ಬಳ್ಳಾರಿಯಲ್ಲಿ ವರುಣನ ಅಬ್ಬರ: ಧರೆಗುರುಳಿದ ಬೃಹತ್ ಮರ, ವಾಹನಗಳು ಜಖಂ!
ಬಳ್ಳಾರಿಯಲ್ಲಿ ಭಾರಿ ಮಳೆಯಾಗಿದ್ದು, ಬೃಹತ್ ಮರವೊಂದು ಧರೆಗುರುಳಿದ ಪರಿಣಾಮ ವಾಹನಗಳು ಜಖಂಗೊಂಡಿವೆ.

Published : June 2, 2026 at 9:20 PM IST
ಬಳ್ಳಾರಿ: ನಗರದಲ್ಲಿ ಮಂಗಳವಾರ ಸಂಜೆ ಸುರಿದ ಭಾರಿ ಮಳೆ ಹಾಗೂ ಬಿರುಗಾಳಿಯ ಅಬ್ಬರಕ್ಕೆ ಸಾರ್ವಜನಿಕರು ತತ್ತರಿಸಿದ್ದಾರೆ. ಬಿರುಗಾಳಿಯ ರಭಸಕ್ಕೆ ಹೊಸ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿದ್ದ ಬೃಹತ್ ಮರವೊಂದು ಬೇರು ಸಮೇತ ಧರೆಗುರುಳಿದ್ದು, ಮರದ ಕೆಳಗೆ ನಿಲ್ಲಿಸಲಾಗಿದ್ದ ಆಟೋ ಹಾಗೂ ಹಲವು ಬೈಕ್‌ಗಳು ಜಖಂಗೊಂಡಿವೆ.
ಮರ ಉರುಳಿಬಿದ್ದ ಪರಿಣಾಮ ವಾಹನಗಳು ಜಖಂಗೊಂಡಿದ್ದು, ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ ಎಂದು ಅಧಿಕಾರಿಗಳು ಖಚಿತಪಡಿಸಿದ್ದಾರೆ. ಘಟನೆಯಿಂದಾಗಿ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ಕೆಲಕಾಲ ತೀವ್ರ ಆತಂಕ ಹಾಗೂ ಗೊಂದಲದ ವಾತಾವರಣ ನಿರ್ಮಾಣವಾಗಿತ್ತು.
ಹದ್ದಿನಗುಂಡು ರಸ್ತೆ, ವೆಂಕಟೇಶ್ವರ ನಗರ, ಸತ್ಯನಾರಾಯಣಪೇಟೆ, ಗೊಲ್ಲನರಸಪ್ಪ ಕಾಲೋನಿ, ಗಾಂಧಿನಗರ, ಕೌಲ್ ಬಜಾರ್ ಸೇರಿದಂತೆ ವಿವಿಧ ಪ್ರದೇಶಗಳಲ್ಲಿ ಹಾಗೂ ರಸ್ತೆಗಳಲ್ಲಿ ಗಿಡಮರಗಳು ಉರುಳಿ ಬಿದ್ದ ಬಗ್ಗೆ ವರದಿಯಾಗಿದೆ. ಹೊಸ ಡಿಸಿ ಕಚೇರಿ ಘಟನೆಯ ಬಗ್ಗೆ ಮಾಹಿತಿ ತಿಳಿಯುತ್ತಿದ್ದಂತೆ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ ಮರದ ಕೊಂಬೆಗಳು ಹಾಗೂ ದಿಮ್ಮಿಗಳನ್ನು ತೆರವುಗೊಳಿಸಿದರು. ಇದರಿಂದ ಸಂಚಾರಕ್ಕೆ ಉಂಟಾಗಿದ್ದ ಅಡಚಣೆ ನಿವಾರಣೆಯಾಯಿತು. ಇಂದು ಸಂಜೆ ಬಳ್ಳಾರಿ ನಗರದಲ್ಲಿ ಸುರಿದ ಉತ್ತಮ ಮಳೆಯೊಂದಿಗೆ ಬಿರುಗಾಳಿ ಬೀಸಿದ ಪರಿಣಾಮ ಹಲವೆಡೆ ಮರಗಳ ಕೊಂಬೆಗಳು ಮುರಿದು ಬಿದ್ದಿರುವ ಬಗ್ಗೆ ವರದಿಯಾಗಿದೆ. ಕೆಲವು ಪ್ರದೇಶಗಳಲ್ಲಿ ರಸ್ತೆಗಳ ಮೇಲೆ ನೀರು ನಿಂತು ವಾಹನ ಸವಾರರು ಪರದಾಡಿದರು.
