ETV Bharat / state

ಚಿತ್ತಾಪುರದಲ್ಲಿ ನ.16ರಂದು RSS ಪಥಸಂಚಲನಕ್ಕೆ ಹೈಕೋರ್ಟ್ ಅನುಮತಿ

ರಾಷ್ಟ್ರೀಯ ಸ್ವಯಂಸೇವಕ ಸಂಘವು ಚಿತ್ತಾಪುರದಲ್ಲಿ ನವೆಂಬರ್‌ 16ರಂದು ಪಥಸಂಚಲನ ನಡೆಸಲು ರಾಜ್ಯ ಹೈಕೋರ್ಟ್‌ ಅನುಮತಿಸಿದೆ.

high-court-allows-rss-procession-in-chittapur-on-november-16
ಆರ್​ಎಸ್​ಎಸ್​, ​ಕಲಬುರಗಿ ಹೈಕೋರ್ಟ್ ಪೀಠ (IANS)
author img

By ETV Bharat Karnataka Team

Published : November 13, 2025 at 4:59 PM IST

2 Min Read
Choose ETV Bharat

ಬೆಂಗಳೂರು: ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್​​ಎಸ್​ಎಸ್) ವು 100 ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಕಲಬುರಗಿ ಜಿಲ್ಲೆಯ ಚಿತ್ತಾಪುರದಲ್ಲಿ ನವೆಂಬರ್‌ 16ರ ಭಾನುವಾರದಂದು ಪಥಸಂಚಲನ ನಡೆಸುವುದಕ್ಕೆ ಹೈಕೋರ್ಟ್‌ ಅನುಮತಿ ನೀಡಿದೆ.

ಅಲ್ಲದೆ, 300 ಮಂದಿ ಆರ್‌ಎಸ್‌ಎಸ್‌ ಸದಸ್ಯರು ಮತ್ತು 50 ಮಂದಿ ವಾದ್ಯಗಾರರೊಂದಿಗೆ ಪಥಸಂಚಲನ ನಡೆಸುವುದಕ್ಕೆ ಅನುಮತಿ ನೀಡುತ್ತಿರುವುದಾಗಿ ನ್ಯಾಯಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ಪಥಸಂಚಲನಕ್ಕೆ ಅನುಮತಿ ನಿರಾಕರಿಸಿದ್ದ ಜಿಲ್ಲಾಡಳಿತದ ಕ್ರಮ ಪ್ರಶ್ನಿಸಿ, ಆರ್​ಎಸ್ಎಸ್ ಕಲಬುರಗಿ ಜಿಲ್ಲಾ ಸಂಚಾಲಕ ಅಶೋಕ್ ಪಾಟೀಲ್ ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಎಂ.ಜಿ.ಎಸ್. ಕಮಲ್ ಅವರಿದ್ದ ಕಲಬುರಗಿಯ ನ್ಯಾಯಪೀಠ, ಪಥಸಂಚಲನಕ್ಕೆ ತಹಶೀಲ್ದಾರ್​ ಅವರು ನೀಡಿರುವ ಅನುಮತಿಯನ್ನು ಪರಿಗಣಿಸಿ, ಈ ಆದೇಶ ನೀಡಿ ಅರ್ಜಿಯನ್ನು ಇತ್ಯರ್ಥಪಡಿಸಿದೆ.

ಆದೇಶದಲ್ಲಿ ಏನಿದೆ? ಅಲ್ಲದೆ, 2025ರ ಅಕ್ಟೋಬರ್ 18ರಂದು ರಾಜ್ಯ ಸರ್ಕಾರವು, ಉದ್ಯಾನ, ರಸ್ತೆ ಸೇರಿದಂತೆ ಸಾರ್ವಜನಿಕ ಸ್ಥಳಗಳಲ್ಲಿ 10ಕ್ಕೂ ಹೆಚ್ಚು ಮಂದಿ ಶಾತಿಯುತ ನಾಗರಿಕ, ಸಾಮಾಜಿಕ ಅಥವಾ ಸಾಂಸ್ಕೃತಿಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ಸರ್ಕಾರದ ಅನುಮತಿ ಕಡ್ಡಾಯಗೊಳಿಸಿ ಆದೇಶ ಹೊರಡಿಸಿದೆ. ಈ ಆದೇಶ ಪ್ರಶ್ನಿಸಿ ಸಲ್ಲಿಸಿದ್ದ ಅರ್ಜಿಯ ವಿಚಾರಣೆ ನಡೆಸಿದ್ದ ಏಕಸದಸ್ಯ ಪೀಠ ಸಂವಿಧಾನದಲ್ಲಿ ಲಭ್ಯವಿರುವ ವಾಕ್‌ ಮತ್ತು ಅಭಿವ್ಯಕ್ತಿ ಸ್ವಾತಂತ್ರ್ಯ ಹಾಗೂ ಸಭೆಯನ್ನು ನಡೆಸುವ ಮೂಲಭೂತ ಹಕ್ಕುಗಳನ್ನು ಕಸಿದುಕೊಳ್ಳಲಿದೆ ಎಂದು ತಿಳಿಸಿ, ಆದೇಶಕ್ಕೆ ತಡೆ ನೀಡಿದೆ. ಈ ತಡೆಯಾಜ್ಞೆ ಪ್ರಶ್ನಿಸಿ ಸಲ್ಲಿಸಿದ್ದ ಸಲ್ಲಿಸಿದ್ದ ಮೇಲ್ಮನವಿಯನ್ನೂ ದ್ವಿಸದಸ್ಯಪೀಠ ವಜಾಗೊಳಿಸಿ ಆದೇಶಿಸಿರುವ ಅಂಶವನ್ನು ಪೀಠ ತನ್ನ ಆದೇಶದಲ್ಲಿ ತಿಳಿಸಿದೆ.

ವಕೀಲರ ವಾದ: ಇದಕ್ಕೂ ಮುನ್ನ ನಡೆದ ವಿಚಾರಣೆ ವೇಳೆ, ಅರ್ಜಿದಾರರ ಪರ ವಕೀಲರು, ''ಪಥಸಂಚಲನದಲ್ಲಿ 300 ಮಂದಿ ಮತ್ತು ವಾದ್ಯಗೋಷ್ಠಿಯಲ್ಲಿ 25 ಮಂದಿಗೆ ಸೀಮಿತಗೊಳಿಸಲಾಗಿದೆ. ಆದ್ದರಿಂದ ಪಥಸಂಚಲನಕ್ಕೆ 600 ಮಂದಿ ಮತ್ತು ವಾದ್ಯಗೋಷ್ಠಿಯಲ್ಲಿ 50 ಮಂದಿಗೆ ಅವಕಾಶ ನೀಡಬೇಕು. ಅಲ್ಲದೆ, ಸಂಘ 100 ವರ್ಷ ಪೂರೈಸಿರುವ ವಿಶೇಷ ಸಂದರ್ಭದಲ್ಲಿ ಪಥಸಂಚಲನ ಹಮ್ಮಿಕೊಳ್ಳಲಾಗಿದೆ. ಜನರ ಭಾವನೆಗಳನ್ನು ಪರಿಗಣಿಸಿ, ಒಂದು ಅವಧಿಗಾಗಿ ಈ ಮನವಿ ಮಾಡಲಾಗುತ್ತಿದ್ದೇವೆ'' ಎಂದು ಕೋರಿದರು.

ಇದಕ್ಕೆ ಆಕ್ಷೇಪ ವ್ಯಕ್ತಪಡಿಸಿದ ಅಡ್ವೋಕೇಟ್‌ ಜನರಲ್‌ ಶಶಿಕಿರಣ್‌ ಶೆಟ್ಟಿ, ''ಆರ್‌ಎಸ್‌ಎಸ್‌ ಈ ಹಿಂದೆ ನಡೆಸಿರುವ ಪಥಸಂಚಲನದಲ್ಲಿ ಭಾಗವಹಿಸುವವರ ಸಂಖ್ಯೆಯನ್ನು ಪರಿಗಣಿಸಿ ತಹಶೀಲ್ದಾರ್‌ ಅವರು ಅನುಮತಿ ನೀಡಿದ್ದಾರೆ'' ಎಂದರು.

ವಾದ ಆಲಿಸಿದ ಪೀಠ, ತಹಶೀಲ್ದಾರ್​ ಅವರು ಅನುಮತಿ ನೀಡಿರುವ ಷರತ್ತಿನಲ್ಲಿ ಬದಲಾವಣೆ ಮಾಡಿ ಪಥಸಂಚಲನದಲ್ಲಿ 50 ಮಂದಿ ವಾದ್ಯಗಾರರ ತಂಡ ಭಾಗವಹಿಸಲು ಅವಕಾಶ ಕಲ್ಪಿಸಿ ಅನುಮತಿ ನೀಡುವುದಾಗಿ ಆದೇಶಿಸಿತು.

ಪ್ರಕರಣದ ಹಿನ್ನೆಲೆ: ಚಿತ್ತಾಪುರದಲ್ಲಿ ಪಥಸಂಚಲನ ನಡೆಸುವುದಕ್ಕೆ ಅನುಮತಿ ಕೋರಿ ಆರ್​ಎಸ್ಎಸ್ ಪಥಸಂಚಲನದ ಸಂಚಾಲಕ ಅಶೋಕ್ ಪಾಟೀಲ್ ಜಿಲ್ಲಾಡಳಿತಕ್ಕೆ ಮನವಿ ಸಲ್ಲಿಸಿದ್ದರು. ಆದರೆ, ಜಿಲ್ಲಾಡಳಿತ ಈ ಮನವಿಯನ್ನು ತಿರಸ್ಕರಿಸಿತ್ತು. ಇದನ್ನು ಪ್ರಶ್ನಿಸಿ ಅವರು ಹೈಕೋರ್ಟ್​ಗೆ ಅರ್ಜಿ ಸಲ್ಲಿಸಿದ್ದರು.

ಇದನ್ನೂ ಓದಿ: ಪೋಕ್ಸೋ ಪ್ರಕರಣ: ಬಿಎಸ್​ವೈ ವಿರುದ್ಧ ಕಾಗ್ನಿಜೆನ್ಸ್ ತೆಗೆದುಕೊಂಡಿದ್ದ ಕ್ರಮ ಎತ್ತಿಹಿಡಿದ ಹೈಕೋರ್ಟ್