ಡಿನ್ನರ್ ಮೀಟಿಂಗ್ ಕರೆದಿದ್ರೆ ಹೋಗುತ್ತಿದ್ದೆ, ಊಟಕ್ಕೆ ಕರೆದರೆ ಹೋಗಲು ಏನಂತೆ: ಮಾಜಿ ಸಚಿವ ಕೆ.ಎನ್ ರಾಜಣ್ಣ
ಮಾಗಡಿ ಶಾಸಕ ಬಾಲಕೃಷ್ಣ ಡಿನ್ನರ್ ಮೀಟಿಂಗ್ ಬಗ್ಗೆ ಮಾಜಿ ಸಚಿವ ಕೆ.ಎನ್. ರಾಜಣ್ಣ ಪ್ರತಿಕ್ರಿಯಿಸಿ, ಕರೆದಿದ್ರೆ ನಾನೂ ಹೋಗ್ತಿದ್ದೆ ಎಂದರು.

Published : March 1, 2026 at 3:07 PM IST
ತುಮಕೂರು: "ಡಿನ್ನರ್ ಮೀಟಿಂಗ್ ಕರೆದಿದ್ರೆ ಹೋಗುತ್ತಿದ್ದೆ, ಊಟಕ್ಕೆ ಕರೆದರೆ ಹೋಗಲು ಏನಂತೆ" ಎಂದು ಮಾಜಿ ಸಚಿವ ಕೆ.ಎನ್. ರಾಜಣ್ಣ ಅವರು ಮಾಗಡಿ ಶಾಸಕ ಬಾಲಕೃಷ್ಣ ಅವರ ಹುಟ್ಟುಹಬ್ಬಕ್ಕೆ ಆಮಂತ್ರಣಕ್ಕೆ ನೀಡದಿರುವ ಬಗ್ಗೆ ಪ್ರತಿಕ್ರಿಯಿಸಿದರು.
ನಗರದಲ್ಲಿ ಶನಿವಾರ ಆಯೋಜಿಸಲಾಗಿದ್ದ ಇಫ್ತಿಯಾರ್ ಕೂಟದಲ್ಲಿ ಭಾಗಿಯಾದ ಬಳಿಕ ಮಾತನಾಡಿದ ಅವರು, ಮಾಗಡಿ ಶಾಸಕ ಬಾಲಕೃಷ್ಣ ಬರ್ತ್ಡೇ ಡಿನ್ನರ್ ಮೀಟಿಂಗ್ ವಿಚಾರ ಕುರಿತು ಮಾಧ್ಯಮಗಳಿಗೆ ಪ್ರತಿಕ್ರಿಯಿಸಿದರು.
ಡಿನ್ನರ್ ಮೀಟಿಂಗ್ಗೆ ನನ್ನ ಕರೆದಿಲ್ಲ, ಕರೆದಿದ್ರೆ ಹೋಗ್ತಿದ್ದೆ. ಊಟಕ್ಕೆ ಕರೆದರೆ ಹೋಗಲು ಏನಂತೆ?. ಎಂದ ಅವರು ಡಿ.ಕೆ. ಬೆಂಬಲಿಗರಿಗೆ ಮಾತ್ರ ಕರೆದಿದ್ರಾ ಎಂಬ ವಿಚಾರಕ್ಕೆ ಪಾವಗಡ ಎಂಎಲ್ಎ ವೆಂಕಟೇಶ್ ಹೋಗಿದ್ದಾರೆ. ಅವರೇನು ಡಿ.ಕೆ. ಶಿವಕುಮಾರ್ ಬೆಂಬಲಿಗನಾ..? ಪಾವಗಡ ವೆಂಕಟೇಶ್ ಇಲ್ವೇನ್ರಿ?, ನಾಲ್ಕನೇ ಸೀರಿಯಲ್ ನಂಬರ್, ನಮ್ಮನ್ನು ಯಾರು ಬಿಟ್ಟುಹೋಗಲ್ಲ. ಎಲ್ಲರೂ ಒಟ್ಟಿಗೆ ಇದ್ದೇವೆ. 138 ಜನ ಕಾಂಗ್ರೆಸ್ ಎಂಎಲ್ಎಗಳು ಎಲ್ಲರೂ ಒಂದೇನೆ. ಸುಮ್ನೆ ಎಲ್ಲರಿಗೂ ಒಂದು ಊಟ ಹಾಕೋಣ, ಅರ್ಧ ಗಂಟೆ ಇಸ್ಪೀಟು ಆಡೋಣ ಅಂತ ಕರೆದ್ರೆ ಹೋಗ್ತಾರೆ ಎಂದರು.
