ETV Bharat / state

ಬಳ್ಳಾರಿಯಲ್ಲಿ ಕಾಂಗ್ರೆಸ್​ ಕಾರ್ಯಕರ್ತನ ಮೃತದೇಹ ಎರಡು ಬಾರಿ ಮರಣೋತ್ತರ ಪರೀಕ್ಷೆ: ಹೆಚ್.ಡಿ. ಕುಮಾರಸ್ವಾಮಿ ಆರೋಪ

ಜನವೇ ನಿಮ್ಮನ್ನು ಸರ್ವನಾಶ ಮಾಡುತ್ತಿದ್ದಾರೆ. ಈ ರಾಜ್ಯದಲ್ಲಿ ಕಾಂಗ್ರೆಸ್​ ಕೊನೆ ಆಡಳಿತ ಇದು, ಕೊನೆ ಸಿಎಂ ಇವರು ಎಂದು ಹೆಚ್.ಡಿ. ಕುಮಾರಸ್ವಾಮಿ ವ್ಯಂಗ್ಯವಾಡಿದ್ದಾರೆ.

BENGALURU  KARNATAKA CONGRESS GOVERNMENT  ಹೆಚ್ ಡಿ ಕುಮಾರಸ್ವಾಮಿ  ಬಳ್ಳಾರಿ ಗಲಭೆ
ಹೆಚ್.ಡಿ. ಕುಮಾರಸ್ವಾಮಿ (ETV Bharat)
author img

By ETV Bharat Karnataka Team

Published : January 5, 2026 at 3:41 PM IST

6 Min Read
Choose ETV Bharat

ಬೆಂಗಳೂರು: ಬಳ್ಳಾರಿಯಲ್ಲಿ ನಡೆದ ಗಲಾಟೆ ವೇಳೆ ಮೃತಪಟ್ಟ ಕಾಂಗ್ರೆಸ್ ಕಾರ್ಯಕರ್ತನ ಮೃತದೇಹದ ಮರಣೋತ್ತರ ಪರೀಕ್ಷೆಯನ್ನು ಎರಡು ಬಾರಿ ನಡೆಸಲಾಗಿದೆ ಎಂದು ಕೇಂದ್ರ ಸಚಿವ ಹೆಚ್.ಡಿ.ಕುಮಾರಸ್ವಾಮಿ ಗಂಭೀರ ಆರೋಪ ಮಾಡಿದ್ದಾರೆ.

ಜೆಪಿ ಭವನದಲ್ಲಿ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, "ಬಳ್ಳಾರಿ ಗಲಾಟೆ ಸಂಬಂಧ ಎಸ್​ಪಿಯನ್ನು ಸಸ್ಪೆಂಡ್ ಮಾಡಿದರು. ಐಜಿ, ಅಡಿಷನಲ್​​​​​ ಎಸ್ಪಿ ಎಲ್ಲರೂ ಸ್ಪಾಟಲ್ಲೇ ಇದ್ದರಲ್ವಾ. ಎಸ್ಪಿಗೆ, ಒಂದು ಮೀಟಿಂಗ್ ಮಾಡೋಕೆ ಟೈಂ ಆಗಿಲ್ಲ. ಹೆಣ್ಣುಮಗಳು ಐಜಿ ಇದ್ರಲ್ಲ, ಅವರಿಗೆ ಪವರ್ ಇರಲಿಲ್ವಾ?. ಅವರ ಮೇಲೆ ಏಕೆ ಕ್ರಮ ಕೈಗೊಳ್ಳಲಿಲ್ಲ. ಮೊದಲ ಶವಪರೀಕ್ಷೇಯಲ್ಲಿ ಏನಿಲ್ಲ ಸಣ್ಣ ತುಂಡಿತ್ತು ಎನ್ನುತ್ತಾರೆ. ಜನಾರ್ದನ ರೆಡ್ಡಿ ಮೇಲಿನ ದೂರು ಸತ್ಯ ಮಾಡಲು ಎರಡನೇ ಬಾರಿ ಶವಪರೀಕ್ಷೆ ಮಾಡಿದರು. ಎರಡನೇ ಬಾರಿ ಶವಪರೀಕ್ಷೆಯಲ್ಲಿ ದೇಹದಲ್ಲಿ ಗುಂಡು ಸಿಕ್ತಂತೆ. ಇವರು ತನಿಖೆ ಮಾಡಿ ನ್ಯಾಯ ಕೊಡ್ತಾರಾ?" ಎಂದು ವಾಗ್ದಾಳಿ ನಡೆಸಿದರು‌.

"ಬೆಳಗಾವಿಯಲ್ಲಿ ಶಾಸಕರ ಮಗ ಯಾರದ್ದೊ ತಲೆ ಒಡೆದ. ಭದ್ರಾವತಿಯಲ್ಲಿ ಯಾವುದೊ ಮಹಿಳಾ ಅಧಿಕಾರಿಗೆ ಹೆದರಿಸಿದ್ರು. ಇದಕ್ಕೇನಾ ನಿಮಗೆ ಅಧಿಕಾರ ಕೊಟ್ಟಿದ್ದದು. ಅಂದು ಸಿದ್ದರಾಮಯ್ಯ ವಿಧಾನಸೌಧದಲ್ಲಿ ಭುಜ ತಟ್ಟಿ, ಪಾದಯಾತ್ರೆಗೆ ಹೋದರಲ್ಲ. ಈಗ ಅದೇ ಜನವೇ ನಿಮ್ಮನ್ನು ಸರ್ವನಾಶ ಮಾಡುತ್ತಿದ್ದಾರೆ. ಅಧಿಕಾರಿಗಳನ್ನು ಗುಲಾಮರನ್ನಾಗಿಸಿದ್ದೀರ. 2028ಕ್ಕೂ ನಾವೇ ಎನ್ನುತ್ತಿದ್ದಾರೆ. ಬಹಳ ದೊಡ್ಡ ಸಾಧನೆ ಮಾಡಿದ್ದೀರಾ. ಈ ರಾಜ್ಯದಲ್ಲಿ ಕಾಂಗ್ರೆಸ್​ ಕೊನೆ ಆಡಳಿತ ಇದು, ಕೊನೆ ಸಿಎಂ ಇವರು".

"ರಾಜ್ಯದಲ್ಲಿ ಕಾಂಗ್ರೆಸ್​ ಸರ್ಕಾರ ಅಧಿಕಾರಕ್ಕೆ ಬಂದು ನಾಲ್ಕು ತಿಂಗಳಲ್ಲಿ ಮೂರು ವರ್ಷ ಪೂರೈಸುತ್ತಿದೆ. ಈ ಸರ್ಕಾರ ಹಿಂದೆ ಇದ್ದಂತಹ ಸರ್ಕಾರದ ವಿರುದ್ಧ ಹಲವಾರು ರೀತಿಯ ಆರೋಪಗಳನ್ನು ಜನತೆ ಮುಂದೆ ಇಟ್ಟು, ಸಂಪೂರ್ಣ ಬಹುಮತದ ಸರ್ಕಾರ ಕೊಟ್ಟಿದ್ದಾರೆ ಜನ. ಜನಪರ ಕೆಲಸ ಮಾಡಿ ಎಂದು ಅಧಿಕಾರ ಕೊಟ್ಟಿದ್ದಾರೆ. ಹೊಸ ವರ್ಷದ ಆಚರಣೆ ಅತ್ಯಂತ ಉತ್ಸುಕತೆಯಿಂದ ಬರ ಮಾಡಿಕೊಂಡಿದ್ದಾರೆ ನಾಡಿನ ಜನ. 1ನೇ ತಾರೀಖಿಂದ ಬಳ್ಳಾರಿ ಜಿಲ್ಲೆಯಲ್ಲಿ ಘಟನೆ ನಡೆದಿದೆ. ರಾಜ್ಯದ ಸಿಎಂ, ಡಿಸಿಎಂ ಗೃಹ ಸಚಿವರು ಹಲವಾರು ಮಂತ್ರಿಗಳು ಹೇಳಿಕೆಗಳನ್ನು ಕೊಟ್ಟಿದ್ದಾರೆ. ನಮ್ಮ ಮೈತ್ರಿ ಪಕ್ಷ ಬಿಜೆಪಿಯವರ ಹೇಳಿಕೆಗಳನ್ನು ನೋಡಿದ್ದೇನೆ. ಸ್ಥಳ ಪರಿಶೀಲನೆ ಮಾಡಿ ಮಾಹಿತಿ ಸಂಗ್ರಹ ಮಾಡಿ ಮಾಧ್ಯಮಗಳ ಮುಂದೆ ಅವರವರ ಭಾವನೆ ಇಟ್ಟಿದ್ದಾರೆ. ಘಟನೆಗೆ ಕಾರಣ ವಾಲ್ಮೀಕಿ ಪ್ರತಿಮೆ ಅನಾವರಣ ಮಾಡುವುದಾಗಿದೆ‌. ಅದಕ್ಕೆ ಯಾವುದೇ ಅನುಮತಿ ಕೊಟ್ಟಿಲ್ಲ. ಪ್ರತಿಮೆ ಅನಾವರಣ ಮಾಡೋದಕ್ಕೆ ಸುಪ್ರೀಂಕೋರ್ಟ್ ನಿಷೇಧ ಮಾಡಿದೆ. ವಿಶೇಷ ಪ್ರಕರಣ ಎಂದು ಪ್ರತಿಮೆ ಅನಾವರಣ ಮಾಡೋದು ನಡೆಯುತ್ತಿದೆ. ಜ.3 ರಂದು ಪ್ರತಿಮೆ ಅನಾವರಣ ಮಾಡುವ ದಿನಾಂಕ ನಿಗದಿ ಮಾಡಿಕೊಂಡಿದ್ದರು" ಎಂದು ಟೀಕಿಸಿದರು.

