ETV Bharat / state

ಸಿದ್ದರಾಮಯ್ಯ ಅವಧಿಯಲ್ಲಿ ಹಾವೇರಿಗೆ ಸಿಗದ ಸಚಿವ ಸ್ಥಾನ: ಡಿಕೆಶಿ ಸಂಪುಟದಲ್ಲಿ ಜಿಲ್ಲೆಯ ನಾಲ್ವರು ಸಚಿವಾಕಾಂಕ್ಷಿಗಳು

ಹಾವೇರಿ ಜಿಲ್ಲೆಯ ನಾಲ್ವರು ಶಾಸಕರು ಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್​ ಅವರ ಸಂಪುಟದ ಸಚಿವಾಕಾಂಕ್ಷಿಗಳಾಗಿದ್ದಾರೆ.

MINISTERIAL ASPIRANTS
ಸಚಿವ ಸ್ಥಾನದ ಆಕಾಂಕ್ಷಿಗಳು (ETV Bharat)
author img

By ETV Bharat Karnataka Team

Published : July 5, 2026 at 9:48 PM IST

2 Min Read
Choose ETV Bharat

ಹಾವೇರಿ: ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಬಂದಾಗಲೆಲ್ಲಾ ಸಚಿವ ಸ್ಥಾನದ ವಿಷಯದಲ್ಲಿ ಹಾವೇರಿಗೆ ಅನ್ಯಾಯವಾಗುತ್ತದೆ ಎನ್ನುವ ಆರೋಪ ಕೇಳಿಬರುತ್ತಿದೆ. 2013ರಲ್ಲಿ ಸಿಎಂ ಸಿದ್ದರಾಮಯ್ಯ ಸರ್ಕಾರ ಬಂದಾಗ ಹಾವೇರಿಯ ಯಾವ ಶಾಸಕರಿಗೂ ಸಚಿವ ಸ್ಥಾನ ನೀಡಲಿಲ್ಲ. ಪ್ರಕಾಶ್ ಹುಕ್ಕೇರಿ, ಜಮೀರ್ ಅಹ್ಮದ್ ಸೇರಿದಂತೆ ಇಬ್ಬರರನ್ನು ಸಿಎಂ ಸಿದ್ದರಾಮಯ್ಯ ಸರತಿಯಂತೆ ಜಿಲ್ಲಾ ಉಸ್ತುವಾರಿ ಸಚಿವರನ್ನಾಗಿ ಮಾಡಿದ್ದರು. ಕೊನೆಯಲ್ಲಿ ಹಾನಗಲ್ ಕ್ಷೇತ್ರದ ಶಾಸಕ ಮನೋಹರ್ ತಹಶೀಲ್ದಾರ್​ಗೆ ಸಚಿವ ಸ್ಥಾನ ದೊರೆತಿತ್ತು. ಆದಾದ ನಂತರ ರುದ್ರಪ್ಪ ಲಮಾಣಿಗೆ ಸಚಿವ ಸ್ಥಾನ ನೀಡಲಾಗಿತ್ತು.

ಇದೀಗ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದು ಮೂರು ವರ್ಷವಾದರೂ ಹಾವೇರಿ ಜಿಲ್ಲೆಗೆ ಸಚಿವ ಸ್ಥಾನ ನೀಡದಿರುವುದು ಜಿಲ್ಲೆಯ ಕಾಂಗ್ರೆಸ್ ಕಾರ್ಯಕರ್ತರಿಗೆ ಬೇಸರ ತರಿಸಿದೆ. ಜಿಲ್ಲೆಯ ಆರಕ್ಕೆ ಆರೂ ವಿಧಾನಸಭಾ ಕ್ಷೇತ್ರಗಳಲ್ಲಿ ಕಾಂಗ್ರೆಸ್​ ಶಾಸಕರೇ ಇದ್ದಾರೆ. ಸಿಎಂ ಡಿ.ಕೆ.ಶಿವಕುಮಾರ್ ಸಚಿವ ಸಂಪುಟದಲ್ಲಿ ಪ್ರಾತಿನಿಧ್ಯ ನೀಡಬೇಕು ಎನ್ನುತ್ತಿದ್ದಾರೆ ಕಾಂಗ್ರೆಸ್ ಕಾರ್ಯಕರ್ತರು.

ಸಿಎಂ ಡಿಕೆಶಿ ಸಂಪುಟದ ಬಗ್ಗೆ ಪ್ರತಿಕ್ರಿಯೆ (ETV Bharat)

ಸಚಿವ ಸ್ಥಾನಕ್ಕೆ ನಾಲ್ವರು ಆಕಾಂಕ್ಷಿಗಳು: ಹಾವೇರಿ ಜಿಲ್ಲೆಯ ನಾಲ್ವರು ಶಾಸಕರು ಈ ಬಾರಿ ಸಚಿವಾಕಾಂಕ್ಷಿಗಳಾಗಿದ್ದಾರೆ. ಹಾವೇರಿ ಶಾಸಕ ರುದ್ರಪ್ಪ ಲಮಾಣಿ, ಬ್ಯಾಡಗಿ ಶಾಸಕ ಬಸವರಾಜ್ ಶಿವಣ್ಣನವರ್, ಹಾನಗಲ್ ಶಾಸಕ ಶ್ರೀನಿವಾಸ ಮಾನೆ ಮತ್ತು ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಹೆಸರುಗಳು ಈ ಬಾರಿ ಸಚಿವ ಸ್ಥಾನಕ್ಕೆ ಕೇಳಿಬರುತ್ತಿವೆ.

ಬಸವರಾಜ್ ಶಿವಣ್ಣನವರ್ ಕುರುಬ ಸಮಾಜಕ್ಕೆ ಸೇರಿದವರು, ಉತ್ತರ ಕರ್ನಾಟಕದಲ್ಲಿಯೇ ಕುರುಬ ಸಮಾಜದ ಹಿರಿಯ ನಾಯಕ. ಹೀಗಾಗಿ ಅವರಿಗೆ ಸಚಿವ ಸ್ಥಾನ ಸಿಗಲಿದೆ ಎಂಬ ಉತ್ಸಾಹದಲ್ಲಿದ್ದಾರೆ. ರುದ್ರಪ್ಪ ಲಮಾಣಿ ಈ ಹಿಂದೆ ಸಚಿವರಾಗಿದ್ದವರು, ಪ್ರಸ್ತುತ ಬಂಜಾರ ಸಮಾಜದ ಏಕೈಕ ಶಾಸಕರಾಗಿದ್ದು, ಅವರಿಗೆ ಸಚಿವ ಸ್ಥಾನ ಸಿಗುವುದರಲ್ಲಿ ಎರಡು ಮಾತಿಲ್ಲ ಎನ್ನುತ್ತಿದ್ದಾರೆ ಅಭಿಮಾನಿಗಳು. ಹಾನಗಲ್ ಕ್ಷೇತ್ರದ ಶಾಸಕ ಶ್ರೀನಿವಾಸ ಮಾನೆ ಯುವ ರಾಜಕಾರಣಿ, ಎರಡು ಬಾರಿ ಪರಿಷತ್ ಸದಸ್ಯರಾಗಿ ಎರಡು ಬಾರಿ ಶಾಸಕರಾಗಿ ಸೇವೆ ಸಲ್ಲಿಸಿದ ಅನುಭವ ಅವರಿಗಿದೆ. ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ಹೈಕಮಾಂಡ್‌ಗೆ ಹತ್ತಿರವಿದ್ದವರು ಮತ್ತು ಅಲ್ಪಸಂಖ್ಯಾತರು ಈ ಹಿನ್ನೆಲೆಯಲ್ಲಿ ಅವರಿಗೂ ಸಹ ಸಚಿವ ಸ್ಥಾನ ಸಿಗಬಹುದು ಎನ್ನುವ ಮಾತು ಕೇಳಿಬರುತ್ತಿದೆ.

ಈ ಬಾರಿ ಎರಡು ಜನರಿಗೆ ಸಚಿವ ಸ್ಥಾನ: ಈ ಮಧ್ಯೆ ಹಾವೇರಿ ಜಿಲ್ಲೆಗೆ ಈ ಬಾರಿ ಡಿ.ಕೆ.ಶಿವಕುಮಾರ್ ಸಚಿವ ಸಂಪುಟದಲ್ಲಿ ಎರಡು ಸಚಿವ ಸ್ಥಾನ ಸಿಗುವ ನಿರೀಕ್ಷೆಯನ್ನು ಹಾವೇರಿ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಸಂಜೀವ ಕುಮಾರ್ ನೀರಲಗಿ ವ್ಯಕ್ತಪಡಿಸಿದ್ದಾರೆ. ಈ ಹಿಂದೆ ಕಾಂಗ್ರೆಸ್ ಅಧಿಕಾರಕ್ಕೆ ಬಂದಾಗ ಹಾವೇರಿ ಜಿಲ್ಲೆ ಸಚಿವ ಸ್ಥಾನದಿಂದ ವಂಚಿತವಾಗುತ್ತಿತ್ತು. ಆದರೆ ಈ ಬಾರಿ ಪರಿಸ್ಥಿತಿ ಬೇರೆಯದೇ ಇದೆ. ಒಂದು ಸಚಿವ ಸ್ಥಾನದ ಜೊತೆಗೆ ಒಂದು ಬಂಪರ್ ಸಚಿವ ಸ್ಥಾನ ಸಹ ಹಾವೇರಿ ಜಿಲ್ಲೆಗೆ ಸಿಗಲಿದೆ ಅವರು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

ಬ್ಯಾಡಗಿ ಶಾಸಕ ಹೇಳುವುದೇನು?: ಕಳೆದ ಎರಡು ಬಾರಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದಾಗ ಹಾವೇರಿ ಜಿಲ್ಲೆಗೆ ಪ್ರಾತಿನಿಧ್ಯ ಸಿಕ್ಕಿಲ್ಲ. ಆದರೆ ಈ ಬಾರಿ ಡಿ.ಕೆ.ಶಿವಕುಮಾರ್ ಸಚಿವ ಸಂಪುಟದಲ್ಲಿ ಹಾವೇರಿಗೆ ಸಚಿವ ಸ್ಥಾನ ಸಿಕ್ಕೇ ಸಿಗುತ್ತೆ. ನಾನು ಜಿಲ್ಲೆಯ ಹಿರಿಯ ಶಾಸಕನಿದ್ದೇನೆ. ಈ ಹಿಂದೆ ಸಚಿವನಾಗಿ ಕಾರ್ಯನಿರ್ವಹಿಸಿದ್ದೇನೆ. ಉತ್ತರ ಕರ್ನಾಟಕದಲ್ಲಿಯೇ ಕುರುಬ ಸಮಾಜದ ಹಿರಿಯ ನಾಯಕ. ಹೀಗಾಗಿ ನನಗೆ ಸಚಿವ ಸ್ಥಾನ ಸಿಗುತ್ತದೆ. ಆದರೆ ಜಿಲ್ಲೆಗೆ ಬೋನಸ್ ರೂಪದಲ್ಲಿ ಇನ್ನೊಬ್ಬರಿಗೆ ಸಚಿವ ಸ್ಥಾನ ಸಿಕ್ಕರೆ ಸ್ವಾಗತಿಸುತ್ತೇನೆ. ಯಾರು ಸಚಿವರಾದರೂ ಹಾವೇರಿ ಜಿಲ್ಲೆ ಅಭಿವೃದ್ದಿ ಪಥದತ್ತ ಸಾಗಲಿದೆ. ಈ ಹಿನ್ನೆಲೆಯಲ್ಲಿ ಇದೇ 10ಕ್ಕೆ ಸಚಿವ ಸಂಪುಟ ವಿಸ್ತರಣೆಯಾಗಲಿದೆ, ಅದರಲ್ಲಿ ನನಗೂ ಸಚಿವ ಸ್ಥಾನ ಸಿಗಲಿದೆ ಎಂದು ಬ್ಯಾಡಗಿ ಶಾಸಕ ಬಸವರಾಜ್ ಶಿವಣ್ಣನವರ್ ವಿಶ್ವಾಸ ವ್ಯಕ್ತಪಡಿಸಿದರು.

ಇವುಗಳನ್ನೂ ಓದಿ: