ETV Bharat / state

'CBFCಗೆ ಕಥೆ ಕಳವು ಆರೋಪ ಪರಿಶೀಲಿಸುವ ಅಧಿಕಾರವಿಲ್ಲ': 'ಧುರಂಧರ್​ 2' ವಿರುದ್ಧದ ಅರ್ಜಿ ವಜಾಗೊಳಿಸಿದ ಹೈಕೋರ್ಟ್

ಕೃತಿಚೌರ್ಯ ವಿಚಾರಕ್ಕೆ ಸಂಬಂಧಿಸಿದ ವಿಚಾರಗಳ ಕುರಿತಂತೆ ಪರಿಶೀಲನೆ ನಡೆಸುವುದಕ್ಕೆ ಸಿಬಿಎಫ್​ಸಿಗೆ ಅಧಿಕಾರವಿಲ್ಲ ಎಂದು ಹೈಕೋರ್ಟ್​ ಹೇಳಿದೆ.

high-court-grants-relief-to-dhurandhar-2-over-alleged-script-theft
ಧುರಂಧರ್‌ 2 ಸಿನಿಮಾ ಪೋಸ್ಟರ್​ (Film Poster)
author img

By ETV Bharat Karnataka Team

Published : May 1, 2026 at 3:03 PM IST

2 Min Read
Choose ETV Bharat

ಬೆಂಗಳೂರು: ಚಲನಚಿತ್ರಕ್ಕೆ ಪ್ರಮಾಣಪತ್ರ ನೀಡುವ ಸಂದರ್ಭದಲ್ಲಿ ಕಥೆ ಕಳವು ಆರೋಪಗಳನ್ನು ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್​ಸಿ) ಪರಿಶೀಲಿಸುವ ಅಧಿಕಾರ ಹೊಂದಿರುವುದಿಲ್ಲ ಎಂದು ತಿಳಿಸಿರುವ ಹೈಕೋರ್ಟ್, ರಣವೀರ್‌ ಸಿಂಗ್‌ ಮತ್ತು ಸಾರಾ ಅರ್ಜುನ್‌ ನಟಿಸಿರುವ 'ಧುರಂಧರ್​ 2' ಚಿತ್ರದ ಕಥೆ ಕಳವು ಆರೋಪ ಸಂಬಂಧ ಸಲ್ಲಿಸಿದ್ದ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ತಮ್ಮ ಡಿ.ಸಾಹೇಬ್‌ ಎಂಬ ಚಿತ್ರದ ಕಥೆಯನ್ನು ಆಧರಿಸಿ ದುರಂಧರ್-2 ಚಿತ್ರ ನಿರ್ಮಾಣ ಮಾಡಲಾಗಿದೆ. ಆದ್ದರಿಂದ ಚಿತ್ರ ಪ್ರದರ್ಶನಕ್ಕೆ ತಡೆ ನೀಡಬೇಕು ಮತ್ತು ಚಿತ್ರಕ್ಕೆ ನೀಡಿರುವ ಪ್ರಮಾಣ ಪತ್ರವನ್ನು ರದ್ದುಪಡಿಸಲು ಸಿಬಿಎಫ್​ಸಿಗೆ ನಿರ್ದೇಶನ ನೀಡಬೇಕು ಎಂದು ಕೋರಿ ಸಂತೋಷ್‌ ಕುಮಾರ್‌ ಎಂಬವರು ಹೈಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಈ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಕೆ.ಎಸ್‌. ಹೇಮಲೇಖಾ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಚಲನಚಿತ್ರದ ಕಥೆ ಕಳವಿಗೆ ಸಂಬಂಧಿಸಿದ ಆರೋಪವಾಗಿದೆ. ಆದರೆ, ಇದು ಕೃತಿಚೌರ್ಯ ವಿಚಾರಕ್ಕೆ ಸಂಬಂಧಿಸಿದ್ದು, ಖಾಸಗಿ ಹಕ್ಕಿಗೆ ಸಂಬಂಧಪಟ್ಟಿರುವ ಪ್ರಕರಣ. ಇಂತಹ ವಿಚಾರಗಳ ಕುರಿತಂತೆ ಪರಿಶೀಲನೆ ನಡೆಸುವುದಕ್ಕೆ ಸಿಬಿಎಫ್​ಸಿಗೆ ಅಧಿಕಾರವಿಲ್ಲ ಎಂದು ನ್ಯಾಯಪೀಠ ಹೇಳಿದೆ.

ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಬಹುದು: ಚಿತ್ರದ ಕಥೆಯ ಮಾಲೀಕತ್ವ, ಚಿತ್ರ ಹಾಗೂ ಚಿತ್ರಕಥೆ ನಡುವೆ ಪ್ರಮುಖ ಸಾಮ್ಯತೆ ಇದೆ ಎಂಬುದು ಸಾಬೀತುಪಡಿಸಬೇಕು. ಇದು ಸಂಪೂರ್ಣ ಸಿವಿಲ್ ಆರೋಪಕ್ಕೆ ಸಂಬಂಧಿಸಿದ್ದಾಗಿದ್ದು, ವಿಚಾರಣೆ ನಡೆಸುವ ಮೂಲಕ ನಿರ್ಧಾರವಾಗಬೇಕಾದ ವಿಷಯ. ಆದ್ದರಿಂದ ಕೃತಿಚೌರ್ಯ ಆರೋಪ ಸಂಬಂಧ ಅರ್ಜಿದಾರರು ಸಿವಿಲ್ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿ ಸೂಕ್ತ ಪರಿಹಾರ ಪಡೆದುಕೊಳ್ಳಬಹುದು ಎಂದು ಪೀಠ ಸಲಹೆ ನೀಡಿದೆ.

ಸಿನಿಮಾಟೋಗ್ರಫ್‌ ಕಾಯಿದೆ ಅಡಿಯಲ್ಲಿ ಕಾರ್ಯ ನಿರ್ವಹಿಸುತ್ತಿರುವ ಸಿಬಿಎಫ್‌ಸಿ ಚಿತ್ರಗಳ ವಿಷಯವು ಸಾರ್ವಜನಿಕ ಪ್ರದರ್ಶನಕ್ಕೆ ಯೋಗ್ಯವಾಗಿದೆಯೇ, ಇಲ್ಲವೇ ಎಂಬುದನ್ನು ಮಾತ್ರ ಪರಿಶೀಲಿಸಬೇಕಾಗುತ್ತದೆ. ಆದರೆ, ಖಾಸಗಿ ಹಕ್ಕುಗಳ ವಿವಾದಗಳನ್ನು ತೀರ್ಮಾನಿಸುವ ಅಧಿಕಾರ ಹೊಂದಿಲ್ಲ. ಚಲನಚಿತ್ರಗಳಿಗೆ ಪ್ರಮಾಣಪತ್ರ ನೀಡುವ ಪ್ರಕ್ರಿಯೆಯಲ್ಲಿ ಸ್ಪಷ್ಟ ಅನ್ಯಾಯ ತೋರಿಸಿದರೆ ಮಾತ್ರ ನ್ಯಾಯಾಲಯ ಹಸ್ತಕ್ಷೇಪ ಮಾಡಬಹುದು ಎಂದು ಪೀಠ ಸ್ಪಷ್ಟಪಡಿಸಿತು.

ಅರ್ಜಿದಾರರ ಪರ ವಕೀಲರ ವಾದವೇನು?: ಅರ್ಜಿ ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ನಮ್ಮ ಕಕ್ಷಿದಾರ ಸಂತೋಷ್‌ ಕುಮಾರ್‌ ಅವರು ಚಲನಚಿತ್ರ ಕಥೆಗಳ ಬರಹಗಾರರಾಗಿದ್ದು, ನಿರ್ದೇಶಕ ಮತ್ತು ನಿರ್ಮಾಪಕರಾಗಿದ್ದಾರೆ. ಭಯೋತ್ಪಾದನಾ ವಿರೋಧಿ ಕಾರ್ಯಚರಣೆಗಳನ್ನು ಒಳಗೊಂಡ ದೇಶಭಕ್ತಿಯ ವಿಷಯವನ್ನು ಆಧರಿಸಿ ಡಿ ಸಾಹೇಬ್‌ ಎಂಬ ಕಥೆಯನ್ನು ಬರೆದಿದ್ದರು. ಕಥೆಗೆ ಸಂಬಂಧಿಸಿದಂತೆ ಪಾತ್ರಗಳ ರೇಖಾಚಿತ್ರಗಳನ್ನು ಸಿದ್ದಪಡಿಸಿ ಚಿತ್ರ ಕಥೆಗಾರರ ಸಂಘದಲ್ಲಿ ನೋಂದಣಿ ಮಾಡಿಕೊಂಡಿದ್ದರು. ಈ ನಡುವೆ 2023ರಲ್ಲಿ ಅವರು ಕಥೆಯನ್ನು ಧುರಂಧರ್‌-2 ಚಿತ್ರದ ನಿರ್ಮಾಪಕರಾದ ಜ್ಯೋತಿ ದೇಶಪಾಂಡೆ ಸೇರಿ ವಿವಿಧ ನಿರ್ಮಾಣ ಸಂಸ್ಥೆಗಳು ಮತ್ತು ಚಿಲನಚಿತ್ರೋದ್ಯಮದ ಹಲವರಿಗೆ ವಿವರಿಸಿದ್ದರು. ಈ ಕಥೆಯನ್ನು ಹಲವರು ಅಧ್ಯಯನ ನಡೆಸಿ ಕಾನೂನುಬಾಹಿರವಾಗಿ ನಕಲು ಮಾಡಿದ್ದಾರೆ. ಆ ಮೂಲಕ ಧುರಂಧರ್‌-2 ಚಿತ್ರವನ್ನು ನಿರ್ಮಾಣ ಮಾಡಿ ದೇಶದ ಹಲವು ಭಾಷೆಗಳಲ್ಲಿ ಬಿಡುಗಡೆ ಮಾಡಲಾಗಿದೆ. ಅಲ್ಲದೆ, ಚಿತ್ರ ನಿರ್ಮಾಪಕರು ಈ ಕುರಿತು ಅರ್ಜಿದಾರರಿಗೆ ಯಾವುದೇ ರೀತಿಯ ಪರಿಹಾರವನ್ನು ನೀಡಿಲ್ಲ. ಆದ್ದರಿಂದ ಈ ಅರ್ಜಿ ಸಲ್ಲಿಸಿದ್ದು, ಚಿತ್ರಕ್ಕೆ ಸಿಬಿಎಫ್‌ಸಿ ನೀಡಿರುವ ಪ್ರಮಾಣ ಪತ್ರ ರದ್ದು ಮಾಡಬೇಕು ಎಂದು ಪೀಠಕ್ಕೆ ಕೋರಿದ್ದರು.

ಇದನ್ನೂ ಓದಿ: ರಾಜಕೀಯ ಉದ್ದೇಶಗಳಿಗೆ ಧಾರ್ಮಿಕ ಕೇಂದ್ರ ಬಳಕೆ ಸರಿಯಲ್ಲ: ಹೈಕೋರ್ಟ್