ETV Bharat / state

ಮಗಳನ್ನು ಮದುವೆ ಮಾಡಿಕೊಡುವಂತೆ ಹಿಂದೆ‌ ಬಿದ್ದಿದ್ದ‌ ಯುವಕನ ಹತ್ಯೆ ; ಯುವತಿಯ ತಂದೆ ಸಹಿತ ನಾಲ್ವರ ಬಂಧನ

ಮಗಳನ್ನ ಮದುವೆ ಮಾಡಿಕೊಡುವಂತೆ ಪೀಡಿಸುತ್ತಿದ್ದ ಯುವಕನನ್ನು ಕೊಲೆ ಮಾಡಿದ ಯುವತಿಯ ತಂದೆ ಸೇರಿ ನಾಲ್ವರನ್ನು ಪೊಲೀಸರು ಬಂಧಿಸಿದ್ದಾರೆ.

four-arrested-due-to-murder-case-in-bengaluru
ಕೊಲೆ ಆರೋಪಿಗಳು (ETV Bharat)
author img

By ETV Bharat Karnataka Team

Published : May 4, 2026 at 4:31 PM IST

2 Min Read
Choose ETV Bharat

ಬೆಂಗಳೂರು‌ : ಮಗಳ ಹಿಂದೆ ಬಿದ್ದಿದ್ದ ಯುವಕನ ಹತ್ಯೆಗೈದಿದ್ದ ತಂದೆ ಮತ್ತವರ ಸಂಬಂಧಿಗಳನ್ನ ಯಲಹಂಕ ಠಾಣೆ ಪೊಲೀಸರು ಬಂಧಿಸಿದ್ದಾರೆ. ರಮೇಶ್ ಕೊಲೆಯಾದ ವ್ಯಕ್ತಿ. ಹತ್ಯೆಯ ಬಳಿಕ ಮೃತದೇಹವನ್ನ ರಾಜಕಾಲುವೆಗೆ ಎಸೆದು ಪರಾರಿಯಾಗಿದ್ದ ಯುವತಿಯ ತಂದೆ ಈರಯ್ಯ (44), ಸಂಬಂಧಿಕರಾದ ಚಿನ್ನಯ್ಯ (29), ಚೇತನ್ ಮಾದರ (26), ವಿನಾಯಕ (19) ಎಂಬುವರನ್ನು ಬಂಧಿಸಲಾಗಿದೆ ಎಂದು‌ ಪೊಲೀಸರು‌ ತಿಳಿಸಿದರು.

ಈ ಕುರಿತು ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿ ಜಿ. ಕೆ. ಮಿಥುನ್ ಕುಮಾರ್ ಅವರು ಮಾತನಾಡಿ, 'ಅಲ್ಲಾಳಸಂದ್ರದ ಬಳಿ ರಾಜಕಾಲುವೆಯಲ್ಲಿ ಮೃತದೇಹ ಪತ್ತೆಯಾಗಿತ್ತು. ಪ್ರಾರಂಭದಲ್ಲಿ ಅನುಮಾನಾಸ್ಪದ ಸಾವು ಎಂದು ಪ್ರಕರಣ ದಾಖಲಿಸಿಕೊಂಡಿದ್ದೆವು. ಅದಾದ ನಂತರ ನಮಗೆ ಕೊಲೆ ಆಗಿದೆ ಎಂಬುದಾಗಿ ಗೊತ್ತಾಯಿತು' ಎಂದು ಮಾಹಿತಿ ನೀಡಿದರು.

ಪ್ರಕರಣದ ಕುರಿತು ಬೆಂಗಳೂರು ಈಶಾನ್ಯ ವಿಭಾಗದ ಡಿಸಿಪಿ ಜಿ. ಕೆ. ಮಿಥುನ್ ಕುಮಾರ್ ಮಾಹಿತಿ ನೀಡಿದರು (ETV Bharat)

'ಮೃತ ವ್ಯಕ್ತಿಯ ಹೆಸರು ರಮೇಶ್. ಮೂಲತಃ ಇವನು ಬಾಗಲಕೋಟೆ ಜಿಲ್ಲೆಯವನು. ಸ್ವಿಗ್ಗಿ, ಜ್ಯೊಮೆಟೋದಲ್ಲಿ ಕೆಲಸ ಮಾಡಿಕೊಂಡು ಇರಬಹುದು ಎಂದುಕೊಂಡು ಬೆಂಗಳೂರಿಗೆ 15-20 ದಿನಗಳ ಮುಂಚೆ ಬಂದಿದ್ದ. ಇವನು ಮೂರು ವರ್ಷದ ಹಿಂದೆ ಒಂದು ಪ್ರಕರಣದಲ್ಲಿ ಆರೋಪಿಯಾಗಿದ್ದ. ಈತ ಹೆಣ್ಣುಮಗಳ ಮೇಲೆ ಅತ್ಯಾಚಾರ ಮಾಡಲು ಪ್ರಯತ್ನ ಮಾಡಿದ್ದರಿಂದಾಗಿ ಕೇಸ್ ದಾಖಲಾಗಿರುತ್ತದೆ. ಅದಾದ ನಂತರ ಅವಳಿಗೆ ಪೀಡಿಸುವುದನ್ನು ಮಾಡುತ್ತಿರುತ್ತಾನೆ' ಎಂದು ಹೇಳಿದರು.

'ನಂತರ 2024 ರಲ್ಲಿ ಬೇರೆಯವರಿಗೆ ಬೆದರಿಸಿದ್ದಕ್ಕೆ ಇನ್ನೊಂದು ಕೇಸ್ ದಾಖಲಾಗಿರುತ್ತದೆ. ಬೆಂಗಳೂರಿಗೆ ಬಂದ ಮೇಲೂ ಮತ್ತೆ ಅದೇ ಪ್ರವೃತ್ತಿಯನ್ನು ಶುರು ಮಾಡಿಕೊಳ್ಳುತ್ತಾನೆ. ಹೀಗಾಗಿ, ಹುಡುಗಿಯ ತಂದೆ ಹಾಗೂ ಸಂಬಂಧಿಕರು ಒಂದು ರಾತ್ರಿ ಸುಮಾರು 7:30 ರ ವೇಳೆಗೆ ಊಟಕ್ಕೆ ಹೋಗೋಣ ಎಂದು ರಮೇಶ್​ನನ್ನು ಅವರದ್ದೇ ಕಾರಿನಲ್ಲಿ ಕರೆದುಕೊಂಡು ಹೋಗುತ್ತಾರೆ. ನಂತರ ಒಂದು ಬಾರ್ ಅಂಡ್ ರೆಸ್ಟೋರೆಂಟ್​​ನಲ್ಲಿ ಕುಡಿದು ನಂತರ ಊಟವನ್ನೂ ತೆಗೆದುಕೊಂಡು ಅದೇ ಕಾರಿನಲ್ಲಿ ಹತ್ತಿಕೊಂಡು ಅಲ್ಲಾಳಸಂದ್ರ ಬ್ರಿಡ್ಜ್ ಹತ್ತಿರ ಬರುತ್ತಾರೆ. ನಂತರ ಅವನ ಕುತ್ತಿಗೆಗೆ ಹಗ್ಗವನ್ನು ಕಟ್ಟಿ ಬಿಗಿದು ಕೊಲೆ ಮಾಡಿದ್ದರು. ನಂತರ ರಾಜಕಾಲುವೆಯಲ್ಲಿ ಇಟ್ಟುಬಿಟ್ಟು ಹೋಗಿದ್ದಾರೆ' ಎಂದು ಹೇಳಿದರು.

'ಸದ್ಯ ಆರೋಪಿಗಳನ್ನು ಬಂಧಿಸಲಾಗಿದ್ದು, ಹೆಚ್ಚಿನ ವಿಚಾರಣೆ ನಡೆಸುತ್ತಿದ್ದೇವೆ' ಎಂದು ಪ್ರಕರಣದ ಕುರಿತು ತಿಳಿಸಿದರು.

ಅನೈತಿಕ ಸಂಬಂಧಕ್ಕೆ ಈರುಳ್ಳಿ ವ್ಯಾಪಾರಿಯ ಹತ್ಯೆ (ಬೆಂಗಳೂರು) : ಮಹಿಳೆಯೊಂದಿಗೆ ಅನೈತಿಕ ಸಂಬಂಧ ಹೊಂದಿದ್ದ ಈರುಳ್ಳಿ ವ್ಯಾಪಾರಿಯನ್ನು ಭೀಕರವಾಗಿ ಹತ್ಯೆಗೈದ ಆರೋಪಿಯನ್ನು ಇತ್ತೀಚಿಗೆ ಕಾಡುಗೋಡಿ ಠಾಣೆ ಪೊಲೀಸರು ಬಂಧಿಸಿದ್ದರು. ತಮಿಳುನಾಡು ಮೂಲದ ರಾಮಚಂದ್ರ ರೆಡ್ಡಿ ಎಂಬಾತನ ತಲೆಯ ಮೇಲೆ ಕಲ್ಲು ಎತ್ತಿಹಾಕಿ ಹತ್ಯೆಗೈದಿದ್ದ ಆರೋಪದಡಿ ಹರೀಶ್ ಎಂಬ ಆರೋಪಿಯನ್ನು ಬಂಧಿಸಲಾಗಿತ್ತು.

ಇದನ್ನೂ ಓದಿ : ಬೆಂಗಳೂರು: ಅನೈತಿಕ ಸಂಬಂಧಕ್ಕೆ ಈರುಳ್ಳಿ ವ್ಯಾಪಾರಿಯ ಹತ್ಯೆ; ಆರೋಪಿಯ ಬಂಧನ