ETV Bharat / state

ನೌಕರರ ವರ್ಗಾವಣೆಗೆ 3 ತಿಂಗಳಲ್ಲಿ ಮಾರ್ಗಸೂಚಿ ರಚಿಸಲು NWKRTCಗೆ ಸೂಚಿಸಿದ ಹೈಕೋರ್ಟ್

ದಕ್ಷತೆ, ಸಮಗ್ರತೆ ಮತ್ತು ಸುಗಮ ಕಾರ್ಯನಿರ್ವಹಣೆ ಖಾತ್ರಿಪಡಿಸಿಕೊಳ್ಳಲು ನೌಕರರ ವರ್ಗಾವಣೆ ಒಂದು ಪ್ರಮುಖ ಆಡಳಿತಾತ್ಮಕ ಸಾಧನ. ಆದರೂ ವರ್ಗಾವಣೆಗಳನ್ನು ಏಕರೂಪದ ಮಾನದಂಡಗಳಿಲ್ಲದೆ ಮಾಡಿದಾಗ ಅಸಮಾಧಾನ ಮತ್ತು ದುರುದ್ದೇಶಪೂರಿತ ಆರೋಪಕ್ಕೆ ಕಾರಣವಾಗುತ್ತದೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

BENGALURU  HIGH COURT  TRANSFER  ಧಾರವಾಡ ಹೈಕೋರ್ಟ್ ಪೀಠ
ಧಾರವಾಡ ಪೀಠ (ETV Bharat)
author img

By ETV Bharat Karnataka Team

Published : February 28, 2026 at 9:30 AM IST

2 Min Read
Choose ETV Bharat

ಬೆಂಗಳೂರು: ನೌಕರರ ವರ್ಗಾವಣೆ ಕುರಿತಂತೆ ಮೂರು ತಿಂಗಳಲ್ಲಿ ಮಾರ್ಗಸೂಚಿಗಳನ್ನು ಹೊರಡಿಸುವಂತೆ ವಾಯುವ್ಯ ರಸ್ತೆ ಸಾರಿಗೆ ನಿಗಮ (NWKRTC) ಕ್ಕೆ ಹೈಕೋರ್ಟ್ ನಿರ್ದೇಶನ ನೀಡಿದೆ.

ಒಂದು ನಿಗಮದಿಂದ ಮತ್ತೊಂದು ನಿಗಮಕ್ಕೆ ತಮ್ಮ ವರ್ಗಾವಣೆ ಮಾಡಿರುವ ಆದೇಶ ರದ್ದು ಕೋರಿ ಚಂದ್ರಕಾಂತ್ ವೈ. ತೊರವಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ್ದ ನ್ಯಾಯಮೂರ್ತಿ ಡಾ.ಲಲಿತಾ ಕನೆಗಂಟಿ ಅವರಿದ್ದ ಧಾರವಾಡ ಪೀಠ ಈ ಆದೇಶ ನೀಡಿದೆ. ಅಲ್ಲದೇ, ಮಾರ್ಗಸೂಚಿ ಇಲ್ಲದೆಯೇ ನೌಕರನ ಮನವಿಯೂ ಆಲಿಸದೇ ಚಾಲಕ ಕಂ ನಿರ್ವಾಹಕನ ವರ್ಗಾವಣೆಯನ್ನು ರದ್ದುಗೊಳಿಸಿದೆ.

ಸದ್ಯ ಮಾರ್ಗಸೂಚಿ ಇಲ್ಲದೇ ಇರುವುದರಿಂದ ಮಾರ್ಗಸೂಚಿ ರೂಪಿಸುವವರೆಗೆ ಆಡಳಿತಾತ್ಮಕ ಆಧಾರದ ಮೇಲೆ ವರ್ಗಾವಣೆಗಳನ್ನು ಮಾಡಿದರೆ ಅದಕ್ಕೆ ಸೂಕ್ತ ಕಾರಣಗಳನ್ನೂ ಸಹ ನೀಡಬೇಕಾಗುತ್ತದೆ ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಯಾವುದೇ ಮಾರ್ಗಸೂಚಿ ಅಥವಾ ಸುತ್ತೋಲೆ ಆಧಾರದಲ್ಲಿ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗುತ್ತಿದೆ ಎಂಬ ಪ್ರಶ್ನೆಗೆ ನಿಗಮದ ಪರ ವಕೀಲರು, 2015ರ ಸುತ್ತೋಲೆ ಆಧರಿಸಿ ಆಡಳಿತಾತ್ಮಕ ಕಾರಣಗಳನ್ನು ನೀಡಿ ಸಿಬ್ಬಂದಿಯನ್ನು ವರ್ಗಾವಣೆ ಮಾಡಲಾಗುತ್ತಿದೆ ಎಂದು ಹೇಳಿದ್ದಾರೆ. ಆದರೆ ಮಾರ್ಗಸೂಚಿಯಿಲ್ಲದೇ ವರ್ಗಾವಣೆ ಮಾಡುವುದು ಏಕ ಪಕ್ಷೀಯ ನಿರ್ಧಾರವಾಗಿದೆ ಎಂದು ಪೀಠ ಹೇಳಿದೆ.

