30 ಡಿವೈಎಸ್ಪಿಗಳಿಗೆ ನಾನ್ ಐಪಿಎಸ್ ಹುದ್ದೆಗಳಿಗೆ ಬಡ್ತಿ ನೀಡಲು ಸರ್ಕಾರಕ್ಕೆ ಹೈಕೋರ್ಟ್ ಸೂಚನೆ
ಮುಂದಿನ ಎರಡು ತಿಂಗಳಲ್ಲಿ ಎಸ್‌ಪಿ ಹುದ್ದೆಗೆ ಬಡ್ತಿ ನೀಡಲು ತೀರ್ಮಾನಿಸಬೇಕು ಎಂದು ಹೈಕೋರ್ಟ್ ಪೀಠ ತಿಳಿಸಿದೆ.

Published : May 2, 2026 at 8:07 PM IST
ಬೆಂಗಳೂರು: ರಾಜ್ಯ ಪೊಲೀಸ್ ಸೇವೆಯಲ್ಲಿದ್ದ 30 ನಾನ್ ಐಪಿಎಸ್ ಅಧಿಕಾರಿಗಳಿಗೆ ಖಾಲಿ ಹುದ್ದೆಗಳ ಆಧಾರದಲ್ಲಿ ಪೊಲೀಸ್ ವರಿಷ್ಠಾಧಿಕಾರಿ (ಎಸ್‌ಪಿ) ವೃಂದಕ್ಕೆ ಬಡ್ತಿಗೆ ಪರಿಗಣಿಸಲು ಹೈಕೋರ್ಟ್ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ.
ಎಸ್ಪಿ ಹುದ್ದೆಗೆ ಬಡ್ತಿ ನೀಡುವ ಸಂಬಂಧ 2025ರ ಆ.20ರಂದು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (ಕೆಎಸ್‌ಎಟಿ) ನೀಡಿದ್ದ ಆದೇಶ ಪ್ರಶ್ನಿಸಿ ರಾಜ್ಯ ಸರ್ಕಾರ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಸ್.ಜಿ.ಪಂಡಿತ್ ಮತ್ತು ನ್ಯಾಯಮೂರ್ತಿ ಕೆ.ವಿ.ಅರವಿಂದ್ ಅವರಿದ್ದ ನ್ಯಾಯಪೀಠ, ಅರ್ಜಿಯನ್ನು ಭಾಗಶಃ ಪುರಸ್ಕರಿಸಿದ್ದು, ಕರ್ನಾಟಕ ನಾಗರಿಕ ಸೇವಾ ನಿಯಮ (ಕೆಸಿಎಸ್‌ಆರ್)45 ರ ನಿಯಮದಡಿ ಬಡ್ತಿ ಪರಿಗಣನೆ ಮಾಡಲು ನಿರ್ದೇಶನ ನೀಡಿದೆ.
ಅಲ್ಲದೇ, ರಾಜ್ಯದಲ್ಲಿರುವ ಎಸ್ಪಿ ಹುದ್ದೆಗಳ ಲಭ್ಯತೆ, ಇಲಾಖಾ ಬಡ್ತಿ ಸಮಿತಿ (ಡಿಪಿಸಿ) ಶಿಫಾರಸುಗಳನ್ನು ಗಮದನದಲ್ಲಿಟ್ಟುಕೊಂಡು, ಗೃಹ ಸಚಿವರ ಅನುಮೋದನೆ ಪಡೆದು ನಿಯಮ 42ರ ಅಡಿ ಮುಂದಿನ ಎರಡು ತಿಂಗಳಲ್ಲಿ ಎಸ್‌ಪಿ ಹುದ್ದೆಗೆ ಬಡ್ತಿ ನೀಡಲು ತೀರ್ಮಾನಿಸಬೇಕು ಎಂದು ಪೀಠ ಹೇಳಿದೆ.
ಅಲ್ಲದೇ, ಸರ್ಕಾರದ ಪರ ವಾದ ಮಂಡಿಸಿರುವ ಅಡ್ವೋಕೇಟ್ ಜನರಲ್ ತಿಳಿಸಿರುವಂತೆ, ಉನ್ನತೀಕರಿಸಲಾದ ಹುದ್ದೆಗಳು ಕೇವಲ 2 ವರ್ಷಕ್ಕೆ ಲಭ್ಯವಿವೆ. ಆದರೆ ಬಡ್ತಿ ಆದೇಶ ಹೊರಡಿಸುವ ದಿನಾಂಕ 2023 ಪರಿಗಣಿಸಿದರೆ ಆ 30 ಹುದ್ದೆಗಳ ಉನ್ನತೀಕರಿಸಿದ ಅವಧಿ ಮುಕ್ತಾಯವಾಗಲಿದೆ. ಹಾಗಾಗಿ ಹುದ್ದೆಗಳು ಖಾಲಿ ಇರುವ ಅಂಶವನ್ನು ನ್ಯಾಯಮಂಡಳಿ ಪರಿಗಣಿಸಬೇಕಿತ್ತು. ಆದ್ದರಿಂದ ನ್ಯಾಯಮಂಡಳಿ ಆದೇಶವನ್ನು ಸ್ವಲ್ಪ ಮಾರ್ಪಾಡು ಮಾಡಬೇಕಾಗಿದೆ ಎಂದು ಕೋರಿರುವುದು ಸಮಂಜಸವಾಗಿದೆ ಎಂದು ಪೀಠ ಹೇಳಿದೆ.
ಪ್ರಕರಣದ ಹಿನ್ನೆಲೆ: ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ಪೊಲೀಸ್ ಅಧೀಕ್ಷಕರಾಗಿ ಕಾರ್ಯನಿರ್ವಹಿಸುತ್ತಿದ್ದ ಲಕ್ಷ್ಮೀನಾರಾಯಣ, ಸಿದ್ದರಾಜು, ರಾಜೇಂದ್ರ, ಸೇರಿದಂತೆ 30 ಅಧಿಕಾರಿಗಳಿಗೆ ನಾಗರಿಕ ಪೊಲೀಸ್ ಅಧೀಕ್ಷಕ (ಎಸ್ಪಿ-ನಾನ್ ಐಪಿಎಸ್) ಹುದ್ದೆಗಳಿಗೆ ಮುಂಬಡ್ತಿ ನೀಡಲು ಇಲಾಖಾ ಬಡ್ತಿ ಸಮಿತಿ (ಡಿಪಿಸಿ) ಸಭೆ 2023ರ ನ.15ರಂದು ಶಿಫಾರಸು ಮಾಡಿತ್ತು. ಆದರೆ, ಸರ್ಕಾರ ಅವರಿಗೆ ಬಡ್ತಿ ನೀಡುವ ಬದಲು ಕೆಸಿಎಸ್‌ಆರ್ ನಿಯಮ 32ರಂತೆ ಎಸ್ಪಿ ಗಳಾಗಿ ಸ್ವಾತಂತ್ರ್ಯ ಉಸ್ತುವಾರಿ ಹೊಣೆ ನೀಡಿ 2023ರ ನವೆಂಬರ್ 28ರಂದು ಆದೇಶಿಸಿತ್ತು.
ಇದನ್ನು ಪ್ರಶ್ನಿಸಿ ಅವರು ಕರ್ನಾಟಕ ರಾಜ್ಯ ಆಡಳಿತ ನ್ಯಾಯಮಂಡಳಿ (ಕೆಎಸ್‌ಎಟಿ)ಗೆ ಅರ್ಜಿ ಸಲ್ಲಿಸಿದ್ದರು. ನ್ಯಾಯಮಂಡಳಿ ಅಷ್ಟೂ ಮಂದಿಗೂ ಎಸ್‌ಪಿ ವೃಂದಕ್ಕೆ ಬಡ್ತಿ ನೀಡುವಂತೆ ಸರ್ಕಾರಕ್ಕೆ ನಿರ್ದೇಶನ ನೀಡಿತ್ತು. ಇದನ್ನು ಪ್ರಶ್ನಿಸಿ ಸರ್ಕಾರ ಹೈಕೋರ್ಟ್ಗೆ ಮೇಲ್ಮನವಿ ಅರ್ಜಿ ಸಲ್ಲಿಸಿತ್ತು.
ಇದನ್ನೂ ಓದಿ: ಜಿಬಿಎ ವ್ಯಾಪ್ತಿಯ ಕೃಷಿ ಭೂಮಿಯಲ್ಲಿ ಮನೆ ನಿರ್ಮಿಸಿದ್ದರೆ ಕಂದಾಯ ಇಲಾಖೆ ಅಧಿಕಾರಿಗಳು ನೋಟಿಸ್ ಜಾರಿ ಮಾಡಲಾಗದು : ಹೈಕೋರ್ಟ್

