ಬೆಳಗಾವಿ ವೈದ್ಯನ ಮನೆಯಲ್ಲಿ ಗಾಂಜಾ ಪತ್ತೆ: ಪೊಲೀಸ್ ಕಮಿಷನರ್ ಹೇಳಿದ್ದೇನು?
ಬೆಳಗಾವಿಯಲ್ಲಿ ವೈದ್ಯರೊಬ್ಬರ ಮನೆಯಲ್ಲಿ ಗಾಂಜಾ ಪತ್ತೆಯಾಗಿದ್ದು, ಪೊಲೀಸ್ ಕಮಿಷನರ್ ಪ್ರತಿಕ್ರಿಯಿಸಿದ್ದಾರೆ.

Published : January 11, 2026 at 12:35 PM IST
|Updated : January 11, 2026 at 3:00 PM IST
ಬೆಳಗಾವಿ : ಚಿಕ್ಕ ಮಕ್ಕಳ ಆರೋಗ್ಯ ಕಾಪಾಡಬೇಕಾದ ವೈದ್ಯನೇ ಗಾಂಜಾ ಅಮಲೇರಿಸಿಕೊಂಡಿರುವ ಘಟನೆ ಬೆಳಗಾವಿ ನಗರದಲ್ಲಿ ಬೆಳಕಿಗೆ ಬಂದಿದೆ. ಮಕ್ಕಳ ವೈದ್ಯರಾಗಿರುವ ಡಾ.ರಾಹುಲ್ ವಿಠಲ ಬಂಟಿ ಅವರ ಮನೆಯಲ್ಲಿ ಗಾಂಜಾ ದೊರೆತಿದೆ.
ಈ ಕುರಿತು ಖಚಿತ ಮಾಹಿತಿ ಮೇರೆಗೆ ಮಾಳಮಾರುತಿ ಠಾಣೆ ಪೊಲೀಸರು ಡಾ.ರಾಹುಲ್ ಬಂಟಿ ಅವರ ಶಿವಬಸವ ನಗರದ ಮನೆ ಮೇಲೆ ದಾಳಿ ಮಾಡಿದಾಗ 134 ಗ್ರಾಂ ಗಾಂಜಾ ಸಿಕ್ಕಿದೆ. ಅಷ್ಟೇ ಅಲ್ಲದೇ, ವೈದ್ಯ ಗಾಂಜಾ ಸೇವಿಸಿರುವ ವಿಚಾರವೂ ಪೊಲೀಸರ ತನಿಖೆಯಲ್ಲಿ ದೃಢಪಟ್ಟಿದೆ.
ಮಕ್ಕಳ ಆರೋಗ್ಯ ಕಾಪಾಡುವ ವೈದ್ಯನೇ ಈ ರೀತಿ ಮಾದಕ ವಸ್ತು ಸೇವನೆ ಮಾಡಿದರೆ ಮಕ್ಕಳ ಜೀವವನ್ನು ಆ ದೇವರೇ ಕಾಪಾಡಬೇಕು. ಗಾಂಜಾ ನಶೆಯಲ್ಲಿ ಚಿಕಿತ್ಸೆಯಲ್ಲಿ ವ್ಯತ್ಯಾಸವಾಗಿ, ಜೀವಕ್ಕೆ ಹಾನಿಯಾದರೆ ಯಾರು ಹೊಣೆ ಎಂಬ ಪ್ರಶ್ನೆಗಳನ್ನು ಸಾರ್ವಜನಿಕರು ಕೇಳುತ್ತಿದ್ದಾರೆ.
ಗಾಂಜಾ ಜಪ್ತಿ ಮಾಡಿಕೊಂಡಿರುವ ಮಾಳಮಾರುತಿ ಪೊಲೀಸರು ಡಾ.ರಾಹುಲ್ ಬಂಟಿ ವಿರುದ್ಧ ಪ್ರಕರಣ ದಾಖಲಿಸಿಕೊಂಡು, ನೋಟಿಸ್ ನೀಡಿದ್ದಾರೆ. ಮುಂದಿನ ತನಿಖೆ ನಡೆಯುತ್ತಿದೆ.

ಈ ಕುರಿತು ಪ್ರತಿಕ್ರಿಯೆ ನೀಡಿರುವ ನಗರ ಪೊಲೀಸ್ ಆಯುಕ್ತ ಭೂಷಣ ಬೊರಸೆ ಅವರು, "ಜನವರಿ 9ರಂದು ಎನ್‌ಡಿಪಿಎಸ್ ಕಾಯ್ದೆಯಡಿ ಪ್ರಕರಣ ದಾಖಲಾಗಿದೆ. ಆರೋಪಿಯ ಮನೆ ಬೆಡ್ ರೂಮಿನಲ್ಲಿ 134 ಗ್ರಾಂ ಗಾಂಜಾ ಸಿಕ್ಕಿದೆ. ಆರೋಪಿ ವೃತ್ತಿಯಲ್ಲಿ ವೈದ್ಯ. ಇದನ್ನು ಎಲ್ಲಿಂದ ತಂದಿದ್ದಾರೆ? ಮಾರಾಟಕ್ಕೆ ತಂದಿದ್ದರೋ? ಅಥವಾ ಸೇವನೆಗೆ ತಂದಿದ್ದರೋ ಎಂಬ ಬಗ್ಗೆ ತನಿಖೆ ಮಾಡಲಾಗುತ್ತಿದೆ" ಎಂದರು.
6.60 ಕೋಟಿ ರೂಪಾಯಿ ಮೌಲ್ಯದ ಗಾಂಜಾ ಜಪ್ತಿ : ಇತ್ತೀಚಿಗೆ ಬೀದರ್ ಪೊಲೀಸರು ಬೃಹತ್ ಗಾಂಜಾ ಜಾಲವನ್ನು ಭೇದಿಸಿದ್ದರು. ಇಲ್ಲಿನ ರಾಷ್ಟ್ರೀಯ ಹೆದ್ದಾರಿ ಮೂಲಕ ಅಕ್ರಮವಾಗಿ ಗಾಂಜಾ ಸಾಗಿಸುತಿದ್ದ ವೇಳೆ ಮಿಂಚಿನ ಕಾರ್ಯಾಚರಣೆ ನಡೆಸಿದ ಬೀದರ್ ಖಾಕಿ ಪಡೆಯು 6.60 ಕೋಟಿ ರೂ. ಮೌಲ್ಯದ 660 ಕೆಜಿ ಗಾಂಜಾ ಜಪ್ತಿ ಮಾಡಿಕೊಂಡಿತ್ತು. ತಾಲೂಕಿನ ರಾಜೇಶ್ವರ ಗ್ರಾಮದ ಬಳಿ ಈ ಪ್ರಕರಣ ನಡೆದಿತ್ತು.
ಬೀದರ್ ತಾಲೂಕಿನ ಮಗದಾಳ ಗ್ರಾಮದ ನಿವಾಸಿ ರಾಜಕುಮಾರ ಹೂಗಾರ ಹಾಗೂ ಸಂಜುಕುಮಾರ ಹೂಗಾರ ಬಂಧಿತ ಸಹೋದರ ಆರೋಪಿಗಳು. ಸದ್ಯ ಹೈದರಾಬಾದ್ನಲ್ಲಿ ನೆಲೆಸಿದ್ದಾರೆ. ಒಡಿಶಾದಿಂದ ಆಂಧ್ರಪ್ರದೇಶ ಮತ್ತು ಹೈದರಾಬಾದ್ ಮಾರ್ಗವಾಗಿ ಇಲ್ಲಿಯ ರಾಜೇಶ್ವರ ಮೂಲಕ ರಾಷ್ಟ್ರೀಯ ಹೆದ್ದಾರಿ-65ರ ಮೇಲಿಂದ ನೆರೆಯ ಮಹಾರಾಷ್ಟ್ರಕ್ಕೆ ಟಾಟಾ ಗೂಡ್ಸ್ ವಾಹನದ ಮೂಲಕ ಅಕ್ರಮವಾಗಿ ಗಾಂಜಾ ಸಾಗಿಸುವಾಗ ಪೊಲೀಸರು ದಾಳಿ ಮಾಡಿದ್ದರು.
ಒಡಿಶಾದಿಂದ ಸೋಲಾಪುರಕ್ಕೆ ಸಾಗಣೆ: ಒಡಿಶಾದ ಮಲ್ಕಾನಗಿರಿಯಿಂದ ಮಹಾರಾಷ್ಟ್ರದ ಸೋಲಾಪುರಕ್ಕೆ ಗಾಂಜಾ ಸಾಗಿಸುವ ಖಚಿತ ಮಾಹಿತಿ ಪೊಲೀಸರಿಗೆ ಲಭ್ಯವಾಗಿತ್ತು. ಇದನ್ನು ಆಧರಿಸಿ ಬೀದರ್ ಪೊಲೀಸರು ಎಸ್ಪಿ ಪ್ರದೀಪ್ ಗುಂಟಿ, ಡಿವೈಎಸ್ಪಿ ಮಡಿವಾಳಪ್ಪ ಸೇರಿದಂತೆ ಹಿರಿಯ ಪೊಲೀಸ್ ಅಧಿಕಾರಿಗಳ ಮಾರ್ಗದರ್ಶನದಲ್ಲಿ ಸಿಪಿಐ ಅಮೂಲ ಕಾಳೆ ನೇತೃತ್ವದ ತಂಡ ದಾಳಿ ನಡೆಸಿ ಅಕ್ರಮ ಪತ್ತೆ ಹಚ್ಚಿತ್ತು.
ಇದನ್ನೂ ಓದಿ: ರೈಲು ಹರಿದು ಕೈ ಕಟ್ ಆದರೂ ಗಾಂಜಾ ಮತ್ತಿನಲ್ಲಿ ಆಸ್ಪತ್ರೆಗೆ ಹೋಗದ ಯುವಕ

