ಕೊಲೆ ಪ್ರಕರಣದ ಗಾಯಾಳು, ಮೃತರ ರಕ್ತದ ಮಾದರಿಗಳ ಪರೀಕ್ಷೆ ಕಡ್ಡಾಯಗೊಳಿಸಿ: ಹೈಕೋರ್ಟ್ ನಿರ್ದೇಶನ
ಪತ್ನಿಯ ಕೊಲೆ ಪ್ರಕರಣದಲ್ಲಿ ಆರೋಪಿಗೆ ವಿಚಾರಣಾ ನ್ಯಾಯಾಲಯ ವಿಧಿಸಿರುವ ಶಿಕ್ಷೆಯನ್ನು ಎತ್ತಿಹಿಡಿದಿರುವ ಹೈಕೋರ್ಟ್ ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿದೆ.

Published : December 10, 2025 at 3:40 PM IST
ಬೆಂಗಳೂರು: ಕೊಲೆ ಆರೋಪದಂತಹ ಪ್ರಕರಣಗಳಲ್ಲಿ ಮೃತಪಟ್ಟವರ ಅಥವಾ ಗಾಯಗೊಂಡವರ ರಕ್ತದ ಮಾದರಿಗಳನ್ನು ಕಡ್ಡಾಯವಾಗಿ ಸಂಗ್ರಹಿಸುವುದಕ್ಕೆ ಸಂಬಂಧಿಸಿದಂತೆ ತನಿಖಾಧಿಗಾರಿಗಳಿಗೆ ಅಗತ್ಯ ಸೂಚನೆಗಳನ್ನು ನೀಡುವಂತೆ ರಾಜ್ಯ ಪೊಲೀಸ್ ಮಹಾನಿರ್ದೇಶಕರು ಮತ್ತು ಮಹಾನಿರೀಕ್ಷರು (ಡಿಜಿ, ಐಜಿಪಿ) ಹಾಗೂ ಪ್ರಾಸಿಕ್ಯೂಷನ್ ಇಲಾಖೆಗೆ ಹೈಕೋರ್ಟ್ ನಿರ್ದೇಶಿಸಿದೆ.
ಪತ್ನಿಯನ್ನು ಕೊಲೆ ಮಾಡಿದ ಆರೋಪದಲ್ಲಿ ಜೀವಾವಧಿ ಶಿಕ್ಷೆ ವಿಧಿಸಿದ್ದ ವಿಚಾರಣಾ ನ್ಯಾಯಾಲಯದ ಆದೇಶವನ್ನು ಪ್ರಶ್ನಿಸಿ ಭೀಮಪ್ಪ ಎಂಬವರು ಸಲ್ಲಿಸಿದ್ದ ಕ್ರಿಮಿನಲ್ ಮೇಲ್ಮನವಿ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಆರ್.ದೇವದಾಸ್ ಮತ್ತು ನ್ಯಾಯಮೂರ್ತಿ ಬಿ.ಮುರಳೀಧರ ಪೈ ಅವರಿದ್ದ ನ್ಯಾಯಪೀಠ ಈ ಸೂಚನೆ ನೀಡಿದೆ.
ಜೊತೆಗೆ, ಪ್ರಕರಣದ ಸಂಬಂಧ ವಿಚಾರಣೆ ನಡೆಸಿರುವ ವಿಚಾರಣಾ ನ್ಯಾಯಾಲಯಗಳಿಗೆ ಸಾಕ್ಷ್ಯಾಧಾರಗಳೊಂದಿಗೆ ಅಪರಾಧ ಘಟನೆಗಳಲ್ಲಿ ಮೃತರಾದವರು, ಇಲ್ಲವೇ ಗಾಯಗೊಂಡವರ ರಕ್ತದ ಗುಂಪುಗಳ ಮಾದರಿಗಳನ್ನು ಕಡ್ಡಾಯವಾಗಿ ಸಂಗ್ರಹಿಸಿ ಸಲ್ಲಿಸಬೇಕು ಎಂದು ಪೀಠ ಸೂಚನೆ ನೀಡಿದೆ.
