ETV Bharat / state

ಬಿಡಿಸಿಸಿ ಬ್ಯಾಂಕ್ ಹುಕ್ಕೇರಿ ಕ್ಷೇತ್ರಕ್ಕೂ ನಾಳೆಯೇ ಚುನಾವಣೆ ನಡೆಸುವಂತೆ ಹೈಕೋರ್ಟ್ ಆದೇಶ

ಬಿಡಿಸಿಸಿ ಬ್ಯಾಂಕ್​ ಚುನಾವಣೆಯಲ್ಲಿ ಹುಕ್ಕೇರಿ ಕ್ಷೇತ್ರಕ್ಕೂ ನಾಳೆಯೇ ಮತದಾನ ನಡೆಸುವಂತೆ ಹೈಕೋರ್ಟ್ ಮಹತ್ವದ ಆದೇಶ ನೀಡಿದೆ.

high-court-order-to-hold-elections-in-bdcc-bank-hukkeri-on-sunday
ಬಿಡಿಸಿಸಿ ಬ್ಯಾಂಕ್​ (ETV Bharat)
author img

By ETV Bharat Karnataka Team

Published : October 18, 2025 at 8:31 PM IST

2 Min Read
Choose ETV Bharat

ಚಿಕ್ಕೋಡಿ: ಬಿಡಿಸಿಸಿ ಬ್ಯಾಂಕ್ ಮಾಜಿ ಅಧ್ಯಕ್ಷ, ಹಾಲಿ ನಿರ್ದೇಶಕ ರಮೇಶ ಕತ್ತಿ ಸ್ಪರ್ಧಿಸಿರುವ ಹುಕ್ಕೇರಿ ತಾಲೂಕಿನ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಸಂಘಗಳು ಪ್ರತಿನಿಧಿಸುವ ಮತ ಕ್ಷೇತ್ರದ ಚುನಾವಣೆ ಮುಂದೂಡಿದ್ದ ಮಧ್ಯಂತರ ಆದೇಶಕ್ಕೆ ತಡೆಯಾಜ್ಞೆ ಬಿದ್ದಿದ್ದು, ನಾಳೆ ಭಾನುವಾರವೇ ಚುನಾವಣೆ ನಡೆಸುವಂತೆ ಹೈಕೋರ್ಟ್ ಮಹತ್ವದ ಆದೇಶ ಹೊರಡಿಸಿದೆ.

ಬೆಳಗಾವಿ ಜಿಲ್ಲಾ ಕೇಂದ್ರ ಸಹಕಾರ (ಡಿಸಿಸಿ) ಬ್ಯಾಂಕ್​ನ 7 ನಿರ್ದೇಶಕ ಸ್ಥಾನಗಳಿಗೆ ಅಕ್ಟೋಬರ್​​ 19ರಂದು ಮತದಾನ ನಿಗದಿಯಾಗಿತ್ತು. ಆದರೆ, ಡೆಲಿಗೇಷನ್‌ ಸಮಸ್ಯೆ ಮುಂದಿಟ್ಟುಕೊಂಡು ಹುಕ್ಕೇರಿ ತಾಲೂಕಿನ ಮದಿಹಳ್ಳಿ ಪಿಕೆಪಿಎಸ್‌ ನಿರ್ದೇಶಕರೊಬ್ಬರು ಕೋರ್ಟ್‌ ಮೊರೆ ಹೋಗಿದ್ದರು. ಈ ಹಿನ್ನೆಲೆಯಲ್ಲಿ, ಹುಕ್ಕೇರಿ ಕ್ಷೇತ್ರಕ್ಕೆ ನಡೆಯಬೇಕಿದ್ದ ಮತದಾನವನ್ನು ಮುಂದೂಡಿ ನಿನ್ನೆ (ಶುಕ್ರವಾರ) ಯಷ್ಟೇ ನ್ಯಾಯಾಲಯ ಆದೇಶ ಹೊರಡಿಸಿತ್ತು.

ಆದರೆ, ಈ ಮಧ್ಯಂತರ ಆದೇಶವನ್ನು ಇಂದು ಹೈಕೋರ್ಟ್ ತಡೆ ಹಿಡಿದಿದೆ. ಇನ್ನುಳಿದ ಆರು ಕ್ಷೇತ್ರಗಳ ಜೊತೆಗೆ ಹುಕ್ಕೇರಿ ತಾಲೂಕಿನ ಚುನಾವಣೆಯನ್ನೂ ಭಾನುವಾರ ನಡೆಸುವಂತೆ ತೀರ್ಪು ಪ್ರಕಟಿಸಿದೆ ಎಂದು ಜಿಲ್ಲಾಧಿಕಾರಿಗಳು ಹಾಗೂ ಫೆಡರಲ್ ವರ್ಗದ ಸಹಕಾರ ಸಂಘಗಳ ಜಿಲ್ಲಾ ಚುನಾವಣಾ ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.

