ETV Bharat / state

ಕರಾವಳಿಯ ಗಡಿ ದಾಟಿದ ಕಂಬಳ!: ಇನ್ಮುಂದೆ ರಾಜ್ಯಾದ್ಯಂತ ಮೊಳಗಲಿದೆ ಕೋಣಗಳ ಹೆಜ್ಜೆ ಸದ್ದು

ಕರಾವಳಿಯ ಕಂಬಳ ಇನ್ಮುಂದೆ ರಾಜ್ಯಾದ್ಯಂತ ಮೊಳಗಲಿದೆ ಎಂದು ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷರಾದ ಡಾ. ಬೆಳಪು ದೇವಿಪ್ರಸಾದ್ ಶೆಟ್ಟಿ ತಿಳಿಸಿದ್ದಾರೆ.

Green Signal For Holding Kambala Across The Karnataka
ಪ್ರಾತಿನಿಧಿಕ ಚಿತ್ರ (ETV Bharat)
author img

By ETV Bharat Karnataka Team

Published : January 7, 2026 at 4:38 PM IST

2 Min Read
Choose ETV Bharat

ವರದಿ - ವಿನೋದ್ ಪುದು

ಮಂಗಳೂರು: ಶತಮಾನಗಳ ಇತಿಹಾಸ ಇರುವ ತುಳುನಾಡಿನ ಜಾನಪದ ಕ್ರೀಡೆ 'ಕಂಬಳ' ಇದೀಗ ಕೇವಲ ದಕ್ಷಿಣ ಕನ್ನಡ ಮತ್ತು ಉಡುಪಿ ಜಿಲ್ಲೆಗಳಿಗೆ ಸೀಮಿತವಾಗಿ ಉಳಿದಿಲ್ಲ. ಕರ್ನಾಟಕ ಹೈಕೋರ್ಟ್​ನ ಇತ್ತೀಚಿನ ಐತಿಹಾಸಿಕ ತೀರ್ಪು ಮತ್ತು ರಾಜ್ಯ ಸರ್ಕಾರದ ಅಧಿಕೃತ ಮಾನ್ಯತೆಯಿಂದಾಗಿ ಕಂಬಳವು ಇಡೀ ಕರ್ನಾಟಕದ ಹೆಮ್ಮೆಯ ಕ್ರೀಡೆಯಾಗಿ ಹೊರಹೊಮ್ಮಿದೆ.

ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷ ಡಾ. ಬೆಳಪು ದೇವಿಪ್ರಸಾದ್ ಶೆಟ್ಟಿ ಅವರು ಸುದ್ದಿಗೋಷ್ಠಿ ನಡೆಸಿ ಮಾತನಾಡಿದರು. (ETV Bharat)

ಹೈಕೋರ್ಟ್ ತೀರ್ಪು ಕಂಬಳಕ್ಕೆ ಸಿಕ್ಕ ಹೊಸ ಆಯಾಮ: ಕಂಬಳವು ಕೇವಲ ಕರಾವಳಿ ಭಾಗದ ಆಚರಣೆಯಾಗಿದ್ದು, ಇದನ್ನು ಬೆಂಗಳೂರು ಸೇರಿದಂತೆ ರಾಜ್ಯದ ಇತರ ಭಾಗಗಳಲ್ಲಿ ನಡೆಸಲು ಅನುಮತಿ ನೀಡಬಾರದು ಎಂದು ಪ್ರಾಣಿ ದಯಾ ಸಂಘಟನೆ ಪೇಟಾ (PETA) ಸಲ್ಲಿಸಿದ್ದ ಅರ್ಜಿಯನ್ನು ಕರ್ನಾಟಕ ಹೈಕೋರ್ಟ್ ಇತ್ತೀಚೆಗೆ ತಿರಸ್ಕರಿಸಿದೆ. ಇದರಿಂದ ಮಂಗಳೂರು ಮತ್ತು ಉಡುಪಿ ಹೊರತುಪಡಿಸಿ ಶಿವಮೊಗ್ಗ, ಮೈಸೂರು ಮತ್ತು ಬೆಂಗಳೂರಿನಂತಹ ಮಹಾನಗರಗಳಲ್ಲಿಯೂ ಕಂಬಳ ಆಯೋಜಿಸಲು ಹೈಕೋರ್ಟ್ ತೀರ್ಪಿನಿಂದ ಗ್ರೀನ್ ಸಿಗ್ನಲ್ ಸಿಕ್ಕಂತಾಗಿದೆ.

ಕರಾವಳಿಯ ಗದ್ದೆಗಳಲ್ಲಿ ನಡೆಯುತ್ತಿದ್ದ ಕಂಬಳವನ್ನು ಮೊದಲ ಬಾರಿಗೆ ರಾಜಧಾನಿ ಬೆಂಗಳೂರಿಗೆ ಪರಿಚಯಿಸಿದ್ದು 2023ರ ನವೆಂಬರ್​ನಲ್ಲಿ. ಬೆಂಗಳೂರಿನ ಅರಮನೆ ಮೈದಾನದಲ್ಲಿ ನಡೆದ 'ಬೆಂಗಳೂರು ಕಂಬಳ' ಅಥವಾ 'ರಾಜ-ಮಹಾರಾಜ' ಜೋಡುಕರೆ ಕಂಬಳವು ಲಕ್ಷಾಂತರ ಪ್ರೇಕ್ಷಕರನ್ನು ಸೆಳೆದು ವಿಶ್ವಮಟ್ಟದಲ್ಲಿ ಗಮನ ಸೆಳೆದಿತ್ತು. ಈ ಯಶಸ್ಸಿನ ಬೆನ್ನಲ್ಲೇ ಕಂಬಳದ ವ್ಯಾಪ್ತಿಯನ್ನು ವಿಸ್ತರಿಸಲು ಭದ್ರವಾದ ಅಡಿಪಾಯ ಬಿದ್ದಿತು.

Green Signal For Holding Kambala Across The Karnataka
ಪ್ರಾತಿನಿಧಿಕ ಚಿತ್ರ (ETV Bharat)

ರಾಜ್ಯ ಕ್ರೀಡೆ ಮಾನ್ಯತೆ ಮತ್ತು ಸರ್ಕಾರದ ಬೆಂಬಲ: ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ಕಂಬಳವನ್ನು ಕೇವಲ ಸಾಂಸ್ಕೃತಿಕ ಆಚರಣೆಯನ್ನಾಗಿ ನೋಡದೇ, ಅದಕ್ಕೆ 'ಅಧಿಕೃತ ರಾಜ್ಯ ಕ್ರೀಡೆ' ಮಾನ್ಯತೆ ನೀಡಿದೆ. ಕರ್ನಾಟಕ ಕ್ರೀಡಾ ಪ್ರಾಧಿಕಾರದ ಅಡಿ 'ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್'ಗೆ ಅಧಿಕೃತ ಮಾನ್ಯತೆ ನೀಡಲಾಗಿದ್ದು, ಇನ್ಮುಂದೆ ಕಂಬಳಕ್ಕೆ ಸರ್ಕಾರದ ಕ್ರೀಡಾ ಬಜೆಟ್​ನಿಂದ ಹಣಕಾಸಿನ ನೆರವು ಸಿಗಲಿದೆ.

ಇದೀಗ ಕಂಬಳವನ್ನು ರಾಜ್ಯದ ವಿವಿಧೆಡೆ ನಡೆಸಲು ಅನುಮತಿ ಸಿಕ್ಕಿರುವುದರಿಂದ ರಾಜ್ಯದ ಬೇರೆ ಬೇರೆ ಕಡೆ ಕಂಬಳ ನಡೆಸಲು ಚಟುವಟಿಕೆ ಆರಂಭವಾಗಿದೆ. ಮೈಸೂರಿನಲ್ಲಿ ಉಪಮುಖ್ಯಮಂತ್ರಿ ಡಿ ಕೆ ಶಿವಕುಮಾರ್ ಅವರು ಕಂಬಳ ನಡೆಸಲು ಉತ್ಸುಕರಾಗಿದ್ದು, ಶಿವಮೊಗ್ಗದಲ್ಲಿ ಮಾಜಿ ಉಪಮುಖ್ಯಮಂತ್ರಿ ಕೆ ಎಸ್ ಈಶ್ವರಪ್ಪ ಆಸಕ್ತಿ ತೋರಿಸಿದ್ದಾರೆ. ಉತ್ತರ ಕ‌ನ್ನಡದಲ್ಲಿ ಸಚಿವ ಮಾಂಕಾಳು ವೈದ್ಯ ಅವರು ಆಸಕ್ತಿ ತೋರಿದ್ದು, ಬೆಂಗಳೂರಿನಲ್ಲಿ ಹಿಂದೆ ಕಂಬಳ ನಡೆಸಿದ ಪುತ್ತೂರು ಶಾಸಕ ಅಶೋಕ್ ಕುಮಾರ್ ರೈ ಅವರು ಮತ್ತೆ ಬೆಂಗಳೂರಿನಲ್ಲಿ ನಡೆಸಲು ಮುಂದಾಗಿದ್ದಾರೆ. ಹೀಗೆ ರಾಜ್ಯದ ಬೇರೆ ಬೇರೆ ಕಡೆ ಕಂಬಳ ನಡೆಸಲು ಉತ್ಸುಕರಾಗಿದ್ದು, ಮುಂದಿನ ವರ್ಷ ಇದು ನಡೆಯುವ ಸಾಧ್ಯತೆ ಇದೆ.

Green Signal For Holding Kambala Across The Karnataka
ಪ್ರಾತಿನಿಧಿಕ ಚಿತ್ರ (ETV Bharat)

ಈ ಕುರಿತು ಕರ್ನಾಟಕ ರಾಜ್ಯ ಕಂಬಳ ಅಸೋಸಿಯೇಷನ್ ಅಧ್ಯಕ್ಷರಾದ ಡಾ. ಬೆಳಪು ದೇವಿಪ್ರಸಾದ್ ಶೆಟ್ಟಿ ಅವರು ಮಾತನಾಡಿ, "ಹೈಕೋರ್ಟ್ ನೀಡಿರುವ ಈ ತೀರ್ಪು ಕಂಬಳಕ್ಕೆ ಸಂದ ದೊಡ್ಡ ಜಯ. ಕಂಬಳವನ್ನು ಕೇವಲ ಕರಾವಳಿ ಭಾಗಕ್ಕೆ ಸೀಮಿತಗೊಳಿಸುವ ಪೇಟಾ ಸಂಘಟನೆಯ ಪ್ರಯತ್ನಕ್ಕೆ ಹಿನ್ನಡೆಯಾಗಿದೆ. ಸರ್ಕಾರದ ಮಾನ್ಯತೆಯಿಂದಾಗಿ ಕಂಬಳಕ್ಕೆ ಇನ್ನೂ ಹೆಚ್ಚು ಶಕ್ತಿ ಬರಲಿದೆ. ಕೋಣಗಳ ಆರೋಗ್ಯ ಮತ್ತು ಶಿಸ್ತಿನ ಬಗ್ಗೆ ನಾವು ಕಟ್ಟುನಿಟ್ಟಿನ ನಿಯಮಗಳನ್ನು ರೂಪಿಸಿದ್ದೇವೆ. ಭವಿಷ್ಯದಲ್ಲಿ ಮೈಸೂರು ಮತ್ತು ಇತರ ಜಿಲ್ಲೆಗಳಲ್ಲಿಯೂ ಕಂಬಳವನ್ನು ಯಶಸ್ವಿಯಾಗಿ ಆಯೋಜಿಸುತ್ತೇವೆ." ಎಂದು ತಿಳಿಸಿದ್ದಾರೆ.

ಇನ್ಮುಂದೆ ಕಂಬಳ ಕರ್ನಾಟಕದ ಕರಾವಳಿ ಮಾತ್ರವಲ್ಲದೇ, ಮೈಸೂರು, ಶಿವಮೊಗ್ಗದಂತಹ ಕಡೆಗಳಲ್ಲಿ ಕರಾವಳಿಯ ಕೋಣಗಳ ಓಟವನ್ನು ಜನರು ಸವಿಯುವ ಕಾಲ ಹತ್ತಿರ ಬರಲಿದೆ. ಕರಾವಳಿಯ ಶ್ರೀಮಂತ ಪರಂಪರೆ ಇನ್ನು ಇಡೀ ನಾಡಿನಾದ್ಯಂತ ಪಸರಿಸಲಿದೆ.

ಇದನ್ನೂ ಓದಿ: ದಕ್ಷಿಣ ಕನ್ನಡ, ಉಡುಪಿ ಜಿಲ್ಲೆ ಹೊರತುಪಡಿಸಿ ರಾಜ್ಯದ ಇತರೆಡೆ ಕಂಬಳ ಆಯೋಜಿಸದಂತೆ ನಿರ್ಬಂಧ ವಿಧಿಸಲು ನಿರಾಕರಿಸಿದ ಹೈಕೋರ್ಟ್