ಪಶು ಸಂಗೋಪನೆ ಗ್ರಾಮೀಣ ಆರ್ಥಿಕತೆಯ ಬೆನ್ನೆಲುಬು: ರಾಜ್ಯಪಾಲ ಗೆಹ್ಲೋಟ್
ಬೀದರ್‌ನ ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ 15ನೇ ಘಟಿಕೋತ್ಸವ ಸಮಾರಂಭದಲ್ಲಿ ರಾಜ್ಯಪಾಲರು ಪಶು ಸಂಗೋಪನೆಯ ಮಹತ್ವದ ಬಗ್ಗೆ ಮಾತನಾಡಿದರು.

Published : February 27, 2026 at 9:08 PM IST
ಬೀದರ್: "ಗ್ರಾಮೀಣ ಭಾರತ ಸಂಪೂರ್ಣ ಕೃಷಿ ಆಧಾರಿತವಾಗಿದ್ದು, ಪಶು ಸಂಗೋಪನೆ ಗ್ರಾಮೀಣ ಆರ್ಥಿಕಾಭಿವೃದ್ಧಿಗೆ ಬೆನ್ನೆಲುಬು" ಎಂದು ರಾಜ್ಯಪಾಲ ಥಾವರಚಂದ್ ಗೆಹ್ಲೋಟ್ ಹೇಳಿದರು.
ಇಂದು ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ 15ನೇ ಘಟಿಕೋತ್ಸವ ಸಮಾರಂಭದ ಅಧ್ಯಕ್ಷತೆ ವಹಿಸಿ ವಿದ್ಯಾರ್ಥಿಗಳಿಗೆ ಪದಕ, ಪದವಿ ಪ್ರದಾನ ಮಾಡಿ ಅವರು ಮಾತನಾಡಿದರು.
ಕೃಷಿ ಉತ್ಪಾದನೆ, ಹಾಲು ಉತ್ಪಾದನೆ, ಡೈರಿ ಉತ್ಪಾದನೆ, ಮೀನು ಉತ್ಪಾದನೆಗಳು ರೈತರ ಆರ್ಥಿಕ ಅಭಿವೃದ್ಧಿಗೆ ಕಾರಣವಾಗಿವೆ. ಭಾರತ ಹಾಲು ಹಾಗೂ ಮೀನು ಉತ್ಪಾದನೆಯಲ್ಲಿ ಮುಂಚೂಣಿ ಸ್ಥಾನದಲ್ಲಿದೆ. ವಿಶ್ವವಿದ್ಯಾಲಯದ ವಿಜ್ಞಾನಿಗಳು ಮಾನವ, ಪ್ರಾಣಿ ಮತ್ತು ಪರಿಸರವನ್ನು ಒಳಗೊಂಡಂತೆ ಸಮಗ್ರ ದೃಷ್ಠಿಕೋನದಲ್ಲಿ ಆರೋಗ್ಯ ದೃಷ್ಠಿಕೋನದಲ್ಲಿ ಕಾರ್ಯನಿರ್ವಹಿಸಬೇಕೆಂದು ಸಲಹೆ ನೀಡಿದರು.
ಆಧುನಿಕ ವಿಜ್ಞಾನ, ತಂತ್ರಜ್ಞಾನದ ಮೂಲಕ ಕೃಷಿ, ಕೃಷಿಯೇತರ, ಪಶು ಸಂಗೋಪನೆ ಉತ್ಪಾದನೆಯನ್ನು ಹೆಚ್ಚಿಸುವ, ವೃದ್ಧಿಸುವ ಕಾರ್ಯ ಆಗಬೇಕು. ವಿವಿಧ ರೀತಿಯ ರೋಗಗಳ ನಿಯಂತ್ರಣ ಸಹ ದೊಡ್ಡ ಸವಾಲಾಗಿದ್ದು, ವಿಜ್ಞಾನಿಗಳು ಸತತ ಸಂಶೋಧನೆಯಲ್ಲಿ ತೊಡಗಿಸಿಕೊಂಡಿದ್ದಾರೆ. ವಿಜ್ಞಾನಿಗಳು ಯಶಸ್ಸು, ಪರಿಶ್ರಮ ಹಾಗೂ ಸೇವಾಭಾವನೆಯಿಂದ ಜೀವನ ನಡೆಸಬೇಕು. ಜ್ಞಾನ, ನೈತಿಕ ಮೌಲ್ಯಗಳ ಆಚರಣೆಯ ಜೊತೆ ದೇಶ ಸೇವೆಯಲ್ಲಿ ತೊಡಗಿಸಿಕೊಳ್ಳಬೇಕು ಎಂದು ಹಿತನುಡಿಗಳನ್ನಾಡಿದರು.
ಪಶು ಸಂಗೋಪನೆ ಸಚಿವ ಕೆ.ವೆಂಕಟೇಶ್ ಅವರು ಮಾತನಾಡಿ, ರಾಜ್ಯದಲ್ಲಿ 2.9 ಕೋಟಿ ಜಾನುವಾರುಗಳಿವೆ. ಹಾಲು ಉತ್ಪಾದನೆಯಲ್ಲಿ ರಾಜ್ಯ 2ನೇ ಸ್ಥಾನದಲ್ಲಿದೆ. ಕಳೆದ ವರ್ಷ ಪ್ರತಿದಿನ 1 ಕೋಟಿ ಲೀಟರ್ ಹಾಲು ಉತ್ಪಾದನೆಯಾಗಿತ್ತು. ಗ್ರಾಮೀಣ ಜನರ ಆರ್ಥಿಕತೆಯಲ್ಲಿ ಪಶು ಸಂಗೋಪನೆ ಅತೀ ಮಹತ್ವದ ಪಾತ್ರ ವಹಿಸುತ್ತಿದೆ. ಸರಕಾರ ವಿವಿಧ ಯೋಜನೆಗಳ ಮೂಲಕ ಪಶು ಸಂಗೋಪನೆಯನ್ನು ಬಲಪಡಿಸುತ್ತಿದೆ ಎಂದರು. ನುರಿತ ತಜ್ಞರು, ವಿಜ್ಞಾನಿಗಳು ಪಶು ಸಂಗೋಪನೆ ಉತ್ಪಾದನೆ ಹೆಚ್ಚಿಸುವಲ್ಲಿ ತೊಡಗಿಸಿಕೊಂಡಿದ್ದಾರೆ. ಅನುಗ್ರಹ ಯೋಜನೆಯಡಿ ಜಾನುವಾರು ಸಾವಿಗೆ ಪರಿಹಾರ ನೀಡಲಾಗುತ್ತಿದೆ. ಮಹಿಳೆಯರಿಗೆ, ಸ್ತ್ರೀ ಶಕ್ತಿ ಗುಂಪುಗಳಿಗೆ ಜಾನುವಾರುಗಳನ್ನು ವಿತರಿಸಲಾಗುತ್ತಿದೆ ಎಂದರು. ಇದೇ ವೇಳೆ ಘಟಿಕೋತ್ಸವ ಕಾರ್ಯಕ್ರಮವನ್ನು ಇನ್ನು ಮುಂದೆ ಕನ್ನಡದಲ್ಲೇ ಮಾಡುವಂತೆ ತಿಳಿಸಿದರು.
ಮುಖ್ಯ ಅತಿಥಿಗಳಾಗಿ ಮಾತನಾಡಿದ ಇಕ್ರಿಸ್ಯಾಟ್ ಸಂಸ್ಥೆಯ ಮಹಾನಿರ್ದೇಶಕ ಹಿಮಾಂಶು ಪಾಠಕ್ ಅವರು, ಕರ್ನಾಟಕ ಕೃಷಿ ಹಾಗೂ ಶಿಕ್ಷಣ ಅಭಿವೃದ್ಧಿಯಲ್ಲಿ ಮುಂಚೂಣಿಯಲ್ಲಿದೆ. ದೇಶದ ವಿವಿಧೆಡೆ ರಾಜ್ಯದ ವಿಜ್ಞಾನಿಗಳಿದ್ದಾರೆ ಎಂದರು. 2025ರಲ್ಲಿ ದೇಶ 217 ಮಿಲಿಯನ್ ಲೀಟರ್ ಹಾಲು ಉತ್ಪಾದನೆಯಾಗುತ್ತಿದೆ. ದೇಶವು ಕೃಷಿಯಲ್ಲಿ ಸಾಕಷ್ಟು ಅಭಿವೃದ್ಧಿ ಹೊಂದುತ್ತಿದೆ. ಪಶುಪಾಲನೆ ಹಾಗೂ ಮೀನುಗಾರಿಕೆ ಮಹತ್ತರ ಪಾತ್ರ ವಹಿಸುತ್ತಿವೆ. ಆಧುನಿಕ ವಿಜ್ಞಾನ ತಂತ್ರಜ್ಞಾನದಿಂದ ಅನೇಕ ನ್ಯೂನತೆಗಳನ್ನು ಬಗೆಹರಿಸಲಾಗುತ್ತಿದೆ. ಸವಾಲುಗಳು ಸಾಕಷ್ಟಿವೆ. ವಿದ್ಯಾರ್ಥಿಗಳು ಶಿಕ್ಷಣದ ಮಹತ್ವವನ್ನು ಅರಿಯಬೇಕು. ಶಾಂತಿ, ನೆಮ್ಮದಿ, ಆರ್ಥಿಕ ಅಭಿವೃದ್ಧಿಗೆ ಶಿಕ್ಷಣವೇ ಅಗತ್ಯ. ಈ ಹಿನ್ನೆಲೆಯಲ್ಲಿ ವಿಶ್ವವಿದ್ಯಾಲಯಗಳು ಮಹತ್ತರ ಪಾತ್ರ ವಹಿಸುತ್ತವೆ ಎಂದರು.
ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಕೆ.ಸಿ.ವೀರಣ್ಣ ಅವರು ಪ್ರಾಸ್ತಾವಿಕ ಭಾಷಣ ಮಾಡಿದರು.
16 ಚಿನ್ನದ ಪದಕ ಪಡೆದ 'ಖುಷಿ': ಘಟಿಕೋತ್ಸವದಲ್ಲಿ 34 ವಿದ್ಯಾರ್ಥಿಗಳಿಗೆ ಚಿನ್ನದ ಪದಕ ಪ್ರದಾನ ಮಾಡಲಾಯಿತು. ಉಡುಪಿಯ ವಿದ್ಯಾರ್ಥಿನಿ ಖುಷಿ ಮೆಂಡನ್ 16 ಚಿನ್ನದ ಪದಕಗಳನ್ನು ಪಡೆದರು.
ಈ ಸಮಾರಂಭದಲ್ಲಿ ಜಿಲ್ಲಾಧಿಕಾರಿ ಶಿಲ್ಪಾ ಶರ್ಮಾ, ಜಿಲ್ಲಾ ಪಂಚಾಯತ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ಗಿರೀಶ ಬದೋಲೆ, ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಪ್ರದೀಪ ಗುಂಟಿ, ಪಶುವೈದ್ಯಕೀಯ, ಪಶು ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯ ಬೀದರನ ಕುಲಸಚಿವರಾದ ಪಿ.ಟಿ.ರಮೇಶ ಸೇರಿದಂತೆ ಗಣ್ಯರು ಪಾಲ್ಗೊಂಡಿದ್ದರು.
ಇದನ್ನೂ ಓದಿ: ತುಮಕೂರು-ಚಿತ್ರದುರ್ಗ-ದಾವಣಗೆರೆ ನೇರ ರೈಲು ಮಾರ್ಗ ಸಿದ್ಧ: ಹಳ್ಳಿಗಳಲ್ಲೂ ರೈಲಿನ ಸದ್ದು! ಯೋಜನೆ ಬಗ್ಗೆ ಸೋಮಣ್ಣ ಹೇಳಿದ್ದಿಷ್ಟು

