ಜಾತಿ ಗಣತಿ ವರದಿ ಬಹಿರಂಗಕ್ಕೆ ಹೈಕೋರ್ಟ್ ಬ್ರೇಕ್; ಮೌಖಿಕ ಸೂಚನೆ ನೀಡಿ ವಿಚಾರಣೆ ಆಗಸ್ಟ್ 20ಕ್ಕೆ ಮುಂದೂಡಿಕೆ
ಹೈಕೋರ್ಟ್ ವಿಭಾಗೀಯ ಪೀಠವು ಮುಚ್ಚಿದ ಲಕೋಟೆಯಲ್ಲಿರುವ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಬಹಿರಂಗಪಡಿಸದೇ ಯಥಾಸ್ಥಿತಿ ಕಾಪಾಡುವಂತೆ ರಾಜ್ಯ ಸರಕಾರಕ್ಕೆ ಮೌಖಿಕ ನಿರ್ದೇಶನ ನೀಡಿ ಅರ್ಜಿ ವಿಚಾರಣೆಯನ್ನು ಆಗಸ್ಟ್ ತಿಂಗಳಿಗೆ ಮುಂದೂಡಿದೆ.

Published : June 16, 2026 at 10:30 PM IST
ಬೆಂಗಳೂರು: ಜಾತಿ ಗಣತಿಯೆಂದೇ ಪ್ರತಿಬಿಂಬಿತವಾಗಿರುವ ಸಾಮಾಜಿಕ, ಆರ್ಥಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕುರಿತು ಹಿಂದುಳಿದ ವರ್ಗಗಳ ಆಯೋಗ ರಾಜ್ಯ ಸರಕಾರಕ್ಕೆ ಸಲ್ಲಿಸಿರುವ ವರದಿಯನ್ನು ಬಹಿರಂಗಪಡಿಸಿವುದಕ್ಕೆ ಹೈಕೋರ್ಟ್ ನಿರ್ಬಂಧ ವಿಧಿಸಿದೆ.
ಹಿಂದುಳಿದ ವರ್ಗಗಳ ಆಯೋಗವು ರಾಜ್ಯ ಸರಕಾರಕ್ಕೆ ಸಲ್ಲಿಸಿರುವ ಜಾತಿ ಗಣತಿ ವರದಿಯ ಸಿಂದುತ್ವವನ್ನು ಪ್ರಶ್ನಿಸಿ ಸಲ್ಲಿಸಲಾಗಿರುವ ಸಾರ್ವಜನಿಕ ಹಿತಾಸಕ್ತಿ ಅರ್ಜಿಗಳ ವಿಚಾರಣೆಯನ್ನು ಇಂದು ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಬಕ್ರು ಅವರ ನೇತೃತ್ವದ ಹೈಕೋರ್ಟ್ ವಿಭಾಗೀಯ ಪೀಠವು ಮುಚ್ಚಿದ ಲಕೋಟೆಯಲ್ಲಿರುವ ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಬಹಿರಂಗಪಡಿಸದೇ ಯಥಾಸ್ಥಿತಿ ಕಾಪಾಡುವಂತೆ ರಾಜ್ಯ ಸರಕಾರಕ್ಕೆ ಮೌಖಿಕ ನಿರ್ದೇಶನ ನೀಡಿ ಅರ್ಜಿ ವಿಚಾರಣೆಯನ್ನು ಆಗಸ್ಟ್ ತಿಂಗಳಿಗೆ ಮುಂದೂಡಿದೆ.
ರಾಜ್ಯ ಒಕ್ಕಲಿಗರ ಸಂಘ, ಅಖಿಲ ಭಾರತ ಬ್ರಾಹ್ಮಣ ಸಂಘ, ಹಿರಿಯ ನ್ಯಾಯವಾದಿ ಕೆ ಎನ್ ಸುಬ್ಬಾರೆಡ್ಡಿ ಸೇರಿದಂತೆ ಹಲವಾರು ಸಂಘಟನೆಗಳು ನ್ಯಾಯಾಲಯಕ್ಕೆ ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿ, ಹಿಂದುಳಿದ ವರ್ಗಗಳ ಆಯೋಗವು ಸಲ್ಲಿಸಿರುವ ವರದಿಯ ಪ್ರಮುಖ ಅಂಶಗಳು ಸೋರಿಕೆಯಾಗುತ್ತಿರುವ ಬಗ್ಗೆ ಆತಂಕ ವ್ಯಕ್ತಪಡಿಸಿದವು. ಜಾತಿ ಗಣತಿ ವರದಿ ಬಗ್ಗೆ ರಹಸ್ಯ ಕಾಪಾಡಿಕೊಳ್ಳಬೇಕು ಎಂದು ನ್ಯಾಯಾಲಯದ ಸೂಚನೆಯಿದ್ದರೂ ಸಹ ವರದಿ ಸಲ್ಲಿಕೆಯಾಗುತ್ತಿದ್ದಂತೆ ಕೆಲವು ದತ್ತಾಂಶಗಳ ಸೋರಿಕೆಯಾಗಿದೆ ಎನ್ನುದನ್ನು ನ್ಯಾಯಪೀಠದ ಗಮನಕ್ಕೆ ತರಲಾಯಿತು. ಈ ಸಂದರ್ಭದಲ್ಲಿ ಸರಕಾರದ ಪರವಾಗಿ ವಾದಿಸಿದ ಅಡ್ವೊಕೇಟ್ ಜನರಲ್ ಶಶಿಕಿರಣ್ ಶೆಟ್ಟಿಯವರು ಸರಕಾರವು ಜಾತಿಗಣತಿ ವರದಿಯನ್ನು ಬಹಿರಂಗಪಡಿಸಿಲ್ಲ ಎಂದು ಇದೇ ವೇಳೆ ಪೀಠದ ಎದುರು ಸ್ಪಷ್ಟಪಡಿಸಿದರು.
ಅರ್ಜಿದಾರರು ಮತ್ತು ಪ್ರತಿವಾದಿ ರಾಜ್ಯ ಸರಕಾರದ ವಾದ ಆಲಿಕೆ ಬಳಿಕ ಹೈಕೋರ್ಟ್ ವಿಭಾಗೀಯ ಪೀಠವು ಹಿಂದುಳಿದ ವರ್ಗಗಳ ಆಯೋಗವು ಸರಕಾರಕ್ಕೆ ಸಲ್ಲಿಸಿರುವ ಆರ್ಥಿಕ, ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿಯು ಮುಚ್ಚಿದ ಲಕೋಟೆಯಿಂದ ಹೊರತೆಗೆಯಬಾರದೆಂದು ಮೌಖಿಕ ಆದೇಶ ನೀಡಿ ಮುಂದಿನ ವಿಚಾರಣೆಯನ್ನು ಆಗಸ್ಟ್ ತಿಂಗಳ 20 ಕ್ಕೆ ನಿಗದಿಗೊಳಿಸಿದೆ.