ದೆಹಲಿ ಭೇಟಿ ವಿಚಾರಕ್ಕೆ ಸಂಬಂಧಿಸಿದಂತೆ ಮಾತನಾಡಿದ ರಾಜಣ್ಣ, "ಈಗಾಗಲೇ ಎಲ್ಲಾ ಹೇಳಿದ್ದೇನೆ. ಡೆಲ್ಲಿಗೆ ಹೋದ ಸಂದರ್ಭದಲ್ಲಿ ನಮ್ಮ ಹಿರಿಯರು, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆಯವರನ್ನು ಭೇಟಿ ಮಾಡಿದ್ದೇನೆ. ಕರ್ನಾಟಕದಲ್ಲಿರುವ ಗೊಂದಲ ಏನಿದೆ?, ಇದರಿಂದ ಸರ್ಕಾರಕ್ಕೆ ಧಕ್ಕೆಯಾಗುತ್ತಿದೆ, ಗೌರವಕ್ಕೆ ಚ್ಯುತಿಯಾಗುತ್ತಿದೆ, ಪಕ್ಷಕ್ಕೂ ಚ್ಯುತಿಯಾಗುತ್ತಿದೆ. ಈ ಗೊಂದಲವನ್ನು ನೀವು ನಿವಾರಣೆ ಮಾಡಬೇಕು ಎಂದು ನಾನು ಒತ್ತಾಯ ಪೂರಕವಾಗಿ ಮನವಿ ಮಾಡಿದ್ದೇನೆ ಎಂದರು.
ಮುಂದಿನ ಬಾರಿ ಕಾಂಗ್ರೆಸ್ ಬರಲ್ಲ ಎಂಬ ಶಾಸಕ ಬಾಲಕೃಷ್ಣ ಹೇಳಿಕೆ ವಿಚಾರಕ್ಕೆ, ಬಾಲಕೃಷ್ಣ ಹೇಳಿರುವುದು ಅವರ ಕ್ಷೇತ್ರದಲ್ಲಿ ಇರಬಹುದು. ನಾವೆಲ್ಲ ಗೆಲ್ಲಲ್ವಾ..? 224 ರಲ್ಲಿ 138 ಜನ ಕಾಂಗ್ರೆಸ್ ಶಾಸಕರಿದ್ದೇವೆ, ಬಾಕಿ ಇನ್ನೂ 90 ಜನ ಸೋತಿರುವವರು ಇದ್ದಾರೆ. ಅದರಲ್ಲಿ ಸೋತಿರುವವರು ಕೆಲವರು ಗೆಲ್ಲುತ್ತಾರೆ. ಗೆದ್ದಿರುವವರು ಕೆಲವರು ಸೋಲ್ತಾರೆ. ಇದು ರಾಜಕೀಯದಲ್ಲಿ ನಡೆಯುವಂತ ಪ್ರಕ್ರಿಯೆ. ಕಾಂಗ್ರೆಸ್ ಪಕ್ಷ ಸದೃಢವಾಗಿದೆ ಮುಂದಿನ ಬಾರಿ ನಾವೇ ಗೆಲ್ಲುತ್ತೇವೆ ಎಂದು ವಿಶ್ವಾಸ ವ್ಯಕ್ತಪಡಿಸಿದರು.
ದೆಹಲಿಗೆ ಪತ್ರ ಬರೆದ ವಿಚಾರಕ್ಕೆ ಸಂಬಂದಿಸಿದಂತೆ ಪ್ರಶ್ನೆಗೆ ಉತ್ತರಿಸಿದ ಅವರು, ಪಕ್ಷದಲ್ಲಿ ಸಂಘಟನೆಗೆ ಸರ್ಕಾರದ ಗೌರವ ಹೆಚ್ಚಿಸಲಿಕ್ಕೆ ಏನೆಲ್ಲ ಮಾಡಬಹುದು. ಅದನ್ನು ಕೇಂದ್ರದ ನಾಯಕರಿಗೆ ಮನವರಿಕೆ ಮಾಡಿಕೊಟ್ಟಿದ್ದೇನೆ. ನಮ್ಮಲ್ಲಿ ಏನ್ ಚರ್ಚೆ ಆಗಿದೆ ಅದು ಸಾರ್ವತ್ರಿಕವಾಗಿ ಚರ್ಚೆಗಳು ಆಗುವುದಿಲ್ಲ ಎಂದು ಹೇಳಿದರು.
ಇದನ್ನೂ ಓದಿ: ಯಡಿಯೂರಪ್ಪ ಉತ್ಸವ 2028ನೇ ಚುನಾವಣೆಯಲ್ಲಿ ಪರಿವರ್ತನೆಗೆ ಮುನ್ನುಡಿ: ಬೊಮ್ಮಾಯಿ