ಅಲ್ಲದೆ, ತನಿಖಾಧಿಕಾರಿಗಳು ಘಟನೆ ನಡೆದ ಸ್ಥಳದಲ್ಲಿ ರಕ್ತದ ಕಲೆಗಳುಳ್ಳ ವಸ್ತುಗಳು ಹಾಗೂ ಮೃತರು ಮತ್ತು ಆರೋಪಿಗಳಿಂದ ರಕ್ತದ ಕಲೆಗಳುಳ್ಳ ಬಟ್ಟೆಗಳನ್ನು ವಶಪಡಿಸಿಕೊಂಡಿದ್ದಾರೆ. ಆದರೆ, ಮೃತರ ರಕ್ತದ ಗುಂಪು ಸಂಗ್ರಹಿಸದೆ ಲೋಪ ಎಸಗಿದ್ದಾರೆ ಎಂದು ಪೀಠ ಹೇಳಿದೆ.
ತನಿಖಾಧಿಕಾರಿಗಳು ಸಲ್ಲಿಸಿರುವ ತನಿಖಾ ವರದಿಯಲ್ಲಿ ರಕ್ತದ ಗುಂಪು ʼಒʼ ಎಂಬುದಾಗಿ ತಿಳಿಸಿದ್ದಾರೆ. ಆದರೆ, ಆ ರಕ್ತ ಮೃತರದ್ದೇ ಎಂಬುದನ್ನು ದೃಢೀಕರಿಸಲು ಯಾವುದೇ ಸಾಕ್ಷ್ಯಾಧಾರಗಳನ್ನು ಒದಗಿಸಿಲ್ಲ. ತನಿಖೆ ಸಂದರ್ಭದಲ್ಲಿ ರಕ್ತಸಿಕ್ತ ಮಣ್ಣು, ಬಟ್ಟೆ ಮತ್ತು ಆರೋಪಪಟ್ಟಿಗೆ ಅಗತ್ಯವಿರುವ ಇತರೆ ವಸ್ತುಗಳನ್ನು ಸಂಗ್ರಹಿಸುವ ಉದ್ದೇಶವೇ ಸಾಂದರ್ಭಿಕ ಸಾಕ್ಷ್ಯಗಳನ್ನು ಸೇರಿಸುವುದಾಗಿದೆ. ಇದರಿಂದಲೇ ಆರೋಪಿಯ ವಿರುದ್ಧದ ಅಪರಾಧವನ್ನು ದೃಢೀಕರಿಸುವುದಕ್ಕೆ ಅವಕಾಶವಿರಲಿದೆ ಎಂದಿದೆ.
ತನಿಖಾಧಿಕಾರಿಗಳು ಮೃತರ ಅಥವಾ ಗಾಯಗೊಂಡವರ ರಕ್ತದ ಗುಂಪು ವರದಿಯನ್ನು ಪಡೆಯಲು ವಿಫಲವಾದಲ್ಲಿ ರಕ್ತಸಿಕ್ತ ವಸ್ತುಗಳನ್ನು ಸಂಗ್ರಹಿಸುವ ಉದ್ದೇಶವೇ ವಿಫಲವಾಗಲಿದೆ. ತನಿಖಾ ಸಂಸ್ಥೆಯು ಆಗಾಗ್ಗೆ ಅಂತಹ ತಪ್ಪುಗಳನ್ನು ಮಾಡುತ್ತಿವೆ ಎಂಬುದಾಗಿ ನಮ್ಮ ಅರಿವಿಗೆ ಬಂದಿದೆ. ಹೀಗಾಗಿ, ಕೊಲೆ ಪ್ರಕರಣಗಳಲ್ಲಿ ವಿಚಾರಣಾ ನ್ಯಾಯಾಲಯದ ಮುಂದೆ ರಕ್ತದ ಗುಂಪು ವರದಿಗಳನ್ನು ಕಡ್ಡಾಯವಾಗಿ ಸಲ್ಲಿಸಬೇಕು ಎಂದು ಪೀಠ ನಿರ್ದೇಶನ ನೀಡಿದೆ.
ಅಲ್ಲದೆ, ಆದೇಶಕ್ಕೆ ಸಂಬಂಧಿಸಿದಂತೆ ಅಗತ್ಯ ಸೂಚನೆಗಳನ್ನು ನೀಡುವ ಸಲುವಾಗಿ ಆದೇಶದ ಪ್ರತಿಯನ್ನು ಡಿಜಿ ಮತ್ತು ಐಜಿ ಕಚೇರಿ ಮತ್ತು ಪ್ರಾಸಿಕ್ಯೂಷನ್ ಇಲಾಖೆ ನಿರ್ದೇಶಕರಿಗೆ ತಲುಪಿಸಬೇಕು. ಅಲ್ಲದೆ, ಮೃತರ ಮಕ್ಕಳಿಗೆ ಸೂಕ್ತ ಪರಿಹಾರ ಒದಗಿಸಲು ಗದಗ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರಕ್ಕೆ ರವಾನಿಸಬೇಕು ಎಂದು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.
ಜೊತೆಗೆ, ತನ್ನ ತಾಯಿ ಕೊಲೆ ನಡೆದ ಸಂದರ್ಭದಲ್ಲಿ ಸ್ಥಳದಲ್ಲಿ ಹಾಜರಿದ್ದ ಮಗಳು ನೀಡಿರುವ ಸಾಕ್ಷ್ಯವನ್ನು ಪ್ರತ್ಯಕ್ಷದರ್ಶಿಯಲ್ಲ ಎಂಬುದಾಗಿ ತಿಳಿಸಿ ತಿರಸ್ಕರಿಸುವುದಕ್ಕೆ ಅವಕಾಶವಿಲ್ಲ. ಅರ್ಜಿದಾರ ಆರೋಪಿ ಹಲ್ಲೆ ನಡೆಸಿರುವ ಕೊಡಲಿಯನ್ನು ಸ್ಥಳದಲ್ಲಿಯೇ ಬಿಟ್ಟು ಪರಾರಿಯಾಗಿದ್ದಾರೆ ಎಂಬುದಾಗಿ ನೆರೆಹೊರೆಯರು ನೀಡಿರುವ ಹೇಳಿಕೆಯಲ್ಲಿ ತಿಳಿಸಿದ್ದಾರೆ. ಈ ಅಂಶಗಳ ಕುರಿತಂತೆ ಅರ್ಜಿದಾರರು ವಿಚಾರಣಾ ನ್ಯಾಯಾಲಯದಲ್ಲಿ ಆಕ್ಷೇಪ ವ್ಯಕ್ತಪಡಿಸಿಲ್ಲ ಎಂದು ತಿಳಿಸಿರುವ ನ್ಯಾಯಪೀಠ, ಆರೋಪಿಗೆ ವಿಚಾರಣಾ ನ್ಯಾಯಾಲಯ ವಿಧಿಸಿರುವ ಶಿಕ್ಷೆಯನ್ನು ಎತ್ತಿಹಿಡಿದಿದ್ದು, ಮೇಲ್ಮನವಿ ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.
ಪ್ರಕರಣದ ಹಿನ್ನೆಲೆ: ಗದಗ ಜಿಲ್ಲೆಯ ನರೇಗಲ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ನೆಲೆಸಿದ್ದ ಮೇಲ್ಮನವಿದಾರರು ರೈಲ್ವೆ ಪೋರ್ಟರ್ ಆಗಿ ಸೇವೆ ಸಲ್ಲಿಸುತ್ತಿದ್ದರು. ಸುಮಾರು ಕಳೆದ 12 ವರ್ಷಗಳ ಹಿಂದೆ ಉಮಾ ಎಂಬವರನ್ನು ವಿವಾಹವಾಗಿದ್ದರು. ಪತ್ನಿ ಉಮಾ ಅವರು ಮತ್ತೊಬ್ಬ ವ್ಯಕ್ತಿಯೊಂದಿಗೆ ಅಕ್ರಮ ಸಂಬಂಧ ಹೊಂದಿದ್ದಾರೆ ಎಂಬ ಶಂಕೆಯ ಮೇಲೆ ಇಬ್ಬರ ನಡುವೆ ಆಗಾಗ್ಗೆ ಗಲಾಟೆ ನಡೆಯುತ್ತಿತ್ತು. 2019ರ ಜನವರಿ 6ರಂದು ಪತ್ನಿಯೊಂದಿಗೆ ನಡೆದ ಗಲಾಟೆಯಲ್ಲಿ ಉಮಾ ಅವರ ಕುತ್ತಿಗೆ ಮತ್ತು ಎಡಭಾಗದ ಕೆನ್ನೆಗೆ ಕೊಡಲಿಯಿಂದ ಹೊಡೆದ ಕೊಲೆ ಮಾಡಿದ್ದರು.
ಪ್ರಕರಣ ಸಂಬಂಧ ತನಿಖೆ ನಡೆಸಿದ್ದ ಪೊಲೀಸರು ಆರೋಪಿಯ ವಿರುದ್ಧ ಸಾಕ್ಷ್ಯಾಧಾರಗಳೊಂದಿಗೆ ಆರೋಪಪಟ್ಟಿ ಸಲ್ಲಿಸಿದ್ದರು. ಆರೋಪಪಟ್ಟಿಯಲ್ಲಿರುವ ಸಾಕ್ಷ್ಯಾಧಾರಗಳ ಆಧಾರದಲ್ಲಿ ವಿಚಾರಣೆ ನಡೆಸಿದ್ದ ವಿಚಾರಣಾ ನ್ಯಾಯಾಲಯ 2021ರ ಡಿಸೆಂಬರ್ 30ರಂದು , ಆರೋಪಿ ಭೀಮಪ್ಪನಿಗೆ ಕೊಲೆ ಆರೋಪದಲ್ಲಿ ಜೀವಾವಧಿ ಶಿಕ್ಷೆ, ಪತ್ನಿಯ ಮೇಲೆ ಕ್ರೌರ್ಯ ನಡೆಸಿದ ಆರೋಪದಲ್ಲಿ ಎರಡು ವರ್ಷಗಳ ಶಿಕ್ಷೆ ಮತ್ತು 5 ಸಾವಿರ ರೂ. ದಂಡ ವಿಧಿಸಿ ಆದೇಶಿಸಿತ್ತು. ಈ ಆದೇಶವನ್ನು ಪ್ರಶ್ನಿಸಿ ಭೀಮಪ್ಪ ಹೈಕೋರ್ಟ್ ಮೆಟ್ಟಿಲೇರಿದ್ದರು.
ವಿಚಾರಣೆ ವೇಳೆ, ಅರ್ಜಿದಾರರ ಪರ ವಕೀಲರು, 'ಅರ್ಜಿದಾರರ ವಿರುದ್ಧ ಮೃತರ ಮಗಳು ಮತ್ತು ನೆರೆಹೊರೆಯರ ಸಾಕ್ಷಿಗಳನ್ನು ಮಾತ್ರ ಪರಿಗಣಿಸಿ ತಪ್ಪಾಗಿ ಶಿಕ್ಷೆ ವಿಧಿಸಲಾಗಿದ್ದು, ಆದೇಶ ರದ್ದು ಮಾಡಬೇಕು' ಎಂದು ಕೋರಿದರು. ಇದಕ್ಕೆ ಸರ್ಕಾರದ ಪರ ವಕೀಲರು ಆಕ್ಷೇಪಿಸಿದ್ದರು. ವಾದ, ಪ್ರತಿವಾದ ಆಲಿಸಿದ ನ್ಯಾಯಪೀಠ ಅರ್ಜಿ ವಜಾಗೊಳಿಸಿದೆ.
ಇದನ್ನೂ ಓದಿ: ಋತುಚಕ್ರದಿನಕ್ಕೆ ವೇತನ ಸಹಿತ ರಜೆ ಪ್ರಶ್ನಿಸಿದ್ದ ಅರ್ಜಿಗಳ ವಿಚಾರಣೆ ಜನವರಿ 20ಕ್ಕೆ ನಿಗದಿಪಡಿಸಿದ ಹೈಕೋರ್ಟ್

