ಇರಾನ್ ಪ್ರತೀಕಾರದ ದಾಳಿ: ದುಬೈನಲ್ಲಿ ಸಿಲುಕಿದ ಹಾಸನದ 50ಕ್ಕೂ ಜನರು, ನೆರವಿಗಾಗಿ ಮನವಿ
ಅಮೆರಿಕ ಮತ್ತು ಇಸ್ರೇಲ್ ಜಂಟಿಯಾಗಿ ನಡೆಸುತ್ತಿರುವ ಸೇನಾ ಕಾರ್ಯಾಚರಣೆಗೆ ಪ್ರತಿಯಾಗಿ ಇರಾನ್ ಪ್ರತೀಕಾರದ ದಾಳಿ ಮಾಡುತ್ತಿದೆ. ದುಬೈ ಸೇರಿದಂತೆ ಇತರೆಡೆ ಕ್ಷಿಪಣಿ ದಾಳಿ ನಡೆಸುತ್ತಿದೆ. ಇದರಿಂದ ದುಬೈನಲ್ಲಿರುವ ಕನ್ನಡಿಗರು ಸಂಕಷ್ಟಕ್ಕೆ ಸಿಲುಕಿದ್ದಾರೆ.

Published : March 1, 2026 at 9:39 PM IST
ಹಾಸನ: ಇರಾನ್ನಲ್ಲಿ ಅಮೆರಿಕ ಮತ್ತು ಇಸ್ರೇಲ್ ನಿಂದ ಜಂಟಿ ಸೇನಾ ಕಾರ್ಯಾಚರಣೆಯಿಂದಾಗಿ ಯುದ್ಧ ಪರಿಸ್ಥಿತಿ ತಲೆದೋರಿದೆ. ಇರಾನ್ ಸಹ ಅಮೆರಿಕ, ಇಸ್ರೇಲ್ ಸೇರಿದಂತೆ ಮಧ್ಯಪ್ರಾಚ್ಯದ ದೇಶಗಳ ಮೇಲೂ ಪ್ರತೀಕಾರದ ದಾಳಿ ನಡೆಸುತ್ತಿದೆ. ಇದರ ಎಫೆಕ್ಟ್ ಭಾರತೀಯರಿಗೂ ತಟ್ಟಿದ್ದು, ವಿಮಾನವಿಲ್ಲದೇ ದುಬೈನಲ್ಲಿ ಪರದಾಡುತ್ತಿದ್ದಾರೆ.
ಹೌದು, ಹಾಸನ ಜಿಲ್ಲೆಯ 50ಕ್ಕೂ ಹೆಚ್ಚು ಮಂದಿ ಈಗ ದುಬೈನಲ್ಲಿ ಸಿಲುಕಿದ್ದು, ಭಾರತ ಸರ್ಕಾರಕ್ಕೆ ಕನ್ನಡಿಗರು ಸಹಾಯಕ್ಕಾಗಿ ಅಂಗಲಾಚುತ್ತಿದ್ದಾರೆ. ದುಡಿಮೆಗೆಂದು ಕರ್ನಾಟಕದಿಂದ ದುಬೈಗೆ ಹೋಗಿದ್ದ ಕನ್ನಡಿಗರಿಗೆ ಅಮೆರಿಕ ಮತ್ತು ಇಸ್ರೇಲ್ ಯುದ್ದ ಅಡ್ಡಪರಿಣಾಮ ಬೀರಿದೆ. ಕೂಡಲೇ ತಮ್ಮನ್ನು ಸುರಕ್ಷಿತವಾಗಿ ಭಾರತಕ್ಕೆ ಕರೆತರುವಂತೆ ಅವರು ಮನವಿ ಮಾಡಿದ್ದಾರೆ. ದ್ವೀಪ ರಾಷ್ಟ್ರ ಬಹ್ರೇನ್ನಲ್ಲಿ ಹಾಸನ ಜಿಲ್ಲೆಯ ಐವರು ಸಿಲುಕಿದ್ದಾರೆ. ಬಹ್ರೇನ್ ರಾಜಧಾನಿ ಮನಾಮದಲ್ಲಿರುವ ಮಮತಾ ಎಂಬುವರ ಮನೆಯೊಂದರಲ್ಲಿ ಕನ್ನಡಿಗರು ಆಶ್ರಯ ಪಡೆದಿದ್ದಾರೆ.
ಬೇಲೂರು ತಾಲೂಕಿನ, ಅಂಗಡಿಹಳ್ಳಿಯ ಪಂಜು, ಜಮುನ, ಸುರೇಂದ್ರ ಪ್ರಸಾದ್, ರತೀಶ್ ಹಾಗೂ ಮೈಸೂರು ಮೂಲದ ನೇತ್ರಾವತಿ ತಾವಿರುವ ಕಟ್ಟಡದ ಪಕ್ಕದಲ್ಲೇ ಬಾಂಬ್ ಸಿಡಿಯುತ್ತಿದೆ ಎಂದು ಆತಂಕ ವ್ಯಕ್ತಪಡಿಸಿದ್ದಾರೆ. ಈ ಬಗ್ಗೆ ಸ್ವತಃ ವಿಡಿಯೋ ಮಾಡಿ, ಸಾಮಾಜಿಕ ಜಾಲತಾಣದಲ್ಲಿ ಹರಿಬಿಟ್ಟಿದ್ದಾರೆ. ಹೀಗಾಗಿ ಕರ್ನಾಟಕದ ಕೆಲ ಮಂದಿಯ ಸಂಬಂಧಿಕರು ಆತಂಕ ವ್ಯಕ್ತಪಡಿಸುತ್ತಿದ್ದಾರೆ.
ಬೇಲೂರು ತಾಲೂಕಿನ ಅಂಗಡಿಹಳ್ಳಿಯ ಕುಟುಂಬವೊಂದು ಹೇರ್ ಆಯಿಲ್ ಮತ್ತು ಮಸಾಜ್ ಮಾಡುವ ವೃತ್ತಿಯನ್ನು ನಡೆಸುತ್ತಿದ್ದು, ವ್ಯಾಪಾರಕ್ಕಾಗಿ ದುಬೈಗೆ ತೆರಳಿದ್ದರು. ಶನಿವಾರ ರಾತ್ರಿ ಯುದ್ಧ ನಡೆದ ಸಂದರ್ಭದಲ್ಲಿ ಇವರು ವಾಸವಿದ್ದ, ಮನೆಯ ಹಿಂಭಾಗವೇ ಶೆಲ್ ದಾಳಿ ನಡೆದಿದ್ದು, ಅದೃಷ್ಟವಶಾತ್ ಕೂದಲೆಳೆ ಅಂತರದಲ್ಲಿ ಪ್ರಾಣಾಪಾಯದಿಂದ ಪಾರಾಗಿದ್ದಾರೆ. ಇನ್ನು, ಈ ಕುಟುಂಬಕ್ಕೆ ದುಬೈನಲ್ಲಿರುವ ಮಮತ ಎಂಬ ಕನ್ನಡಿಗರ ಕುಟುಂಬವೊಂದು ಆಶ್ರಯ ನೀಡಿದ್ದು, ಆದಷ್ಟು ಬೇಗ ತಮ್ಮನ್ನು ತಾಯ್ನಾಡಿಗೆ ಕರೆಸಿಕೊಳ್ಳವಂತೆ ಅವರು ಮನವಿ ಮಾಡಿದ್ದಾರೆ.
ಸಂಪರ್ಕ ಸಾಧಿಸಿದ ಸಂಸದರು: ಆಲೂರು ತಾಲೂಕಿನ ಮಗ್ಗೆ ಗ್ರಾಮದ ಸುತ್ತಮತ್ತಲಿನ 5-6 ಗ್ರಾಮಗಳ ಸುಮಾರು 30ಕ್ಕೂ ಹೆಚ್ಚು ಮಂದಿ ದುಬೈನಲ್ಲಿ ಕಳೆದ 2 ವರ್ಷದಿಂದ ಕೆಲಸ ಮಾಡುತ್ತಿದ್ದು, ಯುದ್ಧದ ನಂತರ ಕಳೆದ 10 ಗಂಟೆಗಳಿಂದ ಬಂಕರ್ ಗಳಲ್ಲಿ ಆಶ್ರಯವನ್ನು ಪಡೆದಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ. ತಮ್ಮ ಸಂಪರ್ಕಕಕ್ಕೆ ಸಿಗುತ್ತಿಲ್ಲ ಎಂದು ಹಾಸನದ ಪೋಷಕರು ಕಳವಳ ವ್ಯಕ್ತಪಡಿಸುತ್ತಿದ್ದು, ಕೂಡಲೇ ನಮ್ಮ ಸಂಬಂಧಿಕರು ಜಿಲ್ಲಾಡಳಿತ ಮತ್ತು ಹಾಸನ ಸಂಸದ ಶ್ರೇಯಸ್ ಎಂ ಪಟೇಲ್ ಬಳಿ ಮನವಿ ಮಾಡಿದ್ದಾರೆ. ಶ್ರೇಯಸ್ ಪಟೇಲ್ ಅವರು ಸಂಪರ್ಕವನ್ನು ಮಾಡಿ ಆರೋಗ್ಯ ಮತ್ತು ಅವರ ಯೋಗಕ್ಷೇಮ ವಿಚಾರಿಸಿದ್ದಾರೆ.
ನೆರವಿಗೆ ಮುಂದೆ ಬಂದ ಒಕ್ಕಲಿಗರ ಸಂಘ: ದುಬೈನಲ್ಲಿ ಸಿಲುಕಿದ ಕನ್ನಡಿಗರಿಗೆ ದುಬೈ ಒಕ್ಕಲಿಗರ ಸಂಘ ನೆರವಿಗೆ ಮುಂದಾಗಿದೆ. ತುರ್ತು ಪರಿಸ್ಥಿತಿ ಉಂಟಾದರೆ ಸಂಪರ್ಕಿಸುವಂತೆ ಮನವಿ ಮಾಡಲಾಗಿದೆ. ದುಬೈ, ಅಬುಧಾಬಿ ಮೇಲೆ ಇರಾನ್ ದಾಳಿ ಹಿನ್ನೆಲೆ ವಿಮಾನಗಳು ರದ್ದಾಗಿವೆ. ಫ್ಲೈಟ್ ಇಲ್ಲದೇ ಭಾರತೀಯರು ಪರದಾಟ ನಡೆಸಿದ್ದಾರೆ. ಇದಲ್ಲದೆ 50ಕ್ಕೂ ಹೆಚ್ಚು ಕನ್ನಡಿಗರು ದುಬೈನಲ್ಲೇ ಸಿಲುಕಿದ್ದು, ಸಹಾಯಕ್ಕಾಗಿ ಮೊರೆಯಿಟ್ಟಿದ್ದಾರೆ. ದುಬೈನಲ್ಲಿ ಸಿಲುಕಿದ ಕನ್ನಡಿಗರ ಸಹಾಯಕ್ಕೆ ದುಬೈ ಒಕ್ಕಲಿಗರ ಸಂಘ ಮುಂದಾಗಿದೆ. ತುರ್ತು ಪರಿಸ್ಥಿತಿ ಉಂಟಾದರೆ ಸಂಪರ್ಕ ಮಾಡುವಂತೆ ದುಬೈ ಒಕ್ಕಲಿಗರ ಸಂಘದ ಅಧ್ಯಕ್ಷ ಕಿರಣ್ ಗೌಡ ಮನವಿ ಮಾಡಿದ್ದಾರೆ. ದುಬೈನಲ್ಲಿರುವ ಕನ್ನಡಿಗರು +971555114205 ಸಂಖ್ಯೆಗೆ ಕರೆ ಮಾಡುವಂತೆ ತಿಳಿಸಿದ್ದಾರೆ.
ಇನ್ನು ಹಾಸನ ಜಿಲ್ಲೆಯ ಅರಸೀಕೆರೆ ತಾಲೂಕಿನ 5 ಮಂದಿ ದುಬೈನಲ್ಲಿ ನಡೆದ ವಿಜಯರತ್ನ ಪ್ರಶಸ್ತಿ ಪ್ರಧಾನ ಸಮಾರಂಭದಲ್ಲಿ ಭಾಗಿಯಾಗಿದ್ದು, ಪ್ರಶಸ್ತಿ ಪಡೆಯುವ ಸಲುವಾಗಿ ಅಲ್ಲಿಗೆ ತೆರಳಿದ್ದು, ಯುದ್ದದ ಕಾರ್ಮೋಡದಿಂದ ವಿಮಾನದ ಮೂಲಕ ವಾಪಸಾಗದೇ ಅಲ್ಲಿಯೇ ಸಿಲುಕಿದ್ದು, ಸಹಾಯ ಕೋರಿ ಸರ್ಕಾರಕ್ಕೆ ಮನವಿ ಮಾಡಿದ್ದಾರೆ.
ಜಿಲ್ಲಾಧಿಕಾರಿಯಿಂದ ಸಹಾಯವಾಣಿ ಪ್ರಕಟ: ಮಧ್ಯ ಪ್ರಾಚ್ಯ ಹಾಗೂ ಕೊಲ್ಲಿ ದೇಶಗಳಲ್ಲಿ ಇರಾನ್ ಹಾಗೂ ಇಸ್ರೇಲ್ ದೇಶಗಳಲ್ಲಿ ಯುದ್ಧ ನಡೆಯುತ್ತಿದ್ದು, ಅಪಾರ ಪ್ರಮಾಣದ ಸಾವು-ನೋವು ಉಂಟಾಗುತ್ತಿದೆ. ಕರ್ನಾಟಕದ ಹಲವರು ಸಿಲುಕಿಕೊಂಡಿರುವ ಮಾಹಿತಿಯಿದೆ. ಹಾಸನ ಜಿಲ್ಲೆಯ ಸಾರ್ವಜನಿಕರು ಯಾರಾದರೂ ಈ ಯುದ್ಧ ಪೀಡಿತ ದೇಶಗಳಲ್ಲಿ ಸಿಲುಕಿದ್ದರೆ ಕೂಡಲೇ ಹಾಸನ ಜಿಲ್ಲಾ ವಿಪತ್ತು ನಿರ್ವಹಣಾ ಕೇಂದ್ರಕ್ಕೆ ಅಥವಾ ದೂರವಾಣಿ ಸಂಖ್ಯೆ:- 08172-261111, ಟೋಲ್ ಫ್ರೀ - 08172-1077 ಮಾಹಿತಿ ನೀಡುವಂತೆ ಜಿಲ್ಲಾಧಿಕಾರಿ ಕೆ.ಎಸ್. ಲತಾಕುಮಾರಿ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ಇದನ್ನೂ ಓದಿ: ಮಧ್ಯಪ್ರಾಚ್ಯ ಉದ್ವಿಗ್ನ: ವಿಮಾನ ರದ್ದು, ದುಬೈನಲ್ಲಿ ಸಿಲುಕಿದ ಬಳ್ಳಾರಿ ಶಾಸಕ, 50 ಜನರ ತಂಡ

