ಬೇಡ್ತಿ ವರದಾ ನದಿ ಜೋಡಣೆ ಗೊಂದಲ ನಿವಾರಣೆಗೆ ರಾಜ್ಯ ಸರ್ಕಾರ ಸಭೆ ಕರೆಯಬೇಕು: ಬಸವರಾಜ ಬೊಮ್ಮಾಯಿ
ಬೇಡ್ತಿ ವರದಾನದಿ ಜೋಡಣೆ ಆಗಲೇಬೇಕಿದೆ. ಯಾವುದೇ ರೀತಿಯ ಚರ್ಚೆಗೆ ನಾವು ಸಿದ್ಧ. ಗೊಂದಲಗಳನ್ನು ಮಾತುಕತೆ ಮೂಲಕ ಬಗೆ ಹರಿಸಬೇಕು ಎಂದು ಇಂದು ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಒತ್ತಾಯಿಸಿದ್ದಾರೆ.

Published : January 11, 2026 at 8:03 PM IST
ಹಾವೇರಿ: "ಬೇಡ್ತಿ ವರದಾ ನದಿ ಜೋಡಣೆ ಬಗ್ಗೆ ಇರುವ ಗೊಂದಲ ನಿವಾರಣೆಗೆ ರಾಜ್ಯ ಸರ್ಕಾರ ಸಭೆ ಕರೆಯಬೇಕು" ಎಂದು ಮಾಜಿ ಸಿಎಂ, ಹಾವೇರಿ ಸಂಸದ ಬಸವರಾಜ ಬೊಮ್ಮಾಯಿ ಆಗ್ರಹಿಸಿದ್ದಾರೆ.
ಉತ್ತರ ಕನ್ನಡ ಜಿಲ್ಲೆಯಲ್ಲಿನ ಪಶ್ಚಿಮ ಘಟ್ಟಗಳನ್ನು ಉಳಿಸಿ, ವರದಾ - ಬೇಡ್ತಿ ವಿರೋಧಿಸಿ ಅಭಿಯಾನ ಕುರಿತಂತೆ ಹಾವೇರಿಯಲ್ಲಿ ಮಾತನಾಡಿದ ಅವರು, "ವರದಾ ಬೇಡ್ತಿ ನದಿ ಜೋಡಣೆ ಯೋಜನೆ ಇಂದಿನದ್ದಲ್ಲ 1994 ರಿಂದಲೇ ಇದೆ. ಹಾವೇರಿ ಜಿಲ್ಲೆಯಲ್ಲೂ ಮಠಾಧೀಶರು, ಜನಪ್ರತಿನಿಧಿಗಳ ನೇತೃತ್ವದಲ್ಲಿ ಜನರನ್ನು ಸೇರಿಸಿ ಜಾಗೃತಿ ಸಮಾವೇಶ ಮಾಡುವುದಿದೆ. ಹೊಸದಾಗಿ ಏನೂ ಯೋಜನೆ ಮಾಡುತ್ತಿಲ್ಲ. ಅಂದಿನ ಯೋಜನೆಗೂ ಇಂದಿನ ಯೋಜನೆಗೂ ವ್ಯತ್ಯಾಸ ಇದೆ" ಎಂದರು.
"ಹೊಸ ಯೋಜನೆಯ ಪ್ರಕಾರ ಪರಿಸರ ಹಾನಿ, ಅರಣ್ಯ ನಾಶ ಏನೂ ಆಗಲ್ಲ. ಕಡಿಮೆ ನೀರನ್ನು ಎತ್ತುತ್ತಿದ್ದೇವೆ, ಯಾವುದೇ ನೀರಿನ ನಷ್ಟ ಆಗಲ್ಲ. ರಾಜ್ಯ ಸರ್ಕಾರ ಆ ಭಾಗದಲ್ಲಿ ಸ್ವಾಮೀಜಿಗಳ ನೇತೃತ್ವದಲ್ಲಿ ನಡೆದಿರೋ ಹೋರಾಟಕ್ಕೆ ಈ ಅಂಶಗಳ ಬಗ್ಗೆ ಮನವರಿಕೆ ಮಾಡಬೇಕು. ರಾಜ್ಯ ಸರ್ಕಾರ ಮನವರಿಕೆ ಮಾಡಿಕೊಡಲಿ. ವಾಟರ್ ಎಕ್ಸಪರ್ಟ್, ಪರಿಸರ ವಿಜ್ಞಾನಿಗಳನ್ನು ಕರೆಯಲಿ. ಎಲ್ಲವನ್ನು ಚರ್ಚಿಸಿ ಸೌಹಾರ್ದಯುತ ನಿರ್ಣಯ ತೆಗೆದುಕೊಳ್ಳಬೇಕು. ನಮ್ಮ ಕಡೆ ಬರಗಾಲ ಇದೆ. ಮಳೆಗಾಲದಲ್ಲಿ ನೀರು ಸ್ಟೋರ್ ಮಾಡಿದರೆ ನಮ್ಮ ಭಾಗಕ್ಕೆ ಅನುಕೂಲ ಆಗುತ್ತದೆ. ಭಾವನಾತ್ಮಕವಾಗಿ ಇದನ್ನು ನೋಡಬಾರದು".
"ಯಾರಿಗೂ ತೊಂದರೆ ಆಗದಂತೆ ಯೋಜನೆ ಮಾಡಬೇಕಿದೆ. ರಾಜ್ಯ ಸರ್ಕಾರ ಡಿಪಿಆರ್ ಮಾಡಲು ಒಪ್ಪಿಗೆ ಕೊಟ್ಟಿದೆ. ಡಿಪಿಆರ್ ಬಳಿಕ ರಾಜ್ಯ ಸರ್ಕಾರ ಸಭೆ ಕರೆಯಲಿ. ಯಾವುದೇ ನದಿ ನಿಂತ ನೀರಲ್ಲ. ಕೃಷ್ಣ ಮಹಾರಾಷ್ಟ್ರದಲ್ಲಿ ಹುಟ್ಟಿ ಆಂಧ್ರಪ್ರದೇಶ ಕರ್ನಾಟಕದಲ್ಲಿ ಹರಿಯುತ್ತದೆ, ಬರಿ ಮಹಾರಾಷ್ಟ್ರಕ್ಕೆ ಮಾತ್ರ ಅಲ್ಲ. ಬೇಡ್ತಿ ವರದಾನದಿ ಜೋಡಣೆ ಆಗಲೇಬೇಕಿದೆ. ಯಾವುದೇ ರೀತಿಯ ಚರ್ಚೆಗೆ ನಾವು ಸಿದ್ಧ. ಗೊಂದಲಗಳನ್ನು ಮಾತುಕತೆ ಮೂಲಕ ಬಗೆ ಹರಿಸಬೇಕು".
"ನಾವು ಇಲ್ಲಿ ಮಠಾಧೀಶರು, ನಾಯಕರ ಎಲ್ಲರನ್ನೊಳಗೊಂಡ ಸಭೆ ಕರೆಯುತ್ತೇವೆ. ಜನ ಜಾಗೃತಿ, ಜನಾಭಿಪ್ರಾಯ, ಸಮಾವೇಶ ಮಾಡುತ್ತೇವೆ. ಸಮುದ್ರಕ್ಕೆ ಸೇರುವ ಅಪಾರ ಪ್ರಮಾಣದ ನೀರನ್ನು ಹಾವೇರಿ, ಗದಗ ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳ ರೈತರು ಬಳಸಬಹುದು. ಈ ಮೂರು ಜಿಲ್ಲೆಗಳ ಜನರ ಕುಡಿಯುವ ನೀರಿನ ಸಮಸ್ಯೆ ನೀಗಲಿದೆ. ಬೇಡ್ತಿ ವರದಾನದಿ ಜೋಡಣೆ ಮಾಡಿ ಅದರ ನೀರನ್ನು ಗದಗ ಜಿಲ್ಲೆ ಹಿರೇವಡಟ್ಟಿ ಗ್ರಾಮದ ಬಳಿ ಜಲಾಶಯ ನಿರ್ಮಿಸಿ ನೀರನ್ನು ಸಂಗ್ರಹಿಸಬಹುದಾಗಿದೆ" ಎಂದು ಬೊಮ್ಮಾಯಿ ಹೇಳಿದರು.
ಇದರಿಂದ ರಾಯಚೂರು ಜಿಲ್ಲೆಯ ಜನರ ಕುಡಿಯುವ ನೀರಿನ ಬವಣೆ ತಪ್ಪಿಸಬಹುದು. ಈಗಾಗಲೇ ಕೇಂದ್ರ ಸರ್ಕಾರ ಈ ಯೋಜನೆಗೆ 9 ಸಾವಿರ ಕೋಟಿ ರೂಪಾಯಿ ನೀಡುವ ಭರವಸೆ ನೀಡಿದೆ. ರಾಜ್ಯ ಸರ್ಕಾರ ಒಂದು ಸಾವಿರ ಕೋಟಿ ರೂಪಾಯಿ ವ್ಯಯಿಸಿ ಯೋಜನೆಯನ್ನು ಆದಷ್ಟು ಬೇಗ ಕಾರ್ಯರೂಪಕ್ಕೆ ತರುವಂತೆ ಸಂಸದ ಬಸವರಾಜ ಬೊಮ್ಮಾಯಿ ರಾಜ್ಯ ಸರ್ಕಾರಕ್ಕೆ ಒತ್ತಾಯಿಸಿದ್ದಾರೆ.
ಜೋಡಣೆಗೆ ವಿರೋಧ: ಈ ಮಧ್ಯೆ ಬೇಡ್ತಿ ವರದಾ ನದಿ ಜೋಡಣೆಗೆ ಸಾಕಷ್ಟು ವಿರೋಧಗಳು ವ್ಯಕ್ತವಾಗಿವೆ. ವರದಾ - ಬೇಡ್ತಿ ನದಿ ಜೋಡಣೆ ವಿರುದ್ಧ ಹಲವು ಮಠಾಧೀಶರು ಪರಿಸರವಾದಿಗಳು ಹೋರಾಟ ಆರಂಭಿಸಿದ್ದಾರೆ. ಇದರಿಂದ ಪಶ್ಚಿಮಘಟ್ಟದ ಸೂಕ್ಷ್ಮ ಪರಿಸರಕ್ಕೆ ಧಕ್ಕೆಯಾಗುತ್ತದೆ ಎಂದು ಪರಿಸರವಾದಿಗಳು ಅಭಿಪ್ರಾಯಪಟ್ಟಿದ್ದಾರೆ. ಪಶ್ಚಿಮಘಟ್ಟ ಎಲ್ಲವನ್ನೂ ಸಹಿಸುವ ಶಕ್ತಿ ಹೊಂದಿಲ್ಲಾ. ಇದರಿಂದ ನೀರಿನ ನೈಜಹರಿವು ಕಡಿಮೆಯಾಗುತ್ತದೆ. ನದಿ ಸಂಗಮದಲ್ಲಿನ ಪರಿಸರಕ್ಕೆ ಹಾನಿಯಾಗುತ್ತದೆ.
ಈ ಕುರಿತಂತೆ ಭಾನುವಾರ ಉತ್ತರಕನ್ನಡ ಜಿಲ್ಲೆಯ ಶಿರಸಿಯಲ್ಲಿ ನದಿ ಜೋಡಣೆ ವಿರುದ್ಧ ಜನಾಂದೋಲನ ಸಭೆ ನಡೆಸಲಾಗುತ್ತಿದೆ. ಸ್ವರ್ಣವಲ್ಲಿ ಗಂಗಾಧರೇಂದ್ರ ಸರಸ್ವತಿ ಸ್ವಾಮೀಜಿ, ಶ್ರೀ ಮುನ್ನೆಲೆಮಾವು ಮಠದ ಮಾಧವಾನಂದ ಭಾರತೀ ಸ್ವಾಮೀಜಿ, ಸೋದೆ ವಾದಿರಾಜ್ ಮಠದ ವಿಶ್ವವಲ್ಲಬ ತೀರ್ಥ ಶ್ರೀಪಾದರು, ಜೈನಮಠದ ಸ್ವಸ್ಥಶ್ರೀ ಭಟ್ಟಾಕಲಂಕ ಭಟ್ಟಾರಕ ಸ್ವಾಮೀಜಿ, ಜಡೆ ಮಹಸಂಸ್ಥಾನಮಠದ ಡಾ. ಮಹಾಂತಸ್ವಾಮೀಜಿ, ಸಿದ್ದಾಪುರ ಶೀರಳಿಯ ಬ್ರಹ್ಮಾನಂದ ಭಾರತಿ ಸ್ವಾಮೀಜಿ ಸಾನಿಧ್ಯದಲ್ಲಿ ವರದಾ ಬೇಡ್ತಿ ಜೋಡಣೆ ವಿರೋಧಿ ಸಭೆ ನಡೆಸಲಾಗುತ್ತಿದೆ. ಜನಾಂದೋಲನ ಸಭೆಯಲ್ಲಿ ನಿವೃತ್ತ ಲೋಕಾಯುಕ್ತ ನ್ಯಾ. ಸಂತೋಷ್ ಹೆಗ್ಡೆ, ಪರಿಸರ ಅರ್ಥಶಾಸ್ತ್ರಜ್ಞ ಬಿ.ಎಂ. ಕುಮಾರಸ್ವಾಮಿ ಸೇರಿದಂತೆ ಹಲವು ಪರಿಸರವಾದಿಗಳು ಜನಪ್ರತಿನಿಗಳು ಪಾಲ್ಗೊಳ್ಳಲಿದ್ದಾರೆ.
ಇದನ್ನೂ ಓದಿ: ಬೇಡ್ತಿ-ವರದಾ ನದಿ ಜೋಡಣೆಯಿಂದ ಯಾರಿಗೂ ತೊಂದರೆಯಿಲ್ಲ, ಎಲ್ಲರೂ ಸಹಕರಿಸಿ: ಬೊಮ್ಮಾಯಿ

