ಅಂಜನಾದ್ರಿಗೆ ಬಂದಿದ್ದ ಗುಜರಾತ್ ವ್ಯಕ್ತಿ ಹೃದಯಾಘಾತದಿಂದ ಸಾವು
ಅಂಜನಾದ್ರಿ ಬೆಟ್ಟ ಹತ್ತಿ ಬರುವಾಗ ಗುಜರಾತಿನ ಯಾತ್ರಾರ್ಥಿಯೊಬ್ಬರು ಹೃದಯಾಘಾತದಿಂದ ಮೃತಪಟ್ಟಿದ್ದಾರೆ.

Published : March 3, 2026 at 7:48 PM IST
ಗಂಗಾವತಿ: ಆಂಜನೇಯ ಸ್ವಾಮಿ ಜನ್ಮಸ್ಥಳವಾಗಿರುವ ತಾಲೂಕಿನ ಚಿಕ್ಕರಾಂಪೂರದ ಅಂಜನಾದ್ರಿ ದೇಗುಲದ ದರ್ಶನಕ್ಕೆ ಬಂದಿದ್ದ ಗುಜರಾತಿನ ಯಾತ್ರಾರ್ಥಿಯೊಬ್ಬರು ಬೆಟ್ಟ ಏರಿ ಇಳಿಯುವಾಗ ಆರೋಗ್ಯದಲ್ಲಿ ಕಾಣಿಸಿಕೊಂಡ ಬಳಲಿಕೆಯಿಂದ ಹೃದಯಾಘಾತವಾಗಿ ಮೃತಪಟ್ಟ ಘಟನೆ ಮಂಗಳವಾರ ನಡೆದಿದೆ.
ಗುಜರಾತಿನ ಕಛ್ ಜಿಲ್ಲೆಯ, ಗಾಂಧಿಗಾಮ ತಾಲೂಕಿನ ಕೃಷಿಕ ಅರ್ಜುನ್ ಬಾಯ್ ರಾಮಾಜಿ ಬಾಯ್ (54) ಮೃತ ವ್ಯಕ್ತಿ. ಈ ವ್ಯಕ್ತಿ ಇತರ ಸಹಚರ ಯಾತ್ರಾರ್ಥಿಗಳೊಂದಿಗೆ ಚಿಕ್ಕರಾಂಪೂರದಲ್ಲಿರುವ ಅಂಜನಾದ್ರಿಗೆ ಭೇಟಿ ನೀಡಿದ್ದರು.
580ಕ್ಕೂ ಹೆಚ್ಚು ಮೆಟ್ಟಿಲುಗಳಿರುವ ಬೆಟ್ಟವನ್ನು ಹತ್ತುವಾಗಲೇ ಸ್ವಲ್ಪ ಆಯಾಸಗೊಂಡಂತೆ ಕಂಡುಬಂದ ಅರ್ಜುನ್ ಬಾಯ್ ಬಳಿಕ ಹನುಮಪ್ಪನ ದರ್ಶನ ಪಡೆದುಕೊಂಡಿದ್ದರು. ಬೆಟ್ಟ ಇಳಿಯುವಾಗ ಆಯಾಸದ ಪ್ರಮಾಣ ಹೆಚ್ಚಾಗಿದ್ದು, ಆರೋಗ್ಯದಲ್ಲಿ ಏರುಪೇರಾಗಿದೆ.
ತಕ್ಷಣ ಆನೆಗೊಂದಿಯ ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರಕ್ಕೆ ಚಿಕಿತ್ಸೆಗಾಗಿ ದಾಖಲಿಸಿ ಪ್ರಾಥಮಿಕ ಚಿಕಿತ್ಸೆ ಕೊಡಲಾಗಿದೆ. ಈ ಸಂದರ್ಭದಲ್ಲಿ ವ್ಯಕ್ತಿಗೆ ಹೃದಯಾಘಾತವಾಗಿರುವುದು ಕಂಡು ಬಂದಿದ್ದು, ತಕ್ಷಣ ವೈದ್ಯರು ಹೆಚ್ಚಿನ ಚಿಕಿತ್ಸೆಗಾಗಿ ಗಂಗಾವತಿ ಉಪ ವಿಭಾಗ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಗಂಗಾವತಿಯ ಉಪ ವಿಭಾಗ ಆಸ್ಪತ್ರೆಗೆ ರೋಗಿಯನ್ನು ದಾಖಲಿಸುವಷ್ಟರಲ್ಲಿಯೇ ಮೃತಪಟ್ಟ ಬಗ್ಗೆ ವೈದ್ಯರು ದೃಢಪಡಿಸಿದ್ದಾರೆ. ಬಳಿಕ ಈತನೊಂದಿಗೆ ಬಂದಿದ್ದ ಸಹ ಪ್ರಯಾಣಿಕರು, ಅರ್ಜುನ್ ಅವರ ಮೃತದೇಹವನ್ನು ಖಾಸಗಿ ವಾಹನದ ಮೂಲಕ ತಮ್ಮೂರಿಗೆ ತೆಗೆದುಕೊಂಡು ಹೋದರು.
ನೂರಾರು ಸಂಖ್ಯೆ: ಉತ್ತರ ಭಾರತೀಯರಿಗೆ ಅದರಲ್ಲೂ ಮಧ್ಯಪ್ರದೇಶ, ಉತ್ತರ ಪ್ರದೇಶ, ಬಿಹಾರ್, ರಾಜಸ್ಥಾನ್ ಸೇರಿದಂತೆ ಮೊದಲಾದ ರಾಜ್ಯದ ಯಾತ್ರಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಆನೆಗೊಂದಿ ಭಾಗದಲ್ಲಿನ ಪವಿತ್ರ ಪಂಪಾಸರೋವರ, ಅಂಜನಾದ್ರಿ, ಋಷಿಮುಖ ಪರ್ವತಕ್ಕೆ ಭೇಟಿ ನೀಡುತ್ತಾರೆ.
ರಾಮಾಯಣ ಕಾಲಘಟ್ಟದಲ್ಲಿ ಉಲ್ಲೇಖಿತ ಕಷ್ಕಿಂಧಾ ಭಾಗವೇ ಆನೆಗೊಂದಿ ಎಂದು ಬಲವಾಗಿ ನಂಬುವ ಈ ಜನ, ಜೀವನದಲ್ಲಿ ಒಮ್ಮೆಯಾದರೂ ಇಲ್ಲಿಗೆ ಭೇಟಿ ನೀಡಬೇಕು ಎಂಬ ಉದ್ದೇಶಕ್ಕೆ ಬರುತ್ತಾರೆ. ನಿತ್ಯ ನೂರಾರು ಸಂಖ್ಯೆಯ ಉತ್ತರ ಭಾರತೀಯ ಯಾತ್ರಾರ್ಥಿಗಳು ಇಲ್ಲಿ ಕಾಣಸಿಗುತ್ತಾರೆ.
ಇದನ್ನೂ ಓದಿ: ಅಂಜನಾದ್ರಿ ಬೆಟ್ಟದಲ್ಲಿ 18ರ ಯುವಕ ಹೃದಯಸ್ತಂಭನದಿಂದ ಸಾವು
ಇತ್ತೀಚೆಗಷ್ಟೇ ಇಂತಹದ್ದೇ ಘಟನೆ ನಡೆದಿತ್ತು. ಅಂಜನಾದ್ರಿ ದೇಗುಲವನ್ನು ಮೆಟ್ಟಿಲುಗಳ ಮೂಲಕ ಏರುವಾಗ ಹೃದಯಾಘಾತಕ್ಕೀಡಾಗಿ ಕೊಪ್ಪಳದ ಜಯೇಶ ಯಾದವ್ (18) ಎಂಬ ಯುವಕ ಮೃತಪಟ್ಟಿರುವ ವರದಿಯಾಗಿತ್ತು. ಪ್ರೌಢಶಾಲೆ ಮತ್ತು ಕಾಲೇಜು ಹಂತದಲ್ಲಿ ತನ್ನೊಂದಿಗೆ ವಿದ್ಯಾಭ್ಯಾಸ ಮಾಡಿದ ಸ್ನೇಹಿತರೊಂದಿಗೆ ಅಂಜನಾದ್ರಿಯ ಹನುಮಪ್ಪನ ದರ್ಶನಕ್ಕೆಂದು ಬಂದಾಗ ಈ ಘಟನೆ ನಡೆದಿತ್ತು.
ಬೆಟ್ಟ ಏರುವಾಗ ಎದುರುಸಿರು ಹಾಕುತ್ತಿದ್ದ ಯುವಕನಿಗೆ ಇದ್ದಕ್ಕಿದ್ದಂತೆ ಹೃದಯ ಸ್ತಂಭನವಾಗಿತ್ತು. ಸಹಪಾಠಿ ಸ್ನೇಹಿತರು ಹಾಗೂ ಹನುಪ್ಪನ ದರ್ಶನಕ್ಕೆ ಬಂದಿದ್ದ ಸಹಯಾತ್ರಿಕರು, ಹೃದಯ ಸ್ತಂಭನಕ್ಕೆ ಒಳಗಾದ ಯುವಕನಿಗೆ ಪ್ರಾಥಮಿಕ ಚಿಕಿತ್ಸೆ ನೀಡಿದರೂ ಫಲಕಾರಿಯಾಗಿರಲಿಲ್ಲ. ಪರಿಣಾಮ ಯುವಕ ಸ್ಥಳದಲ್ಲಿಯೇ ಸಾವನ್ನಪ್ಪಿದ್ದ.

