ಹುಬ್ಬಳ್ಳಿ ಎನ್ಕೌಂಟರ್ ಪ್ರಕರಣ ನ್ಯಾಯಾಂಗ ತನಿಖೆಗೆ ವಹಿಸಿದ ಹೈಕೋರ್ಟ್
ಹುಬ್ಬಳ್ಳಿಯಲ್ಲಿ ನಡೆದ ಬಾಲಕಿಯ ಅತ್ಯಾಚಾರ, ಕೊಲೆ ಆರೋಪಿಯ ಎನ್ಕೌಂಟರ್ ಪ್ರಕರಣವನ್ನು ನ್ಯಾಯಾಂಗ ತನಿಖೆಗೆ ವಹಿಸಿ ಹೈಕೋರ್ಟ್ ಆದೇಶಿಸಿದೆ.

Published : March 2, 2026 at 4:32 PM IST
ಬೆಂಗಳೂರು: ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿ ಮೇಲೆ ಅತ್ಯಾಚಾರವೆಸಗಿ ಕೊಲೆಗೈದ ಆರೋಪಿಯನ್ನು ಎನ್ಕೌಂಟರ್ ಮಾಡಿದ ಪ್ರಕರಣವನ್ನು ಹೈಕೋರ್ಟ್ ನ್ಯಾಯಾಂಗ ತನಿಖೆಗೆ ವಹಿಸಿ ಆದೇಶಿಸಿದೆ. ಅಲ್ಲದೆ, ಮ್ಯಾಜಿಸ್ಟ್ರೇಟ್ ತನಿಖಾ ವರದಿಯಲ್ಲಿ ಲೋಪಗಳಿದ್ದಲ್ಲಿ, ಕೇಂದ್ರ ತನಿಖಾ ಸಂಸ್ಥೆಯ ತನಿಖೆಗೆ ಒಳಪಡಿಸಲಾಗುವುದು ಎಂದು ಮೌಖಿಕವಾಗಿ ಎಚ್ಚರಿಕೆ ನೀಡಿದೆ.
ಎನ್ಕೌಂಟರ್ ಘಟನೆಯನ್ನು ಸ್ವತಂತ್ರ ತನಿಖೆಗೆ ವಹಿಸಬೇಕು, ಘಟನೆಯಲ್ಲಿ ಭಾಗಿಯಾದ ಎಲ್ಲ ಪೊಲೀಸ್ ಸಿಬ್ಬಂದಿಯನ್ನು ಬಂಧಿಸಿ ವಿಚಾರಣೆಗೊಳಪಡಿಸಬೇಕು ಎಂದು ಕೋರಿ ಪೀಪಲ್ಸ್ ಯೂನಿಯನ್ ಫಾರ್ ಲಿಬರ್ಟೀಸ್ ಕರ್ನಾಟಕ (ಪಿಯುಸಿಎಲ್) ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು.
ಅರ್ಜಿ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಭಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ. ಪೂಣಚ್ಚ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ. ಜೊತೆಗೆ, ಜೂನ್ ಅಂತ್ಯದ ವೇಳೆಗೆ ತನಿಖಾ ವರದಿ ಸಲ್ಲಿಸಬೇಕು ಎಂದು ಸೂಚನೆ ನೀಡಿದೆ.
ಈ ಹಿಂದೆ ಅರ್ಜಿ ವಿಚಾರಣೆ ಅಡ್ವೋಕೇಟ್ ಜನರಲ್ ಶಶಿಕಿರಣ್ ಶೆಟ್ಟಿ, ''ಪ್ರಕರಣವನ್ನು ಪಿಯುಸಿಎಲ್ ಪ್ರಕರಣದ ಸುಪ್ರೀಂ ಕೋರ್ಟ್ ಮಾರ್ಗಸೂಚಿಗಳು ಮತ್ತು ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ ನೀಡಿರುವ ಮಾರ್ಗಸೂಚಿಗಳ ಅನುಸಾರವಾಗಿ ಸಿಐಡಿ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಅಲ್ಲದೆ, ಘಟನೆ ಸಂಬಂಧ ಸ್ವತಂತ್ರ ತನಿಖೆ ನಡೆಸಬೇಕು ಎಂಬ ಕಾರಣದಿಂದ ಸಿಐಡಿಗೆ ವಹಿಸಲಾಗಿದೆ. ಹೈಕೋರ್ಟ್ ನಿರ್ದೇಶನ ನೀಡಿದಲ್ಲಿ ನ್ಯಾಯಾಂಗ ತನಿಖೆಗೆ ವಹಿಸಲಾಗುವುದು'' ಎಂದು ಪೀಠಕ್ಕೆ ತಿಳಿಸಿದ್ದರು.
ಪಿಯುಸಿಎಲ್ ಪರ ವಕೀಲರು, ''ಪ್ರಕರಣ ಸಂಬಂಧ ಎನ್ಕೌಂಟರ್ ಮಾಡಿದ ಅಧಿಕಾರಿಗಳ ವಿರುದ್ಧ ಪ್ರತ್ಯೇಕ ಎಫ್ಐಆರ್ ದಾಖಲಿಸಿ ತನಿಖೆ ನಡೆಸಬೇಕು. ಎನ್ಕೌಂಟರ್ ಪ್ರಕರಣಗಳ ಕುರಿತಂತೆ ಸುಪ್ರೀಂಕೋರ್ಟ್ ನೀಡಿದ ಆದೇಶದಲ್ಲಿನ ಮಾರ್ಗಸೂಚಿಗಳನ್ನು ಅನುಸರಿಸಿಲ್ಲ'' ಎಂದು ಪೀಠಕ್ಕೆ ಮನವಿ ಮಾಡಿದ್ದರು.
ಪೊಲೀಸ್ ವಶದಲ್ಲಿರುವ ಕ್ರಿಮಿನಲ್ ಅಸಹಜ ಸಾವು ಆಗಿರುವ ಅಂಶ ನಿಜವಾಗಿದೆ. ಘಟನೆ ಸಂಬಂಧ ಜನರ ಭಾವನೆಗಳನ್ನು ಪರಿಗಣಿಸಿ ಈ ಕೃತ್ಯ ನಡೆಸಲಾಗಿದೆ. ಮೃತ ಆರೋಪಿಯ ಬೆರಳಚ್ಚು ದಾಖಲೆ ತೆಗೆದುಕೊಳ್ಳಲಾಗಿದೆ. ಯಾರು ಶೂಟ್ ಮಾಡಿದರು, ಈ ಫಿಂಗರ್ ಪ್ರಿಂಟ್ ಯಾರು ತೆಗೆದುಕೊಂಡರು ಎಂಬ ಅಂಶ ಬೇಕಾಗಿದೆ ಎಂದು ತನಿಖೆ ನಡೆಸಬಾರದೇ ಎಂದು ಪೀಠ ಪ್ರಶ್ನಿಸಿತ್ತು.
ಪ್ರಕರಣದ ಹಿನ್ನೆಲೆ: 2025ರ ಎಪ್ರಿಲ್ ತಿಂಗಳಿನಲ್ಲಿ ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐದು ವರ್ಷದ ಬಾಲಕಿಯನ್ನು ಅಪಹರಿಸಿದ ಬಿಹಾರದ ವ್ಯಕ್ತಿ ಅತ್ಯಾಚಾರಕ್ಕೆ ಯತ್ನಿಸಿ, ಹತ್ಯೆ ಮಾಡಿದ್ದ. ಆರೋಪಿಯನ್ನು ಬಂಧಿಸಲು ಹೋಗಿದ್ದ ವೇಳೆ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದ. ಎಚ್ಚರಿಕೆ ನೀಡಿದರೂ ಹಲ್ಲೆಗೆ ಮುಂದಾಗಿದ್ದರಿಂದ ಪೊಲೀಸರು ಗುಂಡು ಹಾರಿಸಿದ್ದರು. ಬೆನ್ನಿಗೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದ. ಈ ಘಟನೆಯನ್ನು ನ್ಯಾಯಾಂಗ ತನಿಖೆಗೆ ಆದೇಶಿಸಲು ಪಿಯುಸಿಎಲ್ ಹೈಕೋಟ್ಗೆ ಅರ್ಜಿ ಸಲ್ಲಿಸಿತ್ತು.
ಇದನ್ನೂ ಓದಿ: ಮಗಳ ಅಪಹರಿಸಿದ್ದಾರೆಂದು ಅಳಿಯನ ವಿರುದ್ಧ ಅತ್ತೆ ದೂರು: ಕಾನೂನು ದುರ್ಬಳಕೆಯ ಸ್ಪಷ್ಟ ಉದಾಹರಣೆ ಎಂದ ಹೈಕೋರ್ಟ್