"ಗಾಳಿಯಲ್ಲಿ ಗುಂಡು ಹಾರಿಸಿದಾಗ ಯಡವಟ್ಟು ಎಂದು ಸಿಎಂ ಹೇಳಿದ್ದಾರೆ. ಗೃಹ ಸಚಿವರೇ ಯಾವ ತನಿಖೆ ಮಾಡುತ್ತೀರಿ. ಸಿಎಂ ಕೇಳುತ್ತಿದ್ದಾರೆ, ಗುಂಡು ಎಲ್ಲಿಂದ ಬಂತು ಎಂದು. ಸತೀಶ್ ರೆಡ್ಡಿನ ಅರೆಸ್ಟ್ ಮಾಡಿದ್ರಾ?. ಏನು ಘನಂಧಾರಿ ಕೆಲಸ ಮಾಡಿದ್ದಾರೆ ಎಂದು ರಾಜಾತಿಥ್ಯ ಕೊಟ್ಟಿದ್ದಾರೆ. ವಿಷಯ ತಿಳಿದು ಜನಾರ್ದನ ರೆಡ್ಡಿ, ರಾಮುಲುಗೆ ಕಾಲ್ ಮಾಡಿ ಪರಿಶೀಲಿಸೋಕೆ‌ ಹೇಳುತ್ತಾರೆ. ರಾಮುಲು ಕಾರ್ಯಕರ್ತರು ಸ್ಥಳಕ್ಕೆ ಬರುತ್ತಾರೆ. ಪ್ರಾರಂಭಿಕ ಹಂತದಲ್ಲೇ ಲಾಠಿ ಚಾರ್ಜ್ ಮಾಡಿ ಓಡಿಸಿದ್ದರೆ, ಕೈ ಕಾರ್ಯಕರ್ತ ಬಲಿಯಾಗುತ್ತಿದ್ದನಾ?, ಎಲ್ಲ ಸಾಕ್ಷಿ ಮಾಧ್ಯಮದಲ್ಲೇ ಬಂದಿದೆ, ನಾವ್ಯಾರು ತೋರಿಸಬೇಕಿಲ್ಲ. 7-8 ಬಾರಿ ಗುಂಡು ಹಾರಿಸಿದ ಸೌಂಡ್ ಬಂದಿದೆ" ಎಂದರು.

"ಎಷ್ಟು ಬಾರಿ ಶವಪರೀಕ್ಷೆ ಮಾಡಿದ್ದೀರಿ?. ಮೊದಲ ಬಾರಿ ಏನು ವರದಿ ಬಂತು‌. ಎರಡನೇ ಬಾರಿ ಏನ್ ವರದಿ ಕೊಟ್ಟರು. ಎರಡನೇ ಬಾರಿ ಪೋರ್ಸ್ಟ್ ಮಾಟರ್ಮ್​ಗೆ ಯಾರು ಒತ್ತಾಯಿಸಿದ್ದರು?. ಯಾರ ಪರವಾನಗಿ ಪಡೆದು ಎರಡನೇ ಬಾರಿ ಶವಪರೀಕ್ಷೆ ನಡೆಸಿದಿರಿ?. ಸತ್ಯ ಹೇಳಿ. ಸರ್ಕಾರಕ್ಕೆ ಮರ್ಯಾದೆ ಇದೆಯಾ?. ಬೀದಿಯಲ್ಲಿ ಹೋಗೊ ಸಾಮಾನ್ಯನೂ ಹೇಳ್ತಾನೆ ಏನಾಗಿದೆ ಅಂಥ. ಏನಾಗ್ತಿದೆ ರಾಜ್ಯದಲ್ಲಿ, ಇದನ್ನು ಆಡಳಿತ ಎನ್ನುತ್ತೀರಾ?. ಇಬ್ಬರ ಕುರ್ಚಿ ತೆವಲಿಗೆ ಅಧಿಕಾರಿಗಳನ್ನು ಯಾವ ಮಟ್ಟಕ್ಕೆ ಇಳಿಸಿದ್ದೀರಿ. ನೀವು ಅಧಿಕಾರದ ತೀಟೆ ತೀರಿಸ್ಕೊಂಡು ಹೋಗುತ್ತೀರಿ. ಇನ್ನಾದರು ಒಳ್ಳೆಯ ಆಡಳಿತ‌ ಕೊಟ್ರು ಎಂದು ಜ‌ನ ಹೇಳುವ ರೀತಿ ಮಾಡಿ" ಎಂದು ತಿಳಿಸಿದರು.

ನಿಮ್ಮ ದಾಖಲೆ ನಿರ್ಮಾಣಕ್ಕೆ ಮಣ್ಣು ಹೊಯ್ಯಬೇಕು: "ಸಿದ್ದರಾಮಯ್ಯನವರೇ, ಅರಸು ದಾಖಲೆ ಮುರಿದು ಹೆಚ್ಚಿನ ಅವಧಿ ಸಿಎಂ ಆಗಿದ್ದೀರಾ. ಈ ದಾಖಲೆ ನಿರ್ಮಾಣಕ್ಕೆ ಮಣ್ಣು ಹೊಯ್ಯಬೇಕು. ನಿಮ್ಮ ಆಡಳಿತ ವೈಖರಿಯನ್ನು ಮುಂದೆ ಯಾರಾದರು ಬರೀತಾರೆ. ಎಲ್ಲ ಮಾಹಿತಿ ಪಡೆದೇ ಇಂದು ಮಾತಾಡ್ತಿದ್ದೇನೆ. ಜ.1ನೇ ತಾರೀಖು ಜನಾರ್ದನ ರೆಡ್ಡಿ ಮನೆ ವ್ಯಾಪ್ತಿಯಲ್ಲಿ ಬ್ಯಾನರ್ ಕಟ್ಟಿದರು. ಮುನ್ಸಿಪಲ್ ಪರ್ಮಿಷನ್ ತಗೊಂಡಿದ್ರಾ?. ಬ್ಯಾನರ್ ತೆಗೆದು ಪೊಲಿಸರು ಬುದ್ದಿ ಹೇಳಿ ಕಳುಹಿಸ್ತಾರೆ. ಜನಾರ್ದನ ರೆಡ್ಡಿ ಗಂಗಾವತಿಗೆ ಹೋದ ಮೇಲೆ ಸತೀಶ್ ರೆಡ್ಡಿ ತಂಡ ಅಲ್ಲಿಗೆ ಹೋಗತ್ತದೆ. ಮತ್ತೆ ಬ್ಯಾನರ್ ಹಾಕಿಸ್ತಾರೆ. ಈ ರೀತಿ ಮನೆ ಮುಂದೆ ಹೋಗಿ ಡಿಸ್ಟರ್ಬ್ ಮಾಡೋದು ಟ್ರೆಸ್ ಪಾಸ್ ಅಲ್ವಾ?. ಪೊಲೀಸ್​ ಇಲಾಖೆ, ಸರ್ಕಾರ ಸತ್ತೋಗಿದ್ಯಾ, ಗೃಹ ಸಚಿವರೆ?. ಅನುಮತಿ ಇಲ್ಲದಿದ್ದರೆ ಯಾರು ಕಾರ್ಯಕ್ರಮ ಮಾಡಲು ಹೋದರು".

