ETV Bharat / state

ದ್ವಿತೀಯ ಪಿಯು ಪರೀಕ್ಷೆಗೆ ಹೊರಟಿದ್ದ ವಿದ್ಯಾರ್ಥಿನಿಗೆ ಹೃದಯಾಘಾತ‌

ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬಂಬಲವಾಡ ಗ್ರಾಮದ ವಿದ್ಯಾರ್ಥಿನಿಯೊಬ್ಬರು ಹೃದಯಾಘಾತದಿಂದ ನಿಧನರಾಗಿದ್ದಾರೆ.

The deceased Bhumika Malangi
ಮೃತ ದುರ್ದೈವಿ ​ಭೂಮಿಕಾ ಮಾಳಂಗಿ (ETV Bharat)
author img

By ETV Bharat Karnataka Team

Published : February 28, 2026 at 1:25 PM IST

2 Min Read
Choose ETV Bharat

ಚಿಕ್ಕೋಡಿ (ಬೆಳಗಾವಿ) : ದ್ವಿತೀಯ ಪಿಯುಸಿ ಪರೀಕ್ಷೆ ಬರೆಯಲು ಸಿದ್ಧತೆ ಮಾಡಿಕೊಳ್ಳುತ್ತಿದ್ದ ವಿದ್ಯಾರ್ಥಿನಿಯೊಬ್ಬಳು ಹೃದಯಾಘಾತದಿಂದ ಸಾವನ್ನಪ್ಪಿರುವ ದಾರುಣ ಘಟನೆ ಬೆಳಗಾವಿ ಜಿಲ್ಲೆಯ ಚಿಕ್ಕೋಡಿ ತಾಲೂಕಿನ ಬಂಬಲವಾಡ ಗ್ರಾಮದಲ್ಲಿ ನಡೆದಿದೆ.

​ಭೂಮಿಕಾ ಮಾಳಂಗಿ (17) ಮೃತ ದುರ್ದೈವಿ. ಪರೀಕ್ಷೆ ಬರೆಯಲು ತೆರಳಲು ಭೂಮಿಕಾ ಸಿದ್ಧಳಾಗುತ್ತಿದ್ದರು. ಸ್ನಾನ ಮುಗಿಸಿಕೊಂಡು ಹೊರಬರುತ್ತಿದ್ದ ವೇಳೆ ಏಕಾಏಕಿ ಹೃದಯಾಘಾತ ಸಂಭವಿಸಿದೆ. ತಕ್ಷಣವೇ ಗಾಬರಿಗೊಂಡ ಪೋಷಕರು ಮಗಳನ್ನು ಸ್ಥಳೀಯ ಆಸ್ಪತ್ರೆಗೆ ಕರೆದೊಯ್ಯಲು ಮುಂದಾಗಿದ್ದಾರೆ. ಆದರೆ, ಆಸ್ಪತ್ರೆಗೆ ಸಾಗಿಸುವ ಮಾರ್ಗಮಧ್ಯೆಯೇ ವಿದ್ಯಾರ್ಥಿನಿ ಭೂಮಿಕಾ ಕೊನೆಯುಸಿರೆಳೆದಿದ್ದಾರೆ.

ಪರೀಕ್ಷೆ ಬರೆದು ಉಜ್ವಲ ಭವಿಷ್ಯ ರೂಪಿಸಿಕೊಳ್ಳಬೇಕಿದ್ದ ಮಗಳ ಅಕಾಲಿಕ ಮರಣದಿಂದ ಪೋಷಕರ ಆಕ್ರಂದನ ಮುಗಿಲು ಮುಟ್ಟಿದೆ. ಘಟನೆಯಿಂದ ಬಂಬಲವಾಡ ಗ್ರಾಮದಲ್ಲಿ ಶೋಕ ಮಡುಗಟ್ಟಿದೆ, ​ಈ ಘಟನೆಯು ಚಿಕ್ಕೋಡಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ.

ಇಂದಿನಿಂದ ದ್ವಿತೀಯ ಪಿಯುಸಿ ಪರೀಕ್ಷೆ ಆರಂಭವಾಗಿದೆ. ಮಾರ್ಚ್ 17ರವರೆಗೆ ಪರೀಕ್ಷೆ ನಡೆಯಲಿದೆ. ರಾಜ್ಯಾದ್ಯಂತ 1,217 ಕೇಂದ್ರಗಳಲ್ಲಿ 7.10 ಲಕ್ಷ ವಿದ್ಯಾರ್ಥಿಗಳು ಪರೀಕ್ಷೆ ಬರೆಯುತ್ತಿದ್ದಾರೆ. ಬೆಳಗ್ಗೆ 10 ಗಂಟೆಯಿಂದ ಮಧ್ಯಾಹ್ನ 1 ಗಂಟೆವರೆಗೂ ಪರೀಕ್ಷೆ ನಡೆಯಲಿದ್ದು, ಬೆಂಗಳೂರು ಸೇರಿದಂತೆ ರಾಜ್ಯದ ಎಲ್ಲ ಜಿಲ್ಲೆಗಳ ಪರೀಕ್ಷಾ ಕೇಂದ್ರಗಳಲ್ಲಿ ಕಟ್ಟೆಚ್ಚರ ವಹಿಸಲಾಗಿದೆ. ಪ್ರಶ್ನೆ ಪತ್ರಿಕೆಗಳು ಸೋರಿಕೆಯಾಗದಂತೆ ಮುನ್ನೆಚ್ಚರಿಕೆ ವಹಿಸಲಾಗಿದ್ದು, ಸಾಮಾಜಿಕ ಜಾಲತಾಣಗಳ ಮೇಲೆಯೂ ಪಿಯು ಬೋರ್ಡ್ ಕಣ್ಣಿರಿಸಿದೆ.

ಇದನ್ನೂ ಓದಿ : ದಾವಣಗೆರೆ: ಹಾನಿಕಾರಕ ಚುಚ್ಚುಮದ್ದು ಚುಚ್ಚಿಕೊಂಡು ಮೆಡಿಕಲ್‌ ವಿದ್ಯಾರ್ಥಿ ಆತ್ಮಹತ್ಯೆ

ಮೆಡಿಕಲ್‌ ವಿದ್ಯಾರ್ಥಿ ಆತ್ಮಹತ್ಯೆ (ದಾವಣಗೆರೆ) : ವೈದ್ಯಕೀಯ ವಿದ್ಯಾರ್ಥಿಯೊಬ್ಬ ಹಾನಿಕಾರಕ ಚುಚ್ಚುಮದ್ದು ಚುಚ್ಚಿಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ದಾವಣಗೆರೆ ನಗರದ ಎಂಸಿಸಿ 'ಬಿ' ಬ್ಲಾಕ್‌ನಲ್ಲಿರುವ ಹಾಸ್ಟೆಲ್‌ನಲ್ಲಿ ಇತ್ತೀಚಿಗೆ ನಡೆದಿತ್ತು. ಖಾಸಗಿ ವೈದ್ಯಕೀಯ ಕಾಲೇಜಿನಲ್ಲಿ ಚರ್ಮರೋಗ ವಿಭಾಗದ ಸ್ನಾತಕೋತ್ತರ ಅಧ್ಯಯನ ಮಾಡುತ್ತಿದ್ದ ಮಹಾರಾಷ್ಟ್ರದ ಸಿದ್ದಾರ್ಥ್ ತ್ರಯಂಬಕೆ (30) ಮೃತ ವಿದ್ಯಾರ್ಥಿ.

ರಾತ್ರಿಯಿಂದ ವಿದ್ಯಾರ್ಥಿ ಕೊಠಡಿಯ ಬಾಗಿಲು ತೆರೆದಿರಲಿಲ್ಲ. ಅನುಮಾನಗೊಂಡು ಕೊಠಡಿಯ ಬಾಗಿಲು ತೆರೆದು ಪರಿಶೀಲಿಸಿದಾಗ ಘಟನೆ ಬೆಳಕಿಗೆ ಬಂದಿತ್ತು. ಕೂಡಲೇ ಬಡಾವಣೆ ಠಾಣೆಯ ಪೊಲೀಸರು ಆಗಮಿಸಿ ಪರಿಶೀಲನೆ ನಡೆಸಿದ್ದರು. ಮಾನಸಿಕ ಖಿನ್ನತೆಗೆ ಒಳಗಾಗಿ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂಬ ಶಂಕೆ ವ್ಯಕ್ತವಾಗಿದ್ದು, ಕುಟುಂಬಸ್ಥರ ದೂರಿನನ್ವಯ ಪೊಲೀಸರು ತನಿಖೆ ನಡೆಸುತ್ತಿದ್ದಾರೆ.

ಆತ್ಮಹತ್ಯೆ ಪರಿಹಾರವಲ್ಲ : ನಿಮಗೆ ಆತ್ಮಹತ್ಯಾ ಆಲೋಚನೆಗಳು ಬರುತ್ತಿದ್ದರೆ ಅಥವಾ ನೀವು ಸ್ನೇಹಿತರ ಬಗ್ಗೆ ಚಿಂತಿತರಾಗಿದ್ದರೆ, ಇಲ್ಲವೇ ನಿಮಗೆ ಭಾವನಾತ್ಮಕ ಬೆಂಬಲದ ಅಗತ್ಯವಿದ್ದರೆ, ಸಲಹೆ ನೀಡಲು ಯಾವಾಗಲೂ, ಯಾರಾದರೂ ಇದ್ದೇ ಇರುತ್ತಾರೆ. ಸ್ನೇಹ ಫೌಂಡೇಶನ್ - 04424640050 (24x7 ಲಭ್ಯವಿದೆ) ಅಥವಾ ಟಾಟಾ ಇನ್ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್ ಸಹಾಯವಾಣಿ ಐಕಾಲ್ ನಂಬರ್​ 9152987821 (ಸೋಮವಾರದಿಂದ ಶನಿವಾರದವರೆಗೆ ಬೆಳಗ್ಗೆ 8 ರಿಂದ ರಾತ್ರಿ 10ರ ವರೆಗೆ ಲಭ್ಯವಿದೆ)ಗೆ ಕರೆ ಮಾಡಬಹುದು.