ETV Bharat / state

ಏಷ್ಯನ್ ಗೇಮ್ಸ್ ಸರ್ಫಿಂಗ್ ಸ್ಪರ್ಧಿ ಆಯ್ಕೆಯಲ್ಲಿ ಅಕ್ರಮ ಆರೋಪ: ತನಿಖಾ ಆಯೋಗ ರಚಿಸಿದ ಹೈಕೋರ್ಟ್

ಏಷ್ಯನ್ ಗೇಮ್ಸ್ ಸರ್ಫಿಂಗ್ ಸ್ಪರ್ಧೆಗೆ ಕ್ರೀಡಾಪಟುಗಳ ಆಯ್ಕೆಯಲ್ಲಿ ಅಕ್ರಮ ಆರೋಪ ಸಂಬಂಧ ರಾಜ್ಯ ಹೈಕೋರ್ಟ್ ಸುಪ್ರೀಂಕೋರ್ಟ್​​ ನಿವೃತ್ತ ನ್ಯಾಯಮೂರ್ತಿ ನೇತೃತ್ವದ ತನಿಖಾ ಆಯೋಗವನ್ನು ರಚನೆ ಮಾಡಿದೆ.

high-court-forms-an-inquiry-commission-headed-by-a-retired-supreme-court-judge-to-investigate-asian-games-surfing-competitors-selection-irregularities
ಹೈಕೋರ್ಟ್ (ETV Bharat)
author img

By ETV Bharat Karnataka Team

Published : September 2, 2026 at 9:06 AM IST

2 Min Read
Choose ETV Bharat

ಬೆಂಗಳೂರು: ಜಪಾನ್​ನಲ್ಲಿ ಸೆಪ್ಟಂಬರ್ 19ರಿಂದ ಅಕ್ಟೋಬರ್ 4ರವರೆಗೆ ನಡೆಯಲಿರುವ ಏಷ್ಯನ್ ಗೇಮ್ಸ್​ ಪುರುಷರ ಸರ್ಫಿಂಗ್(ಸಮುದ್ರದ ಅಲೆಗಳ ಮೇಲೆ ಹಲಗೆಯಿಂದ ಆಡುವ ಕ್ರೀಡೆ) ಸ್ಪರ್ಧೆಗೆ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಯಲ್ಲಿ ನಿಯಮ ಉಲ್ಲಂಘಿಸಿರುವ ಭಾರತೀಯ ಸರ್ಫಿಂಗ್ ಫೆಡರೇಶನ್ (SFI) ಕ್ರಮಕ್ಕೆ ಹೈಕೋರ್ಟ್‌ ತೀವ್ರ ಅಸಮಾಧಾನ ವ್ಯಕ್ತಪಡಿಸಿದೆ. ಈ ಕುರಿತು ಉನ್ನತ ಮಟ್ಟದ ತನಿಖೆ ನಡೆಸಲು ಸುಪ್ರೀಂ ಕೋರ್ಟ್​​ ನಿವೃತ್ತ ನ್ಯಾಯಮೂರ್ತಿ ಆರ್.ವಿ. ರವೀಂದ್ರನ್ ಅವರ ನೇತೃತ್ವದಲ್ಲಿ ಏಕಸದಸ್ಯ ತನಿಖಾ ಆಯೋಗ ರಚಿಸಿದೆ.

ಆಯ್ಕೆ ಪಟ್ಟಿಯಲ್ಲಿ ತನ್ನ ಹೆಸರು ತಪ್ಪಿದ ಹಿನ್ನೆಲೆಯಲ್ಲಿ ಸರ್ಫಿಂಗ್ ಪಟು ರಮೇಶ್‌ ಬೂದಿಹಾಳ್‌ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸೂರಜ್ ಗೋವಿಂದರಾಜ್ ಅವರ ಪೀಠ ಆದೇಶ ಹೊರಡಿಸಿದೆ.

ಅಲ್ಲದೆ, ನ್ಯಾಯಮೂರ್ತಿ ಆರ್.ವಿ. ರವೀಂದ್ರನ್ ಅವರ ನೇತೃತ್ವದ ಆಯೋಗವು ಬೆಂಗಳೂರಿನಲ್ಲೇ ತನಿಖೆ ನಡೆಸಲಿದ್ದು, ಇದರ ಸಂಪೂರ್ಣ ವೆಚ್ಚವನ್ನು ಸರ್ಫಿಂಗ್ ಫೆಡರೇಶನ್ ಭರಿಸಬೇಕಿದೆ. ಫೆಡರೇಶನ್​​ನ ಕಾರ್ಯಕಾರಿ ಮಂಡಳಿ ಮತ್ತು ಆಯ್ಕೆ ಸಮಿತಿಯ ಸದಸ್ಯರ ನಡವಳಿಕೆ, ನಿಯಮಾವಳಿಗಳ ಉಲ್ಲಂಘನೆ ಹಾಗೂ ಮುಂಬರುವ ದಿನಗಳಲ್ಲಿ ಕ್ರೀಡಾಪಟುಗಳ ಆಯ್ಕೆ ಪ್ರಕ್ರಿಯೆಯಲ್ಲಿ ಪಾರದರ್ಶಕತೆ ತರಲು ಕೈಗೊಳ್ಳಬೇಕಾದ ಸುಧಾರಣೆಗಳ ಕುರಿತು ಆಯೋಗವು 2027ರ ಫೆಬ್ರುವರಿ ಅಂತ್ಯದ ವೇಳೆಗೆ ವರದಿ ಸಲ್ಲಿಸಬೇಕು ಪೀಠ ತಿಳಿಸಿದೆ.

ಸರ್ಫಿಂಗ್ ಫೆಡರೇಶನ್​ನ ಕಾರ್ಯಕಾರಿ ಮಂಡಳಿಗೆ ಕ್ರೀಡಾಪಟುಗಳನ್ನು ಆಯ್ಕೆ ಮಾಡುವ ಅಧಿಕಾರವಿಲ್ಲ ಎಂಬುದಾಗಿ ವಿಚಾರಣೆ ವೇಳೆ ಅದು ಒಪ್ಪಿಕೊಂಡಿದೆ. ವಿಶೇಷ ಆಯ್ಕೆ ಸಮಿತಿಯಲ್ಲಿ ಮತಗಳು ಸಮನಾಗಿ ಬಿದ್ದಾಗ (2-2), ಮಂಡಳಿಯು ಜೂನ್ 23ರಂದು ತನ್ನದೇ ಆದ ನಿಯಮಗಳನ್ನು ಉಲ್ಲಂಘಿಸಿ 'ಎಕ್ಸಿಕ್ಯೂಟಿವ್ ಕಾಲ್' ಮೂಲಕ ಅಕ್ರಮವಾಗಿ ಆಯ್ಕೆ ಪ್ರಕ್ರಿಯೆ ನಡೆಸಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಪೀಠ, ಅಂತಿಮ ಹಂತದಲ್ಲಿ ಆಯ್ಕೆ ಪಟ್ಟಿಯನ್ನು ಬದಲಾಯಿಸಿದರೆ ಏಷ್ಯನ್ ಗೇಮ್ಸ್​ನಲ್ಲಿ ಭಾರತದ ಭಾಗವಹಿಸುವಿಕೆಗೆ ಧಕ್ಕೆಯಾಗಬಹುದು ಎಂಬ ಕಾರಣಕ್ಕೆ ಕ್ರೀಡಾಪಟುಗಳ ಆಯ್ಕೆ ಪಟ್ಟಿಯನ್ನು ರದ್ದುಗೊಳಿಸಲು ನಿರಾಕರಿಸಿದೆ.

