ETV Bharat / state

ಅತ್ಯಾಚಾರ ಸಂತ್ರಸ್ತೆ ಅಪಹರಣ ಪ್ರಕರಣ: ಹೆಚ್​.ಡಿ. ರೇವಣ್ಣ ವಿಚಾರಣೆ ಮುಂದುವರೆಸಲು ಹೈಕೋರ್ಟ್​ ಸೂಚನೆ

ಅತ್ಯಾಚಾರ ಸಂತ್ರಸ್ತೆಯನ್ನು ಅಪಹರಿಸಿದ ಆರೋಪ ಪ್ರಕರಣದಲ್ಲಿ ಶಾಸಕ ಹೆಚ್‌.ಡಿ.ರೇವಣ್ಣ ವಿರುದ್ಧ ವಿಚಾರಣೆ ಮುಂದುವರೆಸುವಂತೆ ಹೈಕೋರ್ಟ್‌ ತಿಳಿಸಿದೆ.

high-court-orders-hearing-against-h-d-revanna-in-rape-victim-kidnapping-case
ಹೆಚ್​.ಡಿ.ರೇವಣ್ಣ ಹಾಗೂ ಹೈಕೋರ್ಟ್ (ETV Bharat And IANS)
author img

By ETV Bharat Karnataka Team

Published : February 26, 2026 at 9:00 PM IST

1 Min Read
Choose ETV Bharat

ಬೆಂಗಳೂರು: ಹಾಸನದ ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ ಅವರಿಂದ ಅತ್ಯಾಚಾರಕ್ಕೆ ಒಳಗಾದ ಸಂತ್ರಸ್ತೆಯನ್ನು ಅಪಹರಿಸಿದ ಆರೋಪ ಸಂಬಂಧ ಶಾಸಕ ಹೆಚ್‌. ಡಿ. ರೇವಣ್ಣ ವಿರುದ್ಧದ ವಿಚಾರಣೆಯನ್ನು ಕಾನೂನು ರೀತಿ ಮುಂದುವರೆಸುವಂತೆ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯಕ್ಕೆ ಹೈಕೋರ್ಟ್‌ ಗುರುವಾರ ಸೂಚನೆ ನೀಡಿದೆ.

ಪ್ರಕರಣ ಸಂಬಂಧ ಮೈಸೂರು ಜಿಲ್ಲೆಯ ಕೆ. ಆರ್‌. ಪೇಟೆ ಠಾಣೆಗೆ ಸಂತ್ರಸ್ತೆಯ ಪುತ್ರ ನೀಡಿದ್ದ ದೂರಿನ ತನಿಖೆ ನಡೆಸಿದ್ದ ಸಿಐಡಿ ಪೊಲೀಸರು ತಮ್ಮ ವಿರುದ್ಧ ವಿಚಾರಣಾ ನ್ಯಾಯಾಲಯಕ್ಕೆ ಸಲ್ಲಿಸಿರುವ ಆರೋಪಪಟ್ಟಿ ರದ್ದು ಕೋರಿ ಹೆಚ್‌. ಡಿ. ರೇವಣ್ಣ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸುನೀಲ್‌ ದತ್‌ ಯಾದವ್‌ ಅವರಿದ್ದ ನ್ಯಾಯಪೀಠಕ್ಕೆ ಅರ್ಜಿದಾರರ ಪರ ವಕೀಲರು ಹಾಜರಾಗಿ, ವಾದ ಮಂಡನೆಗೆ ಸ್ವಲ್ಪ ಕಾಲಾವಕಾಶ ನೀಡಬೇಕು ಎಂದು ಕೋರಿದರು.

ಇದಕ್ಕೆ ಸರ್ಕಾರಿ ಅಭೀಯೋಜಕರು, ಪ್ರಕರಣದಲ್ಲಿ ದೋಷಾರೋಪ ಹೊರಿಸುವ ಪ್ರಕ್ರಿಯೆಗೆ ಈ ಹಿಂದೆ ನೀಡಲಾಗಿದ್ದ ತಡೆಯಾಜ್ಞೆಯನ್ನು ತೆರವುಗೊಳಿಸಿ ಹೈಕೋರ್ಟ್‌ 2026ರ ಫೆಬ್ರುವರಿ 5ರಂದು ಆದೇಶಿಸಿದೆ. ಈಗಾಗಲೇ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಿಚಾರಣೆ ಆರಂಭಿಸಿದೆ ಎಂದು ನ್ಯಾಯಪೀಠಕ್ಕೆ ತಿಳಿಸಿದರು.

ಅದಕ್ಕೆ ಪ್ರತಿಕ್ರಿಯಿಸಿದ ಪೀಠ, ದೋಷಾರೋಪ ನಿಗದಿ ಪ್ರಕ್ರಿಯೆ ನಡೆಸುವುದಕ್ಕೆ ನೀಡಲಾಗಿದ್ದ ತಡೆಯಾಜ್ಞೆ ತೆರವುಗೊಳಿಸಲಾಗಿದೆ. ಇದರಿಂದ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಕಾನೂನು ಪ್ರಕಾರ ವಿಚಾರಣೆ ಮುಂದುವರೆಸಲಿ ಎಂದು ಸೂಚಿಸಿ, ಅರ್ಜಿ ವಿಚಾರಣೆಯನ್ನು ಮುಂದೂಡಿತು.

ಪ್ರಕರಣದ ಹಿನ್ನೆಲೆ: ಪ್ರಜ್ವಲ್‌ ರೇವಣ್ಣ ಅವರಿಂದ ಅತ್ಯಾಚಾರಕ್ಕೆ ಒಳಗಾಗಿರುವ ಆರೋಪ ಮಾಡಿದ್ದ ಮನೆಕೆಲಸದ ಮಹಿಳೆಯನ್ನು ಹೆಚ್‌.ಡಿ. ರೇವಣ್ಣ, ಅವರ ಪತ್ನಿ ಭವಾನಿ ಸೇರಿದಂತೆ 9 ಮಂದಿ ಆರೋಪಿಗಳು ಅಪಹರಿಸಿದ್ದಾರೆ ಎಂದು ಸಂತ್ರಸ್ತೆಯ ಪುತ್ರ ನೀಡಿದ್ದ ದೂರಿನ ಅನ್ವಯ ಮೈಸೂರಿನ ಕೆ.ಆರ್‌. ಪೇಟೆ ಪೊಲೀಸ್​ ಠಾಣೆಯಲ್ಲಿ 2025ರ ಮೇ 2ರಂದು ಎಫ್‌ಐಆರ್‌ ದಾಖಲಾಗಿತ್ತು.

ಪೊಲೀಸರು ಪ್ರಕರಣ ಸಂಬಂಧ ತನಿಖೆ ನಡೆಸಿ ವಿಶೇಷ ನ್ಯಾಯಾಲಯಕ್ಕೆ ದೋಷಾರೋಪ ಪಟ್ಟಿ ಸಲ್ಲಿಸಿದ್ದರು. 2024ರ ಆಗಸ್ಟ್​ 17ರಂದು ಕಾಗ್ನಿಜೆನ್ಸ್‌ ಸ್ವೀಕರಿಸಿದ್ದ ಜನಪ್ರತಿನಿಧಿಗಳ ವಿಶೇಷ ವಿಶೇಷ ನ್ಯಾಯಾಲಯ ಆರೋಪಿಗಳ ವಿರುದ್ಧ ದೋಷಾರೋಪ ನಿಗದಿ ಮಾಡಲು ನಿರ್ಧರಿಸಿತ್ತು. ಈ ಪ್ರಕ್ರಿಯೆ ಮುಂದೂಡುವಂತೆ ವಿಶೇಷ ನ್ಯಾಯಾಲಯಕ್ಕೆ ಹೈಕೋರ್ಟ್‌ ಸೂಚಿಸಿ, 2025ರ ಜನವರಿ 17ರಂದು ಮಧ್ಯಂತರ ಆದೇಶ ಮಾಡಿತ್ತು. ಅದನ್ನು 2026ರ ಫೆಬ್ರವರಿ 5ರಂದು ಹೈಕೋರ್ಟ್‌ ತೆರವುಗೊಳಿಸಿತ್ತು.

ಇದನ್ನೂ ಓದಿ: ವೈವಾಹಿಕ ವಿವಾದದಲ್ಲಿ ಆದಾಯ ತೆರಿಗೆ ಪಾವತಿಯ ವಿವರವನ್ನು ಆರ್‌ಟಿಐ ಅಡಿಯಲ್ಲಿ ಪಡೆಯಲಾಗದು: ಹೈಕೋರ್ಟ್