ದೇವೇಗೌಡರಿಂದ ಕುಕ್ಕೆಯಲ್ಲಿ ಆಶ್ಲೇಷಬಲಿ, ತುಲಾಭಾರ: ಅನ್ನದಾನಕ್ಕೆ ದೇಣಿಗೆ
ಕುಕ್ಕೆಯಲ್ಲಿ ಮಾಜಿ ಪ್ರಧಾನಿ ದೇವೇಗೌಡರು ತಮ್ಮ 93ನೇ ವಯಸ್ಸಿನಲ್ಲಿ 91 ಕೆ.ಜಿ ತೂಕದ ಅಕ್ಕಿ, ಬೆಲ್ಲ ಹಾಗೂ ತೆಂಗಿನಕಾಯಿಗಳಿಂದ ತುಲಾಭಾರ ಸೇವೆ ಸಲ್ಲಿಸಿದರು.

Published : March 3, 2026 at 8:19 AM IST
ಕುಕ್ಕೆ ಸುಬ್ರಹ್ಮಣ್ಯ(ದಕ್ಷಿಣ ಕನ್ನಡ): ಮಾಜಿ ಪ್ರಧಾನಿ ಹೆಚ್.ಡಿ.ದೇವೇಗೌಡ ಅವರು ಸೋಮವಾರ ನಾಡಿನ ಪ್ರಸಿದ್ಧ ನಾಗ ಕ್ಷೇತ್ರ ಕುಕ್ಕೆ ಶ್ರೀ ಸುಬ್ರಹ್ಮಣ್ಯ ದೇವಸ್ಥಾನಕ್ಕೆ ಭೇಟಿ ನೀಡಿ ವಿಶೇಷ ಪೂಜೆಗಳಲ್ಲಿ ಭಾಗವಹಿಸಿ ದೇವರ ದರ್ಶನ ಪಡೆದರು.
"ನಾನು ಕುಕ್ಕೆ ಸುಬ್ರಹ್ಮಣ್ಯ ದೇವರ ಭಕ್ತ. ನನ್ನ ಜಾತಕದಲ್ಲಿ ಕಂಡಂತೆ ಪ್ರತೀ ತಿಂಗಳು ಆಶ್ಲೇಷಬಲಿ ಪೂಜೆ ಮಾಡಬೇಕೆಂದು ಸೂಚನೆ ಬಂದಿದ್ದು, ಅದೇ ರೀತಿ ಪೂಜೆ ನಡೆಯುತ್ತಿದೆ" ಎಂದು ದೇವೇಗೌಡರು ತಿಳಿಸಿದರು.
"ಸುಳ್ಯದ ಎಂ.ಬಿ.ಸದಾಶಿವ ಅವರ ಮೂಲಕ ಪ್ರತೀ ತಿಂಗಳು ಆಶ್ಲೇಷಬಲಿ ಪೂಜೆ ನೆರವೇರಿಸಲಾಗುತ್ತಿದ್ದು, ಅದರ ಪ್ರಸಾದವನ್ನು ಅವರು ನಿಯಮಿತವಾಗಿ ನಮಗೆ ಕಳುಹಿಸಿಕೊಡುತ್ತಿದ್ದಾರೆ. ಅನುಕೂಲವಾದಾಗಲೆಲ್ಲಾ ನಾನು ಕುಕ್ಕೆಗೆ ಆಗಮಿಸಿ ಆಶ್ಲೇಷಬಲಿ, ತುಲಾಭಾರ ಹಾಗೂ ಮಹಾಪೂಜೆಯಲ್ಲಿ ಭಾಗವಹಿಸುತ್ತೇನೆ" ಎಂದರು.
93ನೇ ವಯಸ್ಸಿನಲ್ಲಿ 91 ಕೆ.ಜಿ ತುಲಾಭಾರ: ತಮ್ಮ 93ನೇ ವಯಸ್ಸಿನಲ್ಲಿ 91 ಕೆ.ಜಿ ಅಕ್ಕಿ, ಬೆಲ್ಲ ಹಾಗೂ ತೆಂಗಿನಕಾಯಿಗಳಿಂದ ತುಲಾಭಾರ ಸೇವೆ ಸಲ್ಲಿಸಿರುವುದಾಗಿ ದೇವೇಗೌಡರು ತಿಳಿಸಿದರು.
ಅನ್ನದಾನಕ್ಕೆ ದೇಣಿಗೆ: ಅನ್ನದಾನವೇ ಶ್ರೇಷ್ಠ ದಾನ ಎಂಬ ನಂಬಿಕೆಯಿಂದ ದೇವಸ್ಥಾನದಲ್ಲಿ ನಡೆಯುವ ನಿತ್ಯ ಅನ್ನಸಂತರ್ಪಣೆಗೆ ತಮ್ಮ ವತಿಯಿಂದ ದೇಣಿಗೆ ನೀಡಿರುವುದಾಗಿ ಮಾಜಿ ಪ್ರಧಾನಿ ಹೇಳಿದರು. ದೇವಸ್ಥಾನದ ಅನ್ನದಾನ ಸೇವೆ ಸಮಾಜಕ್ಕೆ ಮಹತ್ವದ ಕೊಡುಗೆ ನೀಡುತ್ತಿದೆ ಎಂದು ಪ್ರಶಂಸಿಸಿದರು.

ಯುವಜನತೆ ಕೃಷಿ ಕಡೆ ಒಲವು ತೋರಿ: ಯುವಜನತೆ ಐಟಿ–ಬಿಟಿ ಉದ್ಯೋಗಕ್ಕಾಗಿ ದೂರದ ನಗರಗಳು ಹಾಗೂ ವಿದೇಶಗಳಿಗೆ ತೆರಳುವ ಬದಲು, ತಮ್ಮ ಊರಲ್ಲಿಯೇ ಕೃಷಿಯತ್ತ ಮುಖ ಮಾಡಿ ಕೃಷಿಯನ್ನು ಆಧುನಿಕ ರೀತಿಯಲ್ಲಿ ಅಭಿವೃದ್ಧಿಪಡಿಸಿ ಹೆಚ್ಚಿನ ಆದಾಯ ಗಳಿಸಬೇಕು. ನಮ್ಮ ಕೃಷಿ ಕ್ಷೇತ್ರವನ್ನು ಬಲಪಡಿಸುವುದು ದೇಶದ ಆರ್ಥಿಕತೆಗೂ ಸಹಾಯಕ ಎಂದು ಸಲಹೆ ನೀಡಿದರು.
ಎನ್‌ಡಿಎ ಮೈತ್ರಿ ಮುಂದುವರಿಕೆ: ಕೇಂದ್ರದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ನೇತೃತ್ವದಲ್ಲಿ ಎನ್‌ಡಿಎ ಸರ್ಕಾರ ಹಲವು ಜನಪರ ಯೋಜನೆಗಳೊಂದಿಗೆ ಕಾರ್ಯನಿರ್ವಹಿಸುತ್ತಿದ್ದು, ಇದು ಶ್ಲಾಘನೀಯ. ನಮ್ಮ ಜನತಾ ದಳ (ಜಾತ್ಯತೀತ) ಪಕ್ಷ ಎನ್‌ಡಿಎ ಜೊತೆಗಿದ್ದು ಮುಂದಿನ ದಿನಗಳಲ್ಲಿಯೂ ಮೈತ್ರಿ ನಿರಾತಂಕವಾಗಿ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದರು. ಮೋದಿ ಅವರು ಜಾಗತಿಕ ಮಟ್ಟದಲ್ಲಿ ಗುರುತಿಸಿಕೊಂಡ ನಾಯಕರು. ದೇಶದ ಒಳಿತಿಗಾಗಿ ಕೈಗೊಳ್ಳುತ್ತಿರುವ ಕಾರ್ಯಕ್ರಮಗಳನ್ನು ಯುವಜನತೆ ಅರಿತುಕೊಳ್ಳುವುದು ಮುಖ್ಯ. ಇದೇ ವೇಳೆ, ರಾಜ್ಯದಲ್ಲಿ ಜೆಡಿಎಸ್ ಸರ್ಕಾರವಿದ್ದ ಸಂದರ್ಭಗಳಲ್ಲಿ ಅನೇಕ ಜನಪರ ಯೋಜನೆಗಳನ್ನು ಜಾರಿಗೆ ತಂದಿದ್ದು, ಅವುಗಳ ಫಲ ಜನತೆಗೆ ತಲುಪುವಂತೆ ಪ್ರಾಮಾಣಿಕವಾಗಿ ಶ್ರಮಿಸಿದ್ದೇವೆ ಎಂದು ಸಂತೋಷ ವ್ಯಕ್ತಪಡಿಸಿದರು.
ಯುವ ರಾಜಕಾರಣಿಗಳಿಗೆ ಸಲಹೆ: ಹಿಂದಿನ ರಾಜಕಾರಣಕ್ಕೂ ಇಂದಿನ ರಾಜಕಾರಣಕ್ಕೂ ಬಹಳ ವ್ಯತ್ಯಾಸವಿದೆ. ಯುವ ರಾಜಕಾರಣಿಗಳು ತಮ್ಮ ವ್ಯಕ್ತಿತ್ವವನ್ನು ಸದೃಢವಾಗಿ ರೂಪಿಸಿಕೊಂಡು ಸಮಾಜಮುಖಿ ಕಾರ್ಯಗಳಲ್ಲಿ ತೊಡಗಬೇಕು. ಉಪಕಾರ ಮನೋಭಾವ ಬೆಳೆಸಿ ಸಮಾಜದಲ್ಲಿ ಶಾಂತಿ ಕಾಪಾಡುವಲ್ಲಿ ಶ್ರಮಿಸಬೇಕು ಎಂದು ಸಲಹೆ ನೀಡಿದರು.
ಗಣ್ಯರ ಉಪಸ್ಥಿತಿ: ಈ ಸಂದರ್ಭದಲ್ಲಿ ಸುಳ್ಯ ವಿಧಾನಸಭಾ ಕ್ಷೇತ್ರದ ಶಾಸಕಿ ಭಾಗೀರಥಿ ಮುರುಳ್ಯ, ಎಸ್.ಎನ್.ಮನ್ಮಥ, ಎಂ.ಬಿ.ಸದಾಶಿವ, ಜಾಕೆ ಮಾಧವಗೌಡ, ಕೇನ್ಯ ರವೀಂದ್ರ ಶೆಟ್ಟಿ, ಕುಂಟಿಕಾನ ಲಕ್ಷ್ಮಣ ಗೌಡ, ಯೂತ್ ಅಧ್ಯಕ್ಷ ಅಕ್ಷಿತ್ ಸುವರ್ಣ, ಮಂಜುನಾಥ್ ಕಾಟೂರು, ದೇವಿ ಪ್ರಸಾದ್ ಶೆಟ್ಟಿ ಕೊಕ್ಕಡ, ಡಾ.ಅಮರ ಶ್ರೀ ಶೆಟ್ಟಿ ಮೂಡಬಿದ್ರೆ ಹಾಗೂ ದೇವಸ್ಥಾನದ ವ್ಯವಸ್ಥಾಪನಾ ಸಮಿತಿಯ ಅಧ್ಯಕ್ಷ ಹರೀಶ್ ಇಂಜಾಡಿ, ಅಶೋಕ್ ನೆಕ್ರಾಜೆ, ಲೀಲಾ ಮನಮೋಹನ್, ಪ್ರವೀಣ ರೈ ಮತ್ತು ಕಾರ್ಯನಿರ್ವಹಣಾಧಿಕಾರಿ ಅಯ್ಯಪ್ಪ ಸುತಗುಂಡಿ ಸೇರಿದಂತೆ ಹಲವರು ಉಪಸ್ಥಿತರಿದ್ದರು.
ಇದನ್ನೂ ಓದಿ: ಇಂದು ಚಂದ್ರ ಗ್ರಹಣ: ಚಾಮುಂಡೇಶ್ವರಿ ದರ್ಶನ ಇಲ್ಲ, ನಂಜುಂಡೇಶ್ವರನ ದರ್ಶನಕ್ಕೆ ಅವಕಾಶ

