ಚಾಲಕನ ನಿಯಂತ್ರಣ ತಪ್ಪಿ ತೋಟಕ್ಕೆ ನುಗ್ಗಿದ ಫಾರ್ಚೂನರ್ ಕಾರು: 6 ಮಂದಿ ಪ್ರವಾಸಿಗರು ಪ್ರಾಣಾಪಾಯದಿಂದ ಪಾರು
ಪ್ರವಾಸಿ ತಾಣಗಳ ವೀಕ್ಷಣೆ ಮುಗಿಸಿ ಬೆಂಗಳೂರಿಗೆ ವಾಪಸ್ಸಾಗುತ್ತಿದ್ದ ಪ್ರವಾಸಿಗರ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಟಕ್ಕೆ ನುಗ್ಗಿದ ಘಟನೆ ಚಿಕ್ಕಮಗಳೂರಿನ ಕೈಮರ ಚೆಕ್ ಪೋಸ್ಟ್ ಸಮೀಪ ನಡೆದಿದೆ.

Published : May 31, 2026 at 3:16 PM IST
ಚಿಕ್ಕಮಗಳೂರು: ಪ್ರವಾಸಿ ತಾಣಗಳಾದ ಮುಳ್ಳಯ್ಯನಗಿರಿ ಹಾಗೂ ಸೀತಾಳಯ್ಯನಗಿರಿ ವೀಕ್ಷಣೆ ಮುಗಿಸಿ ಬೆಂಗಳೂರಿಗೆ ವಾಪಸಾಗುತ್ತಿದ್ದ ಪ್ರವಾಸಿಗರ ಕಾರೊಂದು ಚಾಲಕನ ನಿಯಂತ್ರಣ ತಪ್ಪಿ ರಸ್ತೆ ಬದಿಯ ತೋಟಕ್ಕೆ ನುಗ್ಗಿದ ಘಟನೆ ಭಾನುವಾರ ನಡೆದಿದೆ. ಅದೃಷ್ಟವಶಾತ್ ಘಟನೆಯಲ್ಲಿ ಯಾವುದೇ ಪ್ರಾಣ ಹಾನಿ ಸಂಭವಿಸದೇ ಕಾರಿನಲ್ಲಿದ್ದ ಆರು ಮಂದಿ ಪ್ರವಾಸಿಗರು ಸುರಕ್ಷಿತವಾಗಿದ್ದಾರೆ.
ಕೈಮರ ಚೆಕ್ ಪೋಸ್ಟ್ ಸಮೀಪ ಈ ಅಪಘಾತ ಸಂಭವಿಸಿದ್ದು, ಬೆಂಗಳೂರಿನಿಂದ ಪ್ರವಾಸಕ್ಕೆ ಬಂದಿದ್ದ ಆರು ಮಂದಿ ಫಾರ್ಚೂನರ್ ಕಾರಿನಲ್ಲಿ ಗಿರಿ ಭಾಗದ ಸೌಂದರ್ಯ ವೀಕ್ಷಣೆ ಮುಗಿಸಿ ಹಿಂದಿರುಗುತ್ತಿದ್ದರು. ಈ ವೇಳೆ ರಸ್ತೆಯ ತಿರುವೊಂದರಲ್ಲಿ ಕಾರಿನ ಮೇಲೆ ಚಾಲಕನ ನಿಯಂತ್ರಣ ತಪ್ಪಿದ ಪರಿಣಾಮ ವಾಹನ ರಸ್ತೆ ಬಿಟ್ಟು ಪಕ್ಕದ ತೋಟದೊಳಗೆ ನುಗ್ಗಿದೆ ಎಂದು ತಿಳಿದುಬಂದಿದೆ.
ಅಪಘಾತದ ರಭಸಕ್ಕೆ ಕಾರಿನ ಮುಂಭಾಗಕ್ಕೆ ಹಾನಿಯಾಗಿದ್ದು, ವಾಹನ ತೋಟದೊಳಗೆ ಕೆಲ ಅಂತರ ಸಾಗಿದ ಬಳಿಕ ನಿಂತಿದೆ. ಘಟನೆಯ ಬಳಿಕ ಸ್ಥಳೀಯರು ಹಾಗೂ ಇತರೆ ವಾಹನ ಸವಾರರು ಸ್ಥಳಕ್ಕೆ ಧಾವಿಸಿ ಕಾರಿನಲ್ಲಿದ್ದವರ ನೆರವಿಗೆ ಮುಂದಾದರು. ಕಾರಿನಲ್ಲಿದ್ದ ಎಲ್ಲರೂ ಸುರಕ್ಷಿತವಾಗಿ ಹೊರಬಂದಿದ್ದು, ಯಾರಿಗೂ ಗಂಭೀರ ಗಾಯಗಳಾಗಿಲ್ಲ.
ಈ ಘಟನೆಯ ಬಗ್ಗೆ ಸುದ್ದಿ ತಿಳಿಯುತ್ತಿದ್ದಂತೆ ಚಿಕ್ಕಮಗಳೂರು ಗ್ರಾಮಾಂತರ ಪೊಲೀಸ್ ಠಾಣೆಯ ಸಿಬ್ಬಂದಿ ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಪ್ರಾಥಮಿಕ ಮಾಹಿತಿಯ ಪ್ರಕಾರ ರಸ್ತೆ ತಿರುವಿನಲ್ಲಿ ವೇಗ ಹಾಗೂ ನಿಯಂತ್ರಣ ಕಳೆದು ಕೊಂಡಿರುವುದೇ ಅಪಘಾತಕ್ಕೆ ಕಾರಣವಾಗಿದೆ.
ಮುಳ್ಳಯ್ಯನಗಿರಿ, ಸೀತಾಳಯ್ಯನಗಿರಿ ಸೇರಿದಂತೆ ಗಿರಿ ಭಾಗಗಳಿಗೆ ವಾರಾಂತ್ಯದಲ್ಲಿ ಸಾವಿರಾರು ಪ್ರವಾಸಿಗರು ಆಗಮಿಸುತ್ತಿದ್ದು, ಬೆಟ್ಟ ಪ್ರದೇಶದ ತಿರುವು-ಮುರುವುಗಳ ರಸ್ತೆಯಲ್ಲಿ ವಾಹನ ಚಾಲಕರು ಹೆಚ್ಚಿನ ಎಚ್ಚರಿಕೆಯಿಂದ ಸಂಚರಿಸುವ ಅಗತ್ಯವಿದೆ ಎಂದು ಪೊಲೀಸರು ಸಲಹೆ ನೀಡಿದ್ದಾರೆ.
ಘಟನೆಯಿಂದ ಕೆಲಕಾಲ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದ್ದರೂ, ಯಾವುದೇ ಪ್ರಾಣಹಾನಿ ಸಂಭವಿಸದಿರುವುದು ಪ್ರವಾಸಿಗರು ಹಾಗೂ ಸ್ಥಳೀಯರಿಗೆ ಸಮಾಧಾನ ತಂದಿದೆ. ಪ್ರಕರಣ ಕುರಿತು ಚಿಕ್ಕಮಗಳೂರು ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ದಾಖಲಾತಿ ಪ್ರಕ್ರಿಯೆ ಮುಂದುವರೆದಿದೆ.
ಇವುಗಳನ್ನೂ ಓದಿ:

