ಸ್ಪರ್ಧಾತ್ಮಕ ಪರೀಕ್ಷೆ - ನೇಮಕಾತಿಗಳಲ್ಲಿ ಇನ್ನಷ್ಟು ಕಠಿಣ ನಿಯಮ: ಕರಡು ನಿಯಮ ಪ್ರಕಟಿಸಿದ ಸರ್ಕಾರ
ಪರೀಕ್ಷಾ ಪ್ರಾಧಿಕಾರವು ಯಾವುದೇ ಪರೀಕ್ಷಾ ಕೇಂದ್ರದಲ್ಲಿ ವೀಕ್ಷಕರು, ಫ್ಲೈಯಿಂಗ್ ಸ್ಕ್ವಾಡ್, ವಿಡಿಯೋಗ್ರಫಿ ತಂಡಗಳು ಅಥವಾ ತಾಂತ್ರಿಕ ತಂಡಗಳನ್ನು ನಿಯೋಜಿಸಬಹುದು ಎಂದು ಸರ್ಕಾರದ ಅಧಿಸೂಚನೆಯಲ್ಲಿ ತಿಳಿಸಲಾಗಿದೆ.

Published : August 28, 2026 at 7:34 AM IST
ಬೆಂಗಳೂರು: ಸ್ಪರ್ಧಾತ್ಮಕ ಪರೀಕ್ಷೆ ಹಾಗೂ ನೇಮಕಾತಿಗಳಲ್ಲಿ ಇನ್ನಷ್ಟು ಕಠಿಣ ನಿಯಮಗಳನ್ನು ರೂಪಿಸಲು ಉದ್ದೇಶಿಸಿರುವ ರಾಜ್ಯ ಸರ್ಕಾರವು ಈ ಸಂಬಂಧ ಕರಡು ಅಧಿಸೂಚನೆ ಹೊರಡಿಸಿದೆ.
ಪರೀಕ್ಷಾ ಕೇಂದ್ರಗಳ ಭದ್ರತೆ, ಪರೀಕ್ಷಾ ಉತ್ತರ ಪತ್ರಿಕೆಗಳು ಮತ್ತು ಓಎಂಆರ್ ಶೀಟ್ಗಳ ನಿರ್ವಹಣೆ, ಪರೀಕ್ಷಾ ಕೇಂದ್ರಗಳ ಭದ್ರತೆಯ ಮಾನದಂಡಗಳು, ಗೌಪ್ಯ ಸಾಮಗ್ರಿಗಳ ಸಾಗಣೆ, ಪ್ರಶ್ನೆಪತ್ರಿಕೆಗಳ ಮುದ್ರಣ ಮತ್ತು ಸಂಗ್ರಹಣೆ, ಪರೀಕ್ಷೆ ನಡೆಸಲು ಸಮನ್ವಯ ಅಧಿಕಾರಿಗಳ ಹೊಣೆಗಾರಿಕೆ, ಜಿಲ್ಲಾಧಿಕಾರಿಗಳನ್ನು ಮುಖ್ಯ ಅಧೀಕ್ಷಕರಾಗಿ ನೇಮಿಸುವುದು ಸೇರಿದಂತೆ ಹಲವು ವಿಷಯಗಳನ್ನು ಇನ್ನಷ್ಟು ಪರಿಣಾಮಕಾರಿಯಾಗಿ, ಪಾರದರ್ಶಕವಾಗಿ ಲೋಪಗಳಿಗೆ ಅವಕಾಶವಿಲ್ಲದಂತೆ ನಿಯಮಗಳನ್ನು ಪರಿಷ್ಕರಿಸಲು ತೀರ್ಮಾನಿಸಲಾಗಿದೆ. ಈ ನಿಟ್ಟಿನಲ್ಲಿ ಕರ್ನಾಟಕ ಸಾರ್ವಜನಿಕ ಪರೀಕ್ಷೆ (ನೇಮಕಾತಿಯಲ್ಲಿನ ಭ್ರಷ್ಟಾಚಾರ ಮತ್ತು ಅನುಚಿತ ವಿಧಾನಗಳ ಪ್ರತಿಬಂಧಕ ಕ್ರಮಗಳು) ನಿಯಮಗಳು, 2026ರ ಕರಡನ್ನು ಪ್ರಕಟಿಸಲಾಗಿದೆ. ಈ ಸಂಬಂಧ ಸಾರ್ವಜನಿಕ ಆಕ್ಷೇಪಣೆಗಳು ಮತ್ತು ಸಲಹೆಗಳನ್ನು ಆಹ್ವಾನಿಸಲಾಗಿದೆ.
ಪ್ರಶ್ನೆಪತ್ರಿಕೆಗಳ ಸುರಕ್ಷಿತ ಸಿದ್ಧತೆ: ಪ್ರಶ್ನೆಪತ್ರಿಕೆಗಳ ಸಿದ್ಧಪಡಿಸುವಿಕೆ ಮತ್ತು ಪರಿಶೀಲನೆಯನ್ನು ಪರೀಕ್ಷಾ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ವ್ಯಕ್ತಿಗಳಿಂದ ಮಾತ್ರ ನಡೆಸಬೇಕು. ಪ್ರಶ್ನೆಪತ್ರಿಕೆ ಸಿದ್ಧಪಡಿಸುವವರು, ಪರಿಶೀಲಕರು, ಅನುವಾದಕರು ಮತ್ತು ಮರುಪರಿಶೀಲಕರ ಗುರುತನ್ನು ಗೌಪ್ಯವಾಗಿಡಬೇಕು. ಪ್ರಶ್ನೆಪತ್ರಿಕೆಗಳನ್ನು ಸುರಕ್ಷಿತ ವಾತಾವರಣದಲ್ಲಿ ಸಿದ್ಧಪಡಿಸತಕ್ಕದ್ದು ಮತ್ತು ಪರೀಕ್ಷಾ ಪ್ರಾಧಿಕಾರವು ಅನುಮೋದಿಸಿರುವ ಎನ್ಕ್ರಿಪ್ಟ್ ಮಾಡಿದ ಅಥವಾ ಸೀಲ್ ಮಾಡಿದ ವಿಧಾನಗಳ ಮೂಲಕ ಮಾತ್ರ ರವಾನಿಸಬೇಕು ಎಂದು ಕರಡು ನಿಯಮದಲ್ಲಿ ನಿಯಮ ರೂಪಿಸಲಾಗಿದೆ.
ಪ್ರಶ್ನೆಪತ್ರಿಕೆಗಳ ಸಿದ್ಧತೆ, ಪರಿಶೀಲನೆ, ಅನುವಾದ, ಮುದ್ರಣ, ಎನ್‌ಕ್ರಿಪ್ಶನ್ ಮತ್ತು ಸಂಗ್ರಹಣೆಯ ಪ್ರತಿಯೊಂದು ಹಂತವನ್ನು ಗೌಪ್ಯ ನೋಂದಣಿ ಪುಸ್ತಕದಲ್ಲಿ ಅಥವಾ ಸುರಕ್ಷಿತ ಡಿಜಿಟಲ್ ಲಾಗ್‌ನಲ್ಲಿ ದಾಖಲಿಸಬೇಕು. ಪರೀಕ್ಷಾ ಪ್ರಾಧಿಕಾರವು ಅಧಿಕೃತವಾಗಿ ಅನುಮತಿಸಿರುವ ರೀತಿಯನ್ನು ಹೊರತುಪಡಿಸಿ, ಪ್ರಶ್ನೆಪತ್ರಿಕೆಗಳ ಯಾವುದೇ ಕರಡು ಪ್ರತಿ ಕರಡು ಹಾಳೆ, ಸಾಫ್ಟ್ ಕಾಪಿ ಅಥವಾ ಎಲೆಕ್ಟ್ರಾನಿಕ್ ದಾಖಲೆಗಳನ್ನು ಉಳಿಸಿಕೊಳ್ಳಬಾರದು.
ಪ್ರಶ್ನೆ ಪತ್ರಿಕೆಗಳ ಮುದ್ರಣ ಮತ್ತು ಸಂಗ್ರಹಣೆ: ಪ್ರಶ್ನೆ ಪತ್ರಿಕೆಗಳ ಮುದ್ರಣ ಕಾರ್ಯವನ್ನು ಪರೀಕ್ಷಾ ಪ್ರಾಧಿಕಾರದಿಂದ ಅನುಮೋದಿಸಲ್ಪಟ್ಟ ಸುರಕ್ಷಿತ ಸೌಲಭ್ಯದಲ್ಲಿ ಮಾತ್ರ ಕೈಗೊಳ್ಳಬೇಕು. ಮುದ್ರಣ ಸೌಲಭ್ಯ ಕೇಂದ್ರ ಸಿಬ್ಬಂದಿ ನೋಂದಣಿ ಮಾಡಬೇಕು. ಸಾಮಗ್ರಿ ನೋಂದಣಿ ಮಾಡಬೇಕು. ಕಾಗದದ ಗುಣಮಟ್ಟ, ಮುದ್ರಿಸಲಾದ ಪ್ರತಿಗಳ ಸಂಖ್ಯೆ ತಿರಸ್ಕರಿಸಲಾದ ಪ್ರತಿಗಳು ಮತ್ತು ನಾಶಪಡಿಸಲಾದ ಪ್ರತಿಗಳ ವಿವರಗಳನ್ನು ನೋಂದಾಯಿಸಿಕೊಳ್ಳಬೇಕು.
ಎಲ್ಲ ವ್ಯಕ್ತಿಗಳ ಪ್ರವೇಶ ಮತ್ತು ನಿರ್ಗಮನ ಸಮಯ ನೋಂದಾಯಿಸಿಕೊಳ್ಳಬೇಕು. ಪ್ಯಾಕೆಟ್ಗಳು ಮೊಹರುಗಳು, ಬಾರ್ ಕೋಡ್ಗಳು ಅಥವಾ ಇತರ ಗುರುತುಗಳ ವಿವರಗಳನ್ನು ನೋಂದಾಯಿಸಬೇಕು ಮತ್ತು ಮುದ್ರಣ ಕಾರ್ಯವನ್ನು ಭದ್ರತಾ ಮುದ್ರಣಾಲಯದ ಮೂಲಕ ಕೈಗೊಳ್ಳುವ ಸಂದರ್ಭದಲ್ಲಿ, ಗೌಪ್ಯತಾ ಪ್ರೋಟೋಕಾಲ್‌ಗಳನ್ನು ಒಳಗೊಂಡ ತಿಳುವಳಿಕೆ ಒಪ್ಪಂದವನ್ನು ಮಾಡಿಕೊಳ್ಳತಕ್ಕದ್ದು, ಗೌಪ್ಯತೆಯು ಭದ್ರತಾ ಮುದ್ರಣಾಲಯದ ಸಂಪೂರ್ಣ ಜವಬ್ದಾರಿಯಾಗಿರುತ್ತದೆ ಮತ್ತು ಯಾವುದೇ ಉಲ್ಲಂಘನೆಗೆ ತನಿಖಾ ಸಂಸ್ಥೆಗೆ ಉತ್ತರದಾಯಿಯಾಗಿರುತ್ತದೆ. ಪ್ರಶ್ನೆ ಪತ್ರಿಕೆಗಳ ಮುದ್ರಣ ಮತ್ತು ಸಂಗ್ರಹಣೆಯ ಸಂಪೂರ್ಣ ಪ್ರಕ್ರಿಯೆಯನ್ನು ದಾಖಲಿಸಲು ಒಂದು ನೋಂದಣಿಯನ್ನು ನಿರ್ವಹಿಸಬೇಕು.
ಹಾಳಾಗಿರುವ, ಹೆಚ್ಚುವರಿ ತಿರಸ್ಕರಿಸಲಾದ ಅಥವಾ ಪ್ರಯೋಗಾರ್ಥವಾಗಿ ಮುದ್ರಿಸಲಾದ ಪ್ರತಿಗಳನ್ನು ಅಧಿಕೃತ ಅಧಿಕಾರಿಗಳ ಸಮ್ಮುಖದಲ್ಲಿ ತಕ್ಷಣವೇ ನಾಶಪಡಿಸತಕ್ಕದ್ದು ಮತ್ತು ಅಂತಹ ನಾಶಪಡಿಸುವಿಕೆಯ ಪ್ರಮಾಣ ಪತ್ರವನ್ನು ಸಿದ್ರಪಡಿಸಬೇಕು. ಪ್ರಶ್ನೆ ಪತ್ರಿಕೆಗಳ ಪ್ಯಾಕೆಟ್‌ಗಳನ್ನು ರವಾನಿಸುವ ಮೊದಲು ಸೀಲ್ ಮಾಡಬೇಕು, ಕ್ರಮಸಂಖ್ಯೆ ನಮೂದಿಸುವುದು ಮತ್ತು ದಾಖಲಿಸುವುದು ಮತ್ತು ಸದರಿ ಪ್ರಶ್ನೆಪತ್ರಿಕೆಗಳ ಪ್ಯಾಕೆಟ್‌ಗಳನ್ನು ರವಾನಿಸುವ ವ್ಯಕ್ತಿಗಳ ವಿವರಗಳನ್ನೂ ರಾಜ್ಯ ಸರ್ಕಾರ/ಪರೀಕ್ಷಾ ಪ್ರಾಧಿಕಾರದಿಂದ ನೇಮಿಸಲ್ಪಟ್ಟ ಅಧಿಕೃತ ಅಧಿಕಾರಿಯು ದಾಖಲಿಸಬೇಕು.
ಮುದ್ರಣ ಮತ್ತು ಪ್ಯಾಕಿಂಗ್ ಪ್ರದೇಶದ ಸಿಸಿಟಿವಿ ದೃಶ್ಯಾವಳಿಗಳನ್ನು ಪರೀಕ್ಷಾ ಪ್ರಾಧಿಕಾರವು ನಿಗದಿಪಡಿಸುವ ಅವಧಿಯವರೆಗೆ ಸಂರಕ್ಷಿಸತಕ್ಕದ್ದು. ಈ ಅವಧಿಯು ಆರು ತಿಂಗಳಿಗಿಂತ ಕಡಿಮೆಯಾಗಿರಬಾರದು ಅಥವಾ ಪರೀಕ್ಷಾ ಪ್ರಕ್ರಿಯೆಯು ಪೂರ್ಣಗೊಳ್ಳುವವರೆಗೆ, ಇವುಗಳಲ್ಲಿ ಯಾವುದು ನಂತರವೋ ಅಲ್ಲಿಯವರೆಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಸಂರಕ್ಷಿಸತಕ್ಕದ್ದು.
ಸ್ಟ್ರಾಗ್ ರೂಂ ಮತ್ತು ಪರೀಕ್ಷಾ ಸಾಮಗ್ರಿಗಳ ಅಭಿರಕ್ಷೆ: ಪರೀಕ್ಷಾ ಪ್ರಾಧಿಕಾರವು ಸಂಬಂಧಪಟ್ಟ ಜಿಲ್ಲಾಧಿಕಾರಿಗಳ ಮೇಲ್ವಿಚಾರಣೆಯಲ್ಲಿ ಆಯಾ ಜಿಲ್ಲಾ ಖಜಾನೆಯಲ್ಲಿ ಗೌಪ್ಯ ಸಾಮಗ್ರಿಗಳನ್ನು ಸಂಗ್ರಹಿಸತಕ್ಕದ್ದು ಇದನ್ನು ರಾಜ್ಯ ಸರ್ಕಾರದ ಖಜಾನ ನಿಯಮಗಳನ್ನಯ ಕಾರ್ಯನಿರ್ವಹಿಸಬೇಕು. ಪ್ರಶ್ನೆಪತ್ರಿಕೆಗಳು ಮತ್ತು ಇತರ ಗೌಪ್ಯ ಸಾಮಗ್ರಿಗಳನ್ನು ಸ್ಟ್ರಾಂಗ್ ರೂಂ ಅಥವಾ ಸುರಕ್ಷಿತ ಸಂಗ್ರಹಣಾ ಸೌಲಭ್ಯದಲ್ಲಿ ಇರಿಸತಕ್ಕದ್ದು. ಸ್ಟ್ರಾಂಗ್ ರೂಂ ಹೊಂದಿರಬೇಕು. ಸ್ಟ್ರಾಂಗ್ ರೂಂನಲ್ಲಿ ಡಬಲ್-ಲಾಕ್ ವ್ಯವಸ್ಥೆ ಅಥವಾ ತತ್ಸಮಾನ ಉನ್ನತ ಭದ್ರತೆ ಇರಬೇಕು. ನಿರ್ಬಂಧಿತ ಪ್ರವೇಶವಾಗಿರಬೇಕು. ಸಾಧ್ಯವಿರುವೆಡೆ ಸಿಸಿಟಿವಿ ಕಣ್ಣಾವಲು ಇರಬೇಕು.
ಪರೀಕ್ಷಾ ಕೇಂದ್ರದ ಭದ್ರತೆ: ಜಿಲ್ಲೆಯಲ್ಲಿ ಕಾರ್ಯನಿರ್ವಹಿಸುವ ಎಲ್ಲಾ ಪರೀಕ್ಷಾ ಕೇಂದ್ರಗಳ ಭದ್ರತೆ ಮತ್ತು ಮೇಲ್ವಿಚಾರಣೆಗೆ ಜಿಲ್ಲಾಧಿಕಾರಿಯು ಜವಾಬ್ದಾರರಾಗಿರುತ್ತಾರೆ. ಪೊಲೀಸ್ ಆಯುಕ್ತರು ಅಥವಾ ಜಿಲ್ಲಾ ಪೊಲೀಸ್ ಅಧೀಕ್ಷಕರು ಅಗತ್ಯವಿರುವ ಎಲ್ಲಾ ಭದ್ರತಾ ವ್ಯವಸ್ಥೆಗಳನ್ನು ಒದಗಿಸತಕ್ಕದ್ದು. ಜಿಲ್ಲಾಧಿಕಾರಿಯು ತಮ್ಮ ಅಧೀನದಲ್ಲಿ ಕಾರ್ಯನಿರ್ವಹಿಸುತ್ತಿರುವ ಯಾವುದೇ ಅಧಿಕಾರಿಯನ್ನು ಉಪ ಮುಖ್ಯ ಅಧೀಕ್ಷಕರಾಗಿ ನೇಮಿಸಬಹುದು. ಪರೀಕ್ಷೆ ನಡೆಯುತ್ತಿರುವ ನಿರ್ದಿಷ್ಟ ಶಾಲೆ ಅಥವಾ ಕಾಲೇಜಿನ ಪ್ರಾಂಶುಪಾಲರು ಅಥವಾ ಮುಖ್ಯೋಪಾಧ್ಯಾಯರನ್ನು ಆ ಶಾಲೆಯ ಅಥವಾ ಕಾಲೇಜಿನ ಕೇಂದ್ರ ಮುಖ್ಯಸ್ಥರಾಗಿ ನೇಮಿಸಬಹುದು. ಜಿಲ್ಲಾಧಿಕಾರಿಯು ತಮ್ಮ ವ್ಯಾಪ್ತಿ ಅಥವಾ ಜಿಲ್ಲೆಯಲ್ಲಿ ಅಗತ್ಯವಿದ್ದಲ್ಲಿ ಯಾವುದೇ ವ್ಯಕ್ತಿ ಅಥವಾ ವ್ಯಕ್ತಿಗಳನ್ನು ವೀಕ್ಷಕರು, ಸ್ಕ್ಯಾಡ್‌ಗಳು, ಸುಪರ್ದುದಾರರು ಹಾಗೂ ಇತರೆ ಅಧಿಕಾರಿಗಳಾಗಿ ನೇಮಿಸಬಹುದು ಮತ್ತು ವೀಡಿಯೋಗ್ರಫಿ ಅಥವಾ ತಾಂತ್ರಿಕ ತಂಡಗಳನ್ನು ನಿಯೋಜಿಸಬಹುದು.
ಅಧಿಕೃತ ವ್ಯಕ್ತಿಗಳು ಮತ್ತು ಪರೀಕ್ಷಾರ್ಥಿಗಳು ಮಾತ್ರ ಪರೀಕ್ಷಾ ಕೇಂದ್ರದೊಳಗೆ ಪ್ರವೇಶಿಸಬೇಕು. ನಿಷೇಧಿತ ವಸ್ತುಗಳನ್ನು ಪರೀಕ್ಷಾ ಕೊಠಡಿಯೊಳಗೆ ತರಲು ಅವಕಾಶ ನೀಡುವಂತಿಲ್ಲ. ಪ್ರಶ್ನೆ ಪತ್ರಿಕೆಗಳ ಪ್ಯಾಕೆಟ್‌ಗಳನ್ನು ಪರೀಕ್ಷಾ ಕೇಂದ್ರದಲ್ಲಿಯೇ ಮತ್ತು ಪರೀಕ್ಷಾ ಪ್ರಾಧಿಕಾರವು ನಿಗದಿಪಡಿಸಿದ ಸಮಯದಲ್ಲಿ ಮಾತ್ರ ತೆರೆಯತಕ್ಕದ್ದು. ಕೊಠಡಿ ಮೇಲ್ವಿಚಾರಕರು ನಿರಂತರ ಮೇಲ್ವಿಚಾರಣೆಯನ್ನು ನಿರ್ವಹಿಸತಕ್ಕದ್ದು ಮತ್ತು ಪರೀಕ್ಷಾ ಕೊಠಡಿಯಲ್ಲಿ ಯಾವುದೇ ಸಂವಹನ ಸಾಧನ ಅಥವಾ ಮೊಬೈಲ್ ಫೋನ್ ಬಳಸುವಂತಿಲ್ಲ ಎಂದು ಕರಡು ನಿಯಮದಲ್ಲಿ ಹೇಳಲಾಗಿದೆ.
ಬಳಕೆಯಾಗದೆ ಉಳಿದ ಪ್ರಶ್ನೆ ಪತ್ರಿಕೆಗಳು, ಉತ್ತರ ಪತ್ರಿಕೆಗಳು ಮತ್ತು ಓಎಂಆರ್ ಹಾಳೆಗಳನ್ನು ಹಿಂತಿರುಗಿಸತಕ್ಕದ್ದು ಅಥವಾ ಅವುಗಳ ಲೆಕ್ಕವನ್ನು ಸರಿಯಾಗಿ ದಾಖಲಿಸತಕ್ಕದ್ದು. ಮೇಲ್ವಿಚಾರಕರು ಯಾವುದೇ ಸಾಧನ ಅಥವಾ ಮೊಬೈಲ್ ಫೋನ್‌ಗಳನ್ನು ಪರಿಕ್ಷಾ ಕೊಠಡಿಯೊಳಗೆ ತರಬಾರದು. ಪರೀಕ್ಷಾ ಪ್ರಾಧಿಕಾರವು ಯಾವುದೇ ಪರೀಕ್ಷಾ ಕೇಂದ್ರದಲ್ಲಿ ವೀಕ್ಷಕರು, ಫ್ಲೈಯಿಂಗ್ ಸ್ಕ್ವಾಡ್, ವೀಡಿಯೋಗ್ರಫಿ ತಂಡಗಳು ಅಥವಾ ತಾಂತ್ರಿಕ ತಂಡಗಳನ್ನು ನಿಯೋಜಿಸಬಹುದು.
ಗುರುತಿನ ಪರಿಶೀಲನೆ ಮತ್ತು ನಕಲುಗಾರಿಕೆಯನ್ನು ತಡೆಗಟ್ಟುವುದು: ಪ್ರತಿಯೊಬ್ಬ ಪರೀಕ್ಷಾರ್ಥಿಯು ಪರೀಕ್ಷಾ ಪ್ರಾಧಿಕಾರ/ರಾಜ್ಯ ಸರ್ಕಾರವು ನಿಗದಿಪಡಿಸಿದ ಪ್ರವೇಶ ಪತ್ರ ಮತ್ತು ಮಾನ್ಯತೆ ಹೊಂದಿದ ಗುರುತಿನ ಪುರಾವೆಯನ್ನು ಹಾಜರುಪಡಿಸಬೇಕು. ಪರೀಕ್ಷಾ ಪ್ರಾಧಿಕಾರವು ಪರೀಕ್ಷಾರ್ಥಿಗಳ ಗುರುತಿನ ಪರಿಶೀಲನೆಗಾಗಿ ಪರೀಕ್ಷೆಯ ಯಾವುದೇ ಹಂತದಲ್ಲಿ ಬಯೋಮೆಟ್ರಿಕ್ ಪರಿಶೀಲನೆ, ಮುಖ ಗುರುತಿಸುವಿಕೆ, ಛಾಯಾಚಿತ್ರ ಹೊಂದಾಣಿಕೆ, ಸಹಿ ಹೊಂದಾಣಿಕೆ ಅಥವಾ ಇತರ ಯಾವುದೇ ಗುರುತಿನ ಪರಿಶೀಲನಾ ವಿಧಾನವನ್ನು ಅವಶ್ಯವಿದ್ದಲ್ಲಿ ಪಾಲಿಸಬೇಕು.
ನಕಲುಗಾರಿಕೆ ಶಂಕಿತವಾದಲ್ಲಿ ಕೇಂದ್ರ ಮುಖ್ಯಸ್ಥರು, ಕಾನೂನಿಗೆ ಅನುಗುಣವಾಗಿ, ಅನುಮಾನಿತ ವ್ಯಕ್ತಿಯು ಸ್ಥಳದಿಂದ ತೆರಳುವುದನ್ನು ತಡೆಯಬೇಕು. ತಕ್ಷಣವೇ ಪೊಲೀಸರಿಗೆ, ವೀಕ್ಷಕರಿಗೆ ಮತ್ತು ನೋಡಲ್ ಅಧಿಕಾರಿಗೆ ಮಾಹಿತಿ ನೀಡಬೇಕು. ಲಭ್ಯವಿರುವ ಸಾಕ್ಷಿದಾರರ ಹೇಳಿಕೆಗಳನ್ನು ದಾಖಲಿಸಬೇಕು. ಪ್ರವೇಶ ಪತ್ರ, ಗುರುತಿನ ಪುರಾವ, ಹಾಜರಾತಿ ಪತ್ರಿಕೆ, ಬಯೋಮೆಟ್ರಿಕ್ ದಾಖಲೆ ಮತ್ತು ಸಿಸಿಟಿವಿ ದೃಶ್ಯಾವಳಿಗಳನ್ನು ಸಂರಕ್ಷಿಸಬೇಕು ಎಂದು ಕರಡು ನಿಯಮದಲ್ಲಿ ಹೇಳಲಾಗಿದೆ.
ಪ್ರಶ್ನೆ ಪತ್ರಿಕೆಗಳ ಪ್ಯಾಕೆಟ್‌ಗಳನ್ನು ತೆರೆಯುವುದು: ಪ್ರಶ್ನೆ ಪತ್ರಿಕೆಗಳ ಪ್ಯಾಕೆಟ್‌ಗಳನ್ನು ಪರೀಕ್ಷಾ ಪ್ರಾಧಿಕಾರವು ನಿಗದಿಪಡಿಸಿದ ಸಮಯ ಮತ್ತು ಸ್ಥಳದಲ್ಲಿ ಮಾತ್ರ ತೆರೆಯತಕ್ಕದ್ದು. ಪ್ರಶ್ನೆ ಪತ್ರಿಕೆಗಳ ಮುಖ್ಯ ಪೆಟ್ಟಿಗೆಗಳನ್ನು ಸರ್ಕಾರ/ಜಿಲ್ಲಾಧಿಕಾರಿ ಅಥವಾ ಪರೀಕ್ಷಾ ಪ್ರಾಧಿಕಾರದಿಂದ ನೇಮಿಸಲ್ಪಟ್ಟ ಕೇಂದ್ರ ಮುಖ್ಯಸ್ಥರ ಸಮ್ಮುಖದಲ್ಲಿ ಹಾಗೂ ಕನಿಷ್ಠ ಇಬ್ಬರು ಅಧಿಕೃತ ಸಾಕ್ಷಿದಾರರ ಸಮ್ಮುಖದಲ್ಲಿ ತೆರೆಯತಕ್ಕದ್ದು. ಪ್ಯಾಕೆಟ್‌ಗಳನ್ನು ತೆರೆಯುವ ಮೊದಲು ಸೀಲು ಸಂಖ್ಯೆಯನ್ನು ಮತ್ತು ಪ್ಯಾಕೆಟ್ ಸಂಖ್ಯೆಯನ್ನು ಪರಿಶೀಲಿಸಿ ದಾಖಲಿಸತಕ್ಕದ್ದು. ಸೀಲು, ಪ್ಯಾಕೆಟ್ ಸಂಖ್ಯೆ ವಿಷಯ, ದಿನಾಂಕ ಅಥವಾ ಕೇಂದ್ರದ ಕೋಡ್‌ನಲ್ಲಿ ಯಾವುದೇ ವ್ಯತ್ಯಾಸ ಕಂಡುಬಂದಲ್ಲಿ ಅದನ್ನು ತಕ್ಷಣವೇ ನೋಡಲ್ ಅಧಿಕಾರಿಗೆ ವರದಿ ಮಾಡತಕ್ಕದ್ದು ಎಂದು ಕರಡಿನಲ್ಲಿ ತಿಳಿಸಲಾಗಿದೆ.
ಉತ್ತರ ಪತ್ರಿಕೆಗಳು ಮತ್ತು ಓಎಂಆರ್ ಹಾಳೆಗಳ ನಿರ್ವಹಣೆಯ ವಿಧಾನ: ಉತ್ತರ ಪತ್ರಿಕೆಗಳು ಮತ್ತು ಓಎಂಆರ್ ಹಾಳೆಗಳು ಕ್ರಮ ಸಂಖ್ಯೆ ಅಥವಾ ಕೋಡ್ ಹೊಂದಿರಬೇಕು. ಕೇಂದ್ರ ಮುಖ್ಯಸ್ಥರು ಸ್ವೀಕರಿಸಿದ ಹಾಳೆಗಳು - ಪರೀಕ್ಷೆ ಪ್ರಾರಂಭವಾಗುವ ಮೊದಲು ಸ್ವೀಕರಿಸಿದ ಹಾಳೆಗಳ ಸಂಖ್ಯೆ, ಬಳಸಿದ ಹಾಳೆಗಳು- ವಿತರಿಸಲಾದ ಮತ್ತು ಸಂಗ್ರಹಿಸಲಾದ ಹಾಳೆಗಳ ಸಂಖ್ಯೆ, ಬಳಕೆಯಾಗದ ಹಾಳೆಗಳು - ಬಳಕೆಯಾಗದೆ ಹಿಂತಿರುಗಿಸಲಾದ ಹಾಳೆಗಳ ಸಂಖ್ಯೆ; ಹಾನಿಗೊಳಗಾದ ಹಾಳೆಗಳು - ರದ್ದುಗೊಳಿಸಲಾದ ಅಥವಾ ಬದಲಾಯಿಸಲಾದ ಹಾಳೆಗಳ ಸಂಖ್ಯೆ; ಕಾಣೆಯಾದ ಹಾಳೆಗಳು- ವಿವರಗಳು ಮತ್ತು ವಿವರಣೆ ನೀಡಬೇಕು. ಪರೀಕ್ಷೆಯ ನಂತರ, ಉತ್ತರ ಪತ್ರಿಕೆಗಳು ಮತ್ತು ಓಎಂಆರ್ ಹಾಳೆಗಳನ್ನು ನಿಗದಿಪಡಿಸಿದ ವಿಧಾನದಲ್ಲಿ ಸೀಲ್ ಮಾಡಿ ರವಾನಿಸಬೇಕು. ಅಧಿಕೃತವಾಗಿ ಅನುಮತಿಸದ ಹೊರತು ಯಾವುದೇ ಉತ್ತರ ಪತ್ರಿಕೆ, ಓಎಂಆರ್ ಹಾಳೆಯನ್ನು ತೆರೆಯುವುದು, ಬದಲಾಯಿಸುವುದು, ಸೇರಿಸುವುದು, ಇಡುವುದು, ನಾಶಪಡಿಸುವುದು ಅಥವಾ ತೆಗೆದುಹಾಕುವುದು ಮಾಡುವಂತಿಲ್ಲ ಎಂದು ಕರಡಿನಲ್ಲಿ ಹೇಳಲಾಗಿದೆ.
ಡಿಜಿಟಲ್ ಮತ್ತು ಕಂಪ್ಯೂಟರ್ ಆಧಾರಿತ ಪರೀಕ್ಷೆಗಳು: ಸಾರ್ವಜನಿಕ ಪರೀಕ್ಷೆಯನ್ನು ಕಂಪ್ಯೂಟರ್ ಆಧಾರಿತ ವಿಧಾನದಲ್ಲಿ ನಡೆಸುವ ಸಂದರ್ಭದಲ್ಲಿ, ಪರೀಕ್ಷಾ ಪ್ರಾಧಿಕಾರವು ಕೆಳಕಂಡವುಗಳಿಗೆ ಸಂಬಂಧಿಸಿದಂತೆ ಸುರಕ್ಷಿತ ವ್ಯವಸ್ಥೆಗಳನ್ನು ಖಚಿತಪಡಿಸಿಕೊಳ್ಳತಕ್ಕದ್ದು. ಪ್ರಶ್ನೆ ಪತ್ರಿಕೆಗಳ ಎನ್‌ಕ್ರಿಪ್ಯನ್, ಪರೀಕ್ಷಾರ್ಥಿಗಳ ದೃಢೀಕರಣ, ಸುರಕ್ಷಿತ ಲಾಗಿನ್ ವಿವರಗಳು, ಆಡಿಟ್ ಲಾಗ್‌ಗಳು, ದೂರಸ್ಥ ಪ್ರವೇಶ ಅಥವಾ ಸ್ಕ್ರೀನ್ ಹಂಚಿಕೆಯನ್ನು ತಡೆಗಟ್ಟುವುದು, ಅನಧಿಕೃತ ಪೋರ್ಟ್‌ಗಳು ಅಪ್ಲಿಕೇಶನ್‌ಗಳು ಮತ್ತು ಸಂವಹನ ಮಾರ್ಗಗಳನ್ನು ನಿಷ್ಕ್ರಿಯಗೊಳಿಸುವುದು ಮತ್ತು ಬ್ಯಾಕಪ್ ಮತ್ತು ಪುನಃಸ್ಥಾಪನಾ ವ್ಯವಸ್ಥೆ ರೂಪಿಸಬೇಕು ಎಂದು ಕರಡಿನಲ್ಲಿ ಹೇಳಲಾಗಿದೆ.
ಆಡಿಟ್ ಲಾಗ್‌ಗಳು, ಸಿಸಿಟಿವಿ ದೃಶ್ಯಾವಳಿಗಳು, ಆಸನ ವ್ಯವಸ್ಥೆಯ ದತ್ತಾಂಶ, ಲಾಗಿನ್ ದಾಖಲೆಗಳು, ಪ್ರತಿಕ್ರಿಯೆ ದತ್ತಾಂಶ ಮತ್ತು ನೆಟ್ವರ್ಕ್ ಲಾಗ್‌ಗಳನ್ನು ಪರೀಕ್ಷಾ ಪ್ರಾಧಿಕಾರವು ನಿಗದಿಪಡಿಸಿದ ಅವಧಿಯವರೆಗೆ ಅಥವಾ ಸದರಿ ಪರೀಕ್ಷೆಯ ಫಲಿತಾಂಶ ಪ್ರಕಟವಾಗುವವರೆಗೆ, ಇವುಗಳಲ್ಲಿ ಯಾವುದು ನಂತರವೋ ಅಲ್ಲಿಯವರೆಗೆ ಸಂರಕ್ಷಿಸಬೇಕು. ಕಂಪ್ಯೂಟರ್ ಆಧಾರಿತ ಪರೀಕ್ಷೆಗಾಗಿ ನಿಯೋಜಿಸಲಾದ ಯಾವುದೇ ಸೇವಾ ಪೂರೈಕೆದಾರನು ಸೇವಾ ಪೂರೈಕೆದಾರರೊಂದಿಗೆ ಮಾಡಿಕೊಳ್ಳಲಾದ ತಿಳುವಳಿಕೆ ಒಪ್ಪಂದದ ಷರತ್ತುಗಳಿಗೆ ಬದ್ಧವಾಗಿರಬೇಕು. ಹಾಗೂ ಪರೀಕ್ಷಾ ಪ್ರಾಧಿಕಾರ ಮತ್ತು ರಾಷ್ಟ್ರೀಯ ನೇಮಕಾತಿ ಸಂಸ್ಥೆಯು ಕಾಲಕಾಲಕ್ಕೆ ನಿಗದಿಪಡಿಸುವ ಭದ್ರತಾ ಮಾನದಂಡಗಳು ಮತ್ತು ಇತರೆ ಸೂಚನೆಗಳನ್ನು ಕಡ್ಡಾಯವಾಗಿ ಪಾಲಿಸಬೇಕು ಎಂದು ಕರಡು ನಿಯಮದಲ್ಲಿ ತಿಳಿಸಲಾಗಿದೆ.
ಇದನ್ನೂ ಓದಿ: ಗ್ರಾಮೀಣ ಜಲ ಆಸ್ತಿ ನಿರ್ವಹಣೆಗೆ ಮೊಬೈಲ್ ಆ್ಯಪ್, ವೆಬ್ ತಂತ್ರಾಂಶ ಲೋಕಾರ್ಪಣೆ

