"ಈ ಬಾರಿ ಉತ್ತಮ ಮಳೆ..": ಭವಿಷ್ಯ ನುಡಿದ ಶ್ರೀ ಮಳೆ ರಾಜೇಂದ್ರಸ್ವಾಮಿ
ಮುರನಾಳ ಶ್ರೀ ಮಳೆ ರಾಜೇಂದ್ರಸ್ವಾಮಿ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ರಾತ್ರಿ ನಡೆದ ಕಡುಬಿನ ಕಾಳಗದಲ್ಲಿ ಈ ಸೂಚನೆ ದೊರೆತಿದೆ.

Published : February 28, 2026 at 5:38 PM IST
ಬಾಗಲಕೋಟೆ: ಪ್ರಸಕ್ತ ವರ್ಷ ಮುಂಗಾರು ಮಳೆಗಳಾದ ರೋಹಿಣಿ, ಆರಿದ್ರಾ, ಪುನರ್ವಸು, ಹಿಂಗಾರು ಮಳೆಗಳಲ್ಲಿ ಮಗಿ, ಹುಬ್ಬಿ, ಉತ್ತರಿ ಮಳೆಗಳು ಸಂಪೂರ್ಣ ಸುರಿಯಲಿವೆ ಎಂದು ಮುರನಾಳ ಶ್ರೀ ಮಳೆರಾಜೇಂದ್ರಸ್ವಾಮಿ ಮಠ ವಾಣಿ ನುಡಿದಿದೆ.
ಈ ಭಾಗದ ಕೃಷಿಕರ ಮಠವೆಂದೇ ಖ್ಯಾತಿ ಪಡೆದಿರುವ ಮುರನಾಳ ಶ್ರೀ ಮಳೆ ರಾಜೇಂದ್ರಸ್ವಾಮಿ ಮಠದ ಜಾತ್ರಾ ಮಹೋತ್ಸವದ ಅಂಗವಾಗಿ ಗುರುವಾರ ರಾತ್ರಿ ನಡೆದ ಕಡುಬಿನ ಕಾಳಗ (ಮಳೆ ಬೆಳೆ ಸೂಚನೆ) ದಲ್ಲಿ ಈ ಸೂಚನೆ ದೊರೆತಿದೆ.
ಈ ವರ್ಷದ ಮುಂಗಾರಿನಲ್ಲಿ ರೋಹಿಣಿ ಉತ್ತಮ, ಆರಿದ್ರಾ ಸಂಪೂರ್ಣ, ಪುನರ್ವಸು, ಪುಷ್ಯಾ ಸಾಧಾರಣವಾಗಿ ಬೀಳಲಿವೆ. ಹಿಂಗಾರಿನಲ್ಲಿ ಮಗಿ ಉತ್ತಮ, ಉತ್ತರಿ ಸಂಪೂರ್ಣ, ಹುಬ್ಬಿ, ಚಿತ್ತ, ಸ್ವಾತಿ ಸಾಧಾರಣವಾಗಿ ಸುರಿಯಲಿವೆ ಎಂಬುದಾಗಿ ಶ್ರೀ ಮಠದ ಸೂಚನೆ ದೊರೆತಿದೆ ಎಂದು ಶ್ರಿ ಮಠದ ಮಠಾಧೀಶ ಗುರುಲಿಂಗಸ್ವಾಮಿ ಮಹಾಪುರುಷ ಅವರು ನೆರೆದ ಭಕ್ತಾಧಿಗಳಿಗೆ ತಿಳಿಸಿದರು.
ಪ್ರತಿ ವರ್ಷದಂತೆ ಹೊಸ ಮುರನಾಳದಲ್ಲಿ ಶ್ರೀ ಮಳೆ ರಾಜೇಂದ್ರಸ್ವಾಮಿ ಮಠದ ಜಾತ್ರಾ ಮಹೋತ್ಸವ ವಿಜೃಂಭಣೆಯಿಂದ ನಡೆಯಿತು. ಜಾತ್ರೆಯ ಅಂಗವಾಗಿ ನಡೆಯುವ ಕಡುಬಿನ ಕಾಳಗದಲ್ಲಿ (ಮಳೆ ಬೆಳೆ ಸೂಚನೆ) ಈ ವರ್ಷವು ಮಳೆ ಚೆನ್ನಾಗಿ ಆಗಲಿ ಎಂದು ಪ್ರಾರ್ಥಿಸುತ್ತ ಸುತ್ತಮುತ್ತಲಿನ ಗ್ರಾಮಗಳ ರೈತಾಪಿ ಜನರು ಮಳೆ ಸೂಚನೆಗಾಗಿ ಕತೂಹಲದಿಂದ ಕಾದು ನಿಂತಿದ್ದರು. ಮಳೆ-ಬೆಳೆ ಕುರಿತಂತೆ ಮಠದ ಸೂಚನೆ ಪಡೆದ ರೈತರು ಪ್ರಸಕ್ತ ವರ್ಷದ ಸಾಧಕ - ಬಾಧಕಗಳ ಬಗ್ಗೆ ತಮ್ಮ ತಮ್ಮಲ್ಲಿಯೇ ವಿಚಾರ ವಿನಿಮಯ ಮಾಡಿಕೊಂಡರು.

ಮಳೆ ಬೆಳೆ ಸೂಚನೆ (ಕಡುಬಿನ ಕಾಳಗ)ದ ವೈಶಿಷ್ಟ್ಯ: ಕಡುಬಿನ ಕಾಳಗದ ಮುಂಚೆ ನಡೆದ ಮಳೆರಾಜೇಂದ್ರಸ್ವಾಮಿಗಳ ಮೂರ್ತಿ ಹೊತ್ತ ಪಲ್ಲಕ್ಕಿ ಮೆರವಣಿಗೆಯಲ್ಲಿ ಗ್ರಾಮದ ಸಾವಿರಾರು ಮಹಿಳೆಯರು ಆರತಿ ಹಾಗೂ ಪಂಚಬಿಂದಿಗೆಯೊಂದಿಗೆ ಪಾಲ್ಗೊಂಡಿದ್ದರು.
ಗಂಗೆಯ ಪೂಜೆಗಾಗಿ ನಿರ್ಮಿಸಿರುವ ಹೊಂಡದವರೆಗೆ ಮೆರವಣಿಗೆಯಲ್ಲಿ ಸಾಗಿದ ಗ್ರಾಮಸ್ಥರು ಗಂಗೆಗೆ ಪೂಜೆ ಸಲ್ಲಿಸಿದ ಬಳಿಕ ಪಂಚ ಬಿಂದಿಗೆಗಳಲ್ಲಿ ಗಂಗೆಯನ್ನು ತುಂಬಿ, ಮಳೆಸ್ವಾಮಿಗೆ ಜಲಾಭಿಷೇಕ, ಪಂಚಾಮೃತ ಅಭಿಷೇಕ ನೆರವೇರಿಸಿದರು. ಮುತ್ತೈದೆಯರಿಗೆ ಉಡಿ ತುಂಬಿದ ನಂತರ ಪಂಚ ಬಿಂದಿಗೆಗಳಿಗೆ ಪೂಜೆ ಸಲ್ಲಿಸಿ ಮಹಾಮಂಗಳಾರತಿ ನಂತರ, ಹೀಗೆ ತುಂಬಲ್ಪಟ್ಟ ಪ್ರತಿ ಬಿಂದಿಗೆಯ ಮೇಲೆ ಎರಡೆರಡು ಮಳೆಗಳ ಹೆಸರನ್ನು ನಮೂದಿಸಲಾಗುತ್ತದೆ. ಪಂಚ ಬಿಂದಿಗೆ ಹೊತ್ತು ನಂತರ ಗಂಗಾ ಹೊಂಡದಿಂದ ಪುನಃ ಮೆರವಣಿಗೆಯಲ್ಲಿ ರಥೋತ್ಸವ ಇರುವ ಸ್ಥಳಕ್ಕೆ ಬರುತ್ತಾರೆ.

ಪ್ರದಕ್ಷಿಣೆ ಹಾಕಿ ಪಂಚಬಿಂದಿಗೆಗೆ ಪೂಜೆ ಸಲ್ಲಿಸಿದ ಬಳಿಕ ಮಳೆ-ಬೆಳೆ ಸೂಚನೆ ನೀಡಲಾಗುತ್ತದೆ. ಮಳೆಗಳ ಹೆಸರನ್ನು ಹೊಂದಿರುವ ಬಿಂದಿಗೆಗಳ ಬಸಿಯುವಿಕೆ (ಸೋರಿಕೆ) ಆಧಾರದ ಮೇಲೆ ಮಳೆ, ಬೆಳೆ ಸೂಚನೆ ಹೊರಬೀಳುತ್ತದೆ. ಸೋರಿಕೆ ಪ್ರಮಾಣದ ಮೇಲೆಯೇ ಯಾವ ಮಳೆ ಹೆಚ್ಚು ಸುರಿಯುತ್ತದೆ ಹಾಗೂ ಯಾವುದು ಕಡಿಮೆಯಾಗುತ್ತದೆ ಎಂಬುದನ್ನು ಹೇಳಲಾಗುತ್ತದೆ. ವಿಶಿಷ್ಟ ಪರಂಪರೆ ಹೊಂದಿರುವುದರಿಂದ ಮಳೆ ರಾಜೇಂದ್ರ ಮಠದ ಕಡುಬಿನ ಕಾಳಗಕ್ಕೆ ರೈತ ಸಮುದಾಯ ಕುತೂಹಲದಿಂದ ನೋಡುತ್ತದೆ.
ರಾತ್ರಿ ಸಂಭ್ರಮದಿಂದ ನಡೆದ ಕಡುಬಿನ ಕಾಳಗದಲ್ಲಿ ಮಠಾಧೀಶರಾದ ಗುರಲಿಂಗಸ್ವಾಮಿ ಹಾಗೂ ನವೀನಸ್ವಾಮಿ ಸಾನಿಧ್ಯ ವಹಿಸಿದ್ದರು. ಇದೇ ಸಂದರ್ಭದಲ್ಲಿ ಹರಕೆಯ ಇಡೇರಿಕಾಗಿ ಸಂಕಲ್ಪ ಮಾಡಿದ ಮಾತಾ ಭಗಿನಿಯರಿಗೆ ಊಡಿ ತುಂಬುವ ಕಾರ್ಯ ಜರುಗಿತು.