ಪ್ರಕರಣದ ಹಿನ್ನೆಲೆ: 2025ರ ಏಷ್ಯನ್ ಸರ್ಫಿಂಗ್ ಚಾಂಪಿಯನ್​ಶಿಪ್​​ನಲ್ಲಿ ಭಾರತಕ್ಕೆ ಏಕೈಕ ಪದಕ (ಕಂಚು) ಗೆದ್ದುಕೊಟ್ಟಿದ್ದ 25 ವರ್ಷದ ಉದಯೋನ್ಮುಖ ಸರ್ಫರ್ ರಮೇಶ್ ಬೂದಿಹಾಳ್‌ ಅವರನ್ನು ಏಷ್ಯನ್ ಗೇಮ್ಸ್​ನ ಮುಖ್ಯ ತಂಡದಿಂದ ಕೈಬಿಟ್ಟು ಕಾಯ್ದಿರಿಸಿದ (ರಿಸರ್ವ್) ಆಟಗಾರನನ್ನಾಗಿ ಆಯ್ಕೆ ಮಾಡಲಾಗಿತ್ತು. ಈ ಸಂಬಂಧ ರಮೇಶ್ ಎಸ್‌ಎಫ್ಐನ ಮೇಲ್ಮನವಿ ಸಮಿತಿಯನ್ನು ಪ್ರಶ್ನಿಸಿದ್ದರು. ಮೇಲ್ಮನವಿ ಸಮಿತಿಯು ಅರ್ಜಿಯನ್ನು ಭಾಗಶಃ ಪುರಸ್ಕರಿಸಿ, ಜನವರಿ 1, 2025ರಿಂದ ಕ್ರೀಡಾಪಟುಗಳ ಸಾಧನೆಯನ್ನು (ವಿಶೇಷವಾಗಿ ಏಷ್ಯನ್ ಚಾಂಪಿಯನ್​ಶಿಪ್ ಪದಕ) ಪರಿಗಣಿಸಿ ಹೊಸ ಆಯ್ಕೆ ಸಮಿತಿ ರಚಿಸಿ ನಿರ್ಧಾರ ಕೈಗೊಳ್ಳುವಂತೆ ಸೂಚನೆ ನೀಡಿತ್ತು.

ಜೂನ್ 20 ಮತ್ತು 21ರಂದು ಸಭೆ ಸೇರಿದ 4 ಸದಸ್ಯರ ಆಯ್ಕೆ ಸಮಿತಿಯು ಮೌಲ್ಯಮಾಪನ ಪದ್ಧತಿಯಲ್ಲಿ ಭಿನ್ನಾಭಿಪ್ರಾಯ ತಳೆದು, ರಮೇಶ್ ಬೂದಿಹಾಳ್ ಮತ್ತು ಶಿವರಾಜ್ ಬಾಬು ಅವರಿಗೆ ಸಮಾನವಾಗಿ (2-2) ಮತ ಚಲಾಯಿಸಿತು. ಭಾರತೀಯ ಒಲಿಂಪಿಕ್ ಸಂಘಕ್ಕೆ (ಐಒಎ) ಪಟ್ಟಿ ಸಲ್ಲಿಸಲು ಜೂನ್ 26 ಕೊನೆಯ ದಿನವಾಗಿದ್ದರಿಂದ, ಜೂನ್ 23ರಂದು ಎಸ್‌ಎಫ್ಐನ ಕಾರ್ಯಕಾರಿ ಮಂಡಳಿಯು ಸ್ವತಃ ತಾನೇ ಅಧಿಕಾರ ವಹಿಸಿಕೊಂಡು 'ಎಕ್ಸಿಕ್ಯೂಟಿವ್ ಕಾಲ್' ಮೂಲಕ ಶಿವರಾಜ್ ಬಾಬು ಅವರನ್ನು ಆಯ್ಕೆ ಮಾಡಿತು. ಇದನ್ನು ಪ್ರಶ್ನಿಸಿ ರಮೇಶ್‌ ಬೂದಿಹಾಳ್ ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ಬೆಂಗಳೂರು ಏರ್​ಪೋರ್ಟ್​ನಲ್ಲಿ ಚಿನ್ನ ಕಳ್ಳಸಾಗಣೆ ಪ್ರಕರಣ: ಆರೋಪಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಜಾ