ETV Bharat / state

ಕಾರಿಗೆ ₹53 ಸಾವಿರ ಇಎಂಐ ಪಾವತಿಸುವ ವ್ಯಕ್ತಿ ಅನಾರೋಗ್ಯ ಪೀಡಿತ ಮಗುವಿನ ಪೋಷಣೆಗೆ ಜೀವನಾಂಶಕ್ಕೆ ನಿರಾಕರಿಸುವಂತಿಲ್ಲ: ಹೈಕೋರ್ಟ್​

ಐಷಾರಾಮಿ ಕಾರಿನ ಇಎಂಐ ಹಣ ನೀಡುವ ತಂದೆ, ಆಟಿಸಂನಂತಹ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮಗುವಿನ ರಕ್ಷಣೆ ಮತ್ತು ಪತ್ನಿಯ ಜೀವನಾಂಶ ಪಾವತಿಸಲು ಸಾಧ್ಯವಿಲ್ಲ ಎನ್ನಲಾಗದು ಎಂದು ಹೈಕೋರ್ಟ್​ ಹೇಳಿದೆ.

high-court-directs-husband-to-pay-child-support-and-maintenance-to-wife
ಹೈಕೋರ್ಟ್ (ETV Bharat)
author img

By ETV Bharat Karnataka Team

Published : July 4, 2026 at 6:48 PM IST

2 Min Read
Choose ETV Bharat

ಬೆಂಗಳೂರು: ಹೊಸದಾಗಿ ಕಾರು ಖರೀದಿಸಿ ಮಾಸಿಕ 53,000 ರೂ. ಇಎಂಐ ಪಾವತಿಸುವ ಸಾಮರ್ಥ್ಯವಿರುವ ತಂದೆಯು ಆಟಿಸಂ ಕಾಯಿಲೆಯಿಂದ ಬಳಲುತ್ತಿರುವ ತನ್ನ ಮಗುವಿನ ಮತ್ತು ಪತ್ನಿಯ ಮಧ್ಯಂತರ ಜೀವನಾಂಶ ಪಾವತಿಸಲು ತಕರಾರು ಮಾಡುವಂತಿಲ್ಲ ಎಂದು ಹೈಕೋರ್ಟ್ ಆದೇಶಿಸಿದೆ.

ಪತ್ನಿ ಮತ್ತು ಮಗುವಿಗೆ ಮಾಸಿಕ ಒಟ್ಟು 30,000 ರೂ.ಗಳ ಮಧ್ಯಂತರ ಜೀವನಾಂಶ ನೀಡುವಂತೆ ಹೊರಡಿಸಿದ್ದ ಕೌಟುಂಬಿಕ ನ್ಯಾಯಾಲಯದ ಆದೇಶ ಪ್ರಶ್ನಿಸಿ ಪತಿ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಡಾ.ಚಿಲ್ಲಾಕೂರು ಸುಮಲತಾ ಅವರಿದ್ದ ನ್ಯಾಯಪೀಠ ಈ ಆದೇಶ ನೀಡಿದ್ದು, ಅರ್ಜಿಯನ್ನು ವಜಾಗೊಳಿಸಿದೆ.

ವಾದ ಮತ್ತು ದಾಖಲಗೆಳನ್ನು ಪರಿಶೀಲಿಸಿದ ನ್ಯಾಯಪೀಠ, ಕಳೆದ ವರ್ಷಗಳಲ್ಲಿ ಪತಿಯ ವಾರ್ಷಿಕ ಆದಾಯ 14 ಲಕ್ಷದಿಂದ 28 ಲಕ್ಷದವರೆಗೆ ಇದೆ. ಇದರಿಂದ ಅವರು ಮಾಸಿಕ ಕನಿಷ್ಠ ₹2 ಲಕ್ಷ ಗಳಿಸುತ್ತಿದ್ದಾರೆ ಎಂಬ ಅಂಶ ಗೊತ್ತಾಗಲಿದೆ. ಅಲ್ಲದೆ, ಪತಿಯು ಸ್ವತಃ ಕಾರು ಖರೀದಿಸಲು ಬ್ಯಾಂಕ್ ಸಾಲ ಪಡೆದು ಮಾಸಿಕ 53,000 ರೂ. ಇಎಂಐ ಪಾವತಿಸುತ್ತಿದ್ದಾರೆ. ಕೇವಲ ವೈಯಕ್ತಿಕ ಐಷಾರಾಮಿ ಕಾರಿನ ಇಎಂಐಗೆ ಇಷ್ಟೊಂದು ಹಣ ನೀಡುವ ತಂದೆ, ಆಟಿಸಂನಂತಹ ತೀವ್ರ ಆರೋಗ್ಯ ಸಮಸ್ಯೆಯಿಂದ ಬಳಲುತ್ತಿರುವ ಮಗುವಿನ ರಕ್ಷಣೆ ಮತ್ತು ಪತ್ನಿಯ ಜೀವನಾಂಶಕ್ಕಾಗಿ ಮಾಸಿಕ 30,000 ರೂ. ಪಾವತಿಸಲು ಸಾಧ್ಯವಿಲ್ಲ ಎನ್ನಲಾಗದು ಎಂದು ತಿಳಿಸಿ, ಅರ್ಜಿಯನ್ನು ವಜಾಗೊಳಿಸಿ ಆದೇಶಿಸಿದೆ.

ಪ್ರಕರಣದ ಹಿನ್ನೆಲೆ: ಬೆಂಗಳೂರಿನ ಎಲೆಕ್ಟ್ರಾನಿಕ್ ಸಿಟಿಯ ನಿವಾಸಿಯಾದ ವ್ಯಕ್ತಿ​ ಮತ್ತು ಜಯನಗರದ ನಿವಾಸಿಯಾದ ಮಹಿಳೆ ವಿವಾಹವಾಗಿದ್ದರು. ದಂಪತಿ ನಡುವಿನ ಕೌಟುಂಬಿಕ ಕಲಹದಿಂದಾಗಿ ಪತಿ, ಪತ್ನಿ ದೂರವಾಗಿ ವಾಸಿಸುತ್ತಿದ್ದರು. ಈ ನಡುವೆ ಪತ್ನಿ ಬೆಂಗಳೂರಿನ ಪ್ರಧಾನ ಕೌಟುಂಬಿಕ ನ್ಯಾಯಾಲಯದಲ್ಲಿ ಮಾಸಿಕ ಜೀವನಾಂಶಕ್ಕಾಗಿ, ಪ್ರಕರಣದ ವೆಚ್ಚವಾಗಿ 25,000 ರೂ. ಮತ್ತು ಜೀವನಾಂಶವಾಗಿ 40,000 ರೂ.ಗಳನ್ನು ನೀಡುವಂತೆ ಕೋರಿ ಅರ್ಜಿ ಸಲ್ಲಿಸಿದ್ದರು.

ಅರ್ಜಿಯ ವಿಚಾರಣೆ ನಡೆಸಿದ್ದ ಕೌಟುಂಬಿಕ ನ್ಯಾಯಾಲಯ, ಪತ್ನಿಗೆ ಮಾಸಿಕ 10,000 ರೂ., ಆಟಿಸಂನಿಂದ ಬಳಲುತ್ತಿರುವ 7 ವರ್ಷದ ಮಗುವಿಗೆ ಮಾಸಿಕ 20,000 ರೂ. ಮಧ್ಯಂತರ ಜೀವನಾಂಶ ಹಾಗೂ ಮಗುವಿನ ವಿದ್ಯಾಭ್ಯಾಸದ ವೆಚ್ಚ ಮತ್ತು ಮೊಕದ್ದಮೆ ವೆಚ್ಚವಾಗಿ 20,000 ರೂ.ಗಳನ್ನು ಪಾವತಿಸುವಂತೆ ಪತಿಗೆ ಆದೇಶಿಸಿತ್ತು. ಇದನ್ನು ಪ್ರಶ್ನಿಸಿ ಪತಿ ಹೈಕೋರ್ಟ್​​​ನಲ್ಲಿ ಅರ್ಜಿ ದಾಖಲಿಸಿದ್ದರು.

ವಿಚಾರಣೆ ವೇಳೆ ಪತಿಯ ಪರ ವಕೀಲರು, ಪತ್ನಿಯೇ ಸ್ವಯಂಪ್ರೇರಿತವಾಗಿ ಮಗುವಿನೊಂದಿಗೆ ಮನೆ ಬಿಟ್ಟು ಹೋಗಿದ್ದಾರೆ. ತಾವೇ ಸ್ವಯಂಪ್ರೇರಿತರಾಗಿ ಯಾವುದೇ ನ್ಯಾಯಾಲಯದ ಆದೇಶವಿಲ್ಲದಿದ್ದರೂ ಮಾಸಿಕ 5,000 ರೂ. ಪಾವತಿಸುತ್ತಿದ್ದರು. ಆದರೆ ಕೌಟುಂಬಿಕ ನ್ಯಾಯಾಲಯ 30 ಸಾವಿರ ಪಾವತಿಗೆ ಆದೇಶಿಸಿದ್ದು, ಈ ಮೊತ್ತ ಅತ್ಯಂತ ಹೆಚ್ಚಾಗಿದೆ. ಪತ್ನಿ ಸುಶಿಕ್ಷಿತೆಯಾಗಿದ್ದಾರೆ. ದುಡಿಯುವ ಸಾಮರ್ಥ್ಯ ಹೊಂದಿದ್ದಾರೆ. ವ್ಯಾಪಾರದಲ್ಲಿ ತಮಗಾದ ನಷ್ಟದಿಂದ ಈಗಷ್ಟೇ ಚೇತರಿಸಿಕೊಳ್ಳುತ್ತಿರುವುದರಿಂದ ಇಷ್ಟು ದೊಡ್ಡ ಮೊತ್ತ ನೀಡಲು ಸಾಧ್ಯವಿಲ್ಲ ಎಂದು ಪೀಠಕ್ಕೆ ವಿವರಿಸಿದ್ದರು.

ಇದಕ್ಕೆ ತೀವ್ರ ಆಕ್ಷೇಪ ವ್ಯಕ್ತಪಡಿಸಿದ ಪತ್ನಿಯ ಪರ ವಕೀಲರು, ಪತಿಯು ಕಂಪೆನಿಯೊಂದರ ನಿರ್ದೇಶಕರಾಗಿದ್ದು, ಕೈ ತುಂಬಾ ಆದಾಯ ಹೊಂದಿದ್ದಾರೆ. ಅವರ ಆದಾಯ ತೆರಿಗೆ ದಾಖಲೆಗಳ ಪ್ರಕಾರ ಮಾಸಿಕ 2 ಲಕ್ಷಕ್ಕೂ ಹೆಚ್ಚು ಗಳಿಸುತ್ತಿದ್ದಾರೆ. 7 ವರ್ಷದ ಮಗು ಆಟಿಸಂ ಸ್ಪೆಕ್ಟ್ರಮ್ ಡಿಸಾರ್ಡರ್​​ನಿಂದ ಬಳಲುತ್ತಿದ್ದು, ಚಿಕಿತ್ಸೆಗಾಗಿ ಭಾರಿ ವೆಚ್ಚವಾಗುತ್ತಿದೆ. ಪತ್ನಿ ಯಾವುದೇ ಆದಾಯದ ಮೂಲ ಹೊಂದಿಲ್ಲದ ಕಾರಣ ಕೌಟುಂಬಿಕ ನ್ಯಾಯಾಲಯದ ಆದೇಶ ಸೂಕ್ತವಾಗಿದೆ ಎಂದು ಪೀಠಕ್ಕೆ ತಿಳಿಸಿದ್ದರು.

ಇದನ್ನೂ ಓದಿ: ಕಂಪನಿ ಉದ್ಯೋಗಿ ಮೇಲೆ ಮಾಲೀಕನಿಂದ ಅತ್ಯಾಚಾರವೆಸಗಿದ ದೃಶ್ಯಗಳನ್ನು ಹಂಚಿಕೊಂಡ ಪತ್ನಿ: ಪ್ರಕರಣ ರದ್ದುಗೊಳಿಸಲು ನಿರಾಕರಿಸಿದ ಹೈಕೋರ್ಟ್​