ಅಂಬೋಲಿ ಘಾಟ್‌ನಲ್ಲಿ ಗುಡ್ಡ ಕುಸಿತ, ರಸ್ತೆಗುರುಳಿದ ಬಂಡೆಗಲ್ಲುಗಳು: ಸ್ವಲ್ಪದರಲ್ಲೇ ಬಸ್, ಕಾರು ಬಚಾವ್
ಧಾರಾಕಾರ ಮಳೆಯಿಂದಾಗಿ ಅಂಬೋಲಿ ಘಾಟ್‌ನಲ್ಲಿ ಗುಡ್ಡ ಕುಸಿತಗೊಂಡಿದ್ದು, ಬೃಹತ್ ಬಂಡೆಗಲ್ಲುಗಳು ಹೆದ್ದಾರಿಗೆ ಉರುಳಿ ಬಿದ್ದಿವೆ.

Published : July 8, 2026 at 8:58 AM IST
ಬೆಳಗಾವಿ: ಮಹಾರಾಷ್ಟ್ರದ ಪಶ್ಚಿಮ ಘಟ್ಟ ಪ್ರದೇಶದಲ್ಲಿ ಭಾರೀ ಮಳೆ ಆಗುತ್ತಿರುವ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಗುಡ್ಡ ಕುಸಿತ ಆಗಿರುವ ಘಟನೆ ಅಂಬೋಲಿ ಘಾಟ್ ಬಳಿ ಸಂಭವಿಸಿದೆ.
ಬೆಳಗಾವಿ-ವೆಂಗುರ್ಲಾ ರಾಜ್ಯ ಹೆದ್ದಾರಿ ಮೇಲೆಯೇ ಬಂಡೆಗಲ್ಲುಗಳು ಉರುಳಿ ಬಿದ್ದಿವೆ. ಮಹಾರಾಷ್ಟ್ರ ಸಾರಿಗೆ ಬಸ್, ಕಾರು ದಾಟಿ ಹೋಗುವ ವೇಳೆಯಲ್ಲಿಯೇ ರಸ್ತೆಗೆ ಬೃಹತ್ ಬಂಡೆಗಲ್ಲುಗಳು ಬಿದ್ದಿದ್ದು, ಕ್ಷಣಾರ್ಧದಲ್ಲಿ ಬಸ್ ಮತ್ತು ಕಾರು ಬಚಾವ್ ಆಗಿವೆ. ಇದರಿಂದ ಭಾರಿ ಅನಾಹುತ ತಪ್ಪಿದಂತಾಗಿದೆ.
ಸ್ಥಳಕ್ಕೆ ತಕ್ಷಣವೇ ಸ್ಥಳೀಯ ಪೊಲೀಸರು ಧಾವಿಸಿ ಪರಿಶೀಲನೆ ನಡೆಸಿದರು. ಬಳಿಕ ಕೆಲ ಗಂಟೆಗಳ ಕಾಲ ವಾಹನ ಸಂಚಾರ ಸಂಪೂರ್ಣ ಸ್ಥಗಿತವಾಗಿತ್ತು. ಜೆಸಿಬಿಗಳ ಮೂಲಕ ಬಂಡೆಗಲ್ಲು ತೆರವು ಕಾರ್ಯಾಚರಣೆ ನಡೆಸಲಾಯಿತು.
ಸದ್ಯ ಪಶ್ಚಿಮ ಘಟ್ಟದಲ್ಲಿ ಮಳೆಯ ಅಬ್ಬರಕ್ಕೆ ಭೂಕುಸಿತ ಭೀತಿ ಸಂಭವಿಸಿದೆ. ಹೀಗಾಗಿ, ಅಂಬೋಲಿ ಘಾಟ್‌ನಲ್ಲಿ ಹೈ ಅಲರ್ಟ್ ಘೋಷಿಸಲಾಗಿದ್ದು, ಎಚ್ಚರಿಕೆಯಿಂದ ಸಂಚರಿಸುವಂತೆ ಸಾರ್ವಜನಿಕರಿಗೆ ಮಹಾರಾಷ್ಟ್ರ ಸರ್ಕಾರ ಸೂಚನೆ ನೀಡಿದೆ.
ನಿತ್ಯ ಸಾವಿರಾರು ಪ್ರವಾಸಿಗರು ಅಂಬೋಲಿ ಫಾಲ್ಸ್ ಕಣ್ತುಂಬಿಕೊಳ್ಳಲು ತೆರಳುತ್ತಿದ್ದರು. ಆದರೆ, ಈಗ ಗುಡ್ಡ ಕುಸಿತ ಆಗಿರುವುದು ಪ್ರವಾಸಿಗರಲ್ಲಿ ಆತಂಕ ಹುಟ್ಟಿಸಿದೆ.
ಇದನ್ನೂ ಓದಿ: ಭಾರಿ ಮಳೆ: ಇಂದು ದಕ್ಷಿಣ ಕನ್ನಡ ಜಿಲ್ಲಾದ್ಯಂತ, ಶಿವಮೊಗ್ಗದ 3 ತಾಲೂಕಿನ ಶಾಲಾ-ಕಾಲೇಜುಗಳಿಗೆ ರಜೆ ಘೋಷಣೆ