"ಇಂಥ ಸಂದರ್ಭದಲ್ಲಿ ಬ್ಯಾನರ್ ಕಟ್ಟುವುದು ಪ್ರತಿಷ್ಠೆಯಾಗಿ, ಕಾಂಗ್ರೆಸ್ ಕಾರ್ಯಕರ್ತನ ಹತ್ಯೆಯಾಗಿದೆ. ಎಸ್​ಪಿ ಸೂಸೈಡ್​ ಏನಿಲ್ಲ, ಡಿಪ್ರೆಶನ್ ಎಂದು ಗೃಹ ಸಚಿವರು ಹೇಳುತ್ತಾರೆ. ಮುಂದೆ ಏನು ಮಾಡಿಕೊಂಡ ಅಂತ ಹೇಳ ಬೇಕಲ್ಲ. ತುಮಕೂರು ಫಾರ್ಮ್ ಹೌಸ್​ಗೆ ಎಸ್ಪಿನ ಯಾಕೆ ಕಳಿಸಿದ್ರಿ. ದುರ್ಗಮ್ಮನ ದಯೆಯಿಂದ ಪವನ್​ ನೆಜ್ಜೂರ್ ಉಳಿದಿದ್ದಾರೆ. ಸಮಾಜಗಳನ್ನು ಒಡೆದವರು, ಅರಸುಗೆ ಹೋಲಿಕೆ‌ ಮಾಡ್ಕೊಳ್ತಿರಾ?. ಸತ್ಯಶೋಧನಾ ಸಮಿತಿ ಅಂತೆ?. ಇವರೆಲ್ಲ ದೇವಲೋಕದಿಂದ ಇಳಿದು ಬಂದಿದ್ದಾರಾ?. ಬಳ್ಳಾರಿಯನ್ನು ಶಾಂತಿಯ ತೋಟ ಮಾಡಿದ್ದಾರೆ ಎಂದು ಸರ್ಟಿಫಿಕೇಟ್ ಕೊಡ್ತಾರಾ?. ಮತ್ತೆ ಯಾವ ಸಿಐಡಿ ತನಿಖೆ ಮಾಡ್ತೀರಿ" ಎಂದು ವಾಗ್ದಾಳಿ ನಡೆಸಿದರು.

ಅಹಿಂದ ಮಹಾನ್ ರಕ್ಷಕರು, ಕುರ್ಚಿ ಉಳಿಸಲು ಅಷ್ಟೇ: "ಸಿದ್ದರಾಮಯ್ಯನವರೇ, ಅರಸು ದಾಖಲೆ‌ ಮುರಿತಾ ಇದ್ದೀರಲ್ಲ. ಅಹಿಂದ ಸಮಾವೇಶ ಮಾಡ್ತಾರಂತೆ. ಕುರುಬ ಸಮಾಜದ ಕಲ್ಲಪ್ಪ ಹಂಡಿಭಾಗ ಒಬ್ಬ ಸ್ಕೂಲ್ ಮಾಸ್ಟರ್ ಮಗ. ಚಿಕ್ಕಮಗಳೂರ ಡಿವೈಎಸ್ಪಿ ಆಗಿದ್ರು. ಅಹಿಂದ ಮಹಾನ್ ರಕ್ಷಕರು, ಕುರ್ಚಿ ಉಳಿಸಿಕೊಳ್ಳೋಕೆ‌ ಅಷ್ಟೇ" ಎಂದು ಕಿಡಿ ಕಾರಿದರು.

ಭರತ್ ಕಡೆಯವರಿಂದ ಗುಂಡು ಹಾರಿದ್ದು. FIR ಆಗಿದ್ದು ರಾಮುಲು, ಜನಾರ್ದನ ರೆಡ್ಡಿ ಅವರುಗಳ ಮೇಲೆ. ಖುದ್ದು ಜನಾರ್ದನ ರೆಡ್ಡಿಯೇ ಗುಂಡು ಹಾರಿಸಿದರು ಎಂದು ದೂರು ನೀಡಲಾಯಿತು. ಜಾಸ್ತಿ ಜನ ಸೇರುವ ಮುನ್ನ ಲಾಠಿ ಚಾರ್ಜ್ ಯಾಕೆ ಮಾಡಿಲ್ಲ?. ಮಟ್ಕಾ ದಂಧೆಯಲ್ಲಿ ತಿಂಗಳಿಗೆ ಎಷ್ಟು ಹೋಗ್ತಿದೆ ಆ ಅಧಿಕಾರಿಗಳಿಗೆಲ್ಲ?. ವಸೂಲಿ ದುಡ್ಡು ಎಣಿಸ್ತಾ ಕೂತಿದ್ರಾ?. ಭರತ್ ರೆಡ್ಡಿ ಪರಿಸ್ಥಿತಿ ಶಾಂತ ಮಾಡಲು ಹೋಗಿದ್ದು ಎನ್ನುತ್ತಾರೆ. ಇನ್ಯಾವ ತನಿಖೆ ನಡಿಸುತ್ತೀರಪ್ಪ ನೀವು. ಜನಾರ್ದನ ರೆಡ್ಡಿ ಬರೋವರೆಗೆ ಬಳ್ಳಾರಿಯಲ್ಲಿ ಯಾವುದೇ ಗಲಭೆ ಇರಲಿಲ್ಲ ಎನ್ನುತ್ತಾರೆ. ರೆಡ್ಡಿಗೆ ಬಳ್ಳಾರಿಗೆ ಬರಲು ಕೋರ್ಟ್ ಅನುಮತಿ ಕೊಟ್ಟು ಒಂದೂವರೆ ವರ್ಷ ಆಗಿದೆ. ಅಲ್ಲಿಂದ ಇಲ್ಲಿಯವರೆಗೆ ಎಷ್ಟು ಎಷ್ಟು ಗಲಭೆ ಆಗಿದೆ ಹೇಳಿ. ಜನಾರ್ದನ ರೆಡ್ಡಿ ಬಂದ ಮೇಲೆ ಕಾಕತಾಳೀಯ ಎನ್ನುತ್ತಾರೆ. ಕಾರ್ಯಕರ್ತನ ಕೊಲೆ ಮಾಡಿ, ಯಾವ ತನಿಖೆ ಮಾಡುತ್ತೀರಾ. ರಾಜ್ಯವನ್ನು ಕುಲಗೆಡಿಸ್ತಾ ಇದ್ದಾರೆ. ಕಾಂಗ್ರೆಸ್ ಕಾರ್ಯಕರ್ತರೇ ತಿಳಿದುಕೊಳ್ಳಿ. ಇವರ ತೆವಲು, ಅಧಿಕಾರದ ಆಸೆಗೆ ಯಾರನ್ನು ಬೇಕಿದ್ರು ಬಲಿ ಕೊಡ್ತಾರೆ" ಎಂದು ಟೀಕಿಸಿದರು.

"144 ಸೆಕ್ಷನ್ ತಹಸೀಲ್ದಾರ್ ಹಾಕಿದರೂ ಫಾಲೋ ಮಾಡಲ್ಲ. ಎಸ್ಪಿ ದುಗ್ಗಮ್ಮನ ದೇವಸ್ಥಾನಕ್ಕೆ ಹೋಗಿ ಪೂಜೆ ಮಾಡಿ ಅಧಿಕಾರ ಹಸ್ತಾಂತರ ಮಾಡಿಕೊಂಡಿದ್ದಾರೆ. ಹೋಮ್‌ ಮಿನಿಸ್ಟರ್ ಗತ್ತಿನಿಂದ ಕೆಲಸ ಮಾಡಿ. ಪೊಲೀಸ್​ ಇಲಾಖೆ ಯಾವ ರೀತಿ ದುರ್ಬಳಕೆ ಅನ್ನುವುದು ಗೊತ್ತು. ಮೇಲೊಬ್ಬ ಇದ್ದಾನೆ, ಎಲ್ಲ ನೋಡುತ್ತಾನೆ. ಅಧಿಕಾರದಿಂದ ವಿಪಕ್ಷವನ್ನು ಬಗ್ಗುಬಡಿಯಲು ಸಾಧ್ಯವಿಲ್ಲ. ಯಾರ ಮೇಲೆ‌ ಕ್ರಮ ಆಗಬೇಕು ಎಂದು ಈಗಲಾದರೂ ತೀರ್ಮಾನ ಮಾಡಿ. 25 ಲಕ್ಷ ಕ್ಯಾಶ್​ ಕೊಟ್ಟರಲ್ಲ, ಯಾವ ಅಕೌಂಟ್​ನಿಂದ ಕೊಟ್ಟರು" ಎಂದು ತಿಳಿಸಿದರು.

"144 ಸೆಕ್ಷನ್ ಹಾಕಿದರೂ ಯಾಕೆ ಜಾರಿ ಮಾಡಿಲ್ಲ. ಲಾಠಿ ಚಾರ್ಜ್​ ಮಾಡಿಲ್ಲ ಯಾಕೆ?. ರೆಡ್ಡಿ ಮನೆ ಮೇಲೆ 6 ಬಾರಿ ಯಾಕೆ ಗುಂಡು ಹಾರಿಸಿದರು. ಆಟೋದಲ್ಲಿ ಪೆಟ್ರೋಲ್ ಬಾಂಬ್ ತಂದಿದ್ದಾರೆ. ಆಟೋನ ಸೀಸ್ ಮಾಡಿದ್ರಾ?. ಜನಾರ್ದನ ರೆಡ್ಡಿಗೆ Z ಸೆಕ್ಯುರಿಟಿಗೆ ಅಮೆರಿಕದಿಂದ ತನ್ನಿ ಎನ್ನುತ್ತಾರೆ. ರಾಜ್ಯದಲ್ಲಿ ರಕ್ಷಣೆ ಇಲ್ಲ ಎಂದು ಕೇಂದ್ರಕ್ಕೆ ಪತ್ರ ಬರೆದಿದ್ದಾರೆ. ಸಿಎಂಗೆ ಕೈ ಕಾರ್ಯಕರ್ತ ಸತ್ತ ಬಗ್ಗೆ ಚಿಂತೆ ಇಲ್ಲ. ಅದಕ್ಕಾಗಿ ಭರತ್ ರೆಡ್ಡಿಗೆ ಬೆಂಬಲ, ಸಿಎಂ ಸ್ಥಾನಕ್ಕೆ ಒಂದು ಓಟ್ ಸಿಗುತ್ತೆ ಎಂದು. ಇನ್ನೊಂದು ಮಾರ್ಗದಲ್ಲಿ ಬಳ್ಳಾರಿ ರಿಪಬ್ಲಿಕ್ ಮಾಡಲು ಕಾಂಗ್ರೆಸ್ ಮುಂದಾಗಿದೆ. ಖಾಸಗಿ ಗನ್​ ಮ್ಯಾನ್​ಗೆ ಗನ್ ಇಟ್ಟುಕೊಳ್ಳಲು ಪರ್ಮಿಷನ್ ಕೊಟ್ಟಿದ್ಯಾರು. ಅವರನ್ನೆಲ್ಲ ಅರೆಸ್ಟ್​ ಮಾಡಿಸಲು ಎಷ್ಟು ದಿನ ಬೇಕು?. ಮಾಜಿ ಸಿಎಂ ಮಗನ ಮನೆಗೆ ನುಗ್ಗಿಸಿ ಅರೆಸ್ಟ್​ ಮಾಡಿಸೋಕೆ‌ ಆಗತ್ತದೆ. ಎಲ್ಲ ಸಹಿಸಿಕೊಂಡಿದ್ದೇನೆ‌‌. ಸಿಬಿಐ ತನಿಖೆ ಆದ್ರೆ ಮಾತ್ರ ಸತ್ಯ ಆಚೆ ಬರುತ್ತದೆ. ನಾರಾ ಭರತ್ ರೆಡ್ಡಿ ಸೂಚನೆ ಮೇರೆಗೆ ಬಳ್ಳಾರಿಯಲ್ಲಿ ಸರ್ಕಾರ ನಡೀತಾ ಇದೆ. ಆ ಗನ್ ಮ್ಯಾನ್​ಗಳಿಗೆ ಭಯ ಭಕ್ತಿ ಇಲ್ಲ. ಅವರು ಉಪಯೋಗಿಸಿದ್ದು ಯಾವ ವೆಪನ್. ಪಾಕಿಸ್ತಾನದಿಂದ ತಂದಿದ್ದಾ" ಎಂದು ಪ್ರಶ್ನಿಸಿದರು.

ಇದನ್ನೂ ಓದಿ:ಬಳ್ಳಾರಿ ಗಲಭೆ: ತನಿಖೆ ಸರಿಯಾಗಿ ನಡೆಯುತ್ತಿದೆ, ಆತಂಕಪಡುವ ಅವಶ್ಯಕತೆ ಇಲ್ಲ- ಸತೀಶ್ ಜಾರಕಿಹೊಳಿ