ETV Bharat / state

ಲಕ್ಷ ಲಕ್ಷ ಭಕ್ತರ ಮಧ್ಯೆ ಜರುಗಿದ ಗವಿಸಿದ್ದೇಶ್ವರ ಮಹಾರಥೋತ್ಸವ: ಮೇಘಾಲಯ ರಾಜ್ಯಪಾಲರಿಂದ ಚಾಲನೆ

ಸಂಜೆಯಾಗುತ್ತಿದ್ದಂತೆ ಗವಿಮಠದ ಆವರಣದಲ್ಲಿ ಕಾಲಿಡಲು ಆಗದಷ್ಟು ಜನಸಂದಣಿ ಜಮಾವಣೆಗೊಂಡಿತ್ತು. ಸುಮಾರು 5 ಲಕ್ಷ ಜನರು ರಥೋತ್ಸವದ ವೇಳೆ ಹಾಜರಿದ್ದು, ರಥೋತ್ಸವಕ್ಕೆ ಸಾಕ್ಷಿಯಾದರು.

Gavisiddeshwara Maharathotsava celebrated
ಲಕ್ಷ ಲಕ್ಷ ಭಕ್ತರ ಮಧ್ಯೆ ಜರುಗಿದ ಗವಿಸಿದ್ದೇಶ್ವರ ಮಹಾರಥೋತ್ಸವ (ETV Bharat)
author img

By ETV Bharat Karnataka Team

Published : January 5, 2026 at 10:10 PM IST

2 Min Read
Choose ETV Bharat

ಕೊಪ್ಪಳ: ದಸರಾ ವೈಭವ ನೋಡಬೇಕು ಎಂದರೆ ಅದು ಮೈಸೂರಿಗೆ ಹೋಗಬೇಕು. ವೈಭವದ ಜಾತ್ರೆಯೊಂದನ್ನ ನೋಡಬೇಕೆಂದರೆ ಅದೂ ಕೊಪ್ಪಳಕ್ಕೆ ಬರಬೇಕು ಹೊರತು ಬೇರೆಲ್ಲೂ ಸಿಗಲಾರದು ಎಂದು ಮೇಘಾಲಯ ರಾಜ್ಯಪಾಲರಾದ ಸಿ.ಹೆಚ್ ವಿಜಯಶಂಕರ ಹೇಳಿದರು. ಕೊಪ್ಪಳದಲ್ಲಿಂದು ಗವಿಸಿದ್ದೇಶ್ವರ ಮಹಾ ರಥೋತ್ಸವಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು.

ಸಂಜೆಯಾಗುತ್ತಿದ್ದಂತೆ ಗವಿಮಠದ ಆವರಣದಲ್ಲಿ ಕಾಲಿಡಲು ಆಗದಷ್ಟು ಜನಸಂದಣಿ ಜಮಾವಣೆಗೊಂಡಿತು. ಸುಮಾರು 5 ಲಕ್ಷ ಜನರು ರಥೋತ್ಸವದ ವೇಳೆ ಸೇರಿದ್ದರು. ಸಂಸ್ಥಾನ ಶ್ರೀ ಗವಿಮಠದ ಅಭಿನವ ಶ್ರೀ ಗವಿಸಿದ್ಧೇಶ್ವರ ಮಹಾಸ್ವಾಮಿಗಳು ರಥಕ್ಕೆ ಪೂಜೆ ಸಲ್ಲಿಸಿದ ಬಳಿಕ ತೇರು ಎಳೆಯಲಾಯಿತು. ಉತ್ತತ್ತಿ, ಬಿಲ್ಪತ್ರೆ, ಬೇಡವೆಂದರೂ ಬಾಳೆಹಣ್ಣು, ನಾಣ್ಯಗಳನ್ನು ತೇರಿನತ್ತ ಎಸೆದು ನಿಷ್ಕಲ್ಮಶ ಭಕ್ತಿ ಮೆರೆದು ಜನ ಪುನೀತರಾದರು. ಸುಮಾರು ಒಂದು ಕಿ.ಮೀ. ದೂರದವರೆಗೆ ಸಾಗಿದ ತೇರಿಗೆ ನಿಂತಲ್ಲೇ ಕೈ ಮುಗಿದ ಜನರು, ಗವಿಸಿದ್ಧೇಶ್ವರ ಮಹಾರಾಜ್‌ ಕೀ ಜೈ ಎನ್ನುತ್ತಾ ಜಯಕಾರ ಸಮರ್ಪಿಸಿದರು.

ಲಕ್ಷ ಲಕ್ಷ ಭಕ್ತರ ಮಧ್ಯೆ ಜರುಗಿದ ಗವಿಸಿದ್ದೇಶ್ವರ ಮಹಾರಥೋತ್ಸವ (Gavimath)

ನಸುಕಿನ ಜಾವ 2 ಗಂಟೆಯಿಂದಲೇ ಗವಿಮಠಕ್ಕೆ ಭಕ್ತರ ದಂಡು ಹರಿದು ಬರಲಾರಂಭಿಸಿತು. ಭಕ್ತರ ಹಸಿವು ನೀಗಿಸಲು ದಾಸೋಹದ ವ್ಯವಸ್ಥೆ ಅಚ್ಚುಕಟ್ಟಾಗಿದ್ದರಿಂದ ಜನರು ಮಠದ ಸುತ್ತಮುತ್ತ ಇರುವ ಜಾತ್ರೆಯ ಸಡಗರವನ್ನು ಸಂಜೆವರೆಗೆ ಕಣ್ತುಂಬಿಕೊಂಡು ರಥೋತ್ಸವದ ಬಳಿಕ ಭಕ್ತಿಭಾವದಿಂದ ಮನೆಗೆ ಮರಳಿದರು.

Gavisiddeshwara Maharathotsava
ಭಕ್ತರಿಗಾಗಿ ಸಿದ್ಧಗೊಂಡ ಬೆಲ್ಲದ ಜಿಲೇಬಿ (ETV Bharat)

ಭಕ್ತರಿಗೆ ಭಕ್ಷ್ಯ ಭೋಜನ: ಸತತ 15 ದಿನಗಳ ಕಾಲ ಮಹಾದಾಸೋಹ ನಡೆಯುವುದು ಜಾತ್ರೆಯ ವಿಶೇಷ. ಈ ವರ್ಷದ ಜಾತ್ರೆಯಲ್ಲಿ ಮೊದಲ ದಿನದ ಪ್ರಸಾದದಲ್ಲಿ ಭಕ್ತರು ಬೆಲ್ಲದ ಜಿಲೇಬಿ ಸವಿಯುತ್ತಿದ್ದಾರೆ. ಎರಡನೇ ದಿನ ಮಿರ್ಚಿ, ರವೆ ಉಂಡಿ, ಶೆಂಗಾ ಹೋಳಿಗೆ ಸೇರಿದಂತೆ ಇನ್ನಿತರ ಸಿಹಿ ಉಣಬಡಿಸಲಾಗುತ್ತದೆ. ಮಹಾ ದಾಸೋಹಕ್ಕೆ ತಿಂಗಳ ಹಿಂದಿನಿಂದಲೇ ಸುತ್ತಮುತ್ತಲ ಗ್ರಾಮದ ಜನರು ಹೋಳಿಗೆ, ತುಪ್ಪ, ರೊಟ್ಟಿ, ಚಟ್ನಿ, ಕಾಯಿಪಲ್ಯಗಳನ್ನು ತಂದು ಮಠಕ್ಕೆ ಅರ್ಪಿಸುವುದು ವಾಡಿಕೆ.

Gavisiddeshwara Maharathotsava
ಭಕ್ತರಿಗಾಗಿ ಮಹಾ ದಾಸೋಹ (ETV Bharat)

ಭಕ್ತ ಹಿತ ಚಿಂತನ ಸಭೆ: ಮೂರು ದಿ‌ನಗಳ ಮಹೋತ್ಸವದ ನಿಮಿತ್ತ ಗುಡ್ಡದ ಮೇಲೆ ನಿರ್ಮಿಸಿರುವ ಕೈಲಾಸ ಮಂಟಪದಲ್ಲಿ ಭಕ್ತ ಹಿತ ಚಿಂತನ ಸಭೆ ಜರುಗುತ್ತದೆ. ಈ ಕಾರ್ಯಕ್ರಮದಲ್ಲಿ ನಾಡಿನ ಹೆಸರಾಂತ ವಿದ್ವಾಂಸರು, ಸಾಧನ ಪುರುಷರು ಆಗಮಿಸಿ ಉಪದೇಶ ನೀಡಲಿದ್ದಾರೆ.

ದಾಸೋಹದಲ್ಲಿ ಎಲ್ಲವೂ ಅಚ್ಚುಕಟ್ಟು: ಜಾತ್ರೆಗೆ ಬರುವ ಭಕ್ತಾದಿಗಳಿಗೆ ಪ್ರಸಾದ ವಿತರಿಸುವ ವ್ಯವಸ್ಥೆ ಮೊದಲ ದಿನದಿಂದ ಕೊನೆಯ ದಿನದವರೆಗೂ ಅಚ್ಚುಕಟ್ಟಾಗಿ ಜರುಗುತ್ತದೆ. ಪ್ರತಿದಿನ ಲಕ್ಷಾಂತರ ಜನರು ಪ್ರಸಾದ ಸೇವನೆಗಾಗಿ ಬಂದರೂ, ಒಂದು ದಿನವೂ ಯಾರಿಗೂ ತೊಂದರೆಯಾಗದಂತೆ ವ್ಯವಸ್ಥೆ ಕಲ್ಪಿಸಲಾಗುತ್ತದೆ. ಮುಖ್ಯವಾಗಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಲಾಗುತ್ತದೆ. ನಿರಂತರ ಕುಡಿಯುವ ನೀರಿನ ಸರಬರಾಜು, ಬೆಳಕು, ನೆರಳಿನ ವ್ಯವಸ್ಥೆ, ಊಟಕ್ಕೆ ಬೇಕಾಗುವ ತಟ್ಟೆ, ಸಾವಿರಾರು ಜನರು ಸ್ವಯಂ ಸೇವಕರಾಗಿ ಬಂದು ದಾಸೋಹದಲ್ಲಿ ಕೆಲಸ ನಿರ್ವಹಿಸುವುದು ಇಲ್ಲಿನ ವಿಶೇಷತೆಯಾಗಿದೆ.

ಇದನ್ನು ಓದಿ: ರೈಲ್ವೆ ಮೇಲ್ಸೇತುವೆ ಕಾಮಗಾರಿ ವೇಳೆ ಶಿಷ್ಟಾಚಾರ ಉಲ್ಲಂಘನೆ ಆರೋಪ: ಕೇಂದ್ರ ಸಚಿವ ಸೋಮಣ್ಣ ಜೊತೆ ಶಿವರಾಜ್​​ ತಂಗಡಗಿ ವಾಗ್ವಾದ