ETV Bharat / state

ಬೆಂಗಳೂರಿನ ಹಲವೆಡೆ ವರುಣನ ಅಬ್ಬರ, ಜಡಿಮಳೆಯಲ್ಲಿ ವಿಕಲಚೇತನ ವ್ಯಕ್ತಿಯನ್ನ ಹೆಗಲ ಮೇಲೆ ಹೊತ್ತು ರಸ್ತೆ ದಾಟಿಸಿದ ಕಾನ್ಸ್‌ಟೇಬಲ್:ಎಲ್ಲೆಡೆ ಪ್ರಶಂಸೆ

ಮಳೆಯಿಂದ ಹಲವೆಡೆ ಅಂಡರ್‌ಪಾಸ್‌ಗಳಲ್ಲಿ ವಾಹನಗಳ ಸಂಚಾರವನ್ನ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಇದೇ ವೇಳೆ, ಕರ್ತವ್ಯದ ಜೊತೆಗೆ ಮಾನವೀಯತೆ ಮೆರೆದ ಟ್ರಾಫಿಕ್ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

heavy-rains-in-many-parts-of-bengaluru
ಬೆಂಗಳೂರಿನ ಹಲವೆಡೆ ವರುಣನ ಅಬ್ಬರ (IANS/File)
author img

By ETV Bharat Karnataka Team

Published : May 29, 2026 at 9:46 PM IST

2 Min Read
Choose ETV Bharat

ಬೆಂಗಳೂರು: ನಗರದಲ್ಲಿ ಸಂಜೆ ವೇಳೆಗೆ ವರುಣ ಅಬ್ಬರಿಸಿದ್ದಾನೆ. ಮೆಜೆಸ್ಟಿಕ್, ಕಾರ್ಪೋರೇಷನ್, ಕೆ.ಆರ್.ಮಾರ್ಕೆಟ್, ಶಿವಾನಂದ ಸರ್ಕಲ್, ಜಯನಗರ ಹಾಗೂ ಮಲ್ಲೇಶ್ವರಂ, ರಾಜಾಜಿನಗರ, ಮೈಸೂರು ರಸ್ತೆ, ಸೇರಿದಂತೆ ಹಲವೆಡೆ ಅರ್ಧ ಗಂಟೆಗೂ ಹೆಚ್ಚು ಕಾಲ ಮಳೆ ಆರ್ಭಟಿಸಿದೆ. ಮಳೆಯಿಂದ ಹಲವೆಡೆ ರಸ್ತೆಗಳು ಜಲಾವೃತಗೊಂಡಿದ್ದು, ಕೆಲಸ ಮುಗಿಸಿ ಮನೆಗೆ ಮರಳುತ್ತಿದ್ದವರು, ಸಾರ್ವಜನಿಕರು ಪರದಾಡುವಂತಾಗಿತ್ತು.

ಮಳೆಯಿಂದ ಹಲವೆಡೆ ಅಂಡರ್‌ಪಾಸ್‌ಗಳಲ್ಲಿ ವಾಹನಗಳ ಸಂಚಾರವನ್ನ ತಾತ್ಕಾಲಿಕವಾಗಿ ನಿರ್ಬಂಧಿಸಲಾಗಿದೆ. ಇದೇ ವೇಳೆ, ಕರ್ತವ್ಯದ ಜೊತೆಗೆ ಮಾನವೀಯತೆ ಮೆರೆದ ಟ್ರಾಫಿಕ್ ಪೊಲೀಸ್ ಕಾನ್ಸ್‌ಟೇಬಲ್ ಒಬ್ಬರ ಕಾರ್ಯಕ್ಕೆ ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗಿದೆ.

​ಬೆಂಗಳೂರಿನ ಸ್ಯಾಟಲೈಟ್ ಬಸ್ ನಿಲ್ದಾಣದ ಬಳಿ ಸುರಿದ ಜಡಿಮಳೆಯಿಂದ ರಸ್ತೆ ಸಂಪೂರ್ಣವಾಗಿ ಜಲಾವೃತಗೊಂಡಿತ್ತು. ವಾಹನಗಳ ದಟ್ಟಣೆ ಮತ್ತು ಮಳೆಯ ನಡುವೆ ವಿಕಲಚೇತನರೊಬ್ಬರು ರಸ್ತೆ ದಾಟಲಾಗದೇ ಪರದಾಡುತ್ತಿದ್ದರು. ಈ ವೇಳೆ, ಸ್ಥಳದಲ್ಲಿ ಸಂಚಾರ ನಿರ್ವಹಣೆ ಮಾಡುತ್ತಿದ್ದ ಬ್ಯಾಟರಾಯನಪುರ ಸಂಚಾರಿ ಪೊಲೀಸ್ ಠಾಣೆಯ ಕಾನ್ಸ್‌ಟೇಬಲ್ ಅನಿಲ್, ವಿಕಲಚೇತನ ವ್ಯಕ್ತಿಯನ್ನ ​ಹೆಗಲ ಮೇಲೆ ಹೊತ್ತು ರಸ್ತೆ ದಾಟಿಸಿದ್ದಾರೆ. ಮಳೆ ಹಾಗೂ ಟ್ರಾಫಿಕ್ ಸಮಸ್ಯೆಯ ನಡುವೆಯೇ ವಿಕಲಚೇತನ ವ್ಯಕ್ತಿಯ ನೆರವಿಗೆ ಧಾವಿಸಿದ ಅನಿಲ್ ಅವರ ಕಾರ್ಯ ಸಾರ್ವಜನಿಕರ ಹೃದಯ ಗೆದ್ದಿದೆ.
​ಅನಿಲ್ ಅವರ ಈ ಹೃದಯವಂತಿಕೆಯ ಕೆಲಸಕ್ಕೆ ಸಾರ್ವಜನಿಕರಿಂದ ಹಾಗೂ ಪೊಲೀಸ್ ಇಲಾಖೆಯ ಹಿರಿಯ ಅಧಿಕಾರಿಗಳಿಂದ ಪ್ರಶಂಸೆ ವ್ಯಕ್ತವಾಗುತ್ತಿದೆ.

ಇದನ್ನೂ ಓದಿ:ಪ್ರಯಾಣಿಕರೇ ಗಮನಿಸಿ!: ನಮ್ಮ ಮೆಟ್ರೋ ನೇರಳೆ ಮಾರ್ಗದಲ್ಲಿ ಭಾನುವಾರ ಸಂಚಾರ ವ್ಯತ್ಯಯ

ಭಾರಿ ಮಳೆ ಮುನ್ಸೂಚನೆ ನೀಡಿದ ಹವಾಮಾನ ಇಲಾಖೆ: ಕರ್ನಾಟಕ ಸೇರಿದಂತೆ ದೇಶದ ಹಲವು ಭಾಗದಲ್ಲಿ ಜೂನ್​ 3ರ ವರೆಗೆ ಗುಡುಗು-ಮಿಂಚಿನಿಂದ ಕೂಡಿದ ಭಾರಿ ಮಳೆ ಸುರಿಯುವ ಸಾಧ್ಯತೆ ಇದೆ ಎಂದು ಭಾರತೀಯ ಹವಾಮಾನ ಇಲಾಖೆ ಶುಕ್ರವಾರ ಎಚ್ಚರಿಕೆ ನೀಡಿದೆ. ದೇಶದ ದಕ್ಷಿಣ, ಪೂರ್ವ, ಉತ್ತರ ಮತ್ತು ಪಶ್ಚಿಮ ಭಾಗದಲ್ಲಿ ಮಳೆಯಾಗಲಿದೆ.

ಐಎಂಡಿ ಪ್ರಕಾರ ಬಿಹಾರ, ಪಂಜಾಬ್​, ರಾಜಸ್ಥಾನ ಮತ್ತು ಉತ್ತರ ಪ್ರದೇಶದಲ್ಲಿ ಗಾಳಿ ಗಂಟೆಗೆ 80 ಕಿ.ಮೀ ವೇಗದಲ್ಲಿ ಬೀಸಲಿದ್ದು, ಗುಡುಗಿನಿಂದ ಕೂಡಿದ ಮಳೆ ಬೀಳಲಿದೆ. ಅದೇ ರೀತಿ ಛತ್ತೀಸ್​ಗಢ, ಪಶ್ಚಿಮ ಬಂಗಾಳ, ಜಮ್ಮು ಮತ್ತು ಕಾಶ್ಮೀರ, ಲಡಾಖ್​ ಮತ್ತು ಕರ್ನಾಟಕದಲ್ಲೂ ಭಾರಿ ಮಳೆ ನಿರೀಕ್ಷೆ ಇದೆ.

ಅಂಡಮಾನ್​ ಮತ್ತು ನಿಕೋಬಾರ್​ ದ್ವೀಪ, ಕೇರಳ, ಒಡಿಶಾ, ಬಿಹಾರ, ಪಂಜಾಬಾ​, ತಮಿಳುನಾಡು, ಪುದುಚೇರಿ, ಉತ್ತರಾಖಂಡ ಮತ್ತು ಉತ್ತರ ಪ್ರದೇಶದ ಪಶ್ಚಿಮ ಭಾಗಗಳಲ್ಲಿ ಹೆಚ್ಚು ಮಳೆಯಾಗುವ ಕುರಿತು ಇಲಾಖೆ ತಿಳಿಸಿದೆ.

ಶಾಖದ ಅಲೆ ಎಚ್ಚರಿಕೆ: ಮತ್ತೊಂದೆಡೆ ಆಂಧ್ರ ಪ್ರದೇಶ, ಮಧ್ಯ ಪ್ರದೇಶ, ತೆಲಂಗಾಣ, ಪಶ್ಚಿಮ ರಾಜಸ್ಥಾನ ಮತ್ತು ವಿದರ್ಭದ ಹಲವೆಡೆ ಶಾಖದ ಅಲೆ ಮುಂದುವರೆಯಲಿದೆ. ಆಂಧ್ರದ ರಾಯಲಸೀಮೆ ಪ್ರದೇಶ, ತಮಿಳುನಾಡು, ಪುದುಚೇರಿ ಮತ್ತು ಕಾರೈಕಲ್​ನಲ್ಲಿ ಬಿಸಿ ಮತ್ತು ಆರ್ದ್ರ ಪರಿಸ್ಥಿತಿ ಇರಲಿದೆ ಎಂದು ಮುನ್ನೆಚ್ಚರಿಕೆ ನೀಡಿದೆ.