ಹಾವೇರಿ: ಮಂಡಿಸೇವೆ ಹರಕೆ ಸಲ್ಲಿಸಿದ ಡಿ.ಕೆ.ಶಿವಕುಮಾರ್ ಅಭಿಮಾನಿ
ಹಾವೇರಿಯ ಮೈಲಾರ ಗ್ರಾಮದ ಮೈಲಾರಲಿಂಗೇಶ್ವರ ದೇವರಿಗೆ ರಾಜು ತುಮ್ಮಣ್ಣನವರ್ ಎಂಬ ಡಿ.ಕೆ.ಶಿವಕುಮಾರ್ ಅವರ ಅಭಿಮಾನಿ ಮಂಡಿಯೂರಿ ಸೇವೆ ಸಲ್ಲಿಸಿ ಹರಕೆ ತೀರಿಸಿದರು.

Published : June 2, 2026 at 1:10 PM IST
ಹಾವೇರಿ: ಡಿ.ಕೆ.ಶಿವಕುಮಾರ್ ಸಿಎಂ ಆಗಬೇಕೆಂದು ಹರಕೆ ಹೊತ್ತಿದ್ದ ರಾಜು ತುಮ್ಮಣ್ಣನವರ್ ಎಂಬ ಅಭಿಮಾನಿಯೊಬ್ಬರು ಸೋಮವಾರ ವಿಜಯನಗರ ಜಿಲ್ಲೆಯ ಹೂವಿನಹಡಗಲಿ ತಾಲೂಕಿನ ಮೈಲಾರ ಗ್ರಾಮದ ಮೈಲಾರಲಿಂಗೇಶ್ವರ ಕ್ಷೇತ್ರಕ್ಕೆ ಆಗಮಿಸಿ ಮಂಡಿಯೂರಿ ಹರಕೆ ಸಲ್ಲಿಸಿದರು.
ಕ್ಷೇತ್ರಕ್ಕೆ ಆಗಮಿಸಿದ ರಾಜು ತುಮ್ಮಣ್ಣನವರ್, ಸ್ನಾನ ಮಾಡಿ ಕೈಯಲ್ಲಿ ಡಿಕೆಶಿ ಭಾವಚಿತ್ರ ಹಿಡಿದು ಮಂಡಿಸೇವೆ ಸಲ್ಲಿಸಿದರು. ಹಲವು ಮೀಟರ್‌ಗಳಷ್ಟು ದೂರ ಮಂಡಿಯಲ್ಲಿ ನಡೆದುಕೊಂಡು ಬಂದು ಅವರು ಹರಕೆ ಸಲ್ಲಿಸಿದರು. ನಂತರ ಮೈಲಾರಲಿಂಗೇಶ್ವರನಿಗೆ ವಿಶೇಷ ಪೂಜೆ ಸಲ್ಲಿಸಿದರು. ಅರ್ಚಕರು ಕೇಸರಿ ಶಾಲು ಹಾಕಿ ಸನ್ಮಾನಿಸಿದರು.
"ಈ ಹಿಂದೆಯೇ ನಾನು ಡಿ.ಕೆ.ಶಿವಕುಮಾರ್ ಸಿಎಂ ಆದರೆ ಮಂಡಿ ಸೇವೆ ಸಲ್ಲಿಸುತ್ತೇನೆ ಎಂದು ಹರಕೆ ಹೊತ್ತಿದ್ದೆ. ಸರ್ಕಾರಕ್ಕೆ ಎರಡೂವರೆ ವರ್ಷವಾದ ಮೇಲೆ ಇವರೇ ಸಿಎಂ ಆಗುತ್ತಾರೆ ಎಂದುಕೊಂಡಿದ್ದೆ. ಆದರೆ ಆಗಲಿಲ್ಲ. ಇದೀಗ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷವಾದ ನಂತರ ಡಿ.ಕೆ. ಶಿವಕುಮಾರ್ ಸಿಎಂ ಆಗುತ್ತಿರುವುದಕ್ಕೆ ನಾನು ಮಂಡಿ ಸೇವೆ ಸಲ್ಲಿಸಿದ್ದೇನೆ. ನಾನು ಡಿ.ಕೆ.ಶಿವಕುಮಾರ್ ಅವರ ಅಭಿಮಾನಿ. ಅವರು ಸಿಎಂ ಆಗುತ್ತಿರುವುದು ನನಗೆ ಸಂತಸ ತಂದಿದೆ. ಈ ಹಿನ್ನೆಲೆಯಲ್ಲಿ ಶ್ರೀಕ್ಷೇತ್ರ ಮೈಲಾರಲಿಂಗೇಶ್ವರ ಸನ್ನಿಧಾನಕ್ಕೆ ಬಂದು ಹರಕೆ ತೀರಿಸಿದ್ದೇನೆ. ಡಿ.ಕೆ.ಶಿವಕುಮಾರ್ ಈ ಎರಡು ವರ್ಷವಷ್ಟೇ ಅಲ್ಲ, 2028ರಲ್ಲಿಯೂ ಸಿಎಂ ಆಗಲಿದ್ದಾರೆ" ಎಂದು ರಾಜು ತುಮ್ಮಣ್ಣನವರ್ ಹೇಳಿದರು.
ಇದನ್ನೂ ಓದಿ: ಪ್ರಮಾಣ ವಚನ ಸ್ವೀಕಾರಕ್ಕೂ ಮುನ್ನ ಕನಕಪುರಕ್ಕೆ ಭೇಟಿ: ಮನೆಯ ಆರಾಧ್ಯ ದೇವತೆಗಳ ಆಶೀರ್ವಾದ ಪಡೆಯಲಿದ್ದಾರೆ ಡಿಕೆಶಿ