ಅಲ್ಲದೆ, ಅರ್ಜಿದಾರರು ಕಳೆದ 13 ವರ್ಷಗಳಿಂದ ಚಿಕ್ಕೋಡಿ ವಿಭಾಗದ ನಿಗಮದಲ್ಲಿ ಕೆಲಸ ಮಾಡುತ್ತಿರುವ ನಾಲ್ಕನೇ ದರ್ಜೆ ಉದ್ಯೋಗಿಯಾಗಿದ್ದು, 4ನೇ ದರ್ಜೆಯ ನೌಕರರ ಸಾಮಾನ್ಯ ವರ್ಗಾವಣೆಗಳು ಕೋರಿಕೆ ಮೇರೆಗೆ ನಡೆಯುತ್ತವೆ. ಆದರೆ, ಕೋರಿಕೆಯ ಮೇರೆಗೆ ವರ್ಗಾವಣೆಯನ್ನು ಕೋರಿದ್ದ 43 ಉದ್ಯೋಗಿಗಳೊಂದಿಗೆ, ಅರ್ಜಿದಾರರನ್ನೂ ವರ್ಗಾಯಿಸಲಾಗಿದೆ. ಆ ವರ್ಗಾವಣೆ ಪಟ್ಟಿಯಲ್ಲಿ, ಅರ್ಜಿದಾರರು ಮಾತ್ರ ವರ್ಗಾವಣೆಗೆ ಯಾವುದೇ ವಿನಂತಿ ಮಾಡಿಲ್ಲ. ಅವರ ವರ್ಗಾವಣೆಯ ಹಿಂದೆ ಆಡಳಿತಾತ್ಮಕ ಕಾರಣವಿದೆ ಎಂದು ಭಾವಿಸಿದರೂ, ವರ್ಗಾವಣೆ ಆದೇಶವು ಕಾರಣಗಳನ್ನು ಒಳಗೊಂಡಿರಬೇಕಾಗುತ್ತದೆ. ಆದರೆ, ನಿಗಮ ಯಾವುದೇ ಕಾರಣಗಳನ್ನು ನೀಡಿಲ್ಲ ಎಂದು ಪೀಠ ತಿಳಿಸಿದೆ.

ಅರ್ಜಿದಾರರನ್ನು ಹೊರತುಪಡಿಸಿ, ಆಡಳಿತಾತ್ಮಕ ಆಧಾರದ ಮೇಲೆ ಬೇರೆ ಯಾವುದೇ ಉದ್ಯೋಗಿಯನ್ನು ವರ್ಗಾಯಿಸಿಲ್ಲ ಎಂಬ ನಿಗಮದ ಪರ ವಕೀಲರು ತಿಳಿಸಿರುವ ಸುತ್ತೋಲೆಯು ಮನವಿ ಮೇರೆಗೆ ವರ್ಗಾವಣೆಗಳಿಗೆ ಅನ್ವಯಿಸುತ್ತದೆ ಮತ್ತು ಅರ್ಜಿದಾರರನ್ನು ಏಕೆ ವರ್ಗಾಯಿಸಲಾಗಿದೆ ಮತ್ತು ಅದಕ್ಕೆ ಕಾರಣಗಳು ಮತ್ತು ತುರ್ತುಸ್ಥಿತಿಗಳು ಯಾವುವು ಎಂಬುದರ ಕುರಿತು ಯಾವುದೇ ವಿವರಗಳನ್ನು ಒಳಗೊಂಡಿಲ್ಲ. ಹಾಗಾಗಿ ಆದೇಶ ರದ್ದುಗೊಳಿಸಲಾಗುತ್ತಿದೆ ಎಂದು ಪೀಠ ತಿಳಿಸಿದೆ.

