ETV Bharat / state

ಬನಶಂಕರಿ ಜಾತ್ರೆ: ಲಕ್ಷಾಂತರ ಭಕ್ತರ ಸಮ್ಮುಖದಲ್ಲಿ ವೈಭವದಿಂದ ನೆರವೇರಿದ ಮಹಾರಥೋತ್ಸವ

ಬಾಗಲಕೋಟೆಯ ಪ್ರಸಿದ್ಧ ಶ್ರೀ ಬನಶಂಕರಿದೇವಿ ದೇವಸ್ಥಾನದಲ್ಲಿ ಮಹಾ ರಥೋತ್ಸವ ನಡೆಯಿತು.

a-grand-chariot-festival-is-being-held-at-the-famous-sukshetra-sri-banashankari-devi-temple
ಬಾಗಲಕೋಟೆಯ ಶ್ರೀ ಬನಶಂಕರಿದೇವಿ ದೇವಸ್ಥಾನದಲ್ಲಿ ಮಹಾ ರಥೋತ್ಸವ (ETV Bharat)
author img

By ETV Bharat Karnataka Team

Published : January 4, 2026 at 3:45 PM IST

1 Min Read
Choose ETV Bharat

ಬಾಗಲಕೋಟೆ: ಶ್ರೀ ಬನಶಂಕರಿದೇವಿ ದೇವಸ್ಥಾನದಲ್ಲಿ ಜಾತ್ರಾ ಮಹೋತ್ಸವದ ಅಂಗವಾಗಿ ಶನಿವಾರ ಸಂಜೆ 5 ಗಂಟೆಗೆ ಲಕ್ಷಾಂತರ ಭಕ್ತರ ಭಕ್ತಿ–ಭಾವಗಳ ನಡುವೆ ಸಡಗರ, ಸಂಭ್ರಮದಿಂದ ಮಹಾ ರಥೋತ್ಸವ ಜರುಗಿತು.

ಜಾತ್ರಾ ಮಹೋತ್ಸವದ ಅಂಗವಾಗಿ ಕಳೆದ ಡಿ.27ರಿಂದ ಪ್ರತಿದಿನ ವಿವಿಧ ಧಾರ್ಮಿಕ ಕಾರ್ಯಕ್ರಮಗಳು ನಡೆದಿದ್ದು, ಶನಿವಾರ ಬೆಳಿಗ್ಗೆ ಬನಶಂಕರಿ ದೇವಿಗೆ ರುದ್ರಾಭಿಷೇಕ ಹಾಗೂ ಕ್ಷೀರಾಭಿಷೇಕವನ್ನು ಪೂಜಾರ ಕುಟುಂಬದವರು ನೆರವೇರಿಸಿದರು. ನಂತರ ಸಾಂಪ್ರದಾಯಿಕವಾಗಿ ರಥಾಂಗ ಹೋಮ ಮತ್ತು ಪೂಜೆ ನೆರವೇರಿಸಿ, ಮಾಡಲಗೇರಿಯಿಂದ ತಂದ ರಥವನ್ನು ಭಕ್ತರು ಎಳೆದರು.

ಬಾಗಲಕೋಟೆಯ ಶ್ರೀ ಬನಶಂಕರಿದೇವಿ ದೇವಸ್ಥಾನದಲ್ಲಿ ಮಹಾ ರಥೋತ್ಸವ (ETV Bharat)

ರಥಕ್ಕೆ ಉತ್ತತ್ತಿ, ನಿಂಬೆಹಣ್ಣು, ಬಾಳೆಹಣ್ಣು ಸಮರ್ಪಿಸಿ, "ಬನಶಂಕರಿದೇವಿ ನಿನ್ನ ಪಾದಕ ಶಂಭು ಕೋ" ಎಂದು ಭಕ್ತರು ಘೋಷಣೆ ಮೊಳಗಿಸಿದರು. ಬನಶಂಕರಿ ದೇವಸ್ಥಾನ ಸಮಿತಿಯ ಅಧ್ಯಕ್ಷ ವೆಂಕಟ ಭಟ್ ಪೂಜಾರ, ಕುಟುಂಬದವರು ಉಪಸ್ಥಿತರಿದ್ದರು.

ಮಹಾರಥೋತ್ಸವದಂದು ಬೆಳಗ್ಗೆಯಿಂದಲೇ ಹೊರಜಿಲ್ಲೆಗಳೂ ಸೇರಿದಂತೆ ರಾಜ್ಯದ ವಿವಿಧ ಜಿಲ್ಲೆ–ತಾಲೂಕುಗಳಿಂದ ಲಕ್ಷಾಂತರ ಭಕ್ತರು ಪಾದಯಾತ್ರೆಯ ಮೂಲಕ ಬನಶಂಕರಿಗೆ ಆಗಮಿಸಿದ್ದರು.

ನಾಟಕಗಳ ಜಾತ್ರೆ ಎಂದೇ ಪ್ರಸಿದ್ಧಿ: ಮಾಹಿತಿ ತಂತ್ರಜ್ಞಾನ ಯುಗದಲ್ಲೂ ನಾಟಕ ಪ್ರದರ್ಶನದ ಬಗ್ಗೆ ಜನರಿಗೆ ಆಸಕ್ತಿ ಮೂಡುತ್ತಿದೆ. ಬನಶಂಕರಿ ದೇವಿ ಜಾತ್ರೆಯಲ್ಲಿ ಈ ಬಾರಿ 11 ನಾಟಕ ಕಂಪನಿಗಳು ಪ್ರದರ್ಶನ ಮಾಡಿವೆ. ರಿಯಾಲಿಟಿ ಶೋ 'ಕಾಮಿಡಿ ಕಿಲಾಡಿಗಳು' ಕಲಾವಿದರನ್ನು ಕರೆಸಿ, ನಾಟಕ ಪ್ರದರ್ಶನ ಮಾಡುವ ಮೂಲಕ ಪೇಕ್ಷಕರನ್ನು ರಂಜಿಸಲಾಗಿದೆ. ಸಂಜೆ ಆರು ಗಂಟೆಯಿಂದ ಪ್ರಾರಂಭವಾದ ನಾಟಕ ಬೆಳಗಿನ ಜಾವ ಆರು ಗಂಟೆಯವರೆಗೆ ಪ್ರದರ್ಶನ ನಡೆದಿದೆ. ಇದು ಒಂದು ತಿಂಗಳ ಕಾಲ ಹಗಲು ರಾತ್ರಿ ನಡೆಯುವ ಏಕೈಕ ಜಾತ್ರೆ ಎಂಬುದು ವಿಶೇಷ.

Drama performance
ನಾಟಕ ಪ್ರದರ್ಶನ (ETV Bharat)

ಮಹಾ ರಥೋತ್ಸವದಲ್ಲಿ ಶಾಸಕ ಭೀಮಸೇನ ಚಿಮ್ಮನಕಟ್ಟಿ, ಪುರಸಭೆ ಸದಸ್ಯ ಮಂಜುನಾಥ ಹೊಸಮನಿ, ಶಿವಕುಮಾರ ಹಿರೇಮಠ, ಹನುಮಂತ ಅಪ್ಪನ್ನವರ, ಯುವ ಮುಖಂಡ ಮಹೇಶ್ ಹೊಸಗೌಡ್ರ, ತಹಶೀಲ್ದಾರ್ ಕಾವ್ಯಶ್ರೀ ಹೆಚ್, ತಾಲೂಕು ಪಂಚಾಯಿತಿ ಇ.ಓ.ಸತೀಶ ಮಾಕೊಂಡ, ಚೊಳಚಗುಡ್ಡ ಗ್ರಾಮ ಪಂಚಾಯಿತಿ ಅಧ್ಯಕ್ಷೆ ರಕ್ಷಿತಾ ಮರಡಿತೋಟದ, ಪಿಡಿಒ, ಗ್ರಾ.ಪಂ.ಸದಸ್ಯರು ಸೇರಿದಂತೆ ಲಕ್ಷಾಂತರ ಭಕ್ತರು ಪಾಲ್ಗೊಂಡಿದ್ದರು.

ಇದನ್ನೂ ಓದಿ: ನಾಳೆಯಿಂದ ದಕ್ಷಿಣ ಭಾರತದ ಕುಂಭಮೇಳ ಖ್ಯಾತಿಯ 'ಗವಿಮಠ ರಥೋತ್ಸವ'