ETV Bharat / state

ಸಹೋದರಿಯ ಮದುವೆ: ಅಂಧ ಅಪರಾಧಿಗೆ 3 ದಿನಗಳ ತುರ್ತು ಪೆರೋಲ್ ನೀಡಿದ ಹೈಕೋರ್ಟ್

ಅಂಧ ಮಗನಿಗೆ ಪೆರೋಲ್‌ ನೀಡಬೇಕೆಂದು ಕೋರಿ ಅಪರಾಧಿಯ ತಾಯಿ ಸಲ್ಲಿಸಿದ್ದ ಅರ್ಜಿಯನ್ನು ಕೋರ್ಟ್ ಪುರಸ್ಕರಿಸಿತು.

Karnataka high Court
ಹೈಕೋರ್ಟ್​ (ETV Bharat)
author img

By ETV Bharat Karnataka Team

Published : March 3, 2026 at 8:33 AM IST

2 Min Read
Choose ETV Bharat

ಬೆಂಗಳೂರು: ಅಪಹರಣ ಸೇರಿದಂತೆ ವಿವಿಧ ಆರೋಪಗಳಲ್ಲಿ ಜೀವಾವಧಿ ಶಿಕ್ಷೆಗೆ ಗುರಿಯಾಗಿದ್ದ ಅಂಧ ಅಪರಾಧಿಯೊಬ್ಬನಿಗೆ ತನ್ನ ಸಹೋದರಿಯ ವಿವಾಹ ಕಾರ್ಯಕ್ರಮದಲ್ಲಿ ಭಾಗವಹಿಸಲು ಮೂರು ದಿನ ತುರ್ತು ಪೆರೋಲ್‌ ನೀಡಿ ಹೈಕೋರ್ಟ್‌ ಸೋಮವಾರ ಆದೇಶಿಸಿದೆ.

ತನ್ನ ಮಗಳ ಮದುವೆ ಇದ್ದು, ಜೈಲು ಶಿಕ್ಷೆ ಅನುಭವಿಸುತ್ತಿರುವ ಅಂಧ ಮಗನಿಗೆ ಪೆರೋಲ್‌ ನೀಡಬೇಕು ಎಂದು ಕೋರಿ ಅಪರಾಧಿಯ ತಾಯಿ ಸಲ್ಲಿಸಿದ್ದಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಬಿ.ಎಂ. ಶ್ಯಾಮ್‌ ಪ್ರಸಾದ್‌ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದೆ.

ಅರ್ಜಿದಾರರ ಕುಟುಂಬದಲ್ಲಿ ವಿವಾಹ ಕಾರ್ಯಕ್ರಮ ನಡೆಯುತ್ತಿದೆ. ಅವರಿಗೆ ಷರತ್ತಿನ ತುರ್ತು ಪೆರೋಲ್ ಮಂಜೂರು ಮಾಡಬೇಕಾಗಿದೆ. ಜತೆಗೆ, ಕರ್ನಾಟಕ ಕಾರಾಗೃಹ ಮತ್ತು ತಿದ್ದುಪಡಿ ಸೇವೆಗಳ ಕೈಪಿಡಿ ಅಡಿಯಲ್ಲಿ ಸೂಕ್ತ ಶ್ಯೂರಿಟಿ ವಿಧಿಸಬಹುದು. ಅರ್ಜಿದಾರರು ಮತ್ತೆ ಅದೇ ರೀತಿಯ ಕೃತ್ಯದಲ್ಲಿ ಭಾಗಿಯಾಗದಂತೆ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆಯಾಗದಂತೆ ತಡೆಯುವ ಸಲುವಾಗಿ ಪ್ರತಿ ದಿನ ಸ್ಥಳೀಯ ಪೊಲೀಸ್‌ ಠಾಣೆಗೆ ಹಾಜರಾಗಿ ಸಹಿ ಹಾಕಬೇಕು ಎಂದು ಪೀಠ ಹೇಳಿದೆ.

ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಅರ್ಜಿದಾರರ ಮಗನಿಗೆ ಶೇ.77ರಷ್ಟು ಶಾಶ್ವತ ಅಂಧರಾಗಿರುವುದಾಗಿ ಆಸ್ಪತ್ರೆ ದೃಢೀಕರಿಸಿದೆ. ಈ ಸಂಬಂಧ ಕೇಂದ್ರ ಸರ್ಕಾರದಿಂದ ವಿಶಿಷ್ಟ ಅಂಗವಿಕಲ ಗುರುತಿನ ಚೀಟಿಯನ್ನೂ ನೀಡಿದೆ. ಆರೋಪಿಯ ಸಹೋದರಿ ಅಂಗವಿಕಲರಾಗಿದ್ದಾರೆ. ಅವರಿಗೆ ಏಳು ದಿನಗಳ ಕಾಲ ವಿವಾಹ ಕಾರ್ಯಕ್ರಮ ನಡೆಯಲಿದೆ. ಮದುವೆಯಲ್ಲಿ ವಿವಿಧ ಸಾಂಪ್ರದಾಯಿಕ ಕಾರ್ಯಗಳನ್ನು ನೆರವೇರಿಸಬೇಕಾಗಿದೆ ಎಂದು ಪೀಠಕ್ಕೆ ತಿಳಿಸಿದ್ದರು.

ಅಲ್ಲದೆ, ಇಬ್ಬರೂ ಮಕ್ಕಳು ಅಂಗವಿಕಲರಾಗಿದ್ದು, ದೈಹಿಕ ಸ್ಥಿತಿ ಸರಿಯಿಲ್ಲ. ಹೀಗಾಗಿ ಮದುವೆ ಸಮಾರಂಭದಲ್ಲಿ ಅಪರಾಧಿಯ ಹಾಜರಾಗಬೇಕಾಗಿರುವುದು ಅತ್ಯಗತ್ಯ. ಸಹೋದರಿಯ ವಿವಾಹದಲ್ಲಿ ಅಪರಾಧಿ ಹಾಜರಾಗಿ ಭಾವನಾತ್ಮಕ ವಿಷಯವಾಗಿದೆ. ಅಲ್ಲದೆ, ಸಂಪ್ರದಾಯಗಳ ಆಚರಣೆ ಮತ್ತು ಕುಟುಂಬದವರೊಂದಿಗೆ ಪಾಲ್ಗೊಳ್ಳಬೇಕಾಗಿದೆ ಎಂದು ಪೀಠಕ್ಕೆ ಕೋರಿದ್ದರು.

ಈ ಅಂಶ ದಾಖಲಿಸಿಕೊಂಡಿದ್ದ ಪೀಠ, ಅರ್ಜಿದಾರರ ಮನೆಯಲ್ಲಿ ಮದುವೆ ನಡೆಯುತ್ತಿದಿಯೇ ಎಂಬುದನ್ನು ಖಚಿತಪಡಿಸಿಕೊಳ್ಳಲು ಸ್ಥಳೀಯ ಪೊಲೀಸರಿಂದ ವರದಿ ತರಿಸಿಕೊಳ್ಳುವಂತೆ ಮೈಸೂರು ಬಂಧೀಖಾನೆಯ ಅಧೀಕ್ಷಕರ ಮುಖ್ಯ ಮೇಲ್ವಿಚಾರಣಾಧಿಕಾರಿಳಿಗೆ ಸೂಚನೆ ನೀಡಿತ್ತು.
ಸೂಚನೆಯಂತೆ ಸ್ಥಳೀಯ ಪೊಲೀಸರು ಪರಿಶೀಲಿಸಿ, ಪಾಂಡವಪುರದಲ್ಲಿ ಅರ್ಜಿದಾರರ ಮನೆಯಲ್ಲಿ ಮದುವೆ ನಡೆಯಲಿದೆ ಎಂದು ವರದಿಯನ್ನು ಸಲ್ಲಿಸಿದ್ದರು.

ಅಲ್ಲದೆ, ಪ್ರಕರಣ ಸಂಬಂಧ ವಿಚಾರಣಾ ನ್ಯಾಯಾಲಯ ವಿಧಿಸಿರುವ ಶಿಕ್ಷೆಯನ್ನು ಪ್ರಶ್ನಿಸಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದಾರೆ. ಆದರೆ, ಮೇಲ್ಮನವಿಯಲ್ಲಿ ಜಾಮೀನು ಮಂಜೂರು ಮಾಡುವಂತೆ ಕೋರಿಲ್ಲ. ಆದ್ದರಿಂದ ಅರ್ಜಿದಾರರ ಅಂಧ ಮಗನಿಗೆ, ಸಹೋದರಿಯ ಮದುವೆ ಕಾರ್ಯಕ್ರಮದಲ್ಲಿ ಭಾಗಿಯಾಗಿರುವುದಕ್ಕೆ ಅಗತ್ಯ ಷರತ್ತುಗಳನ್ನು ವಿಧಿಸಿ ತುರ್ತು ಪೆರೋಲ್‌ ಮಂಜೂರು ಮಾಡಬೇಕು ಎಂದು ಕೋರಿದ್ದರು.

ವಾದ ಮತ್ತು ದಾಖಲೆಗಳನ್ನು ಪರಿಶೀಲಿಸಿದ ನ್ಯಾಯಪೀಠ, ತುರ್ತು ಪೆರೋಲ್‌ ಮಂಜೂರು ಮಾಡಿದೆ.

ಇದನ್ನೂ ಓದಿ: ಮಹಿಳೆ ಮೇಲೆ ಅತ್ಯಾಚಾರ: ಶಿಕ್ಷಕನಿಗೆ ಜೀವಾವಧಿ ಶಿಕ್ಷೆ ವಿಧಿಸಿ ಗಂಗಾವತಿ ಕೋರ್ಟ್ ತೀರ್ಪು