ಬೆಂಗಳೂರು ಏರ್ಪೋರ್ಟ್ನಲ್ಲಿ ಚಿನ್ನ ಕಳ್ಳಸಾಗಣೆ ಪ್ರಕರಣ: ಆರೋಪಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿ ವಜಾ
ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬೆಳಕಿಗೆ ಬಂದ ಚಿನ್ನ ಕಳ್ಳಸಾಗಣೆ ಪ್ರಕರಣವನ್ನು ರದ್ದು ಮಾಡುವಂತೆ ಕೋರಿ ಆರೋಪಿ ಸಲ್ಲಿಸಿದ್ದ ಕ್ರಿಮಿನಲ್ ಅರ್ಜಿಯನ್ನು ಹೈಕೋರ್ಟ್ ವಜಾ ಮಾಡಿದೆ.

Published : September 2, 2026 at 8:06 AM IST
ಬೆಂಗಳೂರು: ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ(KIA)ದಲ್ಲಿ ನಡೆದ ಕೋಟ್ಯಂತರ ರೂಪಾಯಿ ಮೌಲ್ಯದ ಚಿನ್ನದ ಕಳ್ಳಸಾಗಣೆ ಪ್ರಕರಣ ಸಂಬಂಧ ವಿವರಣೆ ನೀಡುವಂತೆ ಕಸ್ಟಮ್ಸ್ ಇಲಾಖೆಯ ಅಧಿಕಾರಿಗಳು ಆರಂಭಿಸಿದ್ದ ವಿಚಾರಣಾ ಪ್ರಕ್ರಿಯೆ ರದ್ದು ಕೋರಿ ಆರೋಪಿ ಸಲ್ಲಿಸಿದ್ದ ಅರ್ಜಿಯನ್ನು ಹೈಕೋರ್ಟ್ ವಜಾಗೊಳಿಸಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ತಾಲೂಕಿನ ನಿವಾಸಿ ಹಾಗೂ ‘ಎಐ ಸ್ಯಾಟ್ಸ್’ ಸಂಸ್ಥೆಯ ವಿಮಾನ ಶುಚಿಗೊಳಿಸುವ ಸಿಬ್ಬಂದಿ ನಂದೀಶ್ ಎನ್. ಎಂಬುವರು ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ. ನಾಗಪ್ರಸನ್ನ ಅವರಿದ್ದ ಏಕಸದಸ್ಯ ಪೀಠ ಈ ಆದೇಶ ನೀಡಿದ್ದು, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಅಲ್ಲದೆ, ಸಂಘಟಿತ ಕಳ್ಳಸಾಗಣೆ ಜಾಲಗಳಲ್ಲಿ ಪ್ರತಿಯೊಬ್ಬ ಪಾಲ್ಗೊಳ್ಳುವವರ ದೇಹದಿಂದಲೇ ಕಳ್ಳಸಾಗಣೆ ವಸ್ತುವನ್ನು ವಶಪಡಿಸಿಕೊಳ್ಳಬೇಕು ಎಂಬ ನಿಯಮವಿಲ್ಲ. ಇಂತಹ ಗಂಭೀರ ಆರ್ಥಿಕ ಅಪರಾಧಗಳ ತನಿಖೆಯು ಆರಂಭಿಕ ಹಂತದಲ್ಲಿರುವಾಗ, ಆರೋಪಿ ತಾನು ನಿರಪರಾಧಿ ಎಂದು ಹೇಳಿಕೊಂಡ ತಕ್ಷಣ ಇಡೀ ಕಾನೂನು ಪ್ರಕ್ರಿಯೆಯನ್ನು ಅಕಾಲಿಕ ಅಂತ್ಯಗೊಳಿಸಲು ಸಾಧ್ಯವಿಲ್ಲ ಎಂದು ಅಭಿಪ್ರಾಯಪಟ್ಟು, ಅರ್ಜಿಯನ್ನು ವಜಾ ಮಾಡಿದೆ.
ಪ್ರಕರಣದ ಹಿನ್ನೆಲೆ: ಬೆಂಗಳೂರು ಗ್ರಾಮಾಂತರ ಜಿಲ್ಲೆಯ ವಿಶ್ವನಾಥಪುರದ ನಿವಾಸಿಯಾಗಿರುವ ಅರ್ಜಿದಾರ ನಂದೀಶ್ ಎನ್. ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ವಿಮಾನಗಳ ಕ್ಯಾಬಿನ್ ಕೇರ್ ಆಗಿ ಸಹಾಯಕನಾಗಿ ಕೆಲಸ ಮಾಡುತ್ತಿದ್ದರು. ಸೌದಿ ಏರ್‌ಲೈನ್ಸ್ ವಿಮಾನವೊಂದು (ಎಸ್‌ವಿ–866) 2025ರ ಜೂನ್ 29ರಂದು ಜೆಡ್ಡಾ, ಸೌದಿ ಅರೇಬಿಯಾ ಮುಖಾಂತರ ಬೆಂಗಳೂರಿನ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ಬಂದಿಳಿದಿತ್ತು. ಅಂದು ನಂದೀಶ್ ಪ್ರಯಾಣಿಕರು ಕುಳಿತುಕೊಳ್ಳುವ ಆಸನಗಳನ್ನು ಶುಚಿಗೊಳಿಸಿದ್ದರು. ವಿಮಾನದ ಸೀಟಿನ ಸಂಖ್ಯೆ 39ಎನಲ್ಲಿ ಅವರಿಗೆ ಎರಡು ಕೆ.ಜಿ ತೂಕದ ಚಿನ್ನದ ಬಾರ್‌ಗಳು ಮುಚ್ಚಿದ ಪ್ಯಾಕೆಟ್‌ನಲ್ಲಿ ಸಿಕ್ಕಿದ್ದವು. ನಂತರ ಕಸದಲ್ಲಿ ಇರಿಸಲಾಗಿತ್ತು. ಕಸ ಸಾಗಿಸುವ ವಾಹನದಲ್ಲಿ ಅದನ್ನು ಹೊರಗೆ ಕಳುಹಿಸುವ ಪ್ರಯತ್ನ ನಡೆದಿತ್ತು ಎಂದು ಕಸ್ಟಮ್ಸ್ ಆರೋಪಿಸಿತ್ತು.
ಈ ಸಂದರ್ಭದಲ್ಲಿ ಕಸ್ಟಮ್ಸ್ ಅಧಿಕಾರಿಗಳು ವಶಪಡಿಸಿಕೊಂಡ ಒಟ್ಟು 1,999 ಗ್ರಾಂ ತೂಕದ ಈ ವಿದೇಶಿ ಮೂಲದ ಚಿನ್ನದ ಮೌಲ್ಯವು 1,92,50,370 ರೂಪಾಯಿಗಳಾಗಿವೆ ಎಂದು ಅಂದಾಜಿಸಲಾಗಿದೆ. ಈ ಕಳ್ಳಸಾಗಣೆ ಕೃತ್ಯಕ್ಕಾಗಿ ಆರೋಪಿಗೆ 70,000 ರೂಪಾಯಿಗಳ ಆಮಿಷ ಒಡ್ಡಲಾಗಿತ್ತು ಎಂಬ ಅಂಶ ವಿಚಾರಣೆ ವೇಳೆ ಗೊತ್ತಾಗಿತ್ತು. ತನಿಖಾ ವರದಿಯ ಪ್ರಕಾರ, ನಂದೀಶ್ ಈ ಚಿನ್ನದ ಪ್ಯಾಕೆಟ್ ಅನ್ನು ವಿಮಾನದಿಂದ ಹೊರತಂದು ಸಹೋದ್ಯೋಗಿಯೊಬ್ಬರ ಬ್ಯಾಗ್‌ನಲ್ಲಿ ಅಡಗಿಸಿದ್ದ. ವಾಹನ ಚಾಲಕನಿಗೆ ಆತನ ನಡವಳಿಕೆ ಬಗ್ಗೆ ಅನುಮಾನ ಬಂದು ಪ್ರಶ್ನಿಸಿದಾಗ, ಹೆದರಿದ ನಂದೀಶ್ ಆ ಚಿನ್ನದ ಪ್ಯಾಕೆಟ್ ಅನ್ನು ಸಾಮಗ್ರಿ ಸರಬರಾಜು ಮಾಡುವ ವಾಹನದೊಳಗೆ ಎಸೆದಿದ್ದ. ಈ ಹಿನ್ನೆಲೆಯಲ್ಲಿ ಕಸ್ಟಮ್ಸ್ ಅಧಿಕಾರಿಗಳು ಆತನನ್ನು ಬಂಧಿಸಿ, ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು. ನಂತರ ನ್ಯಾಯಾಲಯದಿಂದ ಆತನಿಗೆ ಜಾಮೀನು ದೊರೆತಿತ್ತು. ಇದಾದ ಬಳಿಕ ಕಸ್ಟಮ್ಸ್ ಇಲಾಖೆಯು ಆತನಿಗೆ ಕಾರಣ ಕೇಳಿ ನೋಟಿಸ್ ಜಾರಿ ಮಾಡಿತ್ತು. ಇದನ್ನು ಪ್ರಶ್ನಿಸಿ ನಂದೀಶ್ ಹೈಕೋರ್ಟ್ ಮೆಟ್ಟಿಲೇರಿದ್ದ.
ವಿಚಾರಣೆ ವೇಳೆ ಅರ್ಜಿದಾರರ ಪರ ವಕೀಲರು, ಆರೋಪಿಯ ದೇಹದ ಮೇಲೆ ನೇರವಾಗಿ ಯಾವುದೇ ಚಿನ್ನ ಪತ್ತೆಯಾಗದ ಕಾರಣ ಈ ಕೃತ್ಯದಲ್ಲಿ ಆತನ ಪಾತ್ರವಿಲ್ಲ ಮತ್ತು ಈ ಪ್ರಕರಣವನ್ನು ರದ್ದುಗೊಳಿಸಬೇಕು ಎಂದು ಕೋರಿದ್ದರು.
ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಕೇಂದ್ರೀಯ ಕಸ್ಟಮ್ಸ್ ಪರ ವಕೀಲರು, ಆರೋಪಿತ ಅರ್ಜಿದಾರರು ಶೋಕಾಸ್ ನೋಟಿಸ್‌ಗೆ ಉತ್ತರಿಸುವ ಮತ್ತು ಸಕ್ಷಮ ಪ್ರಾಧಿಕಾರದ ಮುಂದೆ ತಮ್ಮ ಪ್ರತಿವಾದವನ್ನು ಮಂಡಿಸುವ ಬದಲಿಗೆ ಹೈಕೋರ್ಟ್ ಮೆಟ್ಟಿಲು ತುಳಿದಿರುವುದು ತರವಲ್ಲ. ವಿಮಾನದಲ್ಲಿ ಚಿನ್ನ ಅಥವಾ ನಿಷೇಧಿತ ವಸ್ತುಗಳ ಕಳ್ಳಸಾಗಣೆಯ ಜಾಲದ ಕಾರ್ಯ ವೈಖರಿಯ ಬಗ್ಗೆ ಆಳವಾದ ತನಿಖೆಯ ಅಗತ್ಯವಿದೆ. ಅರ್ಜಿದಾರರು ಇಂತಹದೊಂದು ಸಿಂಡಿಕೇಟ್ ಸರಪಳಿಯ ಮೊದಲ ಕೊಂಡಿಯೋ, ಮಧ್ಯವೋ ಅಥವಾ ದೊಡ್ಡ ಸಿಂಡಿಕೇಟ್ನ ಸಣ್ಣ ಕೊಂಡಿಯೋ ಎಂಬುದನ್ನು ತನಿಖೆಯಲ್ಲೇ ನಿಖರವಾಗಿ ಬಹಿರಂಗಪಡಿಸಬೇಕಿದೆ. ತನಿಖೆಯ ಆರಂಭಿಕ ಹಂತದಲ್ಲೇ ಇಂತಹ ಅರ್ಜಿಯನ್ನು ಪುರಸ್ಕರಿಸಿದರೆ ಕಸ್ಟಮ್ಸ್ ಆಡಳಿತದ ಮೇಲೆ ಪರಿಣಾಮ ಉಂಟಾಗುತ್ತದೆ. ಆದ್ದರಿಂದ ಅರ್ಜಿ ವಜಾಗೊಳಿಸಬೇಕು ಎಂದು ಪೀಠಕ್ಕೆ ವಿವರಿಸಿದ್ದರು.

