’ಕೋಗಿಲು ಸಂತ್ರಸ್ತರಿಗೆ ಮನೆ ಹಂಚಲು ಮುಂದಾಗುತ್ತಿರುವ ಸರ್ಕಾರಕ್ಕೆ ನಮಗೇಕೆ ಹಕ್ಕುಪತ್ರ ನೀಡಲು ಸಾಧ್ಯವಾಗುತ್ತಿಲ್ಲ‘?: ಇದು ಶರಾವತಿ ಸಂತ್ರಸ್ತರ ಪ್ರಶ್ನೆ!
ಕೋಗಿಲು ಸಂತ್ರಸ್ತರಿಗೆ ಮನೆ ಹಂಚಲು ಮುಂದಾಗುತ್ತಿರುವ ರಾಜ್ಯ ಸರ್ಕಾರ, ಕಳೆದ 65 ವರ್ಷಗಳಿಂದ ಶರಾವತಿ ಮುಳುಗಡೆ ಸಂತ್ರಸ್ತರಾದ ನಮಗೇಕೆ ಹಕ್ಕುಪತ್ರ ನೀಡುತ್ತಿಲ್ಲ. ಅವರಿಗೆ ಆಗಿದ್ದು ನಮಗೇಕೆ ಆಗುತ್ತಿಲ್ಲ ಎಂದು ಶರಾವತಿ ಮುಳುಗಡೆ ಸಂತ್ರಸ್ತರು ಪ್ರಶ್ನಿಸಿದ್ದಾರೆ.

Published : January 5, 2026 at 2:53 PM IST
ವಿಶೇಷ ವರದಿ : ಕಿರಣ್ ಕುಮಾರ್.ಎಸ್.ಈ
ಶಿವಮೊಗ್ಗ: ರಾಜ್ಯ ಸರ್ಕಾರ ಕೋಗಿಲು ಸಂತ್ರಸ್ತರಿಗೆ ಮನೆ ನೀಡಲು ಮುಂದಾಗುತ್ತಿದೆ. ಕಳೆದ 8 ದಶಕಗಳಿಂದ ರಾಜ್ಯಕ್ಕೆ ಬೆಳಕು ನೀಡಲು ತಮ್ಮ ಮೂಲ ನೆಲೆ ಕಳೆದುಕೊಂಡ ಶರಾವತಿ ಸಂತ್ರಸ್ತರಿಗೆ ಮೊದಲು ಹಕ್ಕುಪತ್ರ ನೀಡಬೇಕು ಎಂದು ಶರಾವತಿ ಸಂತ್ರಸ್ತರು ರಾಜ್ಯ ಸರ್ಕಾರಕ್ಕೆ ಆಗ್ರಹಿಸಿದ್ದಾರೆ.
ಕಳೆದ 7 ದಶಕಗಳ ಹಿಂದೆ ಶರಾವತಿ ನದಿಗೆ ಲಿಂಗನಮಕ್ಕಿ ಜಲಾಶಯ ನಿರ್ಮಾಣಕ್ಕಾಗಿ ನೂರಾರು ಗ್ರಾಮಗಳು ಮುಳುಗಡೆಯಾದವು. ಇದರಿಂದ ತೋಟ, ಜಮೀನು ಮನೆ ಸಹ ಕಳೆದುಕೊಂಡು, ಗೂತ್ತುಗುರಿ ಇಲ್ಲದ ಕಡೆ ರಾತ್ರೋರಾತ್ರಿ ಅಧಿಕಾರಿಗಳು ಮುಳುಗಡೆ ಜನರನ್ನು ಜಿಲ್ಲೆಯ ವಿವಿಧೆಡೆ ಕರೆದುಕೊಂಡು ಬಿಟ್ಟು ಹೋಗಿದ್ದರು. ಇಂದಿಗೂ ಸಹ ಇವರಿಗೆ ಹಕ್ಕುಪತ್ರ ನೀಡಿಲ್ಲ. 1970ರ ದಶಕದಲ್ಲಿ ಅರಣ್ಯ ನೀತಿ ಹಾಗೂ ಅಭಯಾರಣ್ಯ ನೀತಿ ಇರಲಿಲ್ಲ. ನಂತರ ಬಂದ ಅರಣ್ಯ ನೀತಿಯಿಂದ ಅಧಿಕಾರಿಗಳು ಮುಳುಗಡೆ ಸಂತ್ರಸ್ತರು ಸಮಸ್ಯೆಗೆ ಸಿಲುಕುವಂತೆ ಮಾಡಿದರು. ಸಿದ್ದರಾಮಯ್ಯ ಅವರ ಕಳೆದ ಸರ್ಕಾರದಲ್ಲಿ ಕಾಗೋಡು ತಿಮ್ಮಪ್ಪ ನೇತೃತ್ವದಲ್ಲಿ ಸುಮಾರು 10 ಸಾವಿರ ಜನರಿಗೆ ಹಕ್ಕು ಪತ್ರ ನೀಡಲಾಗಿತ್ತು. ಆದರೆ, ಅರಣ್ಯ ಭೂಮಿಯು ಕೇಂದ್ರದ ವ್ಯಾಪ್ತಿಯಲ್ಲಿರುವುದರಿಂದ ಅವರ ಅನುಮತಿ ಪಡೆಯಬೇಕಿತ್ತು ಎಂದು ಹಕ್ಕುಪತ್ರಗಳನ್ನು ರದ್ದು ಮಾಡಲಾಗಿತ್ತು.
ಹಾಲಿ ಸುಪ್ರೀಂಕೋರ್ಟ್ನಲ್ಲಿ ಪ್ರಕರಣ ಇರುವುದರಿಂದ ರಾಜ್ಯ ಸರ್ಕಾರ ಸರ್ವೆ ನಡೆಸಿ ವರದಿ ನೀಡಿದ ಮೇಲೆ ಹಕ್ಕುಪತ್ರ ನೀಡುವ ಸಾದ್ಯತೆಗಳಿವೆ. ಇದರಿಂದ ಮೊದಲು ಆದಷ್ಟು ಬೇಗ ಸರ್ವೆ ಮುಗಿಸಿ ಸಂತ್ರಸ್ತರಿಗೆ ಹಕ್ಕುಪತ್ರ ಸಿಗಬಹುದೆಂಬ ನಿರೀಕ್ಷೆಯಲ್ಲಿ ಇಲ್ಲಿನ ಸಂತ್ರಸ್ತರಿದ್ದಾರೆ. ಆದರೆ, ಎಲ್ಲಿಂದಲೋ ಬಂದವರ ಬಗ್ಗೆ ಇರುವ ಆಸಕ್ತಿ ನಾಡಿಗೆ ಬೆಳಕು ನೀಡಿದವರ ಮೇಲೂ ಗಮನ ಹರಿಸಲಿ ಎಂಬುದು ನನ್ಮ ಬೇಡಿಕೆಯಾಗಿದೆ ಎನ್ನುತ್ತಾರೆ ಮುಳುಗಡೆ ಸಂತ್ರಸ್ತರು.
ನಮಗೇಕೆ ಹಕ್ಕುಪತ್ರ ನೀಡಲು ಸಾಧ್ಯವಾಗುತ್ತಿಲ್ಲ?: ''ಶರಾವತಿ ಸಂತ್ರಸ್ತರ ಹೋರಾಟ ಸಮಿತಿಯ ಹೋರಾಟಗಾರ ಹೊವಪ್ಪ ಮಾತನಾಡಿ, ನಿರಾಶ್ರಿತರ ಹೋರಾಟವನ್ನು ಕಳೆದ 15 ವರ್ಷಗಳಿಂದ ನಾವು ಮಾಡಿಕೊಂಡು ಬಂದಿದ್ದೇವೆ. ಹಿಂದೆ ನಮ್ಮ ಹಿರಿಯರು ಸಹ ಹೋರಾಟ ಮಾಡಿದ್ದರು. ಯಾರೋ ವಲಸೆ ಬಂದವರಿಗೆ ರಾತ್ರೋರಾತ್ರಿ ಟೆಂಟ್ ಹಾಕಿದವರನ್ನು ತೆರವುಗೊಳಿಸಿದ್ದಕ್ಕೆ ಸಚಿವರು, ಅಧಿಕಾರಿಗಳು ಅಲ್ಲಿಗೆ ಹೋಗಿ ಪುರ್ನವಸತಿ ನೀಡಲು ಮುಂದಾಗಿದ್ದಾರೆ. ಕಳೆದ 65 ವರ್ಷಗಳಿಂದ ಶರಾವತಿ ಮುಳುಗಡೆ ಸಂತ್ರಸ್ತರಾದ ನಮಗೇಕೆ ಹಕ್ಕುಪತ್ರ ನೀಡಲು ಆಗುತ್ತಿಲ್ಲ'' ಎಂದು ಪ್ರಶ್ನೆ ಮಾಡಿದ್ದಾರೆ.

ನೀವು ನುಡಿದಂತೆ ನಡೆಯಬೇಕು: ನೀವು ನಮ್ಮನ್ನು ಓಟು ಹಾಕಿಸಿಕೊಳ್ಳಲು ಮಾತ್ರ ಇಟ್ಟುಕೊಂಡಿದ್ದೀರಾ? ನಮಗೆ ಈಗ ಹೊಸದಾಗಿ ಯಾವುದೇ ಸಭೆ ಮಾಡಬೇಕಾಗಿಲ್ಲ. ನಮಗೆ ಹಕ್ಕುಪತ್ರ ನೀಡುವ ಬಗ್ಗೆ ಸಾಕಷ್ಟು ಆದೇಶ ಮಾಡಿದರೂ ಯಾವುದೇ ಪ್ರಯೋಜನವಾಗಿಲ್ಲ. 19,800 ಎಕರೆ ಪೋಡಿ ದುರಸ್ತಿ ಆಗಬೇಕು. ಹಂಚಿಕೆ ಆಗದೇ ಇರುವ 9,129 ಎಕರೆಯನ್ನು ಹಂಚಿಕೆ ಮಾಡಬೇಕು. ಅಂದು 14,800 ಖಾತೆ ಭೂಮಿ ಕಳೆದುಕೊಂಡಿದ್ದಾರೆ. 26 ಸಾವಿರ ಎಕರೆ ಬಗರ್ ಹುಕುಂ ಭೂಮಿ ಕಳೆದುಕೊಂಡಿದ್ದಾರೆ. ಆದರೆ, ಈಗ ಇವರು 9,128 ಎಕರೆ ಭೂಮಿ ಕೊಡುತ್ತೇವೆ ಎಂದು ಹೇಳುತ್ತಿದ್ದಾರೆ. ಲಾರಿಯಲ್ಲಿ ತಂದು ಬಿಟ್ಟಾಗ ತಮಗೆ ಎಷ್ಟು ಅವಶ್ಯಕತೆ ಇದೆಯೊ ಅಷ್ಟನ್ನು ಮಾತ್ರ 1962 ರಲ್ಲಿ ಬಳಕೆ ಮಾಡಿಕೊಂಡಿದ್ದಾರೆ. ಅರಣ್ಯ ಇಲಾಖೆ ಕಾನೂನು ಬರುವ ಮುನ್ನ ಶರಾವತಿ ಅರಣ್ಯ ಪ್ರದೇಶ ಎಂದು ಆದೇಶ ಮಾಡಿದ್ದರೆ ಇಂದು ಯಾವ ಕಾನೂನು ತೂಡಕು ಬರುತ್ತಿರಲಿಲ್ಲ. ವಲಸೆ ಬಂದವರಿಗೆ ಹಕ್ಕುಪತ್ರ ಕೊಡುವುದನ್ನು ನಿಲ್ಲಿಸಬೇಕು. ಅನ್ಯಾಯ ಆಗಿರುವ ಶರಾವತಿ ಮುಳುಗಡೆಯಾದವರಿಗೆ ಹಕ್ಕುಪತ್ರ ನೀಡಬೇಕು. ಪಾದಯಾತ್ರೆ ಮಾಡಿದ ಸಿಎಂ ಸಿದ್ದರಾಮಯ್ಯನವರು ತಮ್ಮ ಮಾತನ್ನು ಉಳಿಸಿಕೊಳ್ಳಬೇಕು. ನುಡಿದಂತೆ ನಡೆಯುತ್ತೇವೆ ಎಂದು ಹೇಳುವ ಸಿಎಂ, ನುಡಿದಂತೆ ನಡೆಯಬೇಕು. ನಾಡಿಗೆ ಬೆಳಕು ನೀಡಿದವರಿಗೆ ನ್ಯಾಯ ನೀಡಬೇಕು. ನಮ್ಮ ಹಕ್ಕುಪತ್ರ ನಮಗೆ ಸಿಗಬೇಕು ಎಂದು ಆಗ್ರಹಿಸಿದ್ದಾರೆ.

ನಮಗೊಂದು - ಅವರಿಗೊಂದು ಕಾನೂನು ಇದೆಯಾ?:1960ರಲ್ಲಿ ಮುಳುಗಡೆಯಾದ ನಂತರ ನಮ್ಮನ್ನು ಕಾಡಿಗೆ ತಂದು ಬಿಟ್ಟರು. ಆಗ ಕೆಲವರಿಗೆ ಹಂಗಾಮಿ ತಹಶೀಲ್ದಾರರನ್ನು ನೇಮಕ ಮಾಡಿ ಹಕ್ಕುಪತ್ರವನ್ನು ನೀಡಿದರು. ರಿಲೀಸ್ ಲ್ಯಾಂಡ್ ಇದ್ದರೂ ಸಹ ಸರ್ಕಾರ ಹಕ್ಕುಪತ್ರ ನೀಡಲು ಮೀನಮೇಷ ಎಣಿಸುತ್ತಿದೆ. ಕೋಗಿಲು ಎಂಬ ಜಾಗದಲ್ಲಿದ್ದವರಿಗೆ ಈಗ ಹಕ್ಕುಪತ್ರ ನೀಡಲು ಮುಂದಾಗುತ್ತಿದೆ. ಇವರಿಗೆ (ಕೋಗಿಲು) ಹಕ್ಕುಪತ್ರ ನೀಡುವ ಭರವಸೆಯನ್ನು ನಾಯಕರುಗಳು ನೀಡುತ್ತಿದ್ದಾರೆ. ಶರಾವತಿ ಸಂತ್ರಸ್ತರಿಗೆ ಮಾತ್ರ ಹಕ್ಕುಪತ್ರ ಕೊಡುವ ಮಾತನ್ನು ಸಹ ಆಡುವುದಿಲ್ಲ. ಹಾಗಾದ್ರೆ ನಮಗೊಂದು ಅವರಿಗೊಂದು ಕಾನೂನು ಇದೇಯೇ? ದೇಶ, ರಾಜ್ಯಕ್ಕೆ ಬೆಳಕು ನೀಡಿದವರು ನಾವು. ಇವತ್ತು ನಮ್ಮನ್ನು ಓಟ್ ಬ್ಯಾಂಕ್ ಆಗಿ ಉಪಯೋಗಿಸಿಕೊಳ್ಳುತ್ತಿದ್ದಾರೆ. ಶಿವಮೊಗ್ಗದಲ್ಲಿ ನಮ್ಮಈಡಿಗರನ್ನು ಓಟಿಗಾಗಿಯೇ ಬಳಸಿಕೊಳ್ಳುತ್ತಿದ್ದಾರೆ ಎಂದು ಮುಳುಗಡೆ ಸಂತ್ರಸ್ತರಾದ ಕೃಷ್ಣಪ್ಪ ಕಿಡಿಕಾರಿದರು.
ದಶಕಗಳಿಂದ ಹೋರಾಡುತ್ತಿರುವ ನಮ್ಮ ಕಡೆಗೂ ನೋಡಿ:
ರಾಜ್ಯ ಸರ್ಕಾರ ಬೇರೆ ಕಡೆಯಿಂದ ಬಂದ ಕನ್ನಡಿಗರಲ್ಲದವರಿಗೆ ಹಕ್ಕುಪತ್ರ ನೀಡಲು ಮುಂದಾಗುತ್ತಿದೆ. ಶರಾವತಿ ಸಂತ್ರಸ್ತರಾದ ನಾವು ದಶಕಗಳಿಂದ ಹೋರಾಟ ಮಾಡಿಕೊಂಡು ಬರುತ್ತಿದ್ದೇವೆ. ಶರಾವತಿ ಸಂತ್ರಸ್ತರ ಕುರಿತು ನಡೆದ ಸರ್ವೆಯಲ್ಲಿ ಶೇ. 50ರಷ್ಟು ರೈತರಿಗೆ ಅನ್ಯಾಯವಾಗಿದೆ. ಈ ಅನ್ಯಾಯ ಸರಿಪಡಿಸಿ ಎಂದು ಜಿಲ್ಲಾಧಿಕಾರಿಗಳಿಗೆ ನಾವು ಮನವಿ ಸಲ್ಲಿಸಿದ್ದೆವು. ಆದರೆ, ಇದುವರೆಗೂ ನಮಗೆ ಅದರ ಉತ್ತರ ಬಂದಿಲ್ಲ. ಅಧಿಕಾರಿಗಳನ್ನು ಕೇಳಿದ್ರೆ ಸರಿಯಾದ ಉತ್ತರವನ್ನು ನೀಡುತ್ತಿಲ್ಲ. ನಮಗೆ ಬ್ಯಾಂಕ್ಗಳಿಂದ ಸಾಲ ಸೌಲಭ್ಯ ನೀಡುತ್ತಿಲ್ಲ. ಸರ್ಕಾರದ ಎಲ್ಲಾ ಸ್ಕೀಂಗಳಿಂದ ನಾವು ವಂಚಿತರಾಗಿದ್ದೇವೆ. ದುಡಿಬೇಕು - ತಿನ್ನಬೇಕು ಎಂಬಂತೆ ನಮ್ಮ ಬದುಕು ಆಗಿದೆ. ನಾಡಿಗೆ ಬೆಳಕು ನೀಡಿದ ನಾವು ಸರ್ಕಾರದ ಋಣದಲ್ಲಿಲ್ಲ. ನಮ್ಮ ಆಸ್ತಿ, ಮನೆ, ದನ-ಕರು ಕಳೆದುಕೊಂಡು ಹೊಸ ಬದುಕನ್ನು ಕಟ್ಟಿಕೊಂಡವರು. ಇದರಿಂದ ನಮಗೆ ತಕ್ಷಣ ಹಕ್ಕುಪತ್ರ ನೀಡಬೇಕು ಎಂದು ಹಣಗೆರೆ ಗ್ರಾಮ ಪಂಚಾಯತಿ ಅಧ್ಯಕ್ಷ ರಾಘವೇಂದ್ರ ಆಗ್ರಹಿಸಿದರು.

ಶರಾವತಿ ಸಂತ್ರಸ್ತರಿಗೆ ನ್ಯಾಯ ಒದಗಿಸಲು ರಾಜ್ಯ ಸರ್ಕಾರ ಬದ್ದವಾಗಿದೆ. ಇದಕ್ಕಾಗಿಯೇ ರಾಜ್ಯ ಸರ್ಕಾರದಿಂದ ಉತ್ತಮ ವಕೀಲರನ್ನು ನೇಮಿಸಲಾಗಿದೆ. ಹಲವು ದಶಕಗಳಿಂದ ನಿರಾಶ್ರಿತರಾದವರಿಗೆ ನ್ಯಾಯ ಒದಗಿಸುವುದಾಗಿ ನಮ್ಮ ಚುನಾವಣಾ ಪ್ರಚಾರದ ವೇಳೆ ತಿಳಿಸಿದ್ದೆವು. ಇದಕ್ಕಾಗಿ ರಾಜ್ಯ ಸರ್ಕಾರ ಎಲ್ಲಾ ಪ್ರಯತ್ನ ಮಾಡುತ್ತಿದೆ. ಅದಷ್ಟು ಬೇಗ ನಿರಾಶ್ರಿತರಿಗೆ ಶುಭ ಸುದ್ದಿ ಸಿಗಲಿದೆ. ಎಸ್.ಮಧು ಬಂಗಾರಪ್ಪ, ಜಿಲ್ಲಾ ಉಸ್ತುವಾರಿ ಸಚಿವ.
ಇದನ್ನೂ ಓದಿ:

