₹593 ಕೋಟಿ ನಕಲಿ ಇನ್‌ವಾಯ್ಸ್ ಹಗರಣ: ಆರೋಪಿ ಹೆಡೆಮುರಿ ಕಟ್ಟಿದ ಬೆಳಗಾವಿ ಡಿಜಿಜಿಐ ಅಧಿಕಾರಿಗಳು
ನಕಲಿ ಇನ್‌ವಾಯ್ಸ್ ಸೃಷ್ಟಿಸಿ 593 ಕೋಟಿ ರೂ. ಜಿಎಸ್‌ಟಿ ಹಣ ವಂಚಿಸಿದ ಆರೋಪಿಯನ್ನು ಡಿಜಿಜಿಐ ಬೆಳಗಾವಿ ವಲಯದ ಅಧಿಕಾರಿಗಳು ಬಂಧನ ಮಾಡಿದ್ದಾರೆ.

Published : March 2, 2026 at 1:04 PM IST
ಬೆಳಗಾವಿ: ಸುಮಾರು 593 ಕೋಟಿ ರೂ. ಮೌಲ್ಯದ ನಕಲಿ ಇನ್‌ವಾಯ್ಸ್ ಹಗರಣವನ್ನು ಭೇದಿಸಿ, ಈ ವಂಚನೆಯ ಸೂತ್ರಧಾರನನ್ನು ಫೆಬ್ರವರಿ 24ರಂದು ಸರಕು ಮತ್ತು ಸೇವಾ ತೆರಿಗೆ (ಜಿಎಸ್‌ಟಿ) ಗುಪ್ತಚರ ಮಹಾನಿರ್ದೇಶನಾಲಯ (ಡಿಜಿಜಿಐ) ಬೆಳಗಾವಿ ವಲಯ ಘಟಕದ ಅಧಿಕಾರಿಗಳು ಬಂಧಿಸಿದ್ದಾರೆ.
ಈ ಸಂಬಂಧ ಪ್ರಕರಣದ ಪ್ರಮುಖ ಆರೋಪಿ ಜಿಎಸ್‌ಟಿ ಪ್ರಾಕ್ಟಿಷನರ್ (ಜಿಎಸ್‌ಟಿ ಸಂಬಂಧಿತ ತೆರಿಗೆ ಕೆಲಸಗಳನ್ನು ನಿರ್ವಹಿಸಲು ಅನುಮತಿ ಪಡೆದ ವ್ಯಕ್ತಿ) ಮೊಹಮ್ಮದ್ ಸೈಫುಲ್ಲಾನನ್ನು ಬೆಂಗಳೂರಿನಲ್ಲಿ ಡಿಜಿಜಿಐ ಅಧಿಕಾರಿಗಳ ತಂಡವು ವಶಕ್ಕೆ ಪಡೆದು, ಆರ್ಥಿಕ ಅಪರಾಧಗಳ ವಿಶೇಷ ನ್ಯಾಯಾಲಯದ ಮುಂದೆ ಹಾಜರುಪಡಿಸಲಾಗಿದೆ. ಬಳಿಕ ಫೆ.25ರಂದು ಬೆಳಗಾವಿ 4ನೇ ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಲಯದ ಮುಂದೆ ಹಾಜರುಪಡಿಸಿ, ನ್ಯಾಯಾಂಗ ಬಂಧನಕ್ಕೆ ಒಪ್ಪಿಸಲಾಗಿದೆ.
2024ರಿಂದ ಆರೋಪಿ ಮೊಹಮ್ಮದ್ ಸೈಫುಲ್ಲಾ ಟ್ಯಾಕ್ಸ್ ಕನ್ಸಲ್ಟಂಟ್ ಆಗಿ ಕೆಲಸ ಮಾಡುತ್ತಿದ್ದಾನೆ. ಈತ ಓರ್ವ ನೋಂದಾಯಿತ ಟ್ಯಾಕ್ಸ್ ಕನ್ಸಲ್ಟಂಟ್ ಆಗಿದ್ದಾನೆ. ಈತ ಇಲ್ಲಿಯವರೆಗೆ ಸುಮಾರು 56 ನಕಲಿ ಫರ್ಮ್ಸ್ ಸ್ಥಾಪಿಸಿದ್ದಾನೆ. ಇದರಿಂದ ಅನುಮಾನಗೊಂಡು ಜಿಎಸ್‌ಟಿ ನೋಂದಣಿಯ ಪರಿಶೀಲನೆಯಿಂದ ಆರಂಭವಾದ ತನಿಖೆಯು ದೊಡ್ಡಮಟ್ಟದ ವಂಚನೆಯ ಜಾಲ ಬಯಲಿಗೆ ಬಂದಿದೆ. ತಂತ್ರಜ್ಞಾನ ಬೆಳೆದಂತೆ ಇಂತಹ ವೈಟ್ ಕಾಲರ್ ಅಥವಾ ಆರ್ಥಿಕ ಅಪರಾಧ ಪ್ರಕರಣಗಳು ಹೆಚ್ಚಾಗಿವೆ. ಇದು ಸಾಮಾನ್ಯವಾಗಿ ಕಂಡು ಬರುವುದಿಲ್ಲ. ಬೆಂಗಳೂರು ನಗರದಲ್ಲಿನ ಸ್ಟಾರ್ ಟ್ಯಾಕ್ಸ್ ಕನ್ಸಲ್ಟೆಂಟ್‌ಗೆ ಸಂಬಂಧಿಸಿದ ವಿವಿಧ ಕಚೇರಿಗಳು ಮತ್ತು ವಾಸಸ್ಥಳಗಳ ಮೇಲೆ ದಾಳಿ ನಡೆಸಿದಾಗ ಯಾವುದೇ ವಾಸ್ತವಿಕ ಸರಕು ಅಥವಾ ಸೇವೆಗಳ ಪೂರೈಕೆ ಇಲ್ಲದೇ, ಕೇವಲ ಕಾಗದದ ಮೇಲಿನ ವ್ಯವಹಾರಗಳ ಮೂಲಕ ನಕಲಿ ಇನ್ವಾಯ್ಸ್ಗಳನ್ನು ಸೃಷ್ಟಿಸಲಾಗುತ್ತಿದ್ದ ಅಚ್ಚರಿಯ ಸಂಗತಿ ಡಿಜಿಜಿಐ ಅಧಿಕಾರಿಗಳ ತನಿಖೆಯಲ್ಲಿ ಬಹಿರಂಗವಾಗಿದೆ.
ಅಧಿಕಾರಿಗಳ ಪ್ರಾಥಮಿಕ ಅಂದಾಜಿನ ಪ್ರಕಾರ, ಈ ಜಾಲವು ಸುಮಾರು 593 ಕೋಟಿ ರೂ. ಮೌಲ್ಯದ ನಕಲಿ ಬಿಲ್‌ಗಳನ್ನು ಹೊರಡಿಸಿದೆ. ಈ ಮೂಲಕ ಸುಮಾರು 235 ಕೋಟಿ ರೂ. ಇನ್‌ಪುಟ್ ಟ್ಯಾಕ್ಸ್ ಕ್ರೆಡಿಟ್ (ಐಟಿಸಿ) ಸರ್ಕಾರಕ್ಕೆ ನಷ್ಟ ಮಾಡಿದ್ದಾರೆ. ಒಂದು ಬಾಡಿಗೆ ಮನೆ ಪಡೆದು, ಜಿಎಸ್‌ಟಿ ನಂಬರ್ ಪಡೆದುಕೊಳ್ಳುತ್ತಿದ್ದ. ಆರೋಪಿ ವಿರುದ್ಧ ಸಿಜಿಎಸ್ಟಿ ಕಾಯಿದೆಯ ಸೆಕ್ಷನ್ 132 ಜಿಎಸ್‌ಟಿ ಅಡಿ ತೆರಿಗೆ ವಂಚನೆ ಪ್ರಕರಣ ದಾಖಲಾಗಿದ್ದು, 5 ವರ್ಷದವರೆಗೆ ಜೈಲು ಶಿಕ್ಷೆ ಮತ್ತು ದಂಡವನ್ನು ನ್ಯಾಯಾಲಯ ವಿಧಿಸಲಿದೆ ಎಂದು ಜಿಎಸ್‌ಟಿ ಗುಪ್ತಚರ ಮಹಾನಿರ್ದೇಶನಾಲಯದ ವಿಶೇಷ ಅಭಿಯೋಜಕ ಸತೀಶ ಕರಾಳೆ ಮಾಹಿತಿ ನೀಡಿದರು.
ಯಾವುದೇ ನಿಜವಾದ ವ್ಯಾಪಾರ ಚಟುವಟಿಕೆಗಳು ಇಲ್ಲದ ಅನೇಕ ಶೆಲ್ ಕಂಪನಿಗಳ ಹೆಸರಿನಲ್ಲಿ ಜಿಎಸ್‌ಟಿ ನೋಂದಣಿಗಳನ್ನು ಪಡೆಯಲಾಗಿತ್ತು. ಆನ್‌ಲೈನ್ ಲೆಕ್ಕಪತ್ರ ಸಾಫ್ಟ್‌ವೇರ್‌ಗಳ ಮೂಲಕ ನಕಲಿ ವ್ಯವಹಾರಗಳನ್ನು ದಾಖಲಿಸಿ, ಇ - ವೇ ಬಿಲ್‌ಗಳನ್ನು ಸೃಷ್ಟಿಸಿ, ಅಂತಿಮವಾಗಿ ಲಾಭಾಂಶ ಪಡೆಯುವವರಿಗೆ (ಬೆನಿಫಿಶಿಯರೀಸ್) ಐಟಿಸಿ ಪಡೆಯಲು ವ್ಯವಸ್ಥಿತವಾಗಿ ಸಹಾಯ ಮಾಡಲಾಗುತ್ತಿತ್ತು. ಮೊಹಮ್ಮದ್ ಸೈಫುಲ್ಲಾ ಈ ವಂಚನೆಯ ಕಿಂಗ್ ಪಿನ್ ಆಗಿದ್ದು, ನಕಲಿ ಇನ್‌ವಾಯ್ಸ್ ಮೌಲ್ಯದ ಶೇಕಡಾವಾರು ಕಮಿಷನ್ ಪಡೆದುಕೊಂಡು ಈ ಸಂಪೂರ್ಣ ಕಾರ್ಯಾಚರಣೆಯನ್ನು ನಡೆಸುತ್ತಿದ್ದ ಎಂಬುದು ಅಧಿಕಾರಿಗಳ ತನಿಖೆಯಲ್ಲಿ ದೃಢವಾಗಿದೆ. ಇದೊಂದು ದೊಡ್ಡ ಜಾಲವಿದ್ದು, ಇದರಲ್ಲಿ ಬ್ರೋಕರ್ಸ್, ಲಾಭ ಪಡೆದವರು ಅನೇಕರಿದ್ದಾರೆ. ಅವರನ್ನು ಪತ್ತೆ ಹಚ್ಚಿ, ಅವರ ವಿರುದ್ಧವೂ ಕ್ರಮ ಆಗಲಿದೆ ಎಂದು ಸರ್ಕಾರಿ ಅಭಿಯೋಜಕ ಸತೀಶ ಕರಾಳೆ ತಿಳಿಸಿದರು.
ಇದನ್ನೂ ಓದಿ: ಬೆಳಗಾವಿಗೆ ಮಕ್ಕಳ ಕಳ್ಳರು ಬಂದಿಲ್ಲ, ವದಂತಿಗೆ ಕಿವಿಗೊಡಬೇಡಿ: ಪೊಲೀಸ್ ಕಮಿಷನರ್