ಸಂಸ್ಥೆಯ ದಕ್ಷತೆ, ಸಮಗ್ರತೆ ಮತ್ತು ಸುಗಮ ಕಾರ್ಯನಿರ್ವಹಣೆಯನ್ನು ಖಾತ್ರಿ ಪಡಿಸಿಕೊಳ್ಳಲು ನೌಕರರ ವರ್ಗಾವಣೆ ಒಂದು ಪ್ರಮುಖ ಆಡಳಿತಾತ್ಮಕ ಸಾಧನವಾಗಿದ್ದರೂ, ವರ್ಗಾವಣೆಗಳನ್ನು ಏಕರೂಪದ ಮಾನದಂಡಗಳಿಲ್ಲದೇ ಮಾಡಿದಾಗ, ಅವು ಅಸಮಾಧಾನ ಮತ್ತು ದುರುದ್ದೇಶಪೂರಿತ ಆರೋಪಕ್ಕೆ ಕಾರಣವಾಗುತ್ತವೆ ಎಂದು ನ್ಯಾಯಪೀಠ ಅಭಿಪ್ರಾಯಪಟ್ಟಿದೆ.

ಹೀಗಾಗಿ ವರ್ಗಾವಣೆ ಮಾರ್ಗ ಸೂಚಿಗಳನ್ನು ರೂಪಿಸುವುದು ಮತ್ತು ಕಟ್ಟುನಿಟ್ಟಾಗಿ ಪಾಲಿಸುವುದು ಕೇವಲ ಆಡಳಿತಾತ್ಮಕ ಔಪಚಾರಿಕತೆಗಿಂತ ಅಗತ್ಯವಾಗಿದೆ. ನಿಗಮದ ಸಿಬ್ಬಂದಿ ತಮ್ಮ ವರ್ಗಾವಣೆ ಮಾರ್ಗಸೂಚಿಗಳನ್ನು ರೂಪಿಸಲು ಇದು ಸಕಾಲ ಎಂದು ಪೀಠ ಹೇಳಿದೆ.

ಪ್ರಕರಣ: ಅರ್ಜಿದಾರರು 2006ರ ಮೇ 30ರಂದು ಚಾಲಕ ಕಂ ನಿರ್ವಾಹಕರಾಗಿ ತಾತ್ಕಾಲಿಕ ಗುತ್ತಿಗೆ ಆಧಾರದಲ್ಲಿ ನೇಮಕಗೊಂಡಿದ್ದರು. ಅವರ ಸೇವೆಯನ್ನು 2012ರಲ್ಲಿ ಕಾಯಂಗೊಳಿಸಲಾಗಿತ್ತು. 13 ವರ್ಷಗಳಿಂದ ಅವರು ಚಿಕ್ಕೋಡಿ ವಿಭಾಗದಲ್ಲಿ ಕಾರ್ಯನಿರ್ವಹಿಸುತ್ತಿದ್ದರು. ಅವರು ಉತ್ತಮ ರೀತಿಯಲ್ಲಿ ಸೇವೆ ಸಲ್ಲಿಸಿ ಹಲವು ಪ್ರಶಸ್ತಿಗಳನ್ನೂ ಸಹ ಪಡೆದಿದ್ದರು. ಅವರು ಯಾವುದೇ ಮನವಿ ಮಾಡದಿದ್ದರೂ ಸಹ 2014ರ ನ.30ರಂದು ಚಿಕ್ಕೋಡಿ ವಿಭಾಗದಿಂದ ಬೆಳಗಾವಿ/ಖಾನಾಪುರ ವಿಭಾಗಕ್ಕೆ ವರ್ಗಾವಣೆ ಮಾಡಲಾಗಿತ್ತು. ಈ ಕ್ರಮವನ್ನು ಅರ್ಜಿದಾರರು ಪ್ರಶ್ನಿಸಿದ್ದರು.

ಇದನ್ನೂ ಓದಿ: ಅಲೆಮಾರಿ ಸಮುದಾಯದಲ್ಲಿ ಪ್ರಪ್ರಥಮ ವಕೀಲ ಪದವೀಧರೆ; ದೊಡ್ಡಪ್ಪನ ಅಲೆದಾಟ ನೋಡಿ ಪಣತೊಟ್ಟ ಅರುಣಾ