ಡಿಸಿಸಿ ಬ್ಯಾಂಕ್ ಚುನಾವಣೆ: ಜಾರಕಿಹೊಳಿ ಸಹೋದರರ ವಿರುದ್ಧ ಪರೋಕ್ಷವಾಗಿ ಹರಿಹಾಯ್ದ ರಮೇಶ್ ಕತ್ತಿ, ಸವದಿ
ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ ಪ್ರಚಾರ ಸಭೆಯಲ್ಲಿ ಮಾಜಿ ಸಂಸದ ರಮೇಶ್ ಕತ್ತಿ ಮತ್ತು ಶಾಸಕ ಲಕ್ಷ್ಮಣ್ ಸವದಿ ಅವರು ಜಾರಕಿಹೊಳಿ ಸಹೋದರರ ವಿರುದ್ಧ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

Published : October 15, 2025 at 9:10 PM IST
ಚಿಕ್ಕೋಡಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆಯ ಹಿನ್ನೆಲೆಯಲ್ಲಿ ಗಾಯಕರಾಗಿ ಘಟಪ್ರಭಾ ಸಕ್ಕರೆ ಕಾರ್ಖಾನೆಯವರಿದ್ದಾರೆ. ಡಿಸಿಸಿ ಬ್ಯಾಂಕ್ ಚುನಾವಣೆಗೆ ನಾಮಪತ್ರ ಸಲ್ಲಿಸಲು ಮುಂದಾದ ಸೂಚಕರನ್ನು ಕಿಡ್ನ್ಯಾಪ್ ಮಾಡಿ ಹೆದರಿಸುವ ಕೆಲಸ ಮಾಡುತ್ತಾರೆ ಎಂದು ಜಾರಕಿಹೊಳಿ ಸಹೋದರರ ವಿರುದ್ಧ ಮಾಜಿ ಸಂಸದ ರಮೇಶ್ ಕತ್ತಿ ಗಂಭೀರ ಆರೋಪ ಮಾಡಿದರು.
ಬೆಳಗಾವಿ ಜಿಲ್ಲೆಯ ರಾಯಭಾಗ ತಾಲೂಕಿನ ಹಾರುಗೇರಿ ಪಟ್ಟಣದಲ್ಲಿ ಇಂದು ತಮ್ಮ ಪ್ಯಾನಲ್ ಅಭ್ಯರ್ಥಿಯಾದ ಬಸವರಾಜ ಆಸಂಗಿ ಪರವಾಗಿ ಡಿಸಿಸಿ ಬ್ಯಾಂಕ್ ಚುನಾವಣೆ ಪ್ರಚಾರ ಸಭೆಯಲ್ಲಿ ಮಾತನಾಡಿದ ಅವರು, ಕೆಟ್ಟವರ ಸಹವಾಸದಿಂದ ಈ ಚುನಾವಣೆ ಸಾಕಷ್ಟು ಪ್ರತಿಷ್ಠೆಯಾಗಿದೆ. ನಾವು ಮಡಿವಂತರಾಗೇ ಇರುತ್ತೇವೆ, ಮೈಲಿಗೆಯಾಗುವುದಿಲ್ಲ. ಗೋಕಾಕ್, ಮೂಡಲಗಿ ತಾಲೂಕಿನ ಜನ ಮುಗ್ದರು, ಇವರಿಂದ ಅವರ ಹೆಸರಿಗೆ ಕಳಂಕ ಬರುತ್ತಿದೆ. ಅವರು ಯಾರನ್ನೂ ಬೆಳೆಯಲು ಬಿಡುವುದಿಲ್ಲ. ಮಹೇಂದ್ರ ತಮ್ಮಣವರ್, ದುರ್ಯೋಧನ ಐಹೊಳೆ ಸುಸಂಸ್ಕೃತರು. ಇಂತವರನ್ನು ಬೆಳೆಯಲು ಬಿಡುತ್ತಿಲ್ಲ, ಅಡ್ಡಗಾಲಾಗಿದ್ದಾರೆ. ತಮ್ಮಣವರ್ ಶಾಸಕರಾಗಿರೋದು ಅವರಿಗೆ ಸಹಿಸಲಾಗುತ್ತಿಲ್ಲ. ಎಲ್ಲ ಅಧಿಕಾರ ತಮಗೆ ಬೇಕೆಂಬುದು ಅವರ ಮನಸ್ಥಿತಿ. ಹೀಗೆ ಪರಿಸ್ಥಿತಿ ಮುಂದುವರೆದರೆ ನಮ್ಮೆಲ್ಲರ ಉತಾರಗಳನ್ನು ಮನೆಯಲ್ಲಿಟ್ಟುಕೊಳ್ತಾರೆ ಎಂದು ಪರೋಕ್ಷವಾಗಿ ಜಾರಕಿಹೊಳಿ ಕುಟುಂಬದ ವಿರುದ್ಧ ಕತ್ತಿ ವಾಗ್ದಾಳಿ ನಡೆಸಿದರು.
ಇವರು ಎಲ್ಲ ಸಮಾಜಗಳನ್ನು ಮುಗಿಸಲು ಹೊರಟಿದ್ದಾರೆ. ಸಾಮಾನ್ಯ ಸ್ದಾನಗಳನ್ನೂ ಆಕ್ರಮಿಸಿಕೊಳ್ಳುತ್ತಿದ್ದಾರೆ. ಗೋಕಾಕ್, ಚಿಕ್ಕೋಡಿ, ಅರಬಾವಿ ಇವೆಲ್ಲಾ ಜನರಲ್ ಸೀಟ್ಗಳು. ಹೀಗೆ ಆದರೆ ನಾವೆಲ್ಲ ಮೀನು ಹಿಡಿಯೋಕೆ ಹೋಗಬೇಕಾ?. ನಮ್ಮ ರೈತರನ್ನು ಕಟುಕರ ಕೈಗೆ ನೀಡುವುದು ಬೇಡ. ಜಿಲ್ಲೆಯಲ್ಲಿ ಅವರದೊಂದು ಬೆಸ್ಟ್ ನಾಟಕ ಕಂಪನಿ ಇದೆ. ಎಲ್ಲಿ ಏನು ಮಾಡುತ್ತಾರೆ, ಅದು ಯಾರಿಗೂ ಗೊತ್ತಾಗಲ್ಲ. ರಾಜು ಕಾಗೆ, ಲಕ್ಷ್ಮಣ್ ಸವದಿ ಸ್ನೇಹ ಅನ್ಯೋನ್ಯವಾಗಿದೆ. ಆದರೂ ಕಾಗೆ ಅವರನ್ನು ಅಷ್ಟೇ ಅವಿರೋಧ ಆಯ್ಕೆ ಮಾಡಿದ್ರು. ಆ ಸ್ನೇಹ ಕೆಡಿಸಲು ಯಾರಿಂದಲೂ ಸಾಧ್ಯವಿಲ್ಲ, ರಾಜು ಕಾಗೆ ಮುಂದೆ ನಿಂತು ಸವದಿ ಅವರನ್ನು ಗೆಲ್ಲಿಸುತ್ತಾರೆ. ನಮಗೆ ಸ್ವಾಭಿಮಾನಕ್ಕಿಂತ ಯಾವುದೂ ದೊಡ್ಡದಲ್ಲ ಎಂದರು.
ಅಥಣಿ ಶಾಸಕ ಲಕ್ಷ್ಮಣ್ ಸವದಿ ಮಾತನಾಡಿ, ಈಗ 9 ಜನ ಆಯ್ಕೆಯಾಗಿದ್ದಾರೆ ಅಂತಾ ಹೇಳ್ತಾರೆ. ಅವಿರೋಧ ಆಯ್ಕೆಯಾದವರು ಯಾರು?, ಎಲ್ಲ ಲೆಕ್ಕಾಚಾರ ಬರೆದಿಟ್ಟಿದ್ದೀನಿ. ನಾವು ಮಾವಿನಕಾಯಿ ಉಪ್ಪಿನಕಾಯಿ ನೆಕ್ಕುತ್ತಿಲ್ಲ, ನಮಗೂ ರಾಜಕಾರಣ ಗೊತ್ತಿದೆ ಎಂದು ಜಾರಕಿಹೊಳಿ ಸಹೋದರರ ವಿರುದ್ಧ ಪರೋಕ್ಷವಾಗಿ ಹರಿಹಾಯ್ದರು.
ಪಿಕೆಪಿಎಸ್ ಮತದಾರರಿಗೆ ಒಂದು ಮತಕ್ಕೆ 1 ಲಕ್ಷ ಹಂಚಿಕೆ ಮಾಡುತ್ತಿದ್ದಾರೆ. ಈಗ 75 ಸಾವಿರ ಬಳಿಕ ಮತ್ತೆ 25 ಸಾವಿರ, 1 ಮತದ ಮೌಲ್ಯ 1 ಲಕ್ಷ ಮಾತ್ರನಾ?. ಡಿಸಿಸಿ ಬ್ಯಾಂಕ್ ಇತಿಹಾಸದಲ್ಲಿ ಹಣ ಪಡೆದು ಮತ ನೀಡಿದ ಉದಾಹರಣೆಗಳಿಲ್ಲ. ಹೀಗೆ ಶೇರ್ ಮಾರ್ಕೆಟ್ನಂತೆ ದಿನ ಕಳೆದಂತೆ ರೇಟ್ ಜಾಸ್ತಿಯಾಗುತ್ತದೆ. ಹಣ ಕೊಟ್ಟು ಆಯ್ಕೆಯಾದರೆ ಬ್ಯಾಂಕ್ ಬೆಳವಣಿಗೆ ಹೊಂದುವುದು ಹೇಗೆ?. ಪಾಪಿಯ ಧನ ಪ್ರಾಯಶ್ಚಿತ್ತಕ್ಕಲ್ಲದೆ ಸತ್ಕಾರ್ಯಕ್ಕೆ ಸಲ್ಲದು. ನಾಯಿಯ ಹಾಲು ಅದರ ಮರಿಗಲ್ಲದೆ, ಪಂಚಾಮೃತಕ್ಕಲ್ಲ ಎಂದು ಹೇಳಿದರು.
ನಮಗೆ ಯಾವುದೇ ಅಧ್ಯಕ್ಷಗಿರಿಯ ಆಸೆ ಇಲ್ಲ. ಜಿಲ್ಲೆಯ ರೈತ ಸ್ವಾಭಿಮಾನದಿಂದ ಸಾಲ ಪಡೆಯಬೇಕು. 1 ಪಿಕೆಪಿಎಸ್ಗೆ 10 ರಿಂದ 20 ಲಕ್ಷ ರೂ ಪಡೆದು ಮತ ಹಾಕಿದರೆ ಜಿಲ್ಲೆಯ ವ್ಯವಸ್ಥೆ ಎಲ್ಲಿಗೆ ಬಂತು?. 9ರಿಂದ 10 ಜನರ ಆಯ್ಕೆ ತಲೆಯಿಂದ ತೆಗೀರಿ, ನಮಗೂ ಆಟ ಆಡೋಕೆ ಬರುತ್ತದೆ, ಅಲ್ಲಿ ಯಾರ‍್ಯಾರು ಹೇಗಿದ್ದಾರೆ? ಅಂತ ನಮಗೂ ಗೊತ್ತಿದೆ. ಅವರ ಪಾಪದ ಹಣ ನಿಮಗೆ ಬೇಡವಾದರೆ ದೇವರ ಹುಂಡಿಗೆ ಹಾಕಿ ಪವಿತ್ರ ಮತದಾನವನ್ನು ನಮ್ಮ ಅಭ್ಯರ್ಥಿಗೆ ನೀಡಿ ಎಂದು ಮನವಿ ಮಾಡಿದರು.
ಇವುಗಳನ್ನೂ ಓದಿ: ಬೆಳಗಾವಿ ಡಿಸಿಸಿ ಬ್ಯಾಂಕ್ ಚುನಾವಣೆ: ಜೊಲ್ಲೆ - ಜಾರಕಿಹೊಳಿ ಬ್ರದರ್ಸ್ ಒಂದಾಗಿದ್ದೇಕೆ?

