ರೈತರಿಂದ ಕಡಿಮೆ ಬೆಲೆಗೆ ಜಮೀನು ಸ್ವಾಧೀನಕ್ಕೆ ಪಡೆದು ಅಸ್ತಿತ್ವದಲ್ಲಿಲ್ಲದ ಕಂಪೆನಿಗೆ ಹಸ್ತಾಂತರ: ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶ
ರೈತರಿಂದ ಕಡಿಮೆ ಬೆಲೆಗೆ ಜಮೀನು ಸ್ವಾಧೀನಕ್ಕೆ ಪಡೆದು ಅಸ್ತಿತ್ವದಲ್ಲಿಲ್ಲದ ಕಂಪೆನಿಗೆ ಹಸ್ತಾಂತರ ಮಾಡಿದ ಪ್ರಕರಣ ಸಂಬಂಧ ಕೆಐಎಡಿಬಿ ಅಧಿಕಾರಿಗಳು, ಕಂಪೆನಿಯ ವಿರುದ್ಧ ಸಿಬಿಐ ತನಿಖೆಗೆ ಹೈಕೋರ್ಟ್ ಆದೇಶಿಸಿದೆ.

Published : April 12, 2026 at 9:19 AM IST
ಬೆಂಗಳೂರು: ಹೆಬ್ಬಾಳ ಹಾಗೂ ಅಮಾನಿಕೆರೆ ಹೆಬ್ಬಾಳ ಗ್ರಾಮಗಳಲ್ಲಿ ಕರ್ನಾಟಕ ಕೈಗಾರಿಕಾ ಅಭಿವೃದ್ಧಿ ನಿಗಮ(ಕೆಐಎಡಿಬಿ)ದಿಂದ ಸುಮಾರು 55 ಎಕರೆ ಭೂಸ್ವಾಧೀನದಲ್ಲಿ ಭಾರಿ ವಂಚನೆ ನಡೆದಿರುವ ಅಂಶವನ್ನು ಗಂಭೀರವಾಗಿ ಪರಿಗಣಿಸಿರುವ ಹೈಕೋರ್ಟ್, ಪ್ರಕರಣದಲ್ಲಿ ಭಾಗಿಯಾಗಿರುವ ಅಧಿಕಾರಿಗಳು ಹಾಗೂ ಲೆಕ್ ವ್ಯೂವ್ ಟೂರಿಸಂ ಕಾರ್ಪೊರೇಶನ್ ಎಂಬ ಸಂಸ್ಥೆ ನಿರ್ದೇಶಕರ ವಿರುದ್ಧ ಕೇಂದ್ರ ತನಿಖಾ ದಳ(ಸಿಬಿಐ)ದ ತನಿಖೆಗೆ ಆದೇಶಿಸಿದೆ.
ಭೂಸ್ವಾಧೀನ ಪ್ರಕ್ರಿಯೆ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿದ್ದ ಏಕಸದಸ್ಯ ಪೀಠದ ಆದೇಶ ಪ್ರಶ್ನಿಸಿ ಭೂಮಾಲೀಕರಾದ ಕೃಷ್ಣಾ ರೆಡ್ಡಿ(ಮೃತಪಟ್ಟ ಬಳಿಕ) ಅವರ ಸಂಬಂಧಿಕರು, ಮತ್ತಿತರರು ಸಲ್ಲಿಸಿದ್ದ ಅರ್ಜಿಗಳ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಿ.ಕೆ.ಸಿಂಗ್ ಮತ್ತು ನ್ಯಾಯಮೂರ್ತಿ ತಾರಾ ವಿತಸ್ಥ ಗಂಜಿ ಅವರಿದ್ದ ನ್ಯಾಯಪೀಠ ಈ ಆದೇಶ ಮಾಡಿದೆ.
ಅಸ್ತಿತ್ವದಲ್ಲೇ ಇಲ್ಲದ ಹಾಗೂ 2011ರಲ್ಲಿ ಸ್ಥಾಪನೆಯಾಗಿದ್ದ ಸಂಸ್ಥೆಯ ಹೆಸರಿನಲ್ಲಿ ಭೂಸ್ವಾಧೀನ ಮಾಡಿರುವುದು ಸರ್ಕಾರಿ ಅಧಿಕಾರಿಗಳಿಂದ ನಡೆದ ದೊಡ್ಡಮಟ್ಟದ ವಂಚನೆಯಾಗಿದೆ. ಇದು ಅಧಿಕಾರಿಗಳು ಮತ್ತು ಖಾಸಗಿ ವ್ಯಕ್ತಿಗಳ ನಡುವೆ ನಡೆದ ಕ್ರಿಮಿನಲ್ ಸಂಚು ಆಗಿದೆ. ಜೊತೆಗೆ, ಅಸ್ತಿತ್ವದಲ್ಲಿದ್ದ ಸಂಸ್ಥೆಯ ಸೂಚನೆಯ ಮೇರೆಗೆ ಭೂಮಾಲೀಕರ ಅಮೂಲ್ಯವಾದ ಆಸ್ತಿಯನ್ನು ಅಲ್ಪ ಪರಿಹಾರಕ್ಕೆ ಕಳೆದುಕೊಳ್ಳುವಂತೆ ಮಾಡಲಾಗಿದೆ. ಈ ಪ್ರಕ್ರಿಯೆ ಸಂಪೂರ್ಣವಾಗಿ ಕಾನೂನುಬಾಹಿರವಾಗಿದೆ ಎಂದಿರುವ ಹೈಕೋರ್ಟ್, ಇಡೀ ಭೂಸ್ವಾಧೀನ ಪ್ರಕ್ರಿಯೆ ರದ್ದುಗೊಳಿಸಿ, ಲೇಕ್ ವ್ಯೂವ್ ಟೂರಿಸಂ ಕಾರ್ಪೊರೇಶನ್ಗೆ 10 ಲಕ್ಷ ರೂ. ದಂಡ ವಿಧಿಸಿ ಆದೇಶಿಸಿದೆ.
2022-23ರ ಹಣಕಾಸು ವರ್ಷದ ನಿರ್ದೇಶಕರ ಕಚೇರಿ ವರದಿಯಲ್ಲಿ ಕಂಪೆನಿಯು ಯಾವುದೇ ಕಾರ್ಯಸಾಧ್ಯವಾದ ವ್ಯಾಪಾರ ಅವಕಾಶಗಳನ್ನು ಗುರುತಿಸುವ ಮತ್ತು ಅದರ ಪ್ರಮುಖ ವ್ಯವಹಾರ ಕಾರ್ಯಾಚರಣೆಗಳನ್ನು ಪ್ರಾರಂಭಿಸುವ ಪ್ರಕ್ರಿಯೆಯಲ್ಲಿತ್ತು ಎಂಬ ಅಂಶ ಗೊತ್ತಾಗಿದೆ. ಆದ್ದರಿಂದ ಈ ಪ್ರಸ್ತಾವಿತ ಕಂಪೆನಿಗೆ ಜಮೀನು ಸ್ವಾಧೀನಪಡಿಸಿಕೊಳ್ಳುವ ನಿರ್ಧಾರವನ್ನು ರಾಜ್ಯ ಸರ್ಕಾರದ ಪ್ರಾಧಿಕಾರವು ತೆಗೆದುಕೊಂಡಿದ್ದು, ಸರ್ಕಾರವೇ ಸ್ವತಃ ವಂಚನೆಯಲ್ಲಿ ಭಾಗಿಯಾಗಿದೆ. ಹೀಗಾಗಿ ರಾಜ್ಯ ಸರ್ಕಾರಿ ತನಿಖಾ ಸಂಸ್ಥೆಗಳಿಂದ ನಿಷ್ಪಕ್ಷಪಾತ ತನಿಖೆಯನ್ನು ನಿರೀಕ್ಷಿಸುವುದಕ್ಕೆ ಸಾಧ್ಯವಿಲ್ಲ. ಆದ್ದರಿಂದ ಸಿಬಿಐ ತನಿಖೆ ನಡೆಸುವುದು ಸೂಕ್ತ ಎಂದು ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಪ್ರಕರಣದ ಹಿನ್ನೆಲೆ: ಪಿ.ಸತೀಶ್ ಎಂಬವರು ರೆಸಾರ್ಟ್, ಪಂಚತಾರಾ ಹೋಟೆಲ್, ಮನೋರಂಜನಾ ಪಾರ್ಕ್ ಇತ್ಯಾದಿಗಳನ್ನು ಹೊಂದಿರುವ ಯುನಿಕೇರ್ ಟ್ಯೂರಿಸಂ ಸೆಂಟರ್ ರಚನೆ ಮಾಡಲು ಜಮೀನು ಸ್ವಾಧೀನಪಡಿಸಿಕೊಳ್ಳುವಂತೆ ನಿರ್ದಿಷ್ಟ ಸರ್ವೇ ನಂಬರ್ಗಳನ್ನು ನೀಡಿ 2000ರಲ್ಲಿ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದರು. ಈ ಸಂಸ್ಥೆಗೆ ಡಾ.ರಾಮದಾಸ್ ಪೈ, ಸಯ್ಯದ್ ಸಲಾವುದ್ದೀನ್, ಪಿ.ದಯಾನಂದ ಪೈ ಮತ್ತು ಪಿ.ಸತೀಶ್ ಪೈ ಅವರು ಪ್ರವರ್ತಕರು ಎಂದು ಆರಂಭದಲ್ಲಿ ತೋರಿಸಲಾಗಿತ್ತು. ಆದರೆ, 2011ರಲ್ಲಿ ಸಂಸ್ಥೆ ಸ್ಥಾಪನೆಯಾಗದ ಸಂದರ್ಭದಲ್ಲಿ ಯಾವುದೇ ಪ್ರವರ್ತಕರು ಸಂಸ್ಥೆಯೊಂದಿಗೆ ಸಂಬಂಧವನ್ನು ಹೊಂದಿರಲಿಲ್ಲ.
