SIR: ಮತದಾರರ ಪಟ್ಟಿಯಲ್ಲಿ ಯುವತಿಯ ಬದಲಿಗೆ ವ್ಯಕ್ತಿ ಹೆಸರು ಸೇರ್ಪಡೆ: ಚುನಾವಣಾ ಆಯೋಗಕ್ಕೆ ನೋಟಿಸ್
ಎಸ್ಐಆರ್ ಪ್ರಕ್ರಿಯೆಯಲ್ಲಿ ಯುವತಿಯ ಹೆಸರನ್ನು ತಪ್ಪಾಗಿ ನಮೂದಿಸಿರುವ ಸಂಬಂಧ ಹೈಕೋರ್ಟ್ಗೆ ಅರ್ಜಿ ಸಲ್ಲಿಕೆಯಾಗಿದೆ.

Published : September 3, 2026 at 7:43 AM IST
ಬೆಂಗಳೂರು: ಮತದಾರರ ಪಟ್ಟಿಯಲ್ಲಿ ತಮ್ಮ ಎಪಿಕ್ ಸಂಖ್ಯೆಯ ಮುಂದೆ ಸೈಯದ್ ಏಜಾಜ್ ಅಹ್ಮದ್ ಎಂಬ ಅಪರಿಚಿತ ವ್ಯಕ್ತಿ ಹೆಸರು ನಮೂದಿಸಿದ್ದಲ್ಲದೆ, ಎಸ್ಐಆರ್ ಪ್ರಕ್ರಿಯೆಯಲ್ಲಿ ತಮ್ಮ ಹೆಸರನ್ನು ಎಎಸ್ಡಿಡಿಒ ಪಟ್ಟಿಯಲ್ಲಿ 'ಶಾಶ್ವತ ಸ್ಥಳಾಂತರ' ಎಂದು ವರ್ಗಿಕರಿಸಿರುವುದನ್ನು ಆಕ್ಷೇಪಿಸಿ ಯುವತಿಯೊಬ್ಬರು ಸಲ್ಲಿಸಿರುವ ಅರ್ಜಿ ಸಂಬಂಧ ಚುನಾವಣಾ ಆಯೋಗಕ್ಕೆ ಹೈಕೋರ್ಟ್ ನೋಟಿಸ್ ಜಾರಿ ಮಾಡಿದೆ.
ಬೆಂಗಳೂರಿನ ಜೆ. ಪಿ. ನಗರದ ಪುಟ್ಟೇನಹಳ್ಳಿ ನಿವಾಸಿ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಮತದಾರರು ಆಗಿರುವ ಎಸ್. ಮೈಥಿಲಿ ಎಂಬುವರು ಸಲ್ಲಿಸಿರುವ ಅರ್ಜಿ ವಿಚಾರಣೆಯನ್ನು ನ್ಯಾಯಮೂರ್ತಿ ಸೂರಜ್ ಗೋವಿಂದಾಜ್ ಅವರಿದ್ದ ನ್ಯಾಯಪೀಠ ನಡೆಸಿತು.
ಅಲ್ಲದೆ, ಭಾರತ ಚುನಾವಣಾ ಆಯೋಗ, ರಾಜ್ಯ ಮುಖ್ಯ ಚುನಾವಣಾಧಿಕಾರಿ, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಮತದಾರರ ನೋಂದಣಾಧಿಕಾರಿ (ಇಆರ್ಒ), ಸ್ಥಳೀಯ ಮತಗಟ್ಟೆ ಅಧಿಕಾರಿ (ಬಿಎಲ್ಒ), ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ನೊಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಸೆಪ್ಟಂಬರ್ 17ಕ್ಕೆ ಮುಂದೂಡಿತು.
ಅರ್ಜಿ ವಿವರ: ಎಸ್. ಮೈಥಿಲಿ 2015ರಿಂದ ಎಪಿಕ್ ಕಾರ್ಡ್ (UHN6707236) ಹೊಂದಿದ್ದು, ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಭಾಗ ಸಂಖ್ಯೆ 92ರ ಮತದಾರರ ಪಟ್ಟಿಯಲ್ಲಿ ಕ್ರಮ ಸಂಖ್ಯೆ 1099ರಲ್ಲಿ ಅವರ ಹೆಸರಿದೆ. 2023ರ ವಿಧಾನಸಭಾ ಚುನಾವಣೆ ಮತ್ತು 2024ರ ಲೋಕಸಭಾ ಚುನಾವಣೆಯಲ್ಲಿ ಅವರು ಮತದಾನ ಮಾಡಿದ್ದಾರೆ. ಆದರೆ, ಚುನಾವಣಾ ಆಯೋಗ 2025ರಲ್ಲಿ ಪ್ರಕಟಿಸಿದ ಮತದಾರ ಪಟ್ಟಿಯಲ್ಲಿ ಮೈಥಿಲಿ ಅವರ ಹೆಸರಿನ ಬದಲಿಗೆ ಅಪರಿಚಿತ ವ್ಯಕ್ತಿ ಸೈಯದ್ ಏಜಾಜ್ ಅಹ್ಮದ್ ಎಂಬ ಹೆಸರು ಬಂದಿದೆ. ಆಶ್ವರ್ಯವೆಂದರೆ ಮೈಥಿಲಿ ಅವರದ್ದೇ ಎಪಿಕ್ ಸಂಖ್ಯೆ ಇದ್ದು, ತಂದೆಯ ಹೆಸರು ಎಸ್.ಎನ್. ಶ್ರೀನಿವಾಸಮೂರ್ತಿ ಮತ್ತು ಲಿಂಗ ಹೆಣ್ಣು, ವಯಸ್ಸು ಮೈಥಿಲಿ ಅವರದ್ದೇ ಮತದಾರರ ಪಟ್ಟಿಯಲ್ಲಿ ಪ್ರಕಟವಾಗಿದೆ ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
ಅಲ್ಲದೆ, ಈ ವಿಚಾರ ಗಮನಕ್ಕೆ ಬಂದ ತಕ್ಷಣ ಮೈಥಿಲಿ ಅವರು ಅರ್ಜಿ ನಮೂನೆ 8 ಭರ್ತಿ ಮಾಡಿ ತಿದ್ದುಪಡಿ ಕೋರಿದ್ದರು. ಅಲ್ಲದೇ ಈ ಬಗ್ಗೆ ಚುನಾವಣಾ ಆಯೋಗ, ರಾಜ್ಯ ಮುಖ್ಯ ಚುನಾವಣಾಧಿಕಾರಿ ಸೇರಿ ಸಂಬಂಧಪಟ್ಟ ಇತರರಿಗೆ ಮನವಿ ಸಹ ಸಲ್ಲಿಸಿದ್ದರು. ಆದರೆ, ಯಾವುದೇ ಕ್ರಮ ಆಗಿಲ್ಲ. ಬದಲಿಗೆ ಮೈಥಿಲಿ ಅವರ ಹೆಸರು ಎಸ್ಐಆರ್ ಪ್ರಕ್ರಿಯೆಯಲ್ಲಿ ಎಎಸ್ಡಿಡಿಒ ಪಟ್ಟಿಯಲ್ಲಿ ಶಾಶ್ವತ ಸ್ಥಳಾಂತರ ಎಂದು ವರ್ಗೀಕರಿಸಲಾಗಿದೆ. ಇದನ್ನು ಪ್ರಶ್ನಿಸಿ ಮೈಥಿಲಿ ಹೈಕೋರ್ಟ್ ಮೆಟ್ಟಿಲೇರಿದ್ದಾರೆ.
ಇದನ್ನೂ ಓದಿ: ರೇಣುಕಾಸ್ವಾಮಿ ಕೊಲೆ ಪ್ರಕರಣದಲ್ಲಿ ಸಾಕ್ಷಿಗಳಿಗೆ ಬೆದರಿಕೆ ಹಾಕಿದ ಆರೋಪಿಗಳು ಸಲ್ಲಿಸಿದ್ದ ಅರ್ಜಿ ಆದೇಶ ಕಾಯ್ದರಿಸಿದ ಹೈಕೋರ್ಟ್