ಕೋರಂ ಇಲ್ಲದೆಯೇ ಮದಿಹಳ್ಳಿ ಪಿಕೆಪಿಎಸ್‌ನಲ್ಲಿ ಡೆಲಿಗೇಷನ್‌ ಠರಾವು ಪಾಸ್‌ ಮಾಡಲಾಗಿದೆ ಎಂದು ನಿರ್ದೇಶಕ ಭೀಮಸೇನ ಬಾಗಿ ನ್ಯಾಯಾಲಯದ ಮೊರೆ ಹೋಗಿದ್ದರು. ಈ ಸಂಬಂಧ ವಿಚಾರಣೆ ನಡೆಸಿದ್ದ ಧಾರವಾಡ ಹೈಕೋರ್ಟ್ ಪೀಠ ಮುಂದಿನ‌ ಆದೇಶದವರೆಗೆ ಚುನಾವಣೆ ಮುಂದೂಡಿ, ಆದೇಶ ಹೊರಡಿಸಿತ್ತು. ಆದರೆ, ಈ ಆದೇಶಕ್ಕೆ ಇಂದು ತಡೆ ಬಿದ್ದಿದ್ದು, ನಾಳೆಯೇ ಚುನಾವಣೆ ನಡೆಯಲಿದೆ.

ಭಾನುವಾರ ಬಿಡಿಸಿಸಿ ಬ್ಯಾಂಕ್‌ ಮತದಾನ: ಬಿಡಿಸಿಸಿ ಬ್ಯಾಂಕಿನ 9 ನಿರ್ದೇಶಕ ಸ್ಥಾನಗಳಿಗೆ ಅವಿರೋಧ ಆಯ್ಕೆ ನಡೆದಿದ್ದು, ಉಳಿದ 7 ಸ್ಥಾನಗಳಿಗೆ ಅ.19ರಂದು ಭಾನುವಾರ ಬೆಳಗ್ಗೆ 9ರಿಂದ ಸಂಜೆ 4ರವರೆಗೆ ನಗರದ ಬಿ.ಕೆ.ಮಾಡೆಲ್ ಹೈಸ್ಕೂಲ್‌ನಲ್ಲಿ ಮತದಾನ ನಡೆಯಲಿದೆ. ಫಲಿತಾಂಶ ಕೂಡ ನಾಳೆಯೇ ಪ್ರಕಟವಾಗಲಿದೆ.

ಅಥಣಿ ತಾಲೂಕಿನಿಂದ 125 ಅರ್ಹ ಮತದಾರರಿದ್ದು, ಬೈಲಹೊಂಗಲ 73, ಹುಕ್ಕೇರಿ 90, ಕಿತ್ತೂರು 29, ನಿಪ್ಪಾಣಿ 119, ರಾಯಬಾಗ 205 ಹಾಗೂ ರಾಮದುರ್ಗ 105 ಮತದಾರರು ಸೇರಿ ಒಟ್ಟು 676 ಮತದಾರರು ಮತದಾನ ಮಾಡಲಿದ್ದಾರೆ.

ಏಳು ಸ್ಥಾನಗಳಿಗೆ 14 ಅಭ್ಯರ್ಥಿಗಳು ಕಣದಲ್ಲಿ ಉಳಿದಿದ್ದಾರೆ. ಮತದಾನಕ್ಕಾಗಿ ಏಳು ಮತಗಟ್ಟೆ ಕೇಂದ್ರಗಳನ್ನು ತೆರೆಯಲಾಗಿದೆ. ಎಲ್ಲ ಕೇಂದ್ರಗಳಲ್ಲಿಯೂ ಸಿಸಿಟಿವಿ ಕ್ಯಾಮೆರಾ ಅಳವಡಿಸಲಾಗುವುದು. ಮತದಾನದ ಕೇಂದ್ರದ ಹೊರಗೆ ಹಾಗೂ ಒಳಗೆ ನಗರ ಪೊಲೀಸ್‌ ಆಯುಕ್ತ ಭೂಷಣ್‌ ಭೊರಸೆ ಅವರ ನೇತೃತ್ವದಲ್ಲಿ ಸೂಕ್ತ ಬಂದೋಬಸ್ತ್ ಕೈಗೊಳ್ಳಲಾಗಿದೆ ಎಂದು ಬಿಡಿಸಿಸಿ ಬ್ಯಾಂಕ್‌ ಚುನಾವಣಾಧಿಕಾರಿಯೂ ಆಗಿರುವ ಬೆಳಗಾವಿ ಉಪವಿಭಾಗಾಧಿಕಾರಿ ಶ್ರವಣ ನಾಯಿಕ ಮಾಹಿತಿ ನೀಡಿದ್ದಾರೆ.

ಇದನ್ನೂ ಓದಿ: ರಾಜ್ಯ ರಾಜಕಾರಣದಲ್ಲಿ ಸುದ್ದಿ ಮಾಡುತ್ತಿರುವ ಬೆಳಗಾವಿ ಡಿಸಿಸಿ ಬ್ಯಾಂಕ್ ಬೆಳೆದು ಬಂದ ಹಾದಿ