯಾಧಿಕಾರಿಗಳ ನೇಮಕದಲ್ಲಿನ ಅಕ್ರಮಕ್ಕೆ ಸಂಬಂಧಿಸಿದಂತೆ ಬಂಧನ ಭೀತಿಯಲ್ಲಿದ್ದ ಶಿವಶಂಕರಪ್ಪ ಮತ್ತು ಹೈಕೋರ್ಟ್ ಗೆ ಅರ್ಜಿ ಸಲ್ಲಿಸಿ, ಬಂಧನದಿಂದ ರಿಯಾಯಿತಿ ಕೋರಿದ್ದರು.

ಇದನ್ನೂ ಓದಿ: ಕೆಪಿಎಸ್​ಸಿ ಹಗರಣ: ಐಎಎಸ್ ಅಧಿಕಾರಿ ಜ್ಞಾನೇಂದ್ರ ಕುಮಾರ್, ಬೀದರ್ ಮೂಲದ ಬಸವರಾಜ್ ಕನ್ನಾಳೆ ಸಿಐಡಿ ಕಸ್ಟಡಿಗೆ