ಬಗೆಹರಿದ 14 ವರ್ಷಗಳ ತೆರಿಗೆ ವಿವಾದ: 700 ಕೋಟಿ ರೂ.ಗೂ ಹೆಚ್ಚು ಹಣ ವಸೂಲಿ ಮಾಡಿದ ವಿಶ್ವೇಶ್ವರಯ್ಯ ತಾಂತ್ರಿಕ ವಿವಿ
ತೆರಿಗೆ ಪಾವತಿಸದ ಆರೋಪದ ಮೇಲೆ ಆದಾಯ ತೆರಿಗೆ ಇಲಾಖೆ 2012-13ರಲ್ಲಿ ವಿಶ್ವವಿದ್ಯಾಲಯದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿತ್ತು.

Published : August 30, 2026 at 7:30 PM IST
ಬೆಂಗಳೂರು: ಆದಾಯ ತೆರಿಗೆ ಇಲಾಖೆಯೊಂದಿಗಿನ 14 ವರ್ಷಗಳ ವಿವಾದದ ನಂತರ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯ ತನಗೆ ಸೇರಿದ 700 ಕೋಟಿ ರೂ.ಗೂ ಹೆಚ್ಚು ಹಣವನ್ನು ವಶಪಡಿಸಿಕೊಂಡಿದೆ.
ಮಾಹಿತಿ ಹಕ್ಕು ಕಾಯ್ದೆಯ ಮೂಲಕ ಪಡೆದ ನಿರ್ಣಾಯಕ ನಮೂದು ರಿಜಿಸ್ಟರ್, 1999 ರಲ್ಲಿ ಆದಾಯ ತೆರಿಗೆ ಕಾಯ್ದೆಯ ಸೆಕ್ಷನ್ 12(ಎ) ಅಡಿಯಲ್ಲಿ ತೆರಿಗೆ ವಿನಾಯಿತಿಗಾಗಿ ಅರ್ಜಿ ಸಲ್ಲಿಸಿರುವ ಬಗ್ಗೆ ದೃಢಪಡಿಸಲು ವಿಶ್ವವಿದ್ಯಾಲಯಕ್ಕೆ ಸಹಾಯವಾಯಿತು.
ತೆರಿಗೆ ಪಾವತಿಸದ ಆರೋಪದ ಮೇಲೆ ಆದಾಯ ತೆರಿಗೆ ಇಲಾಖೆ 2012-13ರಲ್ಲಿ ವಿಶ್ವವಿದ್ಯಾಲಯದ ಬ್ಯಾಂಕ್ ಖಾತೆಗಳನ್ನು ಸ್ಥಗಿತಗೊಳಿಸಿತ್ತು. ಈ ಕ್ರಮವು ವಿಟಿಯು ಹಲವಾರು ವರ್ಷಗಳ ಕಾಲ ಗಂಭೀರ ಆರ್ಥಿಕ ತೊಂದರೆಗಳನ್ನು ಎದುರಿಸುವಂತಾಗಿತ್ತು. ಜೊತೆಗೆ ಹಲವಾರು ಕಾನೂನು ಕ್ರಮಗಳನ್ನೂ ಎದುರಿಸಬೇಕಾಗಿ ಬಂದಿತ್ತು.
ವಿಟಿಯು ಸ್ಥಾಪನೆಯಾದ ಕೂಡಲೇ ತೆರಿಗೆ ವಿನಾಯಿತಿಗಾಗಿ ಅರ್ಜಿ ಸಲ್ಲಿಸಲಾಗಿದೆ ಎಂದು ವಿಶ್ವವಿದ್ಯಾಲಯಕ್ಕೆ ತಿಳಿದಿತ್ತು. ಆದರೆ ಅದನ್ನು ಸಾಬೀತುಪಡಿಸಲು ಅಗತ್ಯವಾದ ದಾಖಲೆಗಳು ಅದರಲ್ಲಿ ಇರಲಿಲ್ಲ ಎಂದು ವಿಟಿಯು ಉಪಕುಲಪತಿ ಪ್ರೊ.ಎಸ್. ವಿದ್ಯಾಶಂಕರ್ ಹೇಳಿದರು.
"1999 ರಲ್ಲೇ ವಿಶ್ವವಿದ್ಯಾನಿಲಯವು ಸೆಕ್ಷನ್ 12(A) ಅಡಿಯಲ್ಲಿ ತೆರಿಗೆ ವಿನಾಯಿತಿಗಾಗಿ ಅರ್ಜಿ ಸಲ್ಲಿಸಿದೆ ಎನ್ನುವುದು ನಮಗೆ ಗೊತ್ತಾಯಿತು. ಆದರೆ, ಇದನ್ನು ಪ್ರೂವ್ ಮಾಡಲು ಯಾವುದೇ ದಾಖಲೆಗಳು ಲಭ್ಯವಿರಲಿಲ್ಲ. ನಾವು ಅಂತಿಮವಾಗಿ ಆದಾಯ ತೆರಿಗೆ ಇಲಾಖೆಗೆ RTI ಅರ್ಜಿಯನ್ನು ಸಲ್ಲಿಸಿ 1999 ರ ನಮೂದು ರಿಜಿಸ್ಟರ್ ಪಡೆದುಕೊಂಡಿದ್ದೇವೆ. ಈ ದಾಖಲೆಯ ಆಧಾರದ ಮೇಲೆ, ನಾವು ಈಗ ವಿಶ್ವವಿದ್ಯಾಲಯದ ಹಣವನ್ನು ಮರುಪಡೆಯುತ್ತಿದ್ದೇವೆ" ಎಂದು ವಿದ್ಯಾಶಂಕರ್ ಹೇಳಿದರು.
ವಿಟಿಯು ಸ್ಥಾಪನೆಯಾದ ದಿನಾಂಕದಿಂದ ಸುಮಾರು 250 ಕೋಟಿ ರೂ. ತೆರಿಗೆ ನೀಡುವಂತೆ ಆದಾಯ ತೆರಿಗೆ ಇಲಾಖೆ ನೋಟಿಸ್ ನೀಡಿದ ನಂತರ ವಿವಾದ ಪ್ರಾರಂಭವಾಗಿತ್ತು. ವಿಶ್ವವಿದ್ಯಾನಿಲಯವು ಸೆಕ್ಷನ್ 12(ಎ) ಅಡಿಯಲ್ಲಿ ವಿನಾಯಿತಿ ಪಡೆದಿಲ್ಲ ಮತ್ತು ಆದ್ದರಿಂದ ಸಂಗ್ರಹವಾದ ಬಾಕಿಗಳನ್ನು ಪಾವತಿಸಲು ಬಾಧ್ಯವಾಗಿದೆ ಎಂದು ಇಲಾಖೆ ವಾದಿಸಿತ್ತು.
ಇದನ್ನು ವಿಶ್ವವಿದ್ಯಾಲಯ ಪ್ರಶ್ನೆ ಮಾಡಿತ್ತು. ಆದರೆ ಆರಂಭದಲ್ಲಿ ಆದಾಯ ತೆರಿಗೆ ನ್ಯಾಯಮಂಡಳಿಯಿಂದ ಸುಪ್ರೀಂ ಕೋರ್ಟ್‌ವರೆಗೆ ಎಲ್ಲಾ ಕಡೆಯೂ ವಿವಿಧ ಹಂತಗಳಲ್ಲಿ ಆದಾಯ ತೆರಿಗೆ ಇಲಾಖೆಗೆ ಜಯ ಸಿಕ್ಕಿತ್ತು.
ವಿಶ್ವವಿದ್ಯಾಲಯದ ಖಾತೆಗಳನ್ನು ಮುಟ್ಟುಗೋಲು ಹಾಕಿಕೊಂಡ ಸಮಯದಲ್ಲಿ, ವಿಟಿಯು ವಿವಿಧ ಬ್ಯಾಂಕ್ ಖಾತೆಗಳಲ್ಲಿ ಸುಮಾರು 450 ಕೋಟಿ ರೂ. ಮೊತ್ತ ಹಣ ಇತ್ತು. ಪರೀಕ್ಷಾ ಶುಲ್ಕಗಳು, ಅಂಗಸಂಸ್ಥೆ ಕಾಲೇಜುಗಳಿಂದ ಸಂಗ್ರಹಿಸಿದ ಪಾವತಿಗಳು ಮತ್ತು ಕರ್ನಾಟಕ ಪರೀಕ್ಷಾ ಪ್ರಾಧಿಕಾರದಿಂದ ವಾರ್ಷಿಕ ಮರುಪಾವತಿಗಳ ಮೂಲಕ ಸಂಗ್ರಹಿಸಲಾಗಿದ್ದ ಹಣ ಇತ್ತು.
ವಿಶ್ವವಿದ್ಯಾನಿಲಯಕ್ಕೆ ಸೇರಿದ ಮತ್ತೊಂದು 250 ಕೋಟಿ ರೂ. ಜೊತೆಗೆ, ಒಟ್ಟು ಮೊತ್ತ 700 ಕೋಟಿ ಮೀರಿ ಈಗ ವಸೂಲಿ ಮಾಡಲಾಗಿದೆ.
ಕೆಲವು ತಿಂಗಳುಗಳ ಹಿಂದೆ, ವಿದ್ಯಾಶಂಕರ್ ವಿಶ್ವವಿದ್ಯಾಲಯದ ಅಧಿಕಾರಿಗಳ ಸಭೆಯನ್ನು ಕರೆದು ತೆರಿಗೆ ವಿವಾದಕ್ಕೆ ಸಂಬಂಧಿಸಿದ ಪ್ರತಿಯೊಂದು ಕಡತವನ್ನು ಪರಿಶೀಲಿಸುವಂತೆ ಸೂಚನೆ ನೀಡಿದ್ದರು. ಆಗ 1999 ರ ಅರ್ಜಿಯ ಉಲ್ಲೇಖಗಳನ್ನು ಬಹಿರಂಗವಾಗಿದೆ. ಈ ಬೆಳವಣಿಗೆ RTI ಕಾಯ್ದೆಯಡಿಯಲ್ಲಿ ಆದಾಯ ತೆರಿಗೆ ಇಲಾಖೆಯನ್ನು ಸಂಪರ್ಕಿಸಲು VTUಗೆ ಪ್ರೇರೇಪಿಸಿತು. ಅರ್ಜಿಯ ಮೂಲಕ ಪಡೆದ ನಮೂದು ರಿಜಿಸ್ಟರ್ ವಿಶ್ವವಿದ್ಯಾಲಯದ ನಿಲುವನ್ನು ಬೆಂಬಲಿಸುವ ಪ್ರಮುಖ ದಾಖಲೆಯಾಯಿತು.
ಖಾತೆಗಳನ್ನು ಸ್ಥಗಿತಗೊಳಿಸಿದ್ದರಿಂದ ಉಂಟಾದ ವರ್ಷಗಳ ಒತ್ತಡದ ನಂತರ ಈ ಚೇತರಿಕೆಯು VTU ಗೆ ದೀರ್ಘಾವಧಿಯ ಆರ್ಥಿಕ ಸ್ಥಿರತೆಯನ್ನು ಒದಗಿಸುವ ನಿರೀಕ್ಷೆಯಿದೆ.
ವಿಶ್ವವಿದ್ಯಾನಿಲಯವು ವಸೂಲಿ ಮಾಡಿದ ಮೊತ್ತವನ್ನು ರಾಷ್ಟ್ರೀಕೃತ ಬ್ಯಾಂಕಿನಲ್ಲಿ 10 ವರ್ಷಗಳ ಠೇವಣಿಯಾಗಿ ಇರಿಸಲು ಯೋಜಿಸಿದೆ. ಪ್ರಸ್ತಾವಿತ ವ್ಯವಸ್ಥೆಯಡಿಯಲ್ಲಿ, ಈ ಅವಧಿಯಲ್ಲಿ ಮೂಲ ಮೊತ್ತವು ಸುರಕ್ಷಿತವಾಗಿರುತ್ತದೆ.
11 ನೇ ವರ್ಷದಿಂದ, ವಿಟಿಯು ಠೇವಣಿಯಿಂದ ಉತ್ಪತ್ತಿಯಾಗುವ ಬಡ್ಡಿಯನ್ನು ವಿಶ್ವವಿದ್ಯಾಲಯದ ನೌಕರರ ವೇತನವನ್ನು ಪಾವತಿಸಲು ಬಳಸಲು ಯೋಜಿಸಿದೆ. ಈ ವ್ಯವಸ್ಥೆಯು ಸಿಬ್ಬಂದಿ ವೆಚ್ಚಕ್ಕಾಗಿ ನಿರಂತರ ಆದಾಯದ ಮೂಲವನ್ನು ಸೃಷ್ಟಿಸುತ್ತದೆ ಮತ್ತು ಮರುಪಡೆಯಲಾದ ಕಾರ್ಪಸ್ ನಿಧಿಯನ್ನು ಸಂರಕ್ಷಿಸುತ್ತದೆ ಎಂದು ಸಂಸ್ಥೆ ನಂಬುತ್ತದೆ.
ಇದನ್ನೂ ಓದಿ: ಬೆಂಗಳೂರಿನಲ್ಲಿ ಹೊಸ ಕಾನೂನು ವಿವಿ ಬೇಡ: ಹುಬ್ಬಳ್ಳಿ-ಧಾರವಾಡದಲ್ಲಿರುವ ವಿವಿ ಬಲಪಡಿಸಲು ಸರ್ಕಾರಕ್ಕೆ ಉ.ಕ ಶಾಸಕರ ಮನವಿ

