ಹುಬ್ಬಳ್ಳಿ ಎನ್ಕೌಂಟರ್: ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ವರದಿ ಬಳಿಕ ಆದೇಶ ಪ್ರಕಟಿಸಲು ಸರ್ಕಾರ ಮನವಿ
ಹುಬ್ಬಳ್ಳಿಯಲ್ಲಿ ನಡೆದ ಬಾಲಕಿಯ ಅತ್ಯಾಚಾರ, ಕೊಲೆ ಆರೋಪಿಯ ಎನ್ಕೌಂಟರ್ ಪ್ರಕರಣ ಸಂಬಂಧ ಸಲ್ಲಿಕೆಯಾದ ಅರ್ಜಿಯ ವಿಚಾರಣೆಯನ್ನು ಹೈಕೋರ್ಟ್ ಮುಂದೂಡಿದೆ.

Published : February 27, 2026 at 3:59 PM IST
ಬೆಂಗಳೂರು: ಹುಬ್ಬಳ್ಳಿಯಲ್ಲಿ ಐದು ವರ್ಷದ ಬಾಲಕಿಯ ಮೇಲೆ ಅತ್ಯಾಚಾರ ಎಸಗಿ ಕೊಲೆ ಮಾಡಿದ ಆರೋಪದಲ್ಲಿ ವ್ಯಕ್ತಿಯೊಬ್ಬರನ್ನು ಎನ್ಕೌಂಟರ್ ಮಾಡಿದ ಪ್ರಕರಣ ಸಂಬಂಧ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ತನಿಖೆ ನಡೆಸುತ್ತಿದ್ದು, ತನಿಖಾಧಿಕಾರಿ ವರದಿ ಬಂದ ಬಳಿಕ ಸೂಕ್ತ ಆದೇಶ ಹೊರಡಿಸಬಹುದು ಎಂದು ಹೈಕೋರ್ಟ್ಗೆ ಸರ್ಕಾರ ತಿಳಿಸಿದೆ.
ಎನ್ಕೌಂಟರ್ ಘಟನೆಯನ್ನು ಸ್ವತಂತ್ರ ತನಿಖೆಗೆ ವಹಿಸಬೇಕು, ಘಟನೆಯಲ್ಲಿ ಭಾಗಿಯಾದ ಎಲ್ಲ ಪೊಲೀಸ್ ಸಿಬ್ಬಂದಿಯನ್ನು ಬಂಧಿಸಿ ವಿಚಾರಣೆಗೆ ಒಳಪಡಿಸಬೇಕು ಎಂದು ಕೋರಿ ಪೀಪಲ್ಸ್ ಯೂನಿಯನ್ ಫಾರ್ ಲಿಬರ್ಟೀಸ್ ಕರ್ನಾಟಕ (ಪಿಯುಸಿಎಲ್) ಸಾರ್ವಜನಿಕ ಹಿತಾಸಕ್ತಿ ಅರ್ಜಿ ಸಲ್ಲಿಸಿತ್ತು. ಅರ್ಜಿಯ ವಿಚಾರಣೆ ನಡೆಸಿದ ಮುಖ್ಯ ನ್ಯಾಯಮೂರ್ತಿ ವಿಭು ಭಖ್ರು ಮತ್ತು ನ್ಯಾಯಮೂರ್ತಿ ಸಿ.ಎಂ.ಪೂಣಚ್ಚ ಅವರಿದ್ದ ಪೀಠಕ್ಕೆ ಸರ್ಕಾರ ಈ ಮಾಹಿತಿ ನೀಡಿತು.
ಅಡ್ವೋಕೇಟ್ ಜನರಲ್ ಶಶಿಕಿರಣ ಶೆಟ್ಟಿ ವಾದ ಮಂಡಿಸಿ, ''ಪ್ರಕರಣ ಸಂಬಂಧ ಜುಡಿಷಿಯಲ್ ಮ್ಯಾಜಿಸ್ಟ್ರೇಟ್ ಅವರಿಂದ ತನಿಖೆಯಾಗಲಿ. ತನಿಖೆ ನಡೆಸಿ ಹೈಕೋರ್ಟ್ ಗೆ ವರದಿ ಸಲ್ಲಿಸಲಿ. ಆ ವರದಿ ಪರಿಶೀಲಿಸಿ ಮುಂದಿನ ಆದೇಶ ಹೊರಡಿಸಬಹುದು'' ಎಂದು ತಿಳಿಸಿದರು.
ಈ ಅಂಶವನ್ನು ಪರಿಗಣಿಸಿದ ನ್ಯಾಯಪೀಠ, ಸರ್ಕಾರದ ತೀರ್ಮಾನವನ್ನು ಲಿಖಿತವಾಗಿ ತಿಳಿಸಿ, ಅದನ್ನು ಆಧರಿಸಿ ಮಾರ್ಚ್ 2ರಂದು ಆದೇಶ ಹೊರಡಿಸಲಾಗುವುದು ಎಂದು ತಿಳಿಸಿ, ವಿಚಾರಣೆ ಮುಂದೂಡಿತು.
ಪ್ರಕರಣ ಸಂಬಂಧ ಈ ಹಿಂದೆ ನಡೆದಿದ್ದ ವಿಚಾರಣೆ ವೇಳೆ ನ್ಯಾಯಪೀಠ, ಆರೋಪಿಯನ್ನು ಆಧಾರ್ ಕಾರ್ಡ್ ತರುವುದಕ್ಕೆ ಮನೆಗೆ ಹೋಗಲು ಹೇಳಿ ಮೂರು ಗುಂಡು ಹಾರಿಸಲಾಗಿದೆ. ಮೃತಪಟ್ಟ ಆರೋಪಿ ಕಲ್ಲು ತೂರಾಟ ನಡೆಸಿದ್ದಾರೆ ಎಂಬ ಆರೋಪವಿದೆ. ಪೊಲೀಸ್ ವಶದಲ್ಲಿದ್ದಾಗ ಅವರ ಮೇಲೆ ಗುಂಡು ಹಾರಿಸಲಾಗಿದೆ. ಸ್ಥಳದಲ್ಲಿ ಎಷ್ಟು ಮಂದಿ ಪೊಲೀಸ್ ಸಿಬ್ಬಂದಿ ಇದ್ದರು ಎಂಬ ಅಂಶ ಗೊತ್ತಾಗಬೇಕಾಗಿದೆ ಎಂದು ಹೇಳಿತ್ತು.
ಅಲ್ಲದೆ, ಪೊಲೀಸ್ ವಶದಲ್ಲಿರುವ ಕ್ರಿಮಿನಲ್ ಅಸಹಜ ಸಾವು ಆಗಿರುವ ಅಂಶ ನಿಜವಾಗಿದೆ. ಘಟನೆ ಸಂಬಂಧ ಜನರ ಭಾವನೆಗಳನ್ನು ಪರಿಗಣಿಸಿ ಈ ಕೃತ್ಯ ನಡೆಸಲಾಗಿದೆ. ಮೃತ ಆರೋಪಿಯ ಬೆರಳಚ್ಚು ದಾಖಲೆ ತೆಗೆದುಕೊಳ್ಳಲಾಗಿದೆ. ಯಾರು ಶೂಟ್ ಮಾಡಿದರು, ಈ ಫಿಂಗರ್ ಪ್ರಿಂಟ್ ಯಾರು ತೆಗೆದುಕೊಂಡರು ಎಂಬ ಅಂಶ ಬೇಕಾಗಿದೆ ಎಂದು ತನಿಖೆ ನಡೆಸಬಾರದೇ ಎಂದು ಪೀಠ ಪ್ರಶ್ನಿಸಿತ್ತು.
ಘಟನೆಯ ಹಿನ್ನೆಲೆ: 2025ರ ಏಪ್ರಿಲ್ ತಿಂಗಳಿನಲ್ಲಿ ಹುಬ್ಬಳ್ಳಿಯ ಅಶೋಕನಗರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಐದು ವರ್ಷದ ಬಾಲಕಿಯನ್ನು ಅಪಹರಿಸಿದ ಬಿಹಾರದ ವ್ಯಕ್ತಿ ಅತ್ಯಾಚಾರಕ್ಕೆ ಯತ್ನಿಸಿ, ಹತ್ಯೆ ಮಾಡಿದ್ದ. ಆರೋಪಿಯನ್ನು ಬಂಧಿಸಲು ಹೋಗಿದ್ದ ವೇಳೆ ಪೊಲೀಸರ ಮೇಲೆಯೇ ಹಲ್ಲೆಗೆ ಯತ್ನಿಸಿದ್ದ. ಎಚ್ಚರಿಕೆ ನೀಡಿದರೂ ಹಲ್ಲೆಗೆ ಮುಂದಾಗಿದ್ದರಿಂದ ಪೊಲೀಸರು ಗುಂಡು ಹಾರಿಸಿದ್ದರು. ಬೆನ್ನಿಗೆ ಗುಂಡು ತಗುಲಿ ಗಂಭೀರವಾಗಿ ಗಾಯಗೊಂಡು ಮೃತಪಟ್ಟಿದ್ದ.
ಇದನ್ನೂ ಓದಿ: ಮಗುವಿನ ಉಪನಾಮದಲ್ಲಿ ತಾಯಿ ಹೆಸರು ಸೇರಿಸಿದ್ದಲ್ಲಿ ತಂದೆಯ ಹಕ್ಕುಗಳನ್ನು ಕಸಿದುಕೊಳ್ಳುವುದಿಲ್ಲ: ಹೈಕೋರ್ಟ್ ಮಹತ್ವದ ತೀರ್ಪು

