ETV Bharat / state

ಅಕ್ರಮ ಚಿನ್ನ ಸಾಗಾಟ ಪ್ರಕರಣ: ಕಾಫಿಪೋಸಾ ಕಾಯ್ದೆ ಅವಧಿ ಮುಕ್ತಾಯ; ಜೈಲಿನಿಂದ ಬಿಡುಗಡೆಯಾದ ನಟಿ ರನ್ಯಾ ರಾವ್

ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಬಂಧನಕ್ಕೊಳಗಾಗಿದ್ದ ನಟಿ ರನ್ಯಾ ರಾವ್ ಜೈಲಿನಿಂದ ಇಂದು ಬಿಡುಗಡೆಯಾಗಿದ್ದಾರೆ.

GOLD SMUGGLING CASE  BENGALURU  DRI  ನಟಿ ರನ್ಯಾ ರಾವ್ ಬಿಡುಗಡೆ ACTRESS RANYA RAO RELEASED
ನಟಿ ರನ್ಯಾ ರಾವ್ (IANS)
author img

By ETV Bharat Karnataka Team

Published : April 22, 2026 at 10:14 PM IST

2 Min Read
Choose ETV Bharat

ಬೆಂಗಳೂರು: ವಿದೇಶದಿಂದ ಅಕ್ರಮವಾಗಿ ಚಿನ್ನ ಸಾಗಾಟ ಪ್ರಕರಣದಲ್ಲಿ ಕಳೆದ ವರ್ಷ ಕಂದಾಯ ಗುಪ್ತಚರ ನಿರ್ದೇಶನಾಲಯ (ಡಿಆರ್‌ಐ) ದಿಂದ ಬಂಧನಕ್ಕೊಳಗಾಗಿದ್ದ ನಟಿ ರನ್ಯಾ ರಾವ್‌ ಬುಧವಾರ ಪರಪ್ಪನ ಅಗ್ರಹಾರ ಜೈಲಿನಿಂದ ಬಿಡುಗಡೆಯಾಗಿದ್ದಾರೆ.

ಅಕ್ರಮ ಚಿನ್ನ ಸಾಗಾಟ ಪ್ರಕರಣದಲ್ಲಿ ಈ ಹಿಂದೆಯೇ ಜಾಮೀನು ಸಿಕ್ಕಿದ್ದರೂ, ಕಾಫಿಪೋಸಾ ಕಾಯ್ದೆ ಅಳವಡಿಸಿದ್ದರಿಂದ ಬಿಡುಗಡೆ ಆಗಿರಲಿಲ್ಲ. ಇದೀಗ ಅವಧಿ ಮುಗಿದ ಹಿನ್ನೆಲೆಯಲ್ಲಿ ಆರ್ಥಿಕ ಅಪರಾಧಗಳ ನ್ಯಾಯಾಲಯ ಷರತ್ತು ಬದ್ಧ ಜಾಮೀನು ಮಂಜೂರು ಮಾಡಿದೆ. ದೇಶ ಬಿಟ್ಟು ಹೋಗುವಂತಿಲ್ಲ ಮತ್ತು ತನಿಖೆಗೆ ಸಹಕರಿಸಬೇಕು ಎಂಬ ನಿಬಂಧನೆಗಳನ್ನು ವಿಧಿಸಿ ಜಾಮೀನು ಮಂಜೂರು ಮಾಡಿದೆ. ಆದ್ದರಿಂದ ಜೈಲಿನಿಂದ ಬಿಡುಗಡೆಯಾಗಿ ಮನೆಗೆ ತೆರಳಿದ್ದಾರೆ. ಇನ್ನು ಜೈಲಿನಿಂದ ಹೊರಬರುತ್ತಿದ್ದಂತೆ ವಕೀಲರ ಕಾರಿನಲ್ಲಿ ಹೊರಟರು.

2025ರ ಮಾ.3ರಂದು ವಿದೇಶದಿಂದ ಅಕ್ರಮವಾಗಿ ಚಿನ್ನ ತರುತ್ತಿದ್ದ ಮಾಹಿತಿ ಮೇರೆಗೆ ಕಂದಾಯ ಗುಪ್ತಚರ ನಿರ್ದೇಶನಾಲಯದ ಅಧಿಕಾರಿಗಳು ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ರನ್ಯಾ ರಾವ್‌ರನ್ನು ಬಂಧಿಸಲಾಗಿತ್ತು. ಬಳಿಕ ಅವರಿಂದ 12.56 ಕೋಟಿ ರೂ. ಮೌಲ್ಯದ 14 ಕೆಜಿ 213 ಗ್ರಾಂ ಚಿನ್ನ ವಶಕ್ಕೆ ಪಡೆಯಲಾಗಿತ್ತು. ಬಳಿಕ ರನ್ಯಾ ರಾವ್ ಮನೆ ಮೇಲೆ ದಾಳಿ ನಡೆಸಿ 2.67 ಕೋಟಿ ರೂ. ನಗದು ಮತ್ತು 2.06 ಕೋಟಿ ರೂ. ಮೌಲ್ಯದ ಚಿನ್ನಾಭರಣಗಳನ್ನು ಜಪ್ತಿ ಮಾಡಲಾಗಿತ್ತು. ನಂತರ ಆರೋಪಿತೆಯ ಸ್ನೇಹಿತ ತರುಣ್‌ ಕೊಂಡರಾಜು ಹಾಗೂ ಇತರೆ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿತ್ತು. ಮತ್ತೊಂದೆಡೆ ಪ್ರಕರಣದಲ್ಲಿ ರನ್ಯಾ ರಾವ್‌ಗೆ ಆರೇಳು ತಿಂಗಳ ಹಿಂದೆಯೇ ಜಾಮೀನು ಸಿಕ್ಕಿತ್ತು. ಆದರೆ, ಅಷ್ಟರಲ್ಲಿ ಡಿಆರ್‌ಐ ಅಧಿಕಾರಿಗಳು, ಆರೋಪಿಗಳು ಸಂಘಟಿತವಾಗಿ ಕೃತ್ಯ ಎಸಗಿದ್ದಾರೆ ಎಂದು ಕಾಫಿಫೋಸಾ ಕಾಯ್ದೆಯನ್ನು ಆರೋಪಿಗಳ ವಿರುದ್ಧ ಅಳವಡಿಸಿದ್ದರು. ಹೀಗಾಗಿ ಒಂದು ವರ್ಷದವರೆಗೂ ಜಾಮೀನು ಸಿಕ್ಕಿರಲಿಲ್ಲ. ಇದೀಗ ಒಂದು ವರ್ಷ ಪೂರೈಸಿದ ಹಿನ್ನೆಲೆಯಲ್ಲಿ ಬಿಡುಗಡೆಯಾಗಿದ್ದಾರೆ.

ಇನ್ನು ಡಿಆರ್‌ಐ ಅಧಿಕಾರಿಗಳ ತನಿಖೆಯಲ್ಲಿ 102 ಕೋಟಿ ರೂ. ಮೌಲ್ಯದ ನೂರಾರು ಕೆಜಿ ಚಿನ್ನವನ್ನು ರನ್ಯಾ ರಾವ್‌ ಮತ್ತು ತಂಡ ಅಕ್ರವಾಗಿ ಸಾಗಾಟ ಮಾಡಿದೆ ಎಂಬುದು ಬೆಳಕಿಗೆ ಬಂದಿತ್ತು.

ಏನಿದು ಕಾಫಿಪೋಸಾ ಕಾಯ್ದೆ?: ಕಾಫಿಪೋಸಾ ಎಂದರೆ ವಿದೇಶಿ ವಿನಿಮಯ ನಿಯಂತ್ರಣ ಹಾಗೂ ಕಳ್ಳ ಸಾಗಾಣಿಕೆ ತಡೆ ಕಾಯ್ದೆಯಾಗಿದೆ. ಈ ಕಾಫಿಪೋಸಾ ಕಾಯ್ದೆಯನ್ನು ಕಳ್ಳಸಾಗಣೆ ಮಾಡುವವರ ವಿರುದ್ಧ ಹಾಕಲಾಗುತ್ತದೆ. ಆರೋಪಿಯು ಜಾಮೀನು ಪಡೆಯಬಾರದು ಎಂಬುದು ಅದರ ಮೂಲ ಉದ್ದೇಶವಾಗಿದೆ. ಸಾಮಾನ್ಯವಾಗಿ ಈ ಕಾಯ್ದೆಯಡಿ ಬಂಧನಕ್ಕೊಳಗಾದವರನ್ನು 1 ವರ್ಷದವರೆಗೆ ಜೈಲಿನಲ್ಲಿ ಇರಿಸಬಹುದು. ಗಂಭೀರ ಪ್ರಕರಣಗಳಲ್ಲಿ ಇದನ್ನು 2 ವರ್ಷಗಳವರೆಗೆ ವಿಸ್ತರಿಸುವ ಅವಕಾಶವಿದೆ.

ಇದನ್ನೂ ಓದಿ: ಚಿನ್ನ ಕಳ್ಳಸಾಗಣೆ ಪ್ರಕರಣ: ನಟಿ ರನ್ಯಾ ರಾವ್ ಬಂಧನ ಆದೇಶ ಎತ್ತಿಹಿಡಿದ ಸುಪ್ರೀಂ ಕೋರ್ಟ್