ಅರ್ಜಿದಾರರ ಮನವಿಯಂತೆ ಕೆಐಎಡಿಬಿ 2002ರಿಂದ 2004ರವರೆಗೂ ಪ್ರಾಥಮಿಕ ಮತ್ತು ಅಂತಿಮ ಅಧಿಸೂಚನೆಯನ್ನು ಹೊರಡಿಸಿತ್ತು. ಅಲ್ಲದೆ, ಆರಂಭದಲ್ಲಿ ಘಟಕದ ಷೇರು ಬಂಡವಾಳ 1 ಲಕ್ಷ ರೂ. ಎಂದು ತೋರಿಸಿದ್ದರು. ಅದರಿಂದ ಆಗಬಹುದಾದ ಆದಾಯವನ್ನು ಶೂನ್ಯ ಎಂಬುದಾಗಿ ತಿಳಿಸಲಾಗಿದೆ.
ಭೂಮಿ ಸ್ವಾಧೀನಪಡಿಸಿಕೊಂಡ 12 ವರ್ಷಗಳ ಕಾಲ ಯಾವುದೇ ರೀತಿಯ ಅಭಿವೃದ್ಧಿ ಕಾರ್ಯಗಳು ನಡೆದಿರಲಿಲ್ಲ. ಆದರೆ 2023ರ ಮಾರ್ಚ್ 7ರಂದು ಏಕಗವಾಕ್ಷಿ ಸಮಿತಿಯಿಂದ ಲೇಕ್ ವ್ಯೂವ್ ಪ್ರವಾಸೋದ್ಯಮ ನಿಗಮವನ್ನು ಇಬ್ಬರು ರಿಯಲ್ ಎಸ್ಟೇಟ್ ಡೆವಲಪರ್‌ಗಳ ಪಾಲುದಾರಿಕೆ ಸಂಸ್ಥೆಯನ್ನಾಗಿ ಪರಿಗಣಿಸಿ, ಆ ಸ್ಥಳದಲ್ಲಿ ವಾಣಿಜ್ಯ ಕಚೇರಿಗಳು, ಟೆಕ್ ಪಾರ್ಕ್‌ವುಳ್ಳ ಸಮಗ್ರ ನಗರ ನಿರ್ಮಾಣಕ್ಕೆ ಭೂ ಪರಿವರ್ತನೆಗೆ ಅನುಮತಿ ನೀಡಲಾಗಿತ್ತು.
ಈ ನಡುವೆ ಭೂ ಸ್ವಾಧೀನ ಪ್ರಕ್ರಿಯೆಯನ್ನು ಪ್ರಶ್ನಿಸಿ ಹೆಬ್ಬಾಳದ ಭೂ ಮಾಲೀಕರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಪೀಠ ವಜಾಗೊಳಿಸಿ ಆದೇಶಿಸಿತ್ತು. ಅದನ್ನು ಪ್ರಶ್ನಿಸಿ ದ್ವಿಸದಸ್ಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು.
ಇದನ್ನೂ ಓದಿ: ಕಾನೂನುಬದ್ಧ ಬಂಧನಕ್ಕೂ ಮುನ್ನ ರಕ್ತದ ಮಾದರಿ ಸಂಗ್ರಹಕ್ಕೆ ಅವಕಾಶವಿಲ್ಲ: ಹೈಕೋರ್ಟ್

