ಶ್ರೀ ರೇಣುಕಾ ಯಲ್ಲಮ್ಮನ ದೇಗುಲ ನಿರ್ಮಾಣಕ್ಕೆ ಗೃಹಲಕ್ಷ್ಮಿ ಹಣ ದೇಣಿಗೆ; ಇದು ತಿಮ್ಮಾಪುರದ ಸೇವಾ ಕಥೆ
ಶ್ರೀ ರೇಣುಕಾ ಯಲ್ಲಮ್ಮನ ದೇಗುಲ ನಿರ್ಮಾಣಕ್ಕೆ ಗದಗ ಜಿಲ್ಲೆಯ ತಿಮ್ಮಾಪುರ ಗ್ರಾಮದ ಮಹಿಳೆಯರು ಗೃಹಲಕ್ಷ್ಮಿ ಹಣವನ್ನು ದೇಣಿಗೆಯಾಗಿ ನೀಡುತ್ತಿದ್ದಾರೆ.

Published : March 1, 2026 at 7:16 PM IST
ಗದಗ : ರಾಜ್ಯ ಸರ್ಕಾರದ ಗ್ಯಾರಂಟಿ ಯೋಜನೆಗಳಿಂದ ಆರ್ಥಿಕ ಹೊರೆ ಹೆಚ್ಚಾಗಿದೆ ಎಂಬ ಆರೋಪಗಳು ಕೇಳಿಬರುತ್ತಿರುವ ಈ ಸಂದರ್ಭದಲ್ಲಿ, ಜಿಲ್ಲೆಯ ತಿಮ್ಮಾಪುರ ಗ್ರಾಮದಲ್ಲಿ ನಡೆದಿರುವ ಒಂದು ಘಟನೆ ಆ ಚರ್ಚೆಗೆ ಹೊಸ ಆಯಾಮವನ್ನು ನೀಡಿದೆ.
ಗೃಹ ಲಕ್ಷ್ಮಿ ಯೋಜನೆಯ ಮೂಲಕ ಸರ್ಕಾರದಿಂದ ದೊರಕಿದ ಹಣವನ್ನು ವೈಯಕ್ತಿಕ ಉಪಯೋಗಕ್ಕೆ ಮಾತ್ರ ಸೀಮಿತಗೊಳಿಸದೇ, ಧಾರ್ಮಿಕ ಹಾಗೂ ಸಮೂಹ ಹಿತಕ್ಕಾಗಿ ಬಳಸಿದ ಮಹಿಳೆಯರ ನಡೆ ಇದೀಗ ರಾಜ್ಯದ ಗಮನ ಸೆಳೆಯುತ್ತಿದೆ.
ನಾಲ್ಕು ವರ್ಷದ ಕನಸು – ತಾಯಿ ಯಲ್ಲಮ್ಮನ ಶಿಲಾಮಂದಿರ : ಗದಗ ತಾಲೂಕಿನ ತಿಮ್ಮಾಪುರ ಗ್ರಾಮದಲ್ಲಿ ತಾಯಿ ಯಲ್ಲಮ್ಮನ ಶಿಲಾಮಂದಿರ ನಿರ್ಮಾಣದ ಕನಸು ಸುಮಾರು ನಾಲ್ಕು ವರ್ಷಗಳ ಹಿಂದೆ ಮೊಳಕೆಯೊಡೆದಿತ್ತು. ಗ್ರಾಮಸ್ಥರ ಒಗ್ಗಟ್ಟಿನಿಂದ ದೇವಾಲಯ ನಿರ್ಮಾಣಕ್ಕೆ ಯೋಜನೆ ರೂಪಿಸಲಾಗಿದ್ದು, ಆಂಧ್ರಪ್ರದೇಶದ ನುರಿತ ಶಿಲ್ಪಿಗಳಿಗೆ ಶಿಲಾಮಂದಿರ ನಿರ್ಮಾಣದ ಜವಾಬ್ದಾರಿ ವಹಿಸಲಾಗಿತ್ತು. ದೇವಸ್ಥಾನ ಸಂಪೂರ್ಣಗೊಳ್ಳಲು ಸುಮಾರು ಒಂದು ಕೋಟಿ ರೂಪಾಯಿ ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿತ್ತು.
ಪ್ರಾರಂಭಿಕ ಹಂತದಲ್ಲಿ ಗ್ರಾಮಸ್ಥರು ತಾವೇ ಮುಂದಾಗಿ ಸುಮಾರು 50 ಲಕ್ಷ ರೂಪಾಯಿ ದೇಣಿಗೆ ಸಂಗ್ರಹಿಸಿದರು. ಈ ಮೊತ್ತದಿಂದ ದೇವಾಲಯದ ಬೇಸ್ಮೆಂಟ್ ಹಾಗೂ ಗೋಡೆಗಳ ಕಾಮಗಾರಿ ಪೂರ್ಣಗೊಂಡಿತು. ಆದರೆ, ಆರ್ಥಿಕ ಸಂಕಷ್ಟ ಮತ್ತು ಹೆಚ್ಚುವರಿ ವೆಚ್ಚದ ಕಾರಣದಿಂದ ದೇವಸ್ಥಾನ ನಿರ್ಮಾಣ ಕಾರ್ಯ ಕೆಲಕಾಲ ನಿಧಾನಗೊಂಡು, ಕೆಲ ಹಂತಗಳಲ್ಲಿ ಸ್ಥಗಿತಗೊಳ್ಳುವ ಪರಿಸ್ಥಿತಿಯೂ ಎದುರಾಯಿತು.
ಹಣದ ಕೊರತೆ, ಗ್ರಾಮದ ಮಹಿಳೆಯರತ್ತ ಮೊರೆ: ದೇವಾಲಯ ನಿರ್ಮಾಣವನ್ನು ಪೂರ್ಣಗೊಳಿಸುವ ಉದ್ದೇಶದಿಂದ, ಗ್ರಾಮಸ್ಥರು ಮತ್ತು ದೇವಸ್ಥಾನದ ಸಮಿತಿ ಹೊಸ ಮಾರ್ಗ ಹುಡುಕತೊಡಗಿದರು. ಉಳಿದ ಹಂತದ ಕಾಮಗಾರಿಗೆ ಇನ್ನೂ ಸುಮಾರು 50 ಲಕ್ಷ ರೂಪಾಯಿ ಅಗತ್ಯವಿರುವುದು ಸ್ಪಷ್ಟವಾಗಿತ್ತು. ಈ ಸಂದರ್ಭದಲ್ಲಿ ಗ್ರಾಮದಲ್ಲಿ ಜಾರಿಯಲ್ಲಿರುವ ಗೃಹ ಲಕ್ಷ್ಮಿ ಯೋಜನೆ ಕುರಿತು ಚರ್ಚೆ ನಡೆಯಿತು. ಸರ್ಕಾರ ನೀಡುತ್ತಿರುವ ಈ ನೆರವು ಮಹಿಳೆಯರ ಕೈಯಲ್ಲಿ ಇರುವುದರಿಂದ, ಅವರ ಸಹಕಾರವನ್ನು ಪಡೆಯುವ ನಿರ್ಧಾರಕ್ಕೆ ಗ್ರಾಮಸ್ಥರು ಬಂದರು.
ಫೆಬ್ರವರಿ ತಿಂಗಳ ಗೃಹಲಕ್ಷ್ಮಿ ಯೋಜನೆಯ ಹಣವನ್ನು ಸ್ವಯಂಪ್ರೇರಿತವಾಗಿ ದಾನ ನೀಡುವಂತೆ ಮಹಿಳೆಯರಿಗೆ ಮನವಿ ಮಾಡಲಾಯಿತು. ಇದು ಕಡ್ಡಾಯವಲ್ಲ, ಸಂಪೂರ್ಣ ಸ್ವಇಚ್ಛೆಯ ಮೇರೆಗೆ ಎಂಬ ಸಂದೇಶವನ್ನು ಸ್ಪಷ್ಟಪಡಿಸಲಾಯಿತು. ಇದರ ಬೆನ್ನಲ್ಲೇ ತಿಮ್ಮಾಪುರ ಗ್ರಾಮದ ಮಹಿಳೆಯರು ಒಂದಾದ ಮೇಲೆ ಒಂದಾಗಿ ಮಂದಿರ ನಿರ್ಮಾಣಕ್ಕೆ ಕೈಜೋಡಿಸಿದರು.
850 ಗೃಹ ಲಕ್ಷ್ಮಿಯರು : ತಿಮ್ಮಾಪುರ ಗ್ರಾಮದಲ್ಲಿ ಒಟ್ಟು 850 ಗೃಹಲಕ್ಷ್ಮಿ ಫಲಾನುಭವಿಗಳಿದ್ದಾರೆ. ಈ ಪೈಕಿ ಈಗಾಗಲೇ ಸುಮಾರು ನೂರು ಮಹಿಳೆಯರು ತಮ್ಮ ಪಾಲಿನ ಗೃಹ ಲಕ್ಷ್ಮಿ ಹಣವನ್ನು ಮಂದಿರ ನಿರ್ಮಾಣಕ್ಕೆ ದಾನವಾಗಿ ನೀಡಿದ್ದಾರೆ. ಇದರಿಂದ ಪ್ರಾರಂಭಿಕವಾಗಿ 2,50,000 ರೂಪಾಯಿ ಸಂಗ್ರಹವಾಗಿದೆ. ಮುಂದಿನ ದಿನಗಳಲ್ಲಿ ಎಲ್ಲಾ ಫಲಾನುಭವಿಗಳಿಂದ ಕನಿಷ್ಠ 17 ಲಕ್ಷ ರೂಪಾಯಿ ದೇಣಿಗೆ ಸಂಗ್ರಹಿಸುವ ಗುರಿಯನ್ನು ಗ್ರಾಮಸ್ಥರು ಹೊಂದಿದ್ದಾರೆ.
ದೇವಾಲಯ ಸಮಿತಿ ಹಾಗೂ ಗ್ರಾಮಸ್ಥರು ಪ್ರತಿದಿನ ಸಂಜೆ ಮನೆಮನೆಗೆ ತೆರಳಿ ಮಹಿಳೆಯರನ್ನು ಭೇಟಿ ಮಾಡಿ, ಮಂದಿರ ನಿರ್ಮಾಣದ ಅಗತ್ಯತೆಯನ್ನು ವಿವರಿಸುತ್ತಿದ್ದಾರೆ. ಜಮೀನಿನ ಕೆಲಸ ಮುಗಿಸಿ ಮನೆಗೆ ಮರಳುವ ಮಹಿಳೆಯರು ಕೂಡ ತಮ್ಮ ಕುಟುಂಬದ ಅಗತ್ಯಗಳನ್ನು ಪರಿಗಣಿಸುತ್ತಾ, ದೇವರ ಕಾರ್ಯಕ್ಕೆ ಸಹಾಯ ಮಾಡುವ ಮನಸ್ಸು ತೋರಿಸುತ್ತಿದ್ದಾರೆ. ಈ ಉತ್ಸಾಹವೇ ದೇಣಿಗೆ ಸಂಗ್ರಹ ಕಾರ್ಯಕ್ಕೆ ಜೀವಂತಿಕೆ ತಂದಿದೆ.
ಗ್ಯಾರಂಟಿ ಹಣದ ಸದುಪಯೋಗದ ಚರ್ಚೆಗೆ ಉತ್ತರ : ರಾಜ್ಯ ಮಟ್ಟದಲ್ಲಿ ಗ್ಯಾರಂಟಿ ಯೋಜನೆಗಳು ದುರುಪಯೋಗವಾಗುತ್ತಿವೆ ಎಂಬ ಆರೋಪಗಳು ಕೇಳಿಬರುತ್ತಿರುವಾಗಲೇ, ತಿಮ್ಮಾಪುರದ ಈ ನಡೆ ಅದಕ್ಕೆ ಮೌನ ಉತ್ತರವಾಗಿ ಪರಿಣಮಿಸಿದೆ. ಸರ್ಕಾರ ನೀಡಿದ ಹಣವನ್ನು ಮಹಿಳೆಯರು ವೈಯಕ್ತಿಕ ಉಪಯೋಗಕ್ಕೆ ಮಾತ್ರವಲ್ಲದೆ, ಸಾಮೂಹಿಕವಾಗಿ ಮತ್ತು ಧಾರ್ಮಿಕ ಕಾರ್ಯಗಳಿಗೆ ಬಳಸಬಹುದೆಂಬುದನ್ನು ಈ ಗ್ರಾಮ ಸಾಬೀತುಪಡಿಸಿದೆ.
ತಿಮ್ಮಾಪುರದ ಗೃಹ ಲಕ್ಷ್ಮಿಯರ ಈ ದೇಣಿಗೆ ಕೇವಲ ದೇವಸ್ಥಾನ ನಿರ್ಮಾಣಕ್ಕೆ ಮಾತ್ರ ಸೀಮಿತವಲ್ಲ. ಇದು ಮಹಿಳೆಯರ ಸಾಮಾಜಿಕ ಜಾಗೃತಿ, ನಿರ್ಧಾರ ಶಕ್ತಿ ಹಾಗೂ ಸಮುದಾಯದ ಮೇಲಿನ ಹೊಣೆಗಾರಿಕೆಯನ್ನು ಪ್ರತಿಬಿಂಬಿಸುತ್ತದೆ. ಗ್ಯಾರಂಟಿ ಯೋಜನೆಗಳ ಬಗ್ಗೆ ನಡೆಯುತ್ತಿರುವ ಚರ್ಚೆಗೆ ಮಾನವೀಯ ಸ್ಪರ್ಶ ನೀಡುವ ಈ ಘಟನೆ, ಗ್ರಾಮೀಣ ಕರ್ನಾಟಕದಲ್ಲಿ ಮಹಿಳೆಯರ ಪಾತ್ರ ಎಷ್ಟು ಮಹತ್ವದ್ದೆಂಬುದನ್ನು ಮತ್ತೊಮ್ಮೆ ತೋರಿಸಿಕೊಟ್ಟಿದೆ.
ಗ್ಯಾರಂಟಿ ಹಣದ ಕುರಿತು ರಾಜಕೀಯ ವಾಗ್ವಾದಗಳು ನಡೆಯುವ ನಡುವೆಯೇ, ತಿಮ್ಮಾಪುರ ಗ್ರಾಮದ ಈ ಸೇವಾ ಮನೋಭಾವ ರಾಜ್ಯಾದ್ಯಂತ ಮಾದರಿಯಾಗಿ ಗುರುತಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಸ್ಥಳೀಯರು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಮಹಿಳೆಯರಿಗೆ ತುಂಬು ಹೃದಯದ ಧನ್ಯವಾದಗಳು: ದೇವಸ್ಥಾನದ ಟ್ರಸ್ಟ್ ಕಮಿಟಿಯ ಖಜಾಂಚಿ ಯಲ್ಲಪ್ಪ ಬಾಬ್ರಿ ಅವರು ಮಾತನಾಡಿ, 'ಗ್ರಾಮದ 850 ಜನ ಮಹಿಳೆಯರು ಗೃಹ ಲಕ್ಷ್ಮಿ ಹಣದ ದೇಣಿಗೆಯನ್ನು ದೇವಾಲಯ ನಿರ್ಮಾಣಕ್ಕೆ ನೀಡುತ್ತಿದ್ದಾರೆ. ಅದರಲ್ಲಿ ಈಗಾಗಲೇ 100 ಜನ ಮಹಿಳೆಯರು 2000 ರೂ. ನೀಡಿದ್ದಾರೆ. ಎಲ್ಲರೂ ಹಣವನ್ನು ನೀಡಿದರೆ 16 ಲಕ್ಷ ಸಂಗ್ರಹವಾಗಲಿದೆ. ನಮ್ಮ ದೇವಸ್ಥಾನ ಇನ್ನು ಐದಾರು ತಿಂಗಳಲ್ಲಿ ಮುಕ್ತಾಯದ ಹಂತ ತಲುಪಲಿದೆ. ಹಣವನ್ನು ನೀಡಿದ ಮಹಿಳೆಯರಿಗೆ ತುಂಬು ಹೃದಯದ ಧನ್ಯವಾದಗಳು' ಎಂದು ಹೇಳಿದ್ದಾರೆ.
'ಶ್ರೀ ರೇಣುಕಾ ಯಲ್ಲಮ್ಮನ ಗುಡಿ ಕಟ್ಟಲು ಮುಂದಾಗಿದ್ದೇವೆ. ನಮ್ಮೂರಿನ ಮಹಿಳೆಯರು ಹಣ ಕೊಟ್ಟಿದ್ದಾರೆ. ಕಡಿಮೆಯಾದರೆ ಮತ್ತೆ ಕೊಡುತ್ತಾರೆ' ಎಂದು ಗ್ರಾಮಸ್ಥೆ ಶಾಂತವ್ವ ಬಸಾಪೂರ ಅವರು ತಿಳಿಸಿದರು.
ಗ್ರಾಮಸ್ಥೆ ಭೀಮವ್ವ ಬಾನಾಪೂರ ಅವರು ಮಾತನಾಡಿ, 'ಹಣಕಾಸಿನ ತೊಂದರೆಯಿಂದ ದೇವಸ್ಥಾನದ ಕಟ್ಟಡ ನಿಂತಿತ್ತು. ಹೀಗಾಗಿ, ನಾವು ಗೃಹಲಕ್ಷ್ಮಿಯ ಒಂದು ತಿಂಗಳ ಹಣವನ್ನು ಕೊಟ್ಟು ಕೆಲಸ ಶುರು ಮಾಡಿಸಿದ್ದೇವೆ. ಕಡಿಮೆಯಾದರೆ ಇನ್ನೂ ಹಣವನ್ನು ಕೊಡುತ್ತೇವೆ ಎಂದರು.
ಹಣ ಕಡಿಮೆಯಾದರೆ ಇನ್ನೂ ಕೊಡುತ್ತೇವೆ : ಗ್ರಾಮಸ್ಥರಾದ ರೇಣವ್ವ ದೇವರವರ ಅವರು ಮಾತನಾಡಿ, 'ಸಿಎಂ ಸಿದ್ದರಾಮಯ್ಯ ಹಾಕಿದ್ದ ಗೃಹಲಕ್ಷ್ಮಿ ಹಣವನ್ನು ದೇವಸ್ಥಾನದ ನಿರ್ಮಾಣಕ್ಕೆ ಕೊಡುತ್ತಿದ್ದೇವೆ. ಹಣ ಕಡಿಮೆಯಾದರೆ ಇನ್ನೂ ಕೊಡುತ್ತೇವೆ. ಒಟ್ಟಿನಲ್ಲಿ ದೇವಸ್ಥಾನ ಆಗಲಿ' ಎಂದು ಹೇಳಿದ್ದಾರೆ.
ಇದನ್ನೂ ಓದಿ : ಸ್ವತಂತ್ರ ಮಹಿಳಾ ಸೈನ್ಯ ಸ್ಥಾಪಿಸಿದ್ದ ಧೀರ ಕನ್ನಡತಿ : ರಾಜ್ಯ, ರಾಷ್ಟ್ರಮಟ್ಟದಲ್ಲಿ ವೀರರಾಣಿ ಬೆಳವಡಿ ಮಲ್ಲಮ್ಮಗೆ ಸಿಗಬೇಕಿದೆ ಗೌರವ

