ಮಹದೇವಪುರದ ಕೆಲ ವಾರ್ಡ್ಗಳಲ್ಲಿ ಪರ್ಯಾಯ ಎಸ್ಐಆರ್: ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನೋಟಿಸ್
ಪರ್ಯಾಯ ಎಸ್ಐಆರ್ ಸಂಬಂಧ ರಾಜ್ಯ ಸರ್ಕಾರ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿರುವ ಹೈಕೋರ್ಟ್, ಒಂದು ವಾರದೊಳಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿದೆ.

Published : July 8, 2026 at 2:33 PM IST
ಬೆಂಗಳೂರು: ಗ್ರೇಟರ್ ಬೆಂಗಳೂರು ಪ್ರಾಧಿಕಾರದ (ಜಿಬಿಎ) ಕೆಲ ವಾರ್ಡ್ಗಳಲ್ಲಿ ಕೇಂದ್ರ ಚುನಾವಣಾ ಆಯೋಗ ನಡೆಸುತ್ತಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ (ಎಸ್ಐಆರ್)ಗೆ ಪರ್ಯಾಯವಾಗಿ ಮತದಾರರ ಪಟ್ಟಿ ಪರಿಷ್ಕರಣೆ ನಡೆಸಲು ಮುಂದಾಗಿರುವ ಕ್ರಮ ಪ್ರಶ್ನಿಸಿ ಸಲ್ಲಿಕೆಯಾಗಿರುವ ಅರ್ಜಿ ಸಂಬಂಧ ರಾಜ್ಯ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ದೇಶಾದ್ಯಂತ ಕೇಂದ್ರ ಚುನಾವಣಾ ಆಯೋಗ ಹಮ್ಮಿಕೊಂಡಿರುವ ಎಸ್ಐಆರ್ ಪ್ರಕ್ರಿಯೆ ಚಾಲ್ತಿಯಲ್ಲಿರುವಾಗಲೇ, ಬೆಂಗಳೂರಿನ ಕೆಲ ವಾರ್ಡ್ಗಳಿಗೆ ಪ್ರತ್ಯೇಕ ಹಾಗೂ ಸಮಾನಾಂತರ ಎಸ್ಐಆರ್ ನಡೆಸಲು ರಾಜ್ಯ ಚುನಾವಣಾ ಆಯೋಗ ಜೂನ್ 19ರಂದು ಆದೇಶ ಹೊರಡಿಸಿತ್ತು. ಇದನ್ನು ರದ್ದು ಮಾಡುವಂತೆ ಕೋರಿ ಬೆಂಗಳೂರಿನ ವಿವೇಕ್ ಎಂಬುವರು ಸೇರಿ ಐದು ಮಂದಿ ಹೈಕೋರ್ಟ್ಗೆ ಅರ್ಜಿ ಸಲ್ಲಿಸಿದ್ದಾರೆ. ಅದರ ವಿಚಾರಣೆ ಕೈಗೊಂಡ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರಿದ್ದ ಏಕಸದಸ್ಯ ಪೀಠ, ರಾಜ್ಯ ಚುನಾವಣಾ ಆಯೋಗ, ರಾಜ್ಯ ಸರ್ಕಾರ ಹಾಗೂ ಕೇಂದ್ರ ಚುನಾವಣಾ ಆಯೋಗಕ್ಕೆ ನೋಟಿಸ್ ಜಾರಿಗೊಳಿಸಿ ಒಂದು ವಾರದೊಳಗೆ ಆಕ್ಷೇಪಣೆ ಸಲ್ಲಿಸುವಂತೆ ಸೂಚಿಸಿತು. ಅಲ್ಲದೆ, ವಿಚಾರಣೆಯನ್ನು ಜುಲೈ 15ಕ್ಕೆ ಮುಂದೂಡಿತು.
ಪ್ರಕರಣದ ವಿವರ: ಕೇಂದ್ರ ಸರ್ಕಾರ ಎಸ್ಐಆರ್ ನಡೆಸುವುದಾಗಿ 2025ರ ಅಕ್ಟೋಬರ್ 27ರಂದು ಪ್ರಕಟಿಸಿತ್ತು. ಅದರಂತೆ 2026ರ ಜೂನ್ 16ರಂದು ರಾಜ್ಯದಲ್ಲಿ ವಿಧಾನಸಭೆ ಕ್ಷೇತ್ರಗಳ ಮತದಾರರ ಪಟ್ಟಿಯನ್ನು ಜಪ್ತಿ ಮಾಡಿತ್ತು. ಇದಾದ ಮೂರೇ ದಿನಗಳಲ್ಲಿ ಅಂದರೆ ಜೂನ್ 19ರಂದು ರಾಜ್ಯ ಚುನಾವಣಾ ಆಯೋಗ ಸಹ ಜಿಬಿಎಯ ಕೆಲವು ವಾರ್ಡ್ಗಳ ಮತಪಟ್ಟಿ ಪರಿಷ್ಕರಣೆ ನಡೆಸಲು ಆದೇಶಿಸಿದೆ ಎಂದು ಅರ್ಜಿದಾರರು ಅರ್ಜಿಯಲ್ಲಿ ಆಕ್ಷೇಪಿಸಿದ್ದಾರೆ.
ಕೇಂದ್ರ ಚುನಾವಣಾ ಆಯೋಗದ ನಿರ್ದೇಶನದಂತೆ ಜೂನ್ 30ರಿಂದ ಈಗಾಗಲೇ ಜಿಬಿಎ ಸೇರಿ ರಾಜ್ಯಾದ್ಯಂತ ಎಸ್ಐಆರ್ ಮನೆ ಮನೆ ಸರ್ವೇ ಆರಂಭವಾಗಿದೆ. ಒಂದೇ ಅವಧಿಯಲ್ಲಿ ಪ್ರತ್ಯೇಕವಾಗಿ ಪರ್ಯಾಯ ಎಸ್ಐಆರ್ ನಡೆಸುವುದರಿಂದ ಸಾಕಷ್ಟು ಗೊಂದಲಗಳು ಸೃಷ್ಟಿಯಾಗಲಿವೆ. ಮೇಲಾಗಿ ಇದು ಕೇಂದ್ರ ಚುನಾವಣಾ ಆಯೋಗದ ನಿರ್ದೇಶನಗಳಿಗೆ ವಿರುದ್ಧವಾಗಿದೆ. ಆದ್ದರಿಂದ, ರಾಜ್ಯ ಚುನಾವಣಾ ಆಯೋಗ ಜೂನ್ 19ರಂದು ಹೊರಡಿಸಿರುವ ಆದೇಶ ರದ್ದುಪಡಿಸಬೇಕು ಎಂದು ಅರ್ಜಿಯಲ್ಲಿ ಕೋರಲಾಗಿದೆ.
ಇದನ್ನೂ ಓದಿ: ನಿವೃತ್ತಿ ದಿನದಂದು ಬಡ್ತಿ ನೀಡಿದ್ದರೂ, ಪದೋನ್ನತಿ ಹುದ್ದೆಯ ಪ್ರಕಾರವೇ ರಿಟೈರ್ಮೆಂಟ್ ಸೌಲಭ್ಯಗಳನ್ನು ನೀಡಬೇಕು: ಹೈಕೋರ್ಟ್