ಗ್ರೀನ್ ಮ್ಯಾಟ್ ಧರೆಗೆ: ಸಂಗಮ್ ಸರ್ಕಲ್ ಬಳಿ ಇರುವ ಗ್ರೀನ್ ಮ್ಯಾಟ್ ಭಾರಿ ಮಳೆ ಗಾಳಿಗೆ ಧರೆಗುರುಳಿದೆ. ಅದೃಷ್ಟವಶಾತ್ ಯಾವುದೇ ಪ್ರಾಣಾಪಾಯ ಸಂಭವಿಸಿಲ್ಲ.
ಮಳೆಗಾಲ ಆರಂಭವಾಗಿರುವ ಹಿನ್ನೆಲೆಯಲ್ಲಿ ನಗರದ ನಾಗರಿಕರು ಪಾಲಿಕೆ ವಿರುದ್ಧ ಅಸಮಾಧಾನ ಹೊರಹಾಕಿದ್ದು, ಹಳೆಯ ಹಾಗೂ ಅಪಾಯಕಾರಿಯಾದ ಮರಗಳ ಸ್ಥಿತಿಯನ್ನು ಅಧಿಕಾರಿಗಳು ತಕ್ಷಣ ಪರಿಶೀಲಿಸಬೇಕು. ಭಾರಿ ಗಾಳಿ-ಮಳೆಗೆ ಮುರಿದು ಬೀಳುವ ಸ್ಥಿತಿಯಲ್ಲಿರುವ ಒಣಗಿದ ಕೊಂಬೆಗಳನ್ನು ಮುಂಜಾಗ್ರತಾ ಕ್ರಮವಾಗಿ ಕತ್ತರಿಸಬೇಕು. ಮಳೆಗಾಲದ ಅವಧಿಯಲ್ಲಿ ಯಾವುದೇ ಅನಾಹುತ ಸಂಭವಿಸದಂತೆ ನಗರ ಪಾಲಿಕೆ ಅಧಿಕಾರಿಗಳು ಯುದ್ಧೋಪಾದಿಯಲ್ಲಿ ಕೆಲಸ ಮಾಡಬೇಕು ಎಂದು ಪಾಲಿಕೆ ಅಧಿಕಾರಿಗಳಿಗೆ ಆಗ್ರಹಿಸಿದ್ದಾರೆ.
ರಸ್ತೆಗಳ ಮೇಲೆ ರಸ್ತೆಯಲ್ಲಿ ನಿಂತ ನೀರು, ವಾಹನ ಸವಾರರು ಹೈರಾಣ: ಡಿಸಿ ಕಚೇರಿ ಮಾತ್ರವಲ್ಲದೆ ನಗರದ ವಿವಿಧ ಭಾಗಗಳಲ್ಲಿಯೂ ಮಂಗಳವಾರ ಸಂಜೆ ಉತ್ತಮ ಮಳೆಯಾಗಿದೆ. ಆದರೆ, ಸಮರ್ಪಕ ರಾಜಕಾಲುವೆ ವ್ಯವಸ್ಥೆ ಇಲ್ಲದ ಕಾರಣ ಕೆಲವೆಡೆ ರಸ್ತೆಗಳ ಮೇಲೆ ಮೊಣಕಾಲಿನವರೆಗೆ ನೀರು ನಿಂತು ವಾಹನ ಸವಾರರು ಮತ್ತು ಪಾದಚಾರಿಗಳು ತೀವ್ರ ತೊಂದರೆ ಅನುಭವಿಸಿದರು.
ಇದನ್ನೂ ಓದಿ: ಬಿರುಗಾಳಿ ಮಳೆಗೆ ಲಾರಿಯ ಮೇಲೆ ಉರುಳಿ ಬಿದ್ದ ಬೃಹತ್ ಟವರ್: ವಿಡಿಯೋ - HUGE TOWER FALLS ON TRUCK